Monday, May 20, 2024

ಕೃಷ್ಣಕರ್ಣಾಮೃತ - 13 ಆಶ್ಚರ್ಯದ ಮೂರ್ತಿ - ಎಳಸಿನ ಸೊಗಸು (Krsnakarnamrta - 13 Ashcaryada Murti - Elasina Sogasu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಚಿತ್ರ ಎಂಬ ಪದ ಎಲ್ಲರಿಗೂ ಪರಿಚಿತವೇ. ಆದರೆ ಸಂಸ್ಕೃತದಲ್ಲಿ ಆ ಪದಕ್ಕೆ ಬೇರೊಂದು 

ಅರ್ಥವೂ ಉಂಟು. ಅದಕ್ಕೆ ಆಶ್ಚರ್ಯ - ಎಂಬ ಅರ್ಥವಿದೆ (ಎಂಬುದೇ ಕೆಲವರಿಗೆ ಆಶ್ಚರ್ಯವನ್ನುಂಟುಮಾಡಬಹುದು!)

ಯಾವುದಾದರೂ ವಸ್ತು ಸುಂದರವಾಗಿದ್ದರೆ ನಮ್ಮ ಕವಿಗಳಿಗೆ ಮೊಟ್ಟಮೊದಲು ಕಣ್ಮುಂದೆ ಬರುವುದೇ ಕಮಲದ ಸೌಂದರ್ಯ. ಪಾದವಿರಬಹುದು, ಹಸ್ತವಿರಬಹುದು, ಮುಖವಿರಬಹುದು, ಕಣ್ಣಿರಬಹುದು - ಎಲ್ಲಕ್ಕೂ ಕಮಲದ ಹೋಲಿಕೆಯೇ. ಕಮಲವೆಂಬುದು ವೈದಿಕ-ಸಾಹಿತ್ಯದ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವಂತಹುದೇ. ಭಾರತದ ಪುಷ್ಪವೆಂದರೆ ಕಮಲವೇ ಸರಿ! ಅದರ ವರ್ಣವೇನು, ಹೊಳಪೇನು, ಮಾರ್ದವವೇನು!

ಭಗವಂತನನ್ನು ಒಲಿಸಿಕೊಳ್ಳಲು ನಾನಾಮಾರ್ಗಗಳಿವೆ: ಯಜ್ಞ-ಯಾಗಾದಿಗಳಿಂದಲೂ, ಮಂತ್ರ-ತಂತ್ರಗಳಿಂದಲೂ, ಜ್ಞಾನಯೋಗ-ಧ್ಯಾನಯೋಗಗಳಿಂದಲೂ ಸಾಧನೆಮಾಡುವವರುಂಟಷ್ಟೆ. ಆದರೆ ಭಗವಂತನನ್ನು ಒಲಿಸಿಕೊಳ್ಳಲು ಸುಲಭವಾದ ಮಾರ್ಗವೆಂದರೆ ಭಕ್ತಿಯೇ.

ಭಕ್ತರಿಗೊಲಿವ ಪರಿಯಲ್ಲಿ ಯಜ್ಞ-ಯಾಗಾದಿಗಳಿಗೇ ಒಲಿಯನೋ ಏನೋ, ಭಗವಂತ! ಎಂದೇ, ತನಗೆ ತನ್ನ ಕಣ್ಣುಗಳಿಗೇ ಗೋಚರವಾಗುತ್ತಿರುವ ಕೃಷ್ಣನ ರೂಪ-ಆಕಾರಗಳನ್ನು ಕಂಡು ತನ್ನ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾನೆ, ಲೀಲಾಶುಕ. ಅವರಿಗೆ ಗೋಚರವಾಗದೆ ದೂರ ಉಳಿದದ್ದು ತನ್ನೆದುರಿಗೇ ಇದೆ: ದೂರದಲ್ಲಿರುವುದು "ತತ್" (ಅದು); ಬಳಿಯಲ್ಲೇ ಇರುವುದು 'ಏತತ್' (ಇದು).

ಕೃಷ್ಣನ ಚರಣಾರವಿಂದ-ನಯನಾರವಿಂದ-ವದನಾರವಿಂದಗಳೆಲ್ಲವೂ ಆಶ್ಚರ್ಯಕರವಾಗಿರತಕ್ಕವೇ! ಆತನ ಚರಣಗಳಲ್ಲಿ ಧ್ವಜರೇಖೆ-ವಜ್ರರೇಖೆ- ಅಂಕುರರೇಖೆ - ಇವುಗಳೆಲ್ಲ ಉಂಟಲ್ಲವೇ? ಇವೆಲ್ಲ ಭಗವಂತನ ಪದದಲ್ಲಿ ಮಾತ್ರವೇ ಲಭ್ಯ. ಅನುಗ್ರಹಮಾಡಲೆಂದೇ ಅದಾದರೂ ಇಲ್ಲಿ ಎದುರಿಗೇ ತೋರಿರುವುದು!

ಆತನ ನಯನದ ಸೊಬಗೆಂತಹುದು! ಅಲ್ಲಿಯ ಹಾವ-ಭಾವಗಳ ಸೊಗಸೇ ವಿಶಿಷ್ಟವಾದದ್ದು! ಇನ್ನು ಆತನ ಮುಖವೋ? ಎಂತಹ ಸೌಂದರ್ಯ-ಮಾಧುರ್ಯ-ಲಾವಣ್ಯಗಳ ನೆಲೆಯದು!

ಒಂದೊಂದಾಗಿ ಇವುಗಳ ಚೆಲುವನ್ನು ಕಂಡು ಆಶ್ಚರ್ಯಪಟ್ಟಾದ ಬಳಿಕ, ಇಡೀ ರೂಪದ ಸೊಬಗನ್ನು ಮತ್ತೆ ಕಂಡು ಮತ್ತೊಮ್ಮೆ "ಆಶ್ಚರ್ಯ, ಆಹಾ ಆಶ್ಚರ್ಯ!" - ಎಂದು ಉದ್ಗರಿಸುತ್ತಾನೆ, ಕವಿ:

ಚಿತ್ರಂ ತದೇತತ್ ಚರಣಾರವಿಂದಂ!
  ಚಿತ್ರಂ ತದೇತತ್ ನಯನಾರವಿಂದಂ! |
ಚಿತ್ರಂ ತದೇತತ್ ವದನಾರವಿಂದಂ!
  ಚಿತ್ರಂ ತದೇತತ್ ಪುನರಂಬ ಚಿತ್ರಂ !!||


ಎಳೆಯ ಕೃಷ್ಣನ ಮುದ್ದಿನ ಚಿತ್ರಣ ಮತ್ತೊಂದು ಪದ್ಯದಲ್ಲಿ ಹೀಗೆ ಚಿತ್ರಿತವಾಗಿದೆ.

ಜೀವನದಲ್ಲಿ ಸುಳ್ಳು ಹೇಳಬಹುದೇ? - ಎಂದು ಯಾರಾದರೂ ಕೇಳಿದರೆ ಅದಕ್ಕೇನು ಉತ್ತರ ಹೇಳುವುದೆಂದೇ ಥಟ್ಟನೆ ಹೊಳೆಯುವುದಿಲ್ಲ. ನಾವು ಏನೆಂದು ಹೇಳಿದರೆ ಅದಕ್ಕೆ ಪ್ರತಿಯಾಗಿ ಎದುರಿಗಿರುವವರು ಮತ್ತೇನನ್ನು ಕೇಳಿಯಾರೋ? - ಎಂಬ ಸಂಶಯವು ಬೇರೆ ಮೂಡಿ ಕ್ಷಣಕಾಲ ಏನೂ ಹೊಳೆಯದಂತಾಗುತ್ತದೆ. ಆದರೆ ತಾಯಂದಿರನ್ನು ಕೇಳಿ - ಒಂದು ಮಗುವನ್ನು ಬೆಳೆಸಲು ಅದೆಷ್ಟು ಸುಳ್ಳುಗಳನ್ನು ಹೇಳಬೇಕಾಗುತ್ತದೆ - ಎಂದು! ಚೇಷ್ಟೆಮಕ್ಕಳನ್ನು ಬೆಳೆಸುವುದೆಂದರಂತೂ ಕಡಿಮೆ ಜಾಣ್ಮೆಯಲ್ಲ ಬೇಕಾಗುವುದು! ಅದರಲ್ಲೂ ಚೇಷ್ಟೆ-ಹಠಗಳನ್ನು ಮಾಡುವುದರಲ್ಲಿ ಪೈಪೋಟಿಮಾಡುವ ಅಣ್ಣತಮ್ಮಂದಿರಂತಾದರೋ, ಕೊನೆಗೆ ಇಬ್ಬರಲ್ಲೊಬ್ಬರು ತಂಟೆ ಮಾಡುವವರಂತಾಗಿಬಿಟ್ಟರು ಸಹ, ತನ್ನ ಬುದ್ಧಿಯನ್ನೆಲ್ಲಾ ಖರ್ಚು ಮಾಡಬೇಕಾಗುತ್ತದೆ, ತಾಯಿಯಾದವಳು! ಹೇಳುತ್ತಿರುವುದು ಮತ್ತಾರ ವಿಷಯವೂ ಅಲ್ಲ, ಕೃಷ್ಣ-ಬಲರಾಮರ ವಿಷಯ. 

ಎಷ್ಟೋ ಸಂದರ್ಭಗಳಲ್ಲಿ ನೇರಾಗಿ ಹೇಳಿದ ಒಳ್ಳೆಯ ಮಾತಿಗೆ ಸೊಪ್ಪನ್ನೇ ಹಾಕವು, ಚೇಷ್ಟೆಯ ಮಕ್ಕಳು. ಅವುಗಳಿಗೆ ಏನೋ ಆಸೆ ತೋರಿಸಬೇಕಾಗುವುದು, ಸಣ್ಣ ಪುಟ್ಟ ಕೆಲಸಮಾಡಿಸಲೂ. ಕೆಲವೊಮ್ಮೆ ಇರದ ಅಥವಾ ಇಲ್ಲದ ಪೈಪೋಟಿಯ ಭಾವವನ್ನು ಕೆರಳಿಸಿಯಾದರೂ ಕೆಲಸಮಾಡಿಸಬೇಕಾಗಿ ಬರುವುದು! ಏನೂ ಭಾರೀ ಕೆಲಸವೇನಲ್ಲ; ಕೃಷ್ಣನು ಹಾಲು ಕುಡಿದರೆ ಸಾಕೆನಿಸಿದೆ, ಯಶೋದೆಗೆ. ಅದಕ್ಕೇನು ಮಾಡುವುದು? ಏನೋ ಒಂದು ಉಪಾಯ ಮಾಡಬೇಕು. "ನೋಡು, ನಿನ್ನಣ್ಣನಿಗಿಂತ ನೀನೇ ವಾಸಿ" ಎಂದಾಗುವಂತೆ ಏನಾದರೂ ಮಾಡಬೇಕೆಂಬುದು ಆಕೆಯ ಸಂಕಲ್ಪ. ಅದಕ್ಕೇ ಒಂದು ಸುಳ್ಳನ್ನು ಥಟ್ಟನೆ ಪೋಣಿಸಿದಳು. 

ಬಲರಾಮನು ಆಟಕ್ಕೆ ಹೋಗಿದ್ದಾನೆ. ಎಲ್ಲಿಗೆ? ಮತ್ತೆಲ್ಲಿಗೆ? ಯಮುನಾನದಿಯ ಪುಳಿನಪ್ರದೇಶಕ್ಕೆ. ಪುಲಿನವೆಂದರೆ ಮರಳುಪ್ರದೇಶ. ಮಕ್ಕಳಿಗೆ ಮಣ್ಣಾಟ-ಮರಳಾಟಕ್ಕಿಂತಲೂ ಮಿಗಿಲಾದ ಕ್ರೀಡೆಯುಂಟೇ? ನದೀದಡದ ಮರಳಿನ ಮಧ್ಯದಲ್ಲಿ ಆಡುತ್ತಿದ್ದರೆ, ಕಾಲಕಳೆಯುವುದಾದರೂ ಮಕ್ಕಳ ಅರಿವಿಗೆ ಬಂದುಬಿಡುತ್ತದೆಯೇ? ಅದಕ್ಕೇ ಯಶೋದೆಯೊಂದು ಉಪಾಯವನ್ನು ಹೂಡಿದಳು. 

ನಿನ್ನಣ್ಣ ಮುಸಲಿಯಿದ್ದಾನಲ್ಲಾ, ಆತನು ಯಮುನಾಪುಳಿನಕ್ಕೆ ಆಟವಾಡಲು ಹೋಗಿದ್ದಾನೆ. (ಮುಸಲಿಯೆಂದರೆ ಬಲರಾಮ. ಆತನ ಆಯುಧವಾಗಿ ಹಲ-ಮುಸಲಗಳಿರುವುದುಂಟಷ್ಟೆ?) ಅಷ್ಟರಲ್ಲಿ, ಎಂದರೆ ಆತನು ಬರುವಷ್ಟರಲ್ಲಿ ನೀನೊಂದು ಕೆಲಸವನ್ನು ಮಾಡಿಬಿಡು - ಎನ್ನುತ್ತಿದ್ದಾಳೆ. ಏನು ಕೆಲಸ? ಮತ್ತೇನು? ಹಾಲುಕುಡಿಯುವುದು. ಅದು ಎಂತಹ ಹಾಲು? "ಕರ್ಬುರಿಕಾ-ಪಯಃ" ಎಂದರೆ ಬಣ್ಣವಾಗಿರುವ ಹಾಲು. ಒಳ್ಳೆಯ ಗೋಕ್ಷೀರವು - ಎಂದರೆ ಹಸುವಿನ ಹಾಲು - ಸ್ವಲ್ಪ ಹಳದೀ ಬಣ್ಣದ ಮೇಲಿರುತ್ತದೆಯಲ್ಲವೆ? ಅದರ ಕೆನೆಯಂತೂ ಚಿನ್ನದ ಬಣ್ಣ. ಅದಕ್ಕೊಂದಿಷ್ಟು ಬೆಲ್ಲ ಕೇಸರಿಗಳನ್ನೂ ಹಾಕಿದ್ದಾಳೋ ಏನೋ? ಅಂತೂ ಬಣ್ಣದ ಹಾಲೇ ಅದು. ಅದನ್ನು ಕುಡಿದುಬಿಡು - ಎನ್ನುತ್ತಿದ್ದಾಳೆ. 

ಸಣ್ಣ ವಯಸ್ಸಿಗೇ ಮಕ್ಕಳಿಗೆ ವ್ಯಾಪಾರಿ-ಭಾವ ಬಂದುಬಿಡುತ್ತದೆ (ಅಥವಾ ಕಲಿಸಿಬಿಡುತ್ತಾರೆ) ಅಲ್ಲವೆ? ಯಾತಕ್ಕೆ ಕುಡಿಯಬೇಕು? - ಎಂದೋ, ನನಗೇನು ಲಾಭ? - ಎಂದೋ ಆತನು ಕೇಳುವ ಮುಂಚೆಯೇ ಆತನಿಗೆ ಪ್ರಲೋಭನೆಯೊಂದನ್ನು ಒಡ್ಡಿಬಿಡಬೇಕು - ಎಂಬುದು ಅವಳ ಆಶಯ (ಪ್ರಲೋಭನೆಯೆಂದರೆ ಆಸೆ ತೋರಿಸುವುದು). ಏನದು? "ನೋಡು, ನಿನ್ನ ಜುಟ್ಟು ಚೆನ್ನಾಗಿ ಬೆಳೆಯುತ್ತದೆ" ಎಂದಳು. ಬಲರಾಮನು ಕೃಷ್ಣನಿಗಿಂತ ಸ್ವಲ್ಪ ದೊಡ್ಡವನಲ್ಲವೇ? ಎಂದೇ ಆತನ ಕೇಶರಾಶಿ ಒಂದಿಷ್ಟು ಹೆಚ್ಚೇ ಇದ್ದೀತು, ಕೃಷ್ಣನಿಗೆ ಹೋಲಿಸಿದರೆ. ಅದಕ್ಕೇ ಈ ಪ್ರಲೋಭನೆ. 

ಆಯಿತೆಂದು ಹಾಲು ಕುಡಿಯಲಾರಂಭಿಸಿದ ನಮ್ಮ ಪುಟ್ಟ ಕೃಷ್ಣ, ಸಂತೋಷದಿಂದಲೇ! ಅಣ್ಣನು ಹಿಂದಿರುಗುವ ಮುಂಚೆ ಅವನನ್ನು ಮೀರಿಸಿದಂತಾಗಬೇಕಲ್ಲವೇ? ಆದರೆ ಅರ್ಧಬಟ್ಟಲಷ್ಟೂ ಇನ್ನೂ ಕುಡಿದಿಲ್ಲ, ಆಗಲೇ ತನ್ನ ಶಿಖೆಯನ್ನು - ಎಂದರೆ ಜುಟ್ಟನ್ನು - ಮುಟ್ಟಿನೋಡಿಕೊಳ್ಳುತ್ತಿದ್ದಾನಂತೆ, ಈ ಬಾಲಕೃಷ್ಣ. ಹೀಗೆ ಯಶೋದೆಯ ಮೋಸದ ಮಾತಿಗೆ ಪ್ರತಿಯಾಗಿ ಅರ್ಧಕುಡಿಯುತ್ತಿದಂತೆಯೇ ಶಿಖಾಸ್ಪರ್ಶಮಾಡಿನೋಡಿಕೊಳ್ಳುತ್ತಾ, ಕೇಶವೃದ್ಧಿಯಾಗುತ್ತಿದೆ ತಾನೆ? - ಎಂದು ಖಾತ್ರಿಪಡಿಸಿಕೊಳ್ಳುತ್ತಿದ್ದಾನಂತೆ, ಶ್ರೀಕೃಷ್ಣ!

ಇಂತಿರುವ ಪುಟ್ಟಕೃಷ್ಣನು ನಮ್ಮನ್ನು ಕಾಪಾಡಲಿ - ಎಂದು ಕೃಷ್ಣನ ಒಂದೊಂದು ಲೀಲೆಯನ್ನೂ ಚಪ್ಪರಿಸಿಕೊಳ್ಳುತ್ತಾ ಕವಿ ಲೀಲಾಶುಕನು ನಮ್ಮ ಕಣ್ಣ ಮುಂದೆ ದೇವನ ಲೀಲಾ-ವಿನೋದಗಳನ್ನು ಚಿತ್ರಿಸುತ್ತಾನೆ. ಪೂರ್ಣಶ್ಲೋಕವಿಂತಿದೆ:

ಕಾಲಿಂದೀ-ಪುಲಿನೋದರೇಷು ಮುಸಲೀ ಯಾವದ್ಗತಃ ಖೇಲಿತುಂ

ತಾವತ್ ಕರ್ಬುರಿಕಾ-ಪಯಃ ಪಿಬ ಹರೇ, ವರ್ಧಿಷ್ಯತೇ ತೇ ಶಿಖಾ |

ಇತ್ಥಂ ಬಾಲತಯಾ ಪ್ರತಾರಣ-ಪರಾಃ ಶ್ರುತ್ವಾ ಯಶೋದಾ-ಗಿರಃ

ಪಾಯಾನ್ನಃ ಸ್ವ-ಶಿಖಾಂ ಸ್ಪೃಶನ್ ಪ್ರಮುದಿತಃ ಕ್ಷೀರೇಽರ್ಧಪೀತೇ ಹರಿಃ! ||

.ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 4/5/2024 ರಂದು ಪ್ರಕಟವಾಗಿದೆ.