Monday, May 6, 2024

ಭಾರತೀಯ - ವಿವಾಹಕ್ಕೊಂದು ಹಿನ್ನೆಲೆ (Bharatiya - Vivahakkondu Hinnele)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)





ಸಾಮಾನ್ಯವಾಗಿ ಎಲ್ಲಾ ಕಡೆ "ಹುಟ್ಟು ಸಹಜ, ಸಾವು ತನ್ನಿಷ್ಟ" ಎಂದು ಹೇಳುವುದನ್ನು ನಾವು ಕಾಣಬಹುದು. ಹಾಗಾದರೆ ಒಳ್ಳೆಯ ಕುಲದಲ್ಲಿನ ಹುಟ್ಟಿನ ಗುಟ್ಟೇನು? ಎಂಬುದನ್ನು ನಾವಿಂದು ಮರೆತಂತಿದೆ. ಆದರೆ ನಮ್ಮ ಋಷಿ ಮಹರ್ಷಿಗಳು, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಈ ಹುಟ್ಟಿನ ಬಗ್ಗೆ ಬಹಳವಾದ ಮಹತ್ವವನ್ನು ಕೊಟ್ಟಿರುವುದನ್ನು ಕಾಣಬಹುದು. ಇನ್ನೊಂದು ಮಾತು ಕೂಡ ಇಲ್ಲದಿಲ್ಲಾ; "ಮನುಷ್ಯ ಎಲ್ಲಿ ಬೇಕಾದರೂ ಹುಟ್ಟಬಹುದು, ಹುಟ್ಟು ಅವನ ಮುಂದಿನ ಜೀವನವನ್ನು ನಿರ್ಧರಿಸಲು ಸಾಧ್ಯವಿಲ್ಲ; ಹುಟ್ಟಿದ ಅನಂತರದಲ್ಲಿ ಅವನು ಪಡೆಯುವಂತಹ ವಿದ್ಯೆ, ಸಂಸ್ಕಾರ, ಪರಿಸರ ಮೊದಲಾದವುಗಳಿಂದ ಅವನು ತನ್ನ ಮಾನವೀಯ ಮೌಲ್ಯಗಳನ್ನು ಪಡೆದು ಉತ್ತಮನಾಗುತ್ತಾನೆ" ಎಂಬುದಾಗಿ. ಅಂದರೆ ಹುಟ್ಟು ಅನ್ನುವಂಥದ್ದು ಬರಡಾಗಿ ಇರುವಂತದ್ದು; ಹುಟ್ಟಿದ ಅನಂತರದಲ್ಲಿ ಆ ಬರುಡುತನಕ್ಕೆ ಕೊಡುವ ಸಂಸ್ಕಾರವು ಒಂದಷ್ಟು ಜೀವ ತುಂಬಿಸುವಂತಹ ಕೆಲಸ ಮಾಡುತ್ತದೆ ಎಂಬ ವಿಷಯವನ್ನು ಕೂಡ ನಾವು ಈ ವಾದಗಳ ಹಿನ್ನೆಲೆಯಲ್ಲಿ ಕಾಣಬಹುದು. ಆದರೆ ನಮ್ಮ ಸನಾತನ ಸಂಸ್ಕೃತಿಯಲ್ಲಿ ಈ ಹುಟ್ಟಿಗೆ ಇಷ್ಟೇ ವಿವರಣೆಯೋ ಅಥವಾ ಇದಕ್ಕಿಂತ ಏನಾದರೂ ಹೆಚ್ಚಿನ ವಿವರಣೆ ಉಂಟೇ? ಎಂಬುದನ್ನು ನಾವು ಒಮ್ಮೆ ವಿಮರ್ಶಿಸೋಣ.


ಒಬ್ಬ ಒಳ್ಳೆಯ ಮನುಷ್ಯನ ಲಕ್ಷಣವನ್ನು ಹೇಳುವಾಗ 'ಸತ್ಕುಲಪ್ರಸೂತ, ಅಭಿಜಾತ, ಕುಲೀನ, ಅಭಿಜನ, ಕುಲಶ್ರೇಷ್ಠ ಎಂಬಿತ್ಯಾದಿ ವಿಶೇಷಣಗಳನ್ನು ಕೂಡ ನಾವು ಕಾಣುತ್ತೇವೆ. ಅಂದರೆ ಅವನು ಯಾವ ಕುಲದಲ್ಲಿ ಹುಟ್ಟಿದ್ದಾನೆ? ಅವನ ವಂಶವಾಹಿನಿ ಯಾವುದು? ವಂಶದ ಹಿನ್ನೆಲೆ ಏನು? ಯಾವೆಲ್ಲ ಉತ್ತಮ ಗುಣಗಳನ್ನು ಅವನು ಪಡೆದುಕೊಂಡು ಹುಟ್ಟಿದ್ದಾನೆ? ಇತ್ಯಾದಿ ಅನೇಕ ಅಂಶಗಳನ್ನು ಜೊತೆಯಲ್ಲಿ ಸೇರಿಸಿಕೊಂಡು ಈ 'ಸತ್ಕುಲಪ್ರಸೂತ - ಒಳ್ಳೆಯ ವಂಶದಲ್ಲಿ ಹುಟ್ಟಿದವನು' ಎಂಬ ವಿವರಣೆಯನ್ನು ಕೂಡ ನಾವು ಕಾಣುತ್ತೇವೆ. ಅಂದರೆ ಇಲ್ಲಿ ಹುಟ್ಟಿದ ಮೇಲೆ ಕಾಣುವ ಗುಣವಿಶೇಷತೆಗಳಿಗೆ ಅವನ ಹುಟ್ಟಿನ ಹಿಂದಿರುವ ಅಂಶಗಳೇ ಕಾರಣ ಎಂಬುದನ್ನು ನಾವು  ಕಾಣಬಹುದು. ಹುಟ್ಟು ಗುಣವನ್ನು ನಿರ್ಧರಿಸುವುದಿಲ್ಲ ಎಂಬಂತಿದ್ದರೆ ಇಂಥ ವಿಶೇಷಗುಣಗಳು ಏಕೆ ಬರುತ್ತಿದ್ದವು? ಎಂಬುದು ಇಲ್ಲಿ ಪ್ರಶ್ನೆಗೆ ವಿಷಯ. ಅಂದರೆ ಹುಟ್ಟಿನಲ್ಲೇ ಆತ ತನ್ನ ವಂಶದಲ್ಲಿರುವಂತಹ ಅನೇಕ ಗುಣಗಳನ್ನು ಹೊತ್ತುಕೊಂಡು ಬರುತ್ತಾನೆ ಎಂಬುದನ್ನು ನಾವು ಇಲ್ಲಿ ಊಹಿಸಬಹುದು. ನಮ್ಮ ಸಂಪ್ರದಾಯದಲ್ಲಿ ಜನ್ಮಾಂತರಗಳನ್ನು ಒಪ್ಪುತ್ತೇವೆ. ಅಂದರೆ ಹಿಂದಿನ ಜನ್ಮದಲ್ಲಿ ಅವನು ಯಾವ ಪುಣ್ಯ ಪಾಪ ಕರ್ಮಗಳನ್ನು ಮಾಡಿರುವನೋ, ಅದಕ್ಕನುಗುಣವಾದ ಹುಟ್ಟು ಸಂಭವಿಸುತ್ತದೆ ಎಂಬುದಾಗಿ. ಅಲ್ಲದೆ ಈ ಹುಟ್ಟಿನಲ್ಲಿ ಪಡೆದ ಶರೀರಕ್ಕೆ ಅವನ ಹಿಂದಿನ ಅಂದರೆ, ತಂದೆ, ತಾಯಿ, ಅಜ್ಜ, ಮುತ್ತಜ್ಜ  ಮೊದಲಾದವರ ಅನೇಕ ಗುಣಗಳನ್ನು ಕೂಡ ಪಡೆದುಕೊಂಡು ಹುಟ್ಟುವುದನ್ನು ನಾವು ಕಾಣುತ್ತೇವೆ. ಒಂದು ಮಗು ಹುಟ್ಟಿದಾಗ ಮಗುವನ್ನು ನೋಡಿ 'ತಂದೆಯಂತೆ ಇದ್ದಾನೆ, ತಾಯಿಯಂತೆ ಇದ್ದಾನೆ, ಅಜ್ಜನಂತೆ ಇದ್ದಾನೆ' ಹೀಗೆಲ್ಲ  ಆ ಮಗುವನ್ನು ವಿಶ್ಲೇಷಿಸುವುದು ಉಂಟು. ಅಂದರೆ ಹುಟ್ಟೇ ಅನೇಕ ಗುಣಗಳಿಗೆ ಕಾರಣವಾಗುವಂತದು ಎಂಬುದೂ ಅಷ್ಟೇ ನಿಜ. ಒಬ್ಬ ವ್ಯಕ್ತಿಯನ್ನು ಅಥವಾ ವ್ಯಕ್ತಿಯ ವ್ಯಕ್ತಿತ್ವವನ್ನು ತೀರ್ಮಾನಿಸುವಾಗ ಅವನು ಯಾವ ಕುಲದಲ್ಲಿ ಹುಟ್ಟಿದ? ಎಂಬುದು ಕೂಡ ಅಷ್ಟೇ ಮುಖ್ಯವಾಗಿ ಕಂಡುಬರುತ್ತದೆ. ರಾಮನ ವಂಶ ಅಥವಾ ಮಹಾಭಾರತದಲ್ಲಿನ ಕೌರವ ಪಾಂಡವರ ವಂಶ ಇಲ್ಲಿ ಒಂದು ವಂಶವಾಹಿನಿಯನ್ನು ನಾವು ನೋಡಬಹುದು. ಆ ವಂಶದ ಹಿರಿಕರಲ್ಲಿ ಯಾವೆಲ್ಲ ಗುಣವಿಶೇಷಗಳು ಇರುತ್ತವೆಯೋ ಅವೆಲ್ಲವೂ ಮುಂದಿನ ಸಂತತಿಯಲ್ಲಿ ಸಂಕ್ರಾಂತವಾಗುತ್ತವೆ ಎಂಬುದು ಇದರ ಹಿಂದಿರುವ ವಿಷಯ. ಹಾಗಾಗಿ ಈ ವಿಷಯವನ್ನು ಆಧರಿಸಿ ವಿವಾಹವನ್ನು ಒಂದು ಸಂಸ್ಕಾರವನ್ನಾಗಿ ವಿಧಿಸಲಾಗಿದೆ. ವಿವಾಹವು ಎರಡು ಕುಲಗಳ ನಡುವೆ ಸಂಬಂಧವನ್ನು ಬೆಸೆಯುವ ಸಾಧನ. ಎರಡು ಕುಲದ ಗಂಡು ಮತ್ತು ಹೆಣ್ಣು ಇವೆರಡು ಒಟ್ಟಾದಾಗ ಮುಂದೆ ಸಂತತಿ ಬರುತ್ತದೆ. ಈ ಎರಡು ವಂಶಗಳಲ್ಲಿ  ಯಾವೆಲ್ಲ ಗುಣದೋಷಗಳು ಇರುತ್ತವೆಯೋ ಅವು ಮುಂದಿನ ಸಂತತಿಯಲ್ಲಿ ಬರುತ್ತವೆ. ಗುಣಗಳಿದ್ದರೆ ಗುಣಗಳು ಬರಬಹುದು; ದೋಷಗಳಿದ್ದರೆ ದೋಷಗಳು ಬರಬಹುದು. ದೋಷ ಎಂದರೆ ವಿಕಾರ. ಗುಣ ಎಂದರೆ ನಿರ್ವಿಕಾರ. ವಿವಾಹದ ಉದ್ದೇಶವೂ ನಿರ್ವಿಕಾರವಾದ ಸಂತತಿಯ ಲಾಭ. ನಿರ್ವಿಕಾರವಾದ ಸಂತತಿ ಆಗಬೇಕಾದರೆ ಆ ಕುಲದಲ್ಲಿ ದೋಷಗಳು ಇರಬಾರದು. ಯಾವ ಕುಲದಲ್ಲಿ ದೋಷಗಳು ಅತ್ಯಲ್ಪತವಾಗಿರುತ್ತವೆಯೋ ಅಂತಹ ಕುಲವನ್ನು 'ಸತ್ಕುಲ' ಎಂಬುದಾಗಿ ಹೇಳಿ, ಅಂತಹ ಕುಲದಲ್ಲಿ ಹುಟ್ಟಿದ ವ್ಯಕ್ತಿಯನ್ನು 'ಸತ್ಕುಲಪ್ರಸೂತ, ಅಭಿಜಾತ' ಮೊದಲಾದಂತಹ ವಿಶೇಷಣಗಳಿಂದ ಗುರುತಿಸುವುದು ನಮ್ಮ ಸಂಸ್ಕೃತಿಯಾಗಿದೆ. ಇದೇ ವಿವಾಹದ ಹಿಂದಿರುವ ಅತಿ ಮುಖ್ಯವಾದ ಅಂಶ. ಈ ಅಂಶವನ್ನು ಇಟ್ಟುಕೊಂಡು ವಿವಾಹವನ್ನು ಅತ್ಯಂತ ಪ್ರಮುಖವಾದ ಸಂಸ್ಕಾರ ಎಂಬುದಾಗಿ ಹೇಳಲಾಗಿದೆ.


ಸೂಚನೆ:  05/05/2024 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.