Sunday, May 12, 2024

ಅಷ್ಟಾಕ್ಷರೀ 58 ಮುಕ್ತಿದಾಯಾಸ್ತು ಮಂಗಲಂ (Astaksari 58 – Muktidayastu Mangalam)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)
ರಾಮಾಯಣವು ಒಂದು ಅದ್ಭುತವಾದ ಕಥೆಯೆಂಬುದರಲ್ಲಿ ಸಂಶಯವಿಲ್ಲ. ಆದರೆ ಅದನ್ನು ಬರೀ ಕಥೆಯೆಂದು ಭಾರತೀಯ-ಪರಂಪರೆ ಗಣಿಸುವುದಿಲ್ಲ. ಮೂಲ-ವಾಲ್ಮೀಕಿರಾಮಾಯಣವನ್ನು ನಿತ್ಯವೂ ಒಂದಿಷ್ಟು ಪಠಿಸುವುದುಂಟು. ಆದರೆ ಪಠಿಸಲು ಪರಂಪರಾಗತವಾದ ಕ್ರಮವಿದೆ. ಅದನ್ನು ಪಾರಾಯಣವೆನ್ನುವರು. ಪಾರಾಯಣಕ್ರಮದಲ್ಲಿ ಆರಂಭದಲ್ಲಿ ಕೆಲವು ನಮಸ್ಕಾರ-ಶ್ಲೋಕಗಳನ್ನೂ, ಮುಗಿಸುವಾಗ ಕೆಲವು ಮಂಗಲ-ಶ್ಲೋಕಗಳನ್ನೂ, ಹೇಳುವುದುಂಟು; ಅವನ್ನು ಉಪಕ್ರಮ ಹಾಗೂ ಸಮಾಪನ ಎನ್ನುತ್ತಾರೆ.

ಸಮಾಪನದಲ್ಲಿ ರಾಮ-ಮಂಗಳಗಳನ್ನು ಹೇಳುವಲ್ಲಿ, ಜಟಾಯುವಿಗೆ ರಾಮನು ಮಾಡಿದ ಅನುಗ್ರಹವನ್ನು ಸ್ಮರಿಸುವ ಶ್ಲೋಕವೊಂದು ಕೆಲ ಸಂಪ್ರದಾಯಗಳಲ್ಲುಂಟು. ದಂಡಕಾರಣ್ಯದಲ್ಲಿ ವಾಸಮಾಡಿ, ರಾಕ್ಷಸರನ್ನು ಖಂಡಿಸಿ (ಎಂದರೆ ಸಂಹರಿಸಿ), ಗೃಧ್ರ-ರಾಜನಾದ ಭಕ್ತ-ಜಟಾಯುವಿಗೆ ಮುಕ್ತಿಯಿತ್ತವನಿಗೆ ಮಂಗಳವಾಗಲಿ – ಎನ್ನುತ್ತದೆ ಆ ಶ್ಲೋಕ: ಮುಕ್ತಿದಾಯಾಸ್ತು ಮಂಗಲಂ.

ಏನು ಜಟಾಯುವಿನ ವಿಶೇಷ? – ಎಂಬ ಪ್ರಶ್ನೆ ಸಹಜವಷ್ಟೆ. ಅರಣ್ಯಕಾಂಡದಲ್ಲಿ ನಾವು ಜಟಾಯುವನ್ನು ಕಾಣುತ್ತೇವೆ. ಮೊಟ್ಟಮೊದಲಿಗೆ ಆತನನು ಕಂಡಾಗ ರಾಮಲಕ್ಷ್ಮಣರಿಬ್ಬರೂ ಆತನನ್ನು ರಾಕ್ಷಸನೆಂದೇ ಭಾವಿಸಿದ್ದರು! ವೃದ್ಧ-ಜಟಾಯುವಿನ ಸೌಮ್ಯವೂ ಮಧುರವೂ ಆದ ಮಾತು ಆತನ ವಿಷಯದಲ್ಲಿ ಇವರಿಗೆ ಸಂತೋಷವುಂಟುಮಾಡಿತು. ದಶರಥನ ಸ್ನೇಹಿತನು ಆತನೆಂಬುದು ತಿಳಿಯಿತು. ತನ್ನ ವಂಶಾವಲಿಯನ್ನು ತಿಳಿಸಿದ ಆತ ತಾನಾಗಿ ಒಂದು ಮಾತನಾಡುತ್ತಾನೆ: ನೀವಿಬ್ಬರೂ ಹೊರಗೆ ಹೋಗಿರುವಲ್ಲಿ ಸೀತೆಯನ್ನು ರಕ್ಷಿಸುವೆನೆನ್ನುತ್ತಾನೆ. ತನ್ನ ಮಾತನ್ನುಳಿಸಿಕೊಳ್ಳಲೆಳಸುತ್ತಾನೆ ಕೂಡ.

ಇಷ್ಟಾಗಿಯೂ, ಮಾಯಾಮೃಗ-ಪ್ರಸಂಗದಲ್ಲಿ, ಮಾರೀಚ-ಸಂಹಾರವಾದ ಬಳಿಕ ರಾಮನು ಹಿಂತಿರುಗುತ್ತಾ, ಲಕ್ಷ್ಮಣನೊಬ್ಬನೇ ಬರುತ್ತಿರುವುದನ್ನು ಕಂಡು ಕಂಗಾಲಾಗುತ್ತಾನೆ. "ಏನು ಕೆಲಸ ಮಾಡಿದೆ? ಸೀತೆಯೊಬ್ಬಳನ್ನೇ ಬಿಟ್ಟು ಬರುವುದೇ?!" - ಎಂದು ಆಕ್ರೋಶದಿಂದ ಉದ್ಗರಿಸುತ್ತಾನೆ. ರಾಕ್ಷಸರು ಅವಳನ್ನು ತಿಂದುಹಾಕಿರಲಿಕ್ಕೂ ಸಾಕೆಂದುಕೊಳ್ಳುತ್ತಾನೆ. "ಹಾ ಸೀತೇ! ಹಾ ಲಕ್ಷ್ಮಣಾ!" –  ಎಂಬುದಾಗಿ ಮಾರೀಚನು ರಾಮನ ಧ್ವನಿಯಲ್ಲೇ ಕೂಗಿಕೊಂಡನಲ್ಲವೇ (ಮೊಟ್ಟಮೊದಲ ಡೀಪ್ ಫೇಕ್!)? ಅದರಿಂದ ಆಗ(ಗಿರ)ಬಹುದಾದ ಅನರ್ಥವನ್ನು ರಾಮನು ಊಹಿಸಿಕೊಳ್ಳುತ್ತಾನೆ: ತನ್ನ ಪ್ರಾಣದ ಪ್ರಶ್ನೆಯಿದು; ಅಥವಾ ಪ್ರಾಣಕ್ಕಿಂತ ಹೆಚ್ಚಾದವಳ ಜೀವಿತದ ಪ್ರಶ್ನೆಯಿದು!

ತೀವ್ರ-ಶೋಕಾವಿಷ್ಟರಾಗಿ ಸೀತಾನ್ವೇಷಣೆ ಮಾಡುತ್ತಿರುವಲ್ಲಿ ರಕ್ತ-ಸಿಕ್ತನಾದ ಜಟಾಯು ಕಾಣುತ್ತಾನೆ. ಆತನನ್ನು ಕಂಡು ರಾಮನು ಮೊದಲೆಂದುಕೊಳ್ಳುವುದೇ, "ಈ ರೂಪದಲ್ಲಿರುವುದು ಯಾವನೋ ರಾಕ್ಷಸನೇ ಸರಿ! ಸೀತೆಯನ್ನು ಈತನೇ ತಿಂದುಹಾಕಿ ಸುಖವಾಗಿ ನಿದ್ರಿಸುತ್ತಿರಬೇಕು! ಈತನನ್ನೀಗಲೇ ಸಂಹರಿಸಿಬಿಡುವೆ" – ಎಂಬುದಾಗಿ!

ಅಷ್ಟರಲ್ಲಿ ಜಟಾಯುವೇ ದೀನನಾಗಿ ಮಾತನಾಡಿ, ಸೀತೆಯನ್ನುಳಿಸಲಿಕ್ಕಾಗಿ ಸೆಣಸಿ ಹೆಣಗಿ ತಾನು ರೆಕ್ಕೆ ಕಳೆದುಕೊಂಡು ಬಿದ್ದಿರುವುದನ್ನೂ, ತನಗೆ ಕೊನೆಗಾಲವೀಗ ಬಂದಿರುವುದನ್ನೂ ತಿಳಿಸುತ್ತಾನೆ. "ಸೀತಾಪಹರಣ ಮಾಡಿದವನು ರಾವಣ, ದಕ್ಷಿಣದಿಕ್ಕಿಗಾತ ಸಾಗಿದ" - ಮುಂತಾದ ವಿವರಗಳನ್ನೂ ತಿಳಿಸುತ್ತಾನೆ. "ನಿನಗೆ ಸೀತೆ ಮತ್ತೆ ದೊರೆಯುವಳು" – ಎಂದು (ಮುಹೂರ್ತದ ಆಧಾರದ ಮೇಲೆ) ತಿಳಿಸಿ, ಅಸುನೀಗುತ್ತಾನೆ.

"ನನಗಾಗಿ ಪ್ರಾಣಬಿಟ್ಟ ಈ ಪಕ್ಷಿರಾಜನು ನನಗೆ ಮಹೋಪಕಾರವನ್ನು ಮಾಡಿದ್ದಾನೆ; ತಂದೆ ದಶರಥನೆಂತೋ ಈತನು ನನಗಂತೆಯೇ ಸರಿ: ಈತನಿಗೆ ಸಂಸ್ಕಾರವನ್ನು ಮಾಡಬೇಕು" – ಎನ್ನುತ್ತಾ ರಾಮನು ಹೀಗನುಗ್ರಹಿಸುತ್ತಾನೆ: "ಯಜ್ಞ-ಶೀಲರಿಗೆ ಯಾವ ಗತಿಯೋ, ರಣದಲ್ಲಿ ಹಿಂದಿರುಗದವರಿಗೆ ಯಾವ ಗತಿಯೋ ಆ ಗತಿಯನ್ನು – ಇದೋ ನನ್ನ ಆಣತಿಯಂತೆ – ನೀನು ಹೊಂದುವವನಾಗು!" ಜಟಾಯುವಿಗೆ ದಹನ-ಸಂಸ್ಕಾರವನ್ನು ಮಾಡುತ್ತಾನೆ; ಪಿತ್ರ್ಯ-ಮಂತ್ರಗಳನ್ನು ಜಪಿಸುತ್ತಾನೆ. ಗೋದಾವರಿಯಲ್ಲಿ ಜಲೋದಕವನ್ನು ಇಬ್ಬರೂ ಬಿಡುತ್ತಾರೆ. "ರಾಮನಿಂದಾದ ಸಂಸ್ಕಾರವು ಮಹರ್ಷಿಯೊಬ್ಬನಿಂದಾದ ಸಂಸ್ಕಾರದಂತೆ!" - ಎಂದು ವಾಲ್ಮೀಕಿ-ಮಹರ್ಷಿಗಳು ಇದನ್ನು ಚಿತ್ರಿಸಿದ್ದಾರೆ.

ವ್ಯಾಧಿಯು ಬಂದಾಗ ವೈದ್ಯರ ವಶಕ್ಕೆ ರುಗ್ಣನನ್ನು ಒಪ್ಪಿಸುತ್ತೇವೆ. ಅಂತೆಯೇ ಆಧಿನಿವಾರಣೆಗಾಗಿ ಜ್ಞಾನಿಯ ವಶಕ್ಕೆ ಒಪ್ಪಿಸುವುದುಂಟು. ಸಾರಾಂಶವಾಗಿ "ಚೈತನ್ಯಾಮೃತವನ್ನು ಕೊಡುವವರ ಉಡಿಗೆ ಚೇತನನನ್ನು ಒಪ್ಪಿಸಬೇಕು" ಎಂಬುದು ಶ್ರೀರಂಗಮಹಾಗುರುಗಳ ಸಾರವಾದ ವಾಣಿ.

ಪ್ರಕೃತ, ತನ್ನ ಮಾನವ-ವರ್ತನೆಯನ್ನು ಬದಿಗಿಟ್ಟು ದೈವ-ಭಾವದಲ್ಲಿ ನಿಂತು, ಪರಮಾನುಗ್ರಹವನ್ನೂ, ಜೊತೆಗೆ ಸಾಂಗೋಪಾಂಗವಾದ ಉತ್ತರ-ಕ್ರಿಯೆಯನ್ನೂ, ನೆರವೇರಿಸಿದ್ದಾನೆ ಶ್ರೀರಾಮ! ಆತನ ಕೃಪೆಗೆ ಪಾತ್ರನಾದ ಜಟಾಯುವು ಅದೆಷ್ಟು ಧನ್ಯ! ಆತನಿಗೆ ದೊರೆತ ಈ ಸದ್ಗತಿಯನ್ನು ಭಾವಿಸಿಯೇ, "ಮುಕ್ತಿದಾಯಾಸ್ತು ಮಂಗಲಂ" ಎಂದು ರಾಮನಿಗೆ ಮಂಗಳಾಶಾಸನವನ್ನು ಮಾಡುವುದು.

ನಮಗೆ ಆಪ್ತರಾದವರು ಮರಣಹೊಂದಿದಾಗ ಅವರಿಗೆ ನಾವು ಸದ್ಗತಿಯನ್ನು ಕೋರಿಯೇವು ಅಷ್ಟೆ. ಆದರೆ ರಾಮನು ಸದ್ಗತಿ-ಪ್ರದಾಯಕ: ಮುಕ್ತಿ-ಪ್ರದ, ಚೈತನ್ಯಾಮೃತದ ಬುಗ್ಗೆ.

ಹೀಗೆ ಈ ಪ್ರಸಂಗದಲ್ಲಿ, ಆರಂಭದಲ್ಲಿ ರಾಮನ ಮನುಷ್ಯತ್ವವೂ ಕೊನೆಯಲ್ಲಿ ಸಾಕ್ಷಾದ್-ದೈವತ್ವವೂ ಸುಭಗವಾಗಿ ಪ್ರತಿಪಾದಿತವಾಗಿವೆ, ವಾಲ್ಮೀಕಿ-ರಾಮಾಯಣದಲ್ಲಿ.

ಸೂಚನೆ: 11/05/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.