Monday, May 20, 2024

ಯಕ್ಷ ಪ್ರಶ್ನೆ 90 (Yaksha prashne 90)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ – 89 ಕೊನೆಯಿಲ್ಲದ ವ್ಯಾಧಿ ಯಾವುದು ?

ಉತ್ತರ - ಲೋಭ.  

ಯಾವುದು ಹುಟ್ಟುತ್ತದೆಯೋ ಅದಕ್ಕೆ ಅಂತ್ಯವೆಂಬುದಿದೆ; ಆದರೆ ಇಲ್ಲಿ ಪ್ರಶ್ನೆ ವಿಪರೀತವಾಗಿದೆ. ಇಲ್ಲಿ ವ್ಯಾಧಿ ಹುಟ್ಟಿದೆ; ಆದರೆ ಅದಕ್ಕೆ ಅಂತ್ಯವೆಂಬುದಿಲ್ಲ. ಅಂತಹ ಅಂತ್ಯವಿಲ್ಲದ ವಿಷಯ ಯಾವುದು? ಎಂಬುದು ಇಲ್ಲಿ ಯಕ್ಷಪ್ರಶ್ನೆಯಾಗಿದೆ. ಅದಕ್ಕೆ ಲೋಭವೆಂಬುದು ಎಂತಹ ಮೊದಲಿರುವ, ಕೊನೆಯಿಲ್ಲದ್ದು ಎಂಬುದಾಗಿ ಧರ್ಮಜನ ಉತ್ತರವಾಗಿದೆ. ಲೋಭಕ್ಕೆ ಹುಟ್ಟಿದೆ. ಆದರೆ ಅದಕ್ಕೆ ಅಂತ್ಯವೆಂಬುದಿಲ್ಲ. ಅದಕ್ಕೆ ನಾಶವೆಂಬುದಿಲ್ಲ. ಅದು ಮುಗಿಯಿತು ಎಂಬುದಿಲ್ಲ. ನಮ್ಮ ಮುಂದೆ ಯಾವಾಗಲೂ ಕಾಣಿಸಿಕೊಳ್ಳುತ್ತಿರುತ್ತದೆ. ಅದರ ಅಸ್ತಿತ್ವವನ್ನು ಕಾಣಿಸುತ್ತಿರುತ್ತದೆ. ಅದರಿಂದ ಆಗುವ ಅನಾಹುತಗಳಿಂದ ನಾವು ಪರಿತಪಿಸುವುದಂತೂ ನಿಲ್ಲುವುದೂ ಇಲ್ಲ. ಹಾಗಾಗಿ ಲೋಭವೆಂಬುದು ಅಂತಹ ಕೊನೆಯಿಲ್ಲದ್ದಾಗಿದೆ. 

ಸಾಮಾನ್ಯವಾಗಿ ಎರಡು ಬಗೆಯ ರೊಗಗಳನ್ನು ಹೇಳಲಾಗಿದೆ ಆಧಿ ಮತ್ತು ವ್ಯಾದಿ ಎಂಬುದಾಗಿ. ಶರೀರಕ್ಕೆ ಬರುವ ರೋಗವನ್ನು ವ್ಯಾಧಿ ಎಂತಲೂ, ಮನಸ್ಸಿಗೆ ಬರುವ ರೋಗವನ್ನು ಆಧಿ ಎಂದೂ ಹೇಳುತ್ತಾರೆ. ಇಲ್ಲಿ ಒಂದಕ್ಕೊಂದು ಆಧಾರಿತ. ಶರೀರದ ತೊಂದರೆಯಿಂದ ಮನಸ್ಸಿನ ಮೇಲೆ ಪರಿಣಾಮ, ಅಂತೆಯೇ ಮನಸ್ಸಿನ ತೊಂದರೆಯಿಂದ ಶರೀರದ ಮೇಲೆ ಪರಿಣಾಮ ಉಂಟಾಗುತ್ತದೆ. ಇಲ್ಲಿ ಲೋಭವನ್ನು ವ್ಯಾಧಿ ಎಂದು ಕರೆದು ಶರೀರದಿಂದ ಆಗುವ ಸಮಸ್ಯೆ ಎಂಬುದಾಗಿ ಹೇಳಲಾಗಿದೆಯೋ ಎಂದು ಇಲ್ಲಿನ ಶಬ್ದವ್ಯವಹಾರದ ಮೂಲಕ ಅನಿಸುತ್ತದೆ. ಅಂದರೆ ಲೋಭಕ್ಕೂ ಶರೀರಕ್ಕು ನೇರವಾದ ಸಂಬಂಧವಿದೆ ಎಂದಾಯಿತು. ಶರೀರ ಎಂದಿನಿಂದ ಆರಂಭವಾಯಿತೋ ಆಲಿಂದ ಈ ಲೊಭವೆಂಬ ವ್ಯಾಧಿ ಆರಂಭವಾಗಿ ಈ ಶರೀರ ಮುಕ್ತಾಯವಾಗುವ ತನಕವೂ ಇರುತ್ತದೆ. ಅಷ್ಟೇ ಅಲ್ಲ ಅಲ್ಲೂ ಆಸೆಯೆಂಬುದಕ್ಕೆ ಕಡಿವಾಣ ಹಾಕದಿದ್ದರೆ ಮತ್ತೆ ಶರೀರವನ್ನು ಪಡೆಯಬೇಕಾಗುತ್ತದೆ. ಮತ್ತೆ ಪುನಃ ಆ ಲೋಭದ ಆಟ ಶುರುವಾದಮ್ತೆಯೇ ಸರಿ. ಲೋಭವೆಂದರೆ ಅತಿಯಾದ ಆಶೆ. ಅದಕ್ಕೆ ಶ್ರೀಶಂಕರ ಭಗವತ್ಪಾದರು ತಮ್ಮ 'ಮೋಹಮುದ್ಗರ' ಎಂಬ ಸ್ತೋತ್ರದಲ್ಲಿ ಹೀಗೆ ಹೇಳುತ್ತಾರೆ. ಆ ಸ್ತೋತ್ರಕ್ಕೆ ಮೋಹ ಮುದ್ಗರ ಎಂದೆ ಹೆಸರನ್ನೂ ಇಟ್ಟಿರುವುದು ಈ ಲೊಭದ ಕಾರಣವನ್ನು ಮತ್ತು ಅದರ ವೈಶಾಲ್ಯವನ್ನು ಹೇಳಿದ್ದು ಕಂಡುಬರುತ್ತದೆ.  "ಅಂಗಂ ಗಲಿತಂ - ಶರೀರದ ಪ್ರತಿಯೊಂದು ಅಂಗಗಳೂ ಶಿಥಿವಾಗಿವೆ. ಪಲಿತಂ ಮುಂಡಂ - ತಲೆಕೂದಲು ಬೆಳ್ಳಗಾಗಿದೆ. ದಶನವಿಹೀನಂ - ಹಲ್ಲುಗಳು ಉದುರಿವೆ. ಹಲ್ಲಿಲ್ಲದೇ ಬೊಚ್ಚುಬಾಯಿಯಾಗಿದೆ. ವೃದ್ಧೋ ಯಾತಿ ಗೃಹೀತ್ವಾ ದಂಡಂ - ಹಣ್ಣು ಹಣ್ಣು ಮುದುಕ, ಒಡಾಡಲು ತ್ರಾಣವಿಲ್ಲ. ಕೈಯಲ್ಲಿ ಊರುಗೋಲು ಹಿಡಿದುಕೊಂಡಿದ್ದಾನೆ. ಇಂತಹ ವಿಕಟಸಂದರ್ಭದಲ್ಲಿ ಅವನಿಗೆ ಆಶೆಯೆಂಬುದು ಬಿಡದು. ಎಂಬುದಾಗಿ ಶ್ರೀಶಂಕರರು ಆಶೆಯು ಎಂದೆಂದೂ ಬಿಡದ ವ್ಯಾಧಿ. ಶರೀರ ಬಿಡುವ ಸಂದರ್ಭದಲ್ಲೂ ಆಶೆಯೆಂಬುದು ಬಿಡದು. ಇದು ಕೇವಲ ಶರೀರಕ್ಕೆ ಮಾತ್ರ ಸಂಬಂಧಿಸಿದ ರೋಗವಲ್ಲ. ಇದರ ಪರಿಣಾಮ ಮನಸ್ಸಿನ ಮೇಲೂ ಬೀಳುತ್ತದೆ. ಅದಕ್ಕಾಗಿ ಇದನ್ನು ಅರಿಷಡ್ವರ್ಗಗಳಲ್ಲಿ ಒಂದಾಗಿ ಪರಿಗಣಿಸಿದ್ದಾರೆ. ಬೇರೆಯವರಲ್ಲಿರುವ ಹಣ ಮೊದಲಾದ ದ್ರವ್ಯವನ್ನು ನೋಡಿ ತಾನು ಪಡೆಯಬೇಕು ಎಂಬ ಹೃದಯದಲ್ಲಿ ಹಿಟ್ಟುವ ಆಶೆಯನ್ನೇ ಲೋಭ ಎಂಬುದಾಗಿ ಪದ್ಮಪುರಾಣದಲ್ಲಿ ಇದರಲಕ್ಷಣವನ್ನೂ ಹೇಳಲಾಗಿದೆ. ಒಟ್ಟಿನಲ್ಲಿ, ಮನುಷ್ಯನು ದೂರಮಾಡಿಕೊಳ್ಳಲೇಬೇಕಾದ ಅವಗುಣಗಳಲ್ಲಿ ಲೋಭವೂ ಬಹಳ ಮುಖ್ಯವಾಗಿದೆ.  

ಸೂಚನೆ : 19/5/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.