ಲೇಖಕರು : ಡಾ. ಹಚ್.ಆರ್. ಮೀರಾ(ಪ್ರತಿಕ್ರಿಯಿಸಿರಿ lekhana@ayvm.in)
ರಾಜಾವಿಶ್ವಾಮಿತ್ರರು ಋಷಿವಿಶ್ವಾಮಿತ್ರರಾದದ್ದಾದರೂ ಹೇಗೆ? ಸಂದರ್ಭ ಹೀಗಿದೆ. ಶಬಲೆ ಎಂಬ ಒಂದು ವಿಶೇಷವಾದ ಹಸು ವಸಿಷ್ಠರ ಆಶ್ರಮದಲ್ಲಿತ್ತು. ಅಲ್ಲಿಗೆ ಬಂದಿದ್ದ ರಾಜಾ ವಿಶ್ವಾಮಿತ್ರನಿಗೆ ಅದರ ಬಗ್ಗೆ ಆಸೆ ಹುಟ್ಟಿ ತಮಗೆ ಅದು ಬೇಕೆಂದರು. ವಸಿಷ್ಠರು ಕೊಡಲಾರೆಯೆಂದರು. ವಿಶ್ವಾಮಿತ್ರರು ಅದನ್ನು ಬಲವಂತವಾಗಿ ತೆಗೆದುಕೊಂಡು ಹೋಗಲು ಪ್ರಯತ್ನಿಸಿದಾಗ ಆ ಹಸು ಸೃಷ್ಟಿಸಿದ ಸೈನ್ಯವು ರಾಜನ ಸೈನ್ಯವನ್ನು ಹತ್ತಿಕ್ಕಿತು. ವಿಶ್ವಾಮಿತ್ರರ ನೂರು ಮಕ್ಕಳು ವಸಿಷ್ಠರ ಮೇಲೆ ದಾಳಿ ಮಾಡಿದಾಗ, ಹುಂಕಾರಮಾತ್ರದಿಂದ ವಸಿಷ್ಠರು ಅವರೆಲ್ಲರನ್ನೂ ಬೂದಿಮಾಡಿದರು! ಅಷ್ಟೂ ಜನ ಮಕ್ಕಳನ್ನು ಕಳೆದುಕೊಂಡ ವಿಶ್ವಾಮಿತ್ರರು ಮಂಕಾದರು. ಅವರಲ್ಲಿ ನಿರ್ವೇದ(ಎಂದರೆ ಹತಾಶೆ) ಉಂಟಾಗಿ ತಮ್ಮ ರಾಜ್ಯವನ್ನು ಉಳಿದೊಬ್ಬ ಮಗನಿಗೆ ವಹಿಸಿ ಈಶ್ವರನನ್ನು ಕುರಿತು ತಪಸ್ಸು ಮಾಡಲು ಹೊರಟರು. ತಪಸ್ಸು ಫಲಿಸಿ, ಶಿವನು ಪ್ರತ್ಯಕ್ಷನಾದಾಗ ಸಂಪೂರ್ಣಧನುರ್ವೇದವನ್ನು - ಸಮಸ್ತ ರಹಸ್ಯಗಳೊಂದಿಗೂ ಅಸ್ತ್ರಗಳೊಂದಿಗೂ - ವರವಾಗಿ ಕೇಳಿ ಪಡೆದರು.
ಇದರಿಂದಾಗಿ ಅವರಿಗೆ ದರ್ಪವು ಹೆಚ್ಚಾಗಿ ಮತ್ತೆ ವಸಿಷ್ಠರ ವಿರುದ್ಧ ಸೇಡಿಗೆ ಹೊರಟರು. ಅವರು ಅಸ್ತ್ರಗಳ ಮಳೆಗರೆದು ವಸಿಷ್ಠರ ಆಶ್ರಮವನ್ನು ಸುಟ್ಟುಹಾಕಿದರು. ಅಲ್ಲಿದ್ದ ವಸಿಷ್ಠರ ಶಿಷ್ಯರು ಕಂಗೆಟ್ಟು ದಿಕ್ಕಾಪಾಲಾಗಿ ಓಡಿದರು. ಆಗ ವಸಿಷ್ಠರಿಗೆ ಕೋಪವುಕ್ಕಿಬಂದು, "ದುರಾಚಾರ, ಮೌಢ್ಯದಿಂದ ನೀನಿನ್ನು ಇಲ್ಲವಾಗುತ್ತೀಯೆ!" ಎಂದು ತಮ್ಮ ಬ್ರಹ್ಮದಂಡವನ್ನು ಎತ್ತಿಹಿಡಿದರು.
ವಿಶ್ವಾಮಿತ್ರರು ಪ್ರಯೋಗ ಮಾಡಿದ ಅಸ್ತ್ರಗಳನ್ನೆಲ್ಲ ಆ ಕಾಲದಂಡದಂತಿದ್ದ ಬ್ರಹ್ಮದಂಡವು ನುಂಗಿಹಾಕಿಬಿಟ್ಟಿತು. ಬೇರೆಲ್ಲ ಅಸ್ತ್ರಗಳಿರಲಿ, ಕೊನೆಗೆ ಬ್ರಹ್ಮಾಸ್ತ್ರವನ್ನೂ ಅದು ನುಂಗಿಹಾಕಿತು. ಆಗ ರುದ್ರಭಯಂಕರರಾಗಿ ಕಾಣುತ್ತಿದ್ದ ವಸಿಷ್ಠರನ್ನು ಕಂಡು ಲೋಕವೇ ತಲ್ಲಣಿಸಿಹೋಯಿತು. ಕೊನೆಗೆ ಮುನಿಗಳ ಪ್ರಾರ್ಥನೆಯನ್ನೂ ಸಾಂತ್ವನದ ಮಾತುಗಳನ್ನೂ ಕೇಳಿ ವಸಿಷ್ಠರು ಶಾಂತವಾದರು. ಪರಾಜಯವನ್ನೊಪ್ಪಿದ ವಿಶ್ವಾಮಿತ್ರರಿಗೆ ಬ್ರಹ್ಮಬಲವು ಕ್ಷಾತ್ರಬಲಕ್ಕಿಂತ ಬಹಳ ದೊಡ್ಡದೆಂದು ಮನವರಿಕೆಯಾಗಿ ಬ್ರಹ್ಮತ್ವ ಕೊಡುವ ತಪಸ್ಸನ್ನಾಚರಿಸುವೆ ಎಂದು ಹೊರಟುಬಿಟ್ಟರು.
ಮೊದಲೂ ವಿಶ್ವಾಮಿತ್ರರು ಈಶ್ವರನ್ನು ಕುರಿತು ಮಾಡಿದ್ದೂ ತಪಸ್ಸೇ, ಈಗ ಮಾಡಹೊರಟದ್ದೂ ತಪಸ್ಸೇ. ಮೊದಲೂ, ಮಕ್ಕಳನ್ನು ಕಳೆದುಕೊಂಡಾಗ, ಅವರಿಗೆ ವೈರಾಗ್ಯವೇ ಬಂದಿತ್ತು, ಈಗಲೂ, ಬ್ರಾಹ್ಮಬಲದೆದುರು ಕ್ಷಾತ್ರಬಲದ ನಿಷ್ಪ್ರಯೋಜಕತೆ ತಿಳಿದಾಗ, ಬಂದದ್ದೂ ವೈರಾಗ್ಯವೇ. ಆದರೆ ಎರಡಕ್ಕೂ ವ್ಯತ್ಯಾಸವಿಲ್ಲವೇ?
ಮೊದಲ ಸಂನಿವೇಶದಲ್ಲಿ ವಿಶ್ವಾಮಿತ್ರರಿಗೆ ಜೀವನದಲ್ಲಿ ಬೇಸರ ಹುಟ್ಟಿ, ರಾಜ್ಯವನ್ನು ಮಗನಿಗೊಪ್ಪಿಸಿ ಹೊರಟಿದ್ದರಾದರೂ, ಸೇಡಿನ ಬೆಂಕಿ ಬೂದಿಮುಚ್ಚಿದ ಕೆಂಡದಂತೆ ಅವರಲ್ಲಿ ಇನ್ನೂ ಜೀವಂತವಿತ್ತು. ಘೋರತಪಸ್ಸಾಚರಿಸಿ ಕೇಳಿದ್ದಾದರೂ ಏನನ್ನು? ಆ ಕೆಂಡಕ್ಕೆ ಗಾಳಿಯೂದಿ ಭಗ್ಗನೆ ಕಿಚ್ಚನ್ನೆಬ್ಬಿಸಲು ಬೇಕಾದ ಧನುರ್ವಿದ್ಯೆಯನ್ನು. ತಪಸ್ಸು ತಪ್ಪಲ್ಲ, ಸಂಪೂರ್ಣಧನುರ್ವಿದ್ಯೆ ಕೇಳಿದ್ದು ತಪ್ಪಲ್ಲ. ಆದರೆ ಕೇಳಿದ ಉದ್ದೇಶ ತಪ್ಪಾದ ದಿಕ್ಕಿನತ್ತ ಒಯ್ಯುವಂತಿದ್ದದ್ದು. ಎರಡನೆ ಬಾರಿ ಅವರಿಗೆ ನಿರ್ವೇದವುಂಟಾದಾಗ, ಈ ತಾಮಸಿಕಾಭಿಲಾಷೆ ಬಿಟ್ಟು, ಆತ್ಮೋನ್ನತಿಗಾಗಿ ತಪಸ್ಸನ್ನಾಚರಿಸಹೊರಟರು. ಶ್ರೀರಂಗಮಹಾಗುರುಗಳು ಹೇಳಿದ್ದಂತೆ, "ಪ್ರಕೃತಿಯು ಪ್ರಕೋಪಗೊಂಡರೆ ಮಾರಕವಸ್ತುವಾಗುತ್ತದೆ. ಅದೇ ಪ್ರಸನ್ನವಾಗಿ ನಿಂತರೆ ಕ್ಷಣಮಾತ್ರದಲ್ಲಿಯೇ ತಾರಕವಾಗುತ್ತದೆ." ಕ್ರೋಧ-ಮದ-ಮಾತ್ಸರ್ಯಗಳಿಂದ ವಿಶ್ವಾಮಿತ್ರರು ಮಾಡಿದ ತಪಸ್ಸೂ, ಅದರ ಫಲವೂ ದುರ್ದಿಶೆಯಿಂದಾಗಿ ಅವರ ದುರ್ದಶೆಗೆ ಕಾರಣವಾಯಿತು. ನಾವು ಘನಕಾರ್ಯವನ್ನು ಮಾಡಹೊರಟಿದ್ದಾಗಲೂ ಘನೋದ್ದೇಶದಿಂದ ಮಾಡಿದಾಗಲೇ ಸಾರ್ಥಕತೆ.
ಸೂಚನೆ: 14/5/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.