Showing posts with label author_subrabhmanyasomayaji. Show all posts
Showing posts with label author_subrabhmanyasomayaji. Show all posts

Saturday, December 21, 2024

ಧರ್ಮರಾಜನಿಗೂ ನರಕದರ್ಶನವೇ ? (Dharmarajanigu Narakadarsanave ?)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)



ಕುರುಕ್ಷೇತ್ರ ಯುದ್ಧ ಮುಗಿದಿದೆ. ಪರಮ ಭಾಗವತ ಭೀಷ್ಮಾಚಾರ್ಯರ ಅವಸಾನವೂ ಆಗಿದೆ. ತನ್ನೆಲ್ಲ ಬಂಧು ಮಿತ್ರರೊಡನೆ ದುರ್ಯೋಧನನೂ ಸತ್ತಿದ್ದಾಗಿದೆ. ಒಂದು ಭೀಕರ ಅಧ್ಯಾಯ ಮುಗಿದಂತಾಗಿದೆ.

ಶ್ರೇಷ್ಠ ರಾಜ.

ಆ ಮಹಾಯುದ್ಧದ ನಂತರ ಧರ್ಮರಾಜನ ರಾಜ್ಯಭಾರ ಸುಮಾರು ೩೬ ವರ್ಷಗಳು. ಯಮಧರ್ಮನ ಮಗ. ಕೇಳಬೇಕೇ? ನ್ಯಾಯದಿಂದ ಧರ್ಮದಿಂದ ರಾಜ್ಯವಾಳುವದು ಅವನ ರಕ್ತಗತ ಸ್ವಭಾವವೇ. ಆದರೂ ದ್ರೋಣರ ಶಸ್ತ್ರತ್ಯಾಗಕ್ಕಾಗಿ ಮನಸ್ಸಿನಿಂದ ಒಂದು ಸುಳ್ಳು ಹೇಳಿದ್ದು ಅವನ ಸತ್ಯಪ್ರಜ್ಞೆಯನ್ನು ಕಾಡುತ್ತಿದೆ. ತನ್ನ ಅಧಿಕಾರಾವಧಿಯಲ್ಲಿ ಧರ್ಮಮಯವಾಗಿಯೇ ರಾಜ್ಯವಾಳಿದ್ದಾನೆ. ಪರಮಪ್ರಿಯ  ಶ್ರೀಕೃಷ್ಣನೂ ತನ್ನ ಅವತಾರ ಮಂಗಳವನ್ನು ಮಾಡಿಕೊಂಡಿದ್ದಾನೆ. ಧರ್ಮರಾಜ ಮೊಮ್ಮಗನಿಗೆ ರಾಜ್ಯಾಭಿಷೇಕ ಮಾಡಿ  ತಮ್ಮಂದಿರು, ದ್ರೌಪದಿಯ ಜೊತೆಗೇ ಹಿಮಾಲಯವೇರಿದ್ದಾನೆ. ಒಬ್ಬೊಬ್ಬರೂ ಅವರವರ ಕರ್ಮಾನುಸಾರವಾಗಿ ಬಿದ್ದು ಸತ್ತಿದ್ದಾರೆ. ಸಶರೀರನಾಗಿ ಧರ್ಮಜ ಒಬ್ಬನೇ ಸ್ವರ್ಗ ಸೇರಿದ್ದಾನೆ.

ಸ್ವರ್ಗದ ಬಾಗಿಲಲ್ಲಿ ಆಘಾತ

ಸ್ವರ್ಗದ ಆಸ್ಥಾನಕ್ಕೆ ಪ್ರವೇಶಿಸಿದಾಗ ಅವನಿಗೆ ಆಘಾತ ಕಾದಿತ್ತು. ದುಷ್ಟ ದುರ್ಯೋಧನ ಸ್ವರ್ಗಾರೂಢ. ಏನಾಶ್ಚರ್ಯ! ಅಲ್ಲಿನ ದಿವ್ಯಾಸನದಲ್ಲಿ ತನ್ನ ತಮ್ಮಂದಿರು, ದ್ರೌಪದಿ, ತನಗಾಗಿ ದುಡಿದವರನ್ನೆಲ್ಲ ನಿರೀಕ್ಷಿಸಿದ್ದ. ಅವರ್ಯಾರೂ ಅಲ್ಲಿಲ್ಲ. ದುಷ್ಟ, ವಂಚಕ, ಯಾರಿಂದ ಇಷ್ಟೆಲ್ಲಾ ಬಂಧುಗಳ ವಧೆಯಾಯಿತೋ ಅಂತಹವನು ಸ್ವರ್ಗದಲ್ಲಿ!

ಸಿಟ್ಟೇ ಬಾರದ ಧರ್ಮರಾಜನಿಗೆ ಮಿತಿಮೀರಿದ ಕೋಪ. ಜೊತೆಯಲ್ಲಿದ್ದ ದೇವ ಧೂತನಿಗೆ ಹೇಳಿದ- ಇದೆಂತಹ ನ್ಯಾಯ ದೇವತೆಗಳದ್ದು? ನನಗಾಗಿ ಜೀವಿಸಿದವರು, ಧರ್ಮಕ್ಕಾಗಿ ದುಡಿದವರು,ಮಡಿದವರು ಇಲ್ಲದ ಸ್ವರ್ಗವೇ ನನಗೆ ಬೇಡ. ಅವರೆಲ್ಲ ಎಲ್ಲಿದ್ದಾರೆ ಹೇಳು ಎಂದು ಹೊರಟೇ ಬಿಟ್ಟ. ದೇವಧೂತ ಹಾಗೇ ಮಾಡಿದ.

ನರಕದ ಕರಾಳತೆ.

ಸ್ವಲ್ಪ ಮಾರ್ಗ ಕ್ರಮಿಸಿರಬಹುದು. ದಾರಿಯಲ್ಲೆಲ್ಲ ಭಯಂಕರ ವಾತಾವರಣ. ಹೆಣದ ರಾಶಿ. ಅರೆ ಸತ್ತು ರಕ್ತದ ಮಡುವಿನಲ್ಲಿ ನರಳುತ್ತಿರುವವರು, ಸಾಯದೇ, ಬದುಕದೇ ಕೊನೆಯಿಲ್ಲದ ಯಾತನೆ ಅನುಭವಿಸುತ್ತಿರುವವರು, ಒಬ್ಬರಿಗೆ ಕೈಗಳೇ ಇಲ್ಲ ಇನ್ನೊಬ್ಬರಿಗೆ ಹೊಟ್ಟೆಯೇ ಕಾಣದು.ಮಗದೊಬ್ಬರಿಗೆ ತಲೆಯೇ ಇಲ್ಲ . ಆದರೂ ನರಳುತ್ತಿದ್ದಾರೆ. ಭಯಾನಕವಾದ ನರಕ ದರ್ಶನ. ನೋಡಲಾಗಲಿಲ್ಲ ಧರ್ಮಜನಿಗೆ. ಅಲ್ಲಿಂದ ಹೊರಟ.

ಮಹಾತ್ಮ.. ಹೋಗದಿರು...

ಆದರೆ ಆರ್ತವಾದ ಅನೇಕ ದನಿಗಳು ಕೇಳಿದವು. ಮಹಾತ್ಮ, ಹೋಗದಿರು. ನಿನ್ನ ಸಾನ್ನಿಧ್ಯದಿಂದ ಬಂದ ಗಾಳಿ ನಮ್ಮನ್ನು ತಂಪಾಗಿ ಇಟ್ಟಿದೆ. ನರಕದಲ್ಲೂ ನಿನ್ನ ಸಾನ್ನಿಧ್ಯ ನೆಮ್ಮದಿಯನ್ನು ತರುತ್ತಿದೆ. ಅದನ್ನು ಇನ್ನೂ ಕೆಲಕಾಲ ಅನುಭವಿಸುತ್ತೇವೆ. ಹೋಗಬೇಡ... ಧರ್ಮಜನ ಕರುಣೆಯ ಕಟ್ಟೆ ಒಡೆಯಿತು. ಏನೂ ಮಾಡಲಾಗದೇ ಅಲ್ಲೇ ನಿಂತ. ನೀವೆಲ್ಲ ಯಾರು ಎಂದ- ಆಕಡೆಯಿಂದ ಧ್ವನಿ ಬಂತು- ನಾನು ಅರ್ಜುನ, ನಾನು ಭೀಮ, ನಾನು ದ್ರೌಪದಿ, ನಾನು ಕರ್ಣ..ಇನ್ನೂ ಎಷ್ಟೋ ದನಿಗಳು ಏಕಕಾಲದಲ್ಲಿ ಧರ್ಮಜನಲ್ಲಿ ಮೊರೆಯಿಡುತ್ತಿವೆ. ಧರ್ಮಜನಿಗೆ ಮತ್ತೆ ಆಘಾತ. ಏನಿದು ಅನ್ಯಾಯ? ಧರ್ಮಕ್ಕಾಗಿ ಬದುಕಿದ್ದವರಿಗೆ ನರಕವೇ? ದೇವಭೂಮಿಯಲ್ಲೂ ಇಂತಹ ಅನ್ಯಾಯವೇ? ಸಿಟ್ಟಾಗಿ ಕೇಳಿದ ದೇವಧೂತನನ್ನು. ದೇವಧೂತ ದೇವತೆಗಳೆಡೆಗೆ ನಡೆದ. ಧರ್ಮಜನ ಸ್ಥಿತಿಯನ್ನು ಅರುಹಿದ. ಎಲ್ಲ ದೇವತೆಗಳೂ ಇಂದ್ರಸಮೇತರಾಗಿ ಧರ್ಮಜನೆಡೆಗೆ ಬಂದರು.

ಮೊದಲು ಸ್ವರ್ಗ-ನಂತರ ನರಕ

ಇಂದ್ರ ಮಾತನಾಡಿದ- ದಿವ್ಯ ಲೋಕಗಳು ಕಾದಿವೆ ನಿನಗೆ. ಸಿಟ್ಟಾಗಬೇಡ. ಅಧರ್ಮ ಮಾಡಿದವರಿಗೆ ಮೊದಲು ಸ್ವರ್ಗ ಆಮೇಲೆ ನರಕ. ಯುದ್ಧದಲ್ಲಿನ ದುರ್ಯೋಧನನ ವೀರಗತಿ ಅವನಿಗೆ ಕೆಲಕಾಲ ಸ್ವರ್ಗವನ್ನು ಒದಗಿಸಿದೆ. ನೀನು ದ್ರೋಣರು ಶಸ್ತ್ರತ್ಯಾಗ ಮಾಡಲು ಮನಸ್ಸಿನಿಂದ ಹೇಳಿದ ಸುಳ್ಳಿಗೆ ನಿನಗೆ ನರಕದರ್ಶನ. ನಿನ್ನ ಅನುಜರು, ಅಗ್ರಜ ಕರ್ಣ ಅವರ ಸಣ್ಣ ಸಣ್ಣ ಅಧರ್ಮದ ಕೆಲಸಗಳಿಗಾಗಿ ಅವರಿಗೆ ತತ್ಕಾಲದ ನರಕ. ಅವರೆಲ್ಲ ನರಕಭಾಗಿಗಳಾದದ್ದು ನೀನು ನೋಡಿ ಸಂಕಟಪಟ್ಟಿದ್ದೀ. ಅದೇ ನಿನ್ನ ಅತ್ಯಲ್ಪ ಪಾಪವನ್ನು ಕಳೆದಿದೆ. ಈಗ ದೇವಗಂಗೆಯಲ್ಲಿ ಸ್ನಾನ ಮಾಡು ಎಂದನು. ಅದಾದ ನಂತರ ಧರ್ಮಜನಿಗೆ ಮಾನುಷ ಭಾವ ಹೋಯಿತು. ತನ್ನ ತಮ್ಮಂದಿರನ್ನೆಲ್ಲ ದಿವ್ಯಲೋಕದಲ್ಲಿ ಕಂಡು ಸಂತೋಷಗೊಂಡ ಎಂಬುದು ಮುಂದಿನ ಕಥೆ.

ಧರ್ಮಜನಿಗೂ ನರಕ ದರ್ಶನವೇ?

ಜೀವನ ಪೂರ್ತಿ ಧರ್ಮಿಷ್ಠನಾಗಿ ನಡೆದ ಧರ್ಮಜನಿಗೂ ಒಂದು ಸಣ್ಣ ತಪ್ಪಿಗಾಗಿ ನರಕದರ್ಶನ ತಪ್ಪಲಿಲ್ಲ. ನಾವೆಲ್ಲಾ ಜೀವನದಲ್ಲಿ ಎಷ್ಟು ತಪ್ಪು ಹೆಜ್ಜೆಗಳಿಡುತ್ತೇವೋ ಲೆಕ್ಕವೇ ಇಲ್ಲ. ಈ ಕಥೆ ನಮ್ಮ ಜೀವನ ಪರಿಷ್ಕಾರವನ್ನು ಹೇಳುತ್ತಿದೆ. ಪಂಚ ಪಾಂಡವರೂ ಸಹ ತಮ್ಮ ಸಣ್ಣ ಸಣ್ಣ ದೋಷಗಳಿಗೆ ನರಕದ ಅನುಭವ ಮಾಡಿಕೊಂಡರೂ ಹೆಚ್ಚಾಗಿ ಧರ್ಮಮಾರ್ಗದಲ್ಲಿ ನಡೆದುದರಿಂದ ಶಾಶ್ವತ ಲೋಕಗಳು ಪ್ರಾಪ್ತಿಯಾದವು. ಮೊದಲು ಸುಖ ಸಿಕ್ಕಿ ಕಡೆಯಲ್ಲಿ ನರಕ ನಿಜಕ್ಕೂ ಅಸಹನೀಯ. ದುರ್ಯೋಧನನಿಗೆ ಅವನು ಮಾಡಿದ ದುಷ್ಕೃತ್ಯಗಳಿಗೆ ಅದೇ ಪ್ರಾಪ್ತಿ. ದೇವಭೂಮಿಯಲ್ಲಿ ಅನ್ಯಾಯಕ್ಕೆ ಎಡೆಯಿಲ್ಲ. " ದೇವಭೂಮಿಯಲ್ಲಿ ಇಲ್ಲಿನಂತೆ ಉಬ್ಬು-ತಗ್ಗುಗಳಿಲ್ಲಪ್ಪಾ" ಎಂಬ ಶ್ರೀರಂಗ ಮಹಾಗುರುಗಳ ಮಾತು ಸದಾ ಸ್ಮರಣೀಯ. ಅವರವರ ಕೆಟ್ಟ-ಒಳ್ಳೆಯ ಕರ್ಮಗಳು ಜೊತೆಗೇ ಫಲಕೊಡಲು ಬರುತ್ತವೆ. ಅದರಿಂದ ಯಾರೂ ಹೊರತಲ್ಲ ಎಂಬುದನ್ನು ಈ ಕಥೆ ಸಾರುತ್ತಿದೆ. ಧರ್ಮರಾಜನ ಜೀವನವಿಡೀ ಧರ್ಮಮಯವಾಗಿತ್ತು,ತಪೋಮಯವಾಗಿತ್ತು. ಎಂದೇ ಅವನು ಸಶರೀರನಾಗಿ ಮೇಲಿನ ಲೋಕಕ್ಕೆ ಹೋಗುವನ್ತಾಗಿದ್ದು. ಧರ್ಮ ಮಾರ್ಗದಿಂದ ಕಿಂಚಿತ್ತೂ ಹೆಜ್ಜೆ ಆಚೆ ಇಡುವುದನ್ನು ಅವನು ಕನಸಿನಲ್ಲೂ ಯೋಚಿಸುತ್ತಿರಲಿಲ್ಲ. ಅಂತಹ ಧರ್ಮಜನಿಗೇ ಕಡೆಯಲ್ಲಿ ಕಿಂಚಿತ್ ಧರ್ಮಲೋಪಕ್ಕಾಗಿ ನರಕ ದರ್ಶನ ಎಂದಾಗ ನಾವೆಲ್ಲಾ ನಮ್ಮ ಜೀವನಗಳನ್ನು ಎಷ್ಟು ಪರಿಷ್ಕಾರ ಮಾಡಿಕೊಳ್ಳಬೇಕಾಗಿದೆ. ಇನ್ನೊಂದು ಮುಖ್ಯವಾದ ವಿಷಯವನ್ನು ಈ ಕಥೆ ತಿಳಿಸುತ್ತಿದೆ. ಧರ್ಮರಾಜನು ನರಕದ ಸಮೀಪದಿಂದ ನಿರ್ಗಮಿಸುವಾಗ ಅಲ್ಲಿನ ಜೀವಿಗಳು ಹೋಗಬೇಡ ಎಂದು ಪ್ರಾರ್ಥಿಸಿದ್ದು. ಮಹಾತ್ಮರ ಸಾನ್ನಿಧ್ಯ ಎಂತಹ ಸನ್ನಿವೇಶದಲ್ಲೂ ಹಿತವನ್ನು, ನೆಮ್ಮದಿಯನ್ನು ತರುತ್ತದೆ ಎಂಬುದಕ್ಕೆ ಉದಾಹರಣೆ ಇದು. ಧರ್ಮರಾಜನ ತಪಸ್ಸು, ಎಂದೆಂದಿಗೂ ಧರ್ಮವನ್ನು ಬಿಡದ, ಅಸತ್ಯದ ಜೊತೆ ಎಂದೂ ರಾಜಿ ಮಾಡಿಕೊಳ್ಳದ ಅವನ ಸ್ವಭಾವ, ಎಲ್ಲವೂ ಅವನಿದ್ದ ಜಾಗವನ್ನೆಲ್ಲ ಪವಿತ್ರಗೊಳಿಸಿದ್ದವು. ಅವನ ಸಾಂಗತ್ಯವು ನೆಮ್ಮದಿಯ ತಾಣವಾಗಿತ್ತು. ಆ ತಂಪಿನ ಸತ್ಪರಿಣಾಮ ಅವನ ಹತ್ತಿರ ಇದ್ದವರಿಗೆಲ್ಲ ಸಂಕ್ರಮಣವಾಗುತ್ತಿತ್ತು. ಹೀಗೆ ಮಹಾತ್ಮರ ಜೀವನವನ್ನು ನೋಡಿ ನಮ್ಮ ಜೀವನಗಳನ್ನು ಹಸನುಗೊಳಿಸಿಕೊಳ್ಳಲು ಈ ಕಥೆ ಕೈಗನ್ನಡಿಯಾಗಿದೆಯಲ್ಲವೇ? ಅತ್ತ ನಮ್ಮೆಲ್ಲರ ಜೀವನಯಾತ್ರೆ ಸಾಗಲಿ ಎಂದು ಸರ್ವೆಶ್ವರನನ್ನು ಪ್ರಾರ್ಥಿಸೋಣ.

ಸೂಚನೆ : 21/12/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, November 24, 2024

ಧರ್ಮಾತ್ಮರ ಜೀವನದ ನಡೆಯೇ ಎಲ್ಲರ ಆದರ್ಶ (Dharmatmara Jivanada nadeye Ellara Adarsa)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)





ಅತ್ಯಂತ ಹಿಂದಿನ ಕಾಲದಲ್ಲಿ ಇಬ್ಬರು ಸೋದರರು, ಧರ್ಮ ಶಾಸ್ತ್ರಕಾರರು, ತಪಸ್ವಿಗಳು, ಜ್ಞಾನಿಗಳು. ಇದ್ದರು. ಅಣ್ಣ-ಶಂಖ, ತಮ್ಮ ಲಿಖಿತ. ನಿರಂತರ ಅಧ್ಯಯನ, ತಪಸ್ಸಿನಿಂದ ತೇಜಸ್ವಿಗಳೂ ಶುದ್ಧಾತ್ಮರೂ ಆಗಿದ್ದವರು. ಧರ್ಮವನ್ನು ಬಿಟ್ಟು ಅವರ ಜೀವನವಿರಲಿಲ್ಲ. ಇಬ್ಬರೂ ಪರಸ್ಪರ ವಿಶ್ವಾಸದಿನ್ದಿದ್ದರೂ ಬೇರೆ ಬೇರೆ ಮನೆಗಳಲ್ಲಿದ್ದರು.

ಹಣ್ಣು ತಿಂದು ತಪೋಬಲ ಕುಗ್ಗಿದ್ದು?

ಒಮ್ಮೆ ಲಿಖಿತ ಅಣ್ಣನನ್ನು ನೋಡಲು ಶಂಖನ ಮನೆಗೆ ಬರುತ್ತಾನೆ. ಆಗ ಶಂಖ ಮನೆಯಲ್ಲಿ ಇರುವುದಿಲ್ಲ. ಲಿಖಿತನು ಅಣ್ಣನ ತೋಟದಲ್ಲಿ ಸುತ್ತಾಡುತ್ತಾನೆ. ಅಣ್ಣನ ತೋಟದಲ್ಲಿ ಎಲ್ಲಾ ವೃಕ್ಷಗಳು ಫಲಭರಿತವಾಗಿದ್ದವು. ಹಸಿವೂ ಆಗಿದ್ದರಿಂದ ಅವನ ತೋಟದ ಒಂದು ಮರದಿಂದ ಮಾವಿನ ಹಣ್ಣನ್ನು ಕಿತ್ತು ತಿನ್ನುತ್ತಾನೆ. ಶಂಖ ಮನೆಗೆ ಬರುತ್ತಾನೆ. ತಮ್ಮನನ್ನು ಕಂಡು ಸಂತೋಷವಾದರೂ ಅವನ ಮುಖವು ಕಳೆಗುಂದಿರುವುದನ್ನು ಗಮನಿಸುತ್ತಾನೆ. ತಕ್ಷಣವೇ ಇವನಿಂದ ಯಾವುದೋ ಅಧರ್ಮದ ಕಾರ್ಯ ನಡೆದಿದೆ. ಅದರಿಂದ ಇವನ ತಪೋಬಲ ಕುಂದಿದೆ ಎಂಬುದನ್ನು ಗಮನಿಸುತ್ತಾನೆ. ತಮ್ಮನ ದೇಹ-ಮನೋಧರ್ಮಗಳ ಸಹಜಾವಸ್ಥೆ ಕೆಡುವುದು ಶಂಖನಿಗೆ ಸಹ್ಯವಾಗಲಿಲ್ಲ.

ಅನುಮತಿ ಇಲ್ಲದೇ ಒಬ್ಬರ ವಸ್ತುವನ್ನು ಉಪಯೋಗಿಸುವುದು ಕಳ್ಳತನ

ತಮ್ಮನನ್ನು ಕೇಳುತ್ತಾನೆ- ನೀನು ಇಲ್ಲಿಗೆ ಬಂದಮೇಲೆ ಏನು ಮಾಡಿದೆ ಎಂದು. ಅವನು ಪ್ರಾಮಾಣಿಕವಾಗಿ ಹಣ್ಣು ತಿಂದುದನ್ನು ಹೇಳುತ್ತಾನೆ. ಹೌದು. ಇದೇ ಅವನಿಂದಾದ ಅಧರ್ಮ. ಅಣ್ಣನ ಸುಪರ್ದಿನ ತೋಟದ ಹಣ್ಣನ್ನು ಅಣ್ಣನ ಅನುಮತಿ ಇಲ್ಲದೇ ತಿನ್ನುವುದು ಅಪರಾಧ. ಆ ಅಪರಾಧವೇ ಲಿಖಿತನ ತಪೊಬಲವನ್ನೂ, ತೇಜಸ್ಸನ್ನೂ ಅವನಿಗೆ ಅರಿವಿಲ್ಲದೇ ಕಡಿಮೆ ಮಾಡಿದೆ. ದೇಹಧರ್ಮ ಮನೋಧರ್ಮ ಹಾಳಾಗಬಾರದು

ಶಂಖನಿಗೆ ತಮ್ಮನ ಮೇಲೆ ಪ್ರೀತಿ, ಕರುಣೆ. ಅವನ ದೇಹಧರ್ಮ, ಮನೋಧರ್ಮಗಳು ಹಾಳಾಗುವುದನ್ನು ಅವನು ಸಹಿಸದಾದನು. ತಮ್ಮನ ತಪ್ಪಿನ ಬಗ್ಗೆ ತಿಳಿಸಿ, ಆ ರಾಜ್ಯದ ರಾಜನ ಹತ್ತಿರ ಹೋಗಿ ಅದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸಿ, ಪಾಪ ಪರಿಹಾರ ಮಾಡಿಕೊಳ್ಳಬೇಕು ಎಂದು ಸಲಹೆ ಕೊಟ್ಟನು. ಲಿಖಿತನಿಗೂ ಸಹ ತಾನು ಮಾಡಿದ್ದು ಧರ್ಮಹಾನಿಯ ಕೆಲಸ ಎಂದು ಅರಿವಾಯಿತು. ಒಡನೆಯೇ ಅವನು ರಾಜಾಸ್ಥಾನಕ್ಕೆ ಹೋಗಿ ತನ್ನ ತಪ್ಪನ್ನು ರಾಜನಿಗೆ ಅರುಹಿದನು.

ತಪ್ಪಿಗೆ ಶಿಕ್ಷೆ ಎಲ್ಲರಿಗೂ..

ರಾಜನು ಅವನನ್ನು ಪರಮ ಗೌರವದಿಂದ ಕಂಡು- ತಮ್ಮ ತಪ್ಪನ್ನು ತಾವು ಒಪ್ಪಿಕೊಂಡು, ಪಶ್ಚಾತ್ತಾಪ ಪಟ್ಟದ್ದಾಗಿದೆ. ಅದೇ ಒಂದು ಬಗೆಯಲ್ಲಿ ಶಿಕ್ಷೆ ಎಂದನು. ಆದರೆ ಲಿಖಿತನು ಅದಕ್ಕೊಪ್ಪದೇ ಸಾಮಾನ್ಯರಿಗೆ ಈ ಬಗೆಯ ಕಳ್ಳತನದ ತಪ್ಪಿಗೆ ಏನು ಶಿಕ್ಷೆಯೋ ಅದನ್ನೇ ತನಗೂ ನೀಡಬೇಕು ಎಂದು ಆಗ್ರಹಿಸುತ್ತಾನೆ. ಆಗ ಅನಿವಾರ್ಯವಾಗಿ ರಾಜನು ಅವನ ಕೈಗಳೆರಡನ್ನು ಕತ್ತರಿಸಬೇಕಾಗುತ್ತದೆ.

ಸರಿ. ಪಾಪಕ್ಕೆ ಶಿಕ್ಷೆ ಆಗಿದೆ ಎಂದು ಲಿಖಿತನಿಗೆ ಸಮಾಧಾನವಾಗುತ್ತದೆ. ಆದರೆ ಅಣ್ಣ ಶಂಖನಿಗೆ ತಮ್ಮನ ದುಸ್ಥಿತಿ ಸಹಿಸಲಾಗುವುದಿಲ್ಲ. ಅಲ್ಲೇ ಒಂದು ಪವಿತ್ರವಾದ ಸರೋವರದಲ್ಲಿ ಸ್ನಾನ ಮಾಡಲು ನಿರ್ದೇಶಿಸುತ್ತಾನೆ. ನಂತರ ಅವನ ತಪೋಬಲದಿಂದ, ಧರ್ಮದ ನಡೆಯಿಂದ ಅವನ  ಕೈಗಳು ಪುನಃ ಬರುತ್ತವೆ ಎಂಬುದು ಮುಂದಿನ ಕಥೆ.

ಮಹರ್ಷಿಗಳ ಧರ್ಮ ಸೂಕ್ಷ್ಮತೆ

ಭಾರತೀಯ ಮಹರ್ಷಿಗಳ ಧರ್ಮದ ಸೂಕ್ಷ್ಮತೆ ಎಷ್ಟು ಆಳದ್ದು ಎಂದು ಈ ಕಥೆಯಿಂದ ನಮ್ಮ ಮನಸ್ಸಿಗೆ ಬರುತ್ತದೆ. ಧರ್ಮ ಯಾವುದೋ ಪುಸ್ತಕದ ಕಥೆಯಲ್ಲ. ನಿಸರ್ಗದ ನಡೆ. ಅದನ್ನು ಅರಿತು ನಡೆದಾಗ ಬಾಳು ಸುಂದರ. ಅದನ್ನು ಅರಿಯುವ ಇಂದ್ರಿಯ ಪಾಟವ, ಸಮಗ್ರ ಚಿಂತನೆ ಎಲ್ಲರೂ ಬೆಳೆಸಿಕೊಳ್ಳಬೇಕೆಂದೇ ನಮ್ಮ ದೇಶದಲ್ಲಿ ಇಷ್ಟು ಆಚಾರ ಪರಂಪರೆ ಬಂದಿರುವುದು.ತಮ್ಮನ ಮುಖವನ್ನು ನೋಡಿಯೇ ಅಣ್ಣನಿಗೆ ಅವನಿಂದ ಅಧರ್ಮ ನಡೆದಿದೆ ಎಂದು ಗೊತ್ತಾಗುತ್ತದೆ. ಅವನು ಅದೆಷ್ಟು ಸೂಕ್ಷ್ಮಗ್ರಾಹಿಯಾಗಿರಬೇಡ! ಅಣ್ಣ ಹೇಳಿದೊಡನೆ ಇವನಿಗೂ ತನ್ನ ತಪ್ಪಿನ ಅರಿವಾಗಿ ಅದನ್ನು ಶಿಕ್ಷೆಯಿಂದ ಸರಿಮಾಡಿಕೊಳ್ಳುವ ಮನಸ್ಸು ಎಷ್ಟು ಶ್ರೇಷ್ಠ!

ಶ್ರೇಷ್ಠರ ನಡೆಯೇ ಸಮಾಜದ ಆದರ್ಶ

ಶ್ರೇಷ್ಠರಾದವರು ಆಚರಿಸುವ ನಡೆಯನ್ನೇ ಸಾಮಾನ್ಯರೆಲ್ಲ ಅನುಸರಿಸುವುದು ಎಂಬ ಗೀತಾಚಾರ್ಯನ ಮಾತು ಸ್ಮರಣೀಯ. ಅವರಿಬ್ಬರೂ ಧರ್ಮಿಷ್ಠರು. ಸಮಾಜದಲ್ಲಿ ಅವರೇ ಆದರ್ಶವನ್ನು ನಿಯಮನ ಮಾಡಬೇಕಾದವರು. ಎಂದೇ ತಮ್ಮದೇ ಮೇಲ್ಪಂಕ್ತಿಯನ್ನು ಮೆರೆದರು.   

ಶಿಕ್ಷೆ ಕೊಡಬೇಕಾದವನು ರಾಜನೇ. ಅವನಿಂದಲೇ ಶಿಕ್ಷೆ ಪಡೆಯುವ ಧರ್ಮದ ನೀತಿಯನ್ನೇ ಅನುಸರಿಸಿದ್ದಾರೆ. ತಮ್ಮನ ಮೇಲಿನ ಕರುಣೆ ಮತ್ತು ಎಂದೆಂದಿಗೂ ಧರ್ಮವೇ ಉಳಿಯಬೇಕಾದುದು ಎಂಬ ಧರ್ಮಪ್ರಜ್ಞೆ ಶಂಖನದು. ಎಂದೇ ಅವರಿಬ್ಬರೂ ನಮ್ಮ ದೇಶದ ಬಹು ವಿಖ್ಯಾತ ಧರ್ಮಶಾಸ್ತ್ರಜ್ಞರಾಗಿದ್ದರು..

ಸತ್ಪುರುಷರ ಧರ್ಮ

" ಸತ್ಪುರುಷರ ಧರ್ಮವೆಂಬುದು ಅತಿ ಸೂಕ್ಷ್ಮ,ಮತ್ತು  ಅರಿಯಲು ಅತ್ಯಂತ ಕಷ್ಟಸಾಧ್ಯ" ಎಂದು ಶ್ರೀರಾಮನು ವಾಲಿಗೆ ಹೇಳುವ ಮಾತು. ವಾಲಿಯನ್ನು ಪ್ಲವಂಗಮ ಎಂದಿದ್ದಾನೆ. ಪ್ಲವಂಗಮ ಎಂದರೆ ಮರದಿಂದ ಮರಕ್ಕೆ ಹಾರುವವನು ಎಂಬ ಅಭಿಪ್ರಾಯ, ವೃಕ್ಷ ಮೂಲಕ್ಕೆ ಬಂದು ವೃಕ್ಷವನ್ನು- ಜೀವನವೃಕ್ಷವನ್ನು ಅರ್ಥಮಾಡಿಕೊಂಡಿರಲಿಲ್ಲ ವಾಲೀ. ಅವನಿಗೆ ಧರ್ಮಸೂಕ್ಷ್ಮದ  ಪರಿಚಯವಿಲ್ಲವೆಂಬುದು ಶ್ರೀರಾಮನ ಅಭಿಪ್ರಾಯವಾಗಿತ್ತಪ್ಪಾ ಎಂದು ಇದನ್ನು ಶ್ರೀ ರಾಮಭದ್ರಾಚಾರ್ಯರು  ಮಾರ್ಮಿಕವಾಗಿ ತಿಳಿಸಿದ್ದರು. ಇಲ್ಲೂ ಹಾಗೆಯೇ. ನಮಗೆ ಒಂದು ಹಣ್ಣು ತಿಂದರೆ ಏನಾಗಿಬಿಡುತ್ತೆ ಎಂದೇ ಅನ್ನಿಸುವುದು. ಒಂದು ಕ್ರಿಯೆಯ ಸುಕ್ಷ್ಮಾತಿಸೂಕ್ಷ್ಮ ಪರಿಣಾಮ ಏನೆಂಬ ಅರಿವು ನಮಗಿರುವುದಿಲ್ಲ. ಅಂತಹ ಪರಿಷ್ಕೃತವಾದ ಜೀವನ ನಾವು ಮಾಡಿರುವುದಿಲ್ಲ. ಆದರೆ ಒಳಗೂ ಹೊರಗೂ ನಿರ್ಮಲವಾದ ಜೀವನ ನಡೆಸುವ ಮಹಾತ್ಮರ ನಡೆಯೇ ಬೇರೆ.  ಹೃದಯಗುಹೆಯಲ್ಲಿರುವ ಧರ್ಮವನ್ನು ಅರಿತು ತಿಳಿಸಬಲ್ಲ ಮಹಾಜನರು ಯಾವ ಮಾರ್ಗವನ್ನು ಅನುಸರಿಸುತ್ತಾರೆಯೋ  ಅದು ಸರಿಯಾದ ಹಾದಿ. ಅದು ಬಿಟ್ಟು ಮೆಜಾರಿಟಿ ಮೇಲೆ ತೀರ್ಮಾನಕ್ಕೆ ಹೊರಟರೆವಿಷಯ ನಿಲ್ಲುವುದಿಲ್ಲ ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.

ಇಂದು ಸತ್ಯ-ಅಸತ್ಯ,ಧರ್ಮ-ಅಧರ್ಮ ಎಲ್ಲವನ್ನೂ ನಿಸರ್ಗಸಹಜವಾಗಿ ಅರಿಯುವ ಪ್ರಜ್ಞೆಯಿಂದ ನಾವು ಬಹಳ ದೂರ ಸರಿದಿದ್ದೇವೆ. ಎಲ್ಲವನ್ನೂ ಮೆಜಾರಿಟಿಯ ಮೇಲೆ, ನಮ್ಮ ಅನುಕೂಲ-ಪ್ರತಿಕೂಲತೆಗಳ ಮೇಲೆ ಅಳೆಯುವುದಾಗಿದೆ. ಆದರೆ ನಿಜಾರ್ಥದಲ್ಲಿ ನಾವು ನಮ್ಮ ಪೂಜ್ಯ ಪೂರ್ವಜರ ಅನುವಂಶೀಯರಾಗುವುದಾದರೆ ಅವರು ಹಾಕಿಕೊಟ್ಟ ಧರ್ಮಮಾರ್ಗದಲ್ಲಿ ಹೆಜ್ಜೆಯಿಡುವುದು ಸಾರ್ವಕಾಲಿಕವಾಗಿ ಶ್ರೇಯಸ್ಕರ.ಈ ಕಥೆ ನಮಗೆ ಅದನ್ನೇ ಸಾರುತ್ತಿದೆ.

ಸೂಚನೆ : 23/11/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, July 13, 2024

ಭಗವಂತ ಕರುಣಾಮಯನೇ? ಭಾಗ-೩ (Bhagavanta Karunamayane? Bhaga-3)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)





ದ್ರೌಪದಿಯ ಮೇಲಿನ ಕರುಣೆ:

 

"ಗೋವಿನ್ದೇತಿ ಯದಾಕ್ರನ್ದತೇ ಕೃಷ್ಣಾ ಮಾಂ ದೂರತಃಸ್ಥಿತಂ ಋಣಂ ಪ್ರವೃದ್ಧಮೇವ ಮೇ ಹೃದಯಾಂ ಆಪಸರ್ಪತಿ" ..ಎನ್ನುತ್ತಾನೆ ಶ್ರೀಕೃಷ್ಣ. ದ್ರೌಪದಿ ಗೋವಿಂದಾ ಎಂದು ಆರ್ತವಾಗಿ ಕೂಗಿಕೊಂಡಳು. ಹಸ್ತಿನಾವತಿ ಎಲ್ಲಿ? ದ್ವಾರಕೆ ಎಲ್ಲಿ? ಆದರೆ ಆ ಸರ್ವ ವ್ಯಾಪಕನಿಗೆ ದೂರದ ಉಪಾಧಿ ಎಲ್ಲಿಯದು? ಕರುಣೆಯಿಂದ ಅಕ್ಷಯ ವಸ್ತ್ರವನ್ನು ಕೃಷ್ಣನು ದಯಪಾಲಿಸಿದನು. ಆದರೂ ದ್ರೌಪದಿಯ  ಆ "ಗೋವಿಂದಾ" ಎಂದಾಗಿನ ಆರ್ತತೆ , ನೀನೇ ಗತಿ ಎಂಬ ಸರ್ವ ಶರಣಾಗತಿಗೆ ತಾನು ಮಾಡಿದುದು ಏನೂ ಸಾಲದು,ಅವಳಿಂದ ಸಾಲ ತೆಗೆದುಕೊಂಡು ಹಿಂತಿರುಗಿಸಲಾರದವನಂತೆ ನಾನಾಗಿದ್ದೇನೆ ಎಂದು ಕೃಷ್ಣನು ನೋಯುತ್ತಾನಂತೆ. ಅವನ ಕರುಣೆಯ ಅಪಾರತೆಯನ್ನು ಅರಿಯುವುದಾದರೂ ಹೇಗೆ? ನಮಗೆ ಹಾಗೆ ಕರೆಯಲು ಬರಬೇಕು ಅಷ್ಟೇ.

 

ಸಂಹಾರಕಾರ್ಯ, ಮರೆವು  ಕರುಣೆ ಹೇಗಾದೀತು?


ಇದೆಲ್ಲವೂ ಸರಿ ಆದರೆ ಭಗವಂತನ ಸಂಹಾರಕಾರ್ಯ ಕರುಣೆ ಹೇಗಾದೀತು ಎಂಬ ಪ್ರಶ್ನೆ ಏಳುತ್ತದೆ. ಶ್ರೀರಂಗಪ್ರಿಯ ಸ್ವಾಮಿಗಳು ಮರಣ, ಸಂಹಾರ ಕಾರ್ಯವೂ ಅವನ ಕರುಣೆಯೇ ಎನ್ನುತ್ತಿದ್ದರು. ಶಸ್ತ್ರಚಿಕಿತ್ಸೆಯ ನೋವನ್ನು ಅನುಭವಿಸದಿರಲಿ ಎಂದು ಅನಸ್ತೇಶಿಯಾ ಕೊಡುತ್ತಾರೆ. ಎಚ್ಚರ ತಪ್ಪಿಸುತ್ತಾರೆ. ವೈದ್ಯ ಹೀಗೆ ಮಾಡುವುದು ಎಂತಹ ನಿಷ್ಕರುಣೆ ಎನ್ನಲಾದೀತೇ? ಅದು ರೋಗಿಯ ಮೇಲಿನ ಕರುಣೆಯಿಂದಲೇ ಮಾಡಿದ ಕೆಲಸ.  ಇಲ್ಲಿಯೂ ಸಹ  ಜೀವಿಗಳು ಕರ್ಮಗಳ ಭಾರದಿಂದ ಕರ್ಮಫಲವನ್ನು ಅನುಭವಿಸುವ ಶಕ್ತಿಯನ್ನೂ ಕಳೆದುಕೊಂಡು ಬಳಲಿ ಬೆಂಡಾದಾಗ ಅವುಗಳಿಗೆ ದೀರ್ಘಕಾಲದ ವಿಶ್ರಾಂತಿ ಬೇಕಾಗುತ್ತದೆ. ಜೀವಿಗಳ ಇಂತಹ ನೋವಿನ ಪರಿಸ್ಥಿತಿಯನ್ನು ನೋಡಿದ ಕರುಣೆಯಿಂದಲೇ ಅವುಗಳ ದೀರ್ಘ ವಿಶ್ರಾಂತಿಗಾಗಿ ಅವನು ಸಂಹರಿಸುತ್ತಾನೆ. ಅದರಿಂದ ಜೀವಿಗಳು ಮತ್ತೆ ಹೊಸ ಹುರುಪಿನಿಂದ ತಮ್ಮ ಕರ್ಮಫಲಗಳನ್ನು ಅನುಭವಿಸಿ ಮುಕ್ತರಾಗಲಿ ಎಂಬ ಕರುಣೆಯೇ ಅಲ್ಲಿದೆ. ಹುಟ್ಟಿದವರೆಲ್ಲ ಮರಣ ಹೊಂದದೇ ಹಾಗೇ ಇದ್ದುಬಿಟ್ಟಿದ್ದರೆ ಈ ವಿಶ್ವದ ಪರಿಸ್ಥಿತಿ ಏನಾಗುತ್ತಿತ್ತು! ಹುಟ್ಟು ಎಂದು ಇದ್ದಮೇಲೆ ಮರಣವೆಂಬುದೂ ಖಚಿತವೆ ಆಗಿದೆ. ಅಲ್ಲದೇ ಪ್ರಿಯಜನರನ್ನು ಕಳೆದುಕೊಂಡಾಗ ಆಗುವ ದುಃಖ ಎಷ್ಟು ಅಸಹನೀಯ! ಆದರೆ ಕ್ರಮೇಣ ಮರೆಯುತ್ತೇವೆ. ಮರೆವೂ ಅವನ ಅನುಗ್ರಹವೇ.,ಆ ಘಟನೆಯ ದಿನದ ದುಃಖ ಅಷ್ಟೇ ತೀವ್ರವಾಗಿ ನಮ್ಮ ಜೀವಿತಕಾಲದವರೆಗೂ ಇರುವಂತಾಗಿದ್ದರೆ ಜೀವಲೋಕದ ಪರಿಸ್ಥಿತಿ ಏನಾಗುತ್ತಿತ್ತು! ಹಾಗೆಂದೇ ಮರೆವು ಅಂತಹ ದುಃಖವನ್ನೆಲ್ಲ ಕ್ರಮೇಣ ಮರೆಮಾಡುವುದೂ ಅವನ ಕರುಣೆಯೇ.

 

ಜೀವಲೋಕದ ಮೇಲೆ ಅವನ ಕರುಣೆ ಅಪಾರ:

 

ಜೀವಲೋಕದಮೇಲೆ ಅವನ ಕರುಣೆಯೊಂದಿಲ್ಲದಿದ್ದರೆ ಜಗತ್ತು ಅರೆ ಕ್ಷಣವೂ ಉಳಿಯಲಾರದು.ಜೀವಿಗಳು ದುಷ್ಕರ್ಮಗಳನ್ನುಮಾಡಿ ಅವನಿಂದ ದೂರವಾದಾಗ ಕರ್ಮಫಲಗಳನ್ನು ಅನುಭವಿಸಿ ಮತ್ತೆ ಶುದ್ಧರಾಗಿ ಆತ್ಮಮಾರ್ಗವೆಂಬ ರಾಜಮಾರ್ಗಕ್ಕೆ ಬರುವ ವ್ಯವಸ್ಥೆಯನ್ನೂ ಅವನ ಸೃಷ್ಟಿಯಲ್ಲೇ ಇಟ್ಟಿದ್ದಾನೆ. ಹೀಗೆ ಕರ್ಮಫಲಗಳನ್ನು ಅನುಭವಿಸುವುದೂ ಸಹ ಔಷಧವನ್ನು ಸೇವಿಸಿ ಖಾಯಿಲೆ ವಾಸಿಮಾಡಿಕೊಂಡು ಆರೋಗ್ಯವಂತರಾಗುವಂತೆ ನಮ್ಮನ್ನು ಭವಸಾಗರದಿಂದ ದಾಟಿಸುವ ಅವನ ಕರುಣೆಯೇ ಆಗಿದೆ. ಧರ್ಮಗ್ಲಾನಿಯುಂಟಾಗಿ ಜೀವಿಗಳಿಗೆ ಒಳಿತು ಕೆಡಕುಗಳ ಗೊಂದಲವುಂಟಾದಾಗ ತಾನೇ ಅವತರಿಸಿ ಜೀವಲೋಕವನ್ನು ಉದ್ಧರಿಸುವುದು ಅವನ ಕರುಣೆಯ ಕಾರಣದಿಂದಲೇ. ಆಗಾಗ ಋಷಿಗಳು, ಜ್ಞಾನಿಗಳ ಮೂಲಕ ಜೀವನದ ಧ್ಯೇಯವನ್ನು ಜ್ಞಾಪಿಸಿಕೊಟ್ಟು ಜೀವಿಯು ತನ್ನ ತವರುಮನೆಯಾದ ಪರಮ ಆನಂದದ ನೆಲೆಗೆ ಪಯಣಿಸಲು ಸಹಾಯ ಮಾಡುವುದು ಅವನ ಕರುಣೆಯಲ್ಲದೆ ಮತ್ತೇನು? ಜೀವಿಯು ತನ್ನ ನೆಲೆಮನೆಗೆ ಎಂದು ಬಂದು ಸುಖಿಸುತ್ತಾನೆ ಎಂದು ಅವನು ಸದಾ ಕಾಯುತ್ತಿರುತ್ತಾನೆ ಎಂಬುದು ಅವನ ಕರುಣೆಯನ್ನು ಕಂಡವರ ಮಾತು. ಭಗವಂತನು ತನ್ನನ್ನು ಸ್ತುತಿಸುವವರನ್ನು ಕಂಡು ಸಂತೋಷಪಡುತ್ತಾನಂತೆ. ಇದೇನಿದು? ತನ್ನನ್ನು ಹೊಗಳಿದರೆ ಖುಷಿಪಡುತ್ತಾನಲ್ಲ ಎಂದು ನಾವಂದುಕೊಳ್ಳುವ ಸಂತೋಷವಲ್ಲ ಅದು. ಹಾಗೆ ಸ್ತುತಿಸುವುದರಿಂತ ತನ್ನ ಕರ್ಮಕ್ಲೇಶಗಳನ್ನೆಲ್ಲ ಕಳೆದುಕೊಂಡು ಜೀವಿಯು ಮತ್ತೆ ಮೇರೆಯರಿಯದ ಆನಂದವನ್ನು ಹೊಂದುವಂತಾಗುವುದಲ್ಲಾ ಎಂಬ ಜೀವಿಯ ಬಗೆಗಿನ ಕರುಣೆ, ಪ್ರೀತಿ ಆ ಸಂತೋಷಕ್ಕೆ ಕಾರಣ.

 

 

ದಾಸವಾಣಿಯ ಅಂತರಾರ್ಥ:

 

 "ಕರುಣಾಮಯ ನೀ ನೆಂಬುವುದ್ಯಾತಕೋ ಭರವಸವಿಲ್ಲೆನಗೆ" ಎನ್ನುವ ದಾಸರ ಪದವೂ ಸಹ ಅವನ ಕರುಣೆಯನ್ನು ಒಲಿಸಿಕೊಳ್ಳಲು ಮಾಡಿದ ಅವನ ಮೇಲಿನ ಅತ್ಯಂತ ಪ್ರೀತಿಯ, ಸಲಿಗೆಯ ಪ್ರಕಟಣೆ ಆಗಿದೆಯೇ ವಿನಃ ಭಗವಂತನ ಕರುಣೆಯ ಮೇಲಿನ ಅಪನಂಬಿಕೆಯ ಮಾತಲ್ಲ ಅದು. ತಾಯಿಯ ಮೇಲಿನ ಅತಿಶಯವಾದ ಪ್ರೀತಿಯಿಂದ ಮಗು, ತಾಯಿ ಬರಲು ತಡ ಮಾಡಿದರೆ  ಸಿಟ್ಟಾಗುವುದಿಲ್ಲವೇ? ಆಗ ಮಗುವಿನ ಸಿಟ್ಟನ್ನು ತಾಯಿ ತನ್ನ ಮೇಲಿನ ಪ್ರೀತಿ ಎಂದೇ ಅರ್ಥಮಾಡಿಕೊಳ್ಳುತ್ತಾಳೆ. ಹಾಗೆಯೇ ಭಗವಂತನೂ ಸಹ ಭಕ್ತನ ಭಗವದ್ವಿರಹದ ಸಿಟ್ಟು, ತತ್ಪರಿಣಾಮವಾದ ಬೈಗುಳವನ್ನೂ ಪ್ರೀತಿಯಿಂದಲೇ ಸ್ವೀಕರಿಸುತ್ತಾನೆ. ಆದರೆ ಅಲ್ಲಿ ತಾಯಿ ಮಗುವನ್ನು ಬಿಟ್ಟುಹೋಗಿದ್ದರೆ,ಇಲ್ಲಿ ನಾವೇ ಭಗವಂತನನ್ನು ಬಿಟ್ಟುಬಂದಿರುತ್ತೇವೆ.

 

ನಾವು ದೊಡ್ಡವರಾಗಬೇಕು:

 

ಭಗವಂತನ ಕರುಣೆ ಅರ್ಥವಾಗಬೇಕಾದರೆ ನಾವು ದೊಡ್ಡವರಾಗಬೇಕು. ಹುಡುಗನಂತೆ ಇದ್ದರೆ ಜಗದೊಡೆಯನಾದ ನಮ್ಮೆಲ್ಲರ ತಂದೆಯ ಬಗೆಗೂ ಬಾಲಿಶವಾದ ಅಭಿಪ್ರಾಯವನ್ನೇ ಇಟ್ಟುಕೊಂಡಿರುತ್ತೇವೆ. ಹಾಗೆ ದೊಡ್ಡವರಾಗಿ ಭಗವಂತನ ಪಾರವಿಲ್ಲದ ಕರುಣೆಯ ಧರ್ಮವನ್ನು ಅನುಭವಿಸಿ ಕಣ್ಣೀರಿಟ್ಟ ಭಕ್ತರು,ಜ್ಞಾನಿಗಳು ಅವನನ್ನು ಕರುಣಾಸಾಗರ ಎಂದು ಕೊಂಡಾಡಿದ್ದಾರೆ. ಅಂತಹ ಅನುಭವಿಗಳ ಮಾತೇ ನಿಜಕ್ಕೂ ಅವನ ಕರುಣೆಗೆ ಪ್ರಮಾಣ. ಅವರು ತಮ್ಮ ತಪಸ್ಯೆಯಿಂದ ಭವದ ಬೆಂಗಾಡಿನ ಆಚೆಗಿನ ಭಗವಂತನ ನೆಲೆಯನ್ನು ತಲುಪಿ ಅಲ್ಲಿಂದ ಮಾಡಿದ ಗುಣಗಾನವದು.ಹೀಗೆ ಭಗವಂತನ ಕರುಣೆ ಅಪಾರ. ಅದನ್ನು ಅರ್ಥ ಮಾಡಿಕೊಳ್ಳುವ ಹೃದಯವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ. ಅವನ ಕರುಣೆಯ ಅರಿವನ್ನು ಪಡೆದ ಜ್ಞಾನಿಶ್ರೇಷ್ಠರ, ಭಕ್ತಶ್ರೇಷ್ಠರ ಅನುಭವದ ವಚನಗಳು ನಮಗೆಲ್ಲ ದಾರಿದೀಪವಾಗಲಿ. ಅಂತಹ ಭಗವಂತನ ಕರುಣೆಯನ್ನು ಅಪನಂಬಿಕೆಯಿಂದ ನೋಡದಿರೋಣ. ಅವನ ಕೃಪಾ ದೃಷ್ಟಿ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಅನವರತವೂ ಅವನನ್ನು ಪ್ರಾರ್ಥಿಸೋಣ.


ಸೂಚನೆ : 13/07/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, July 7, 2024

ಭಗವಂತ ಕರುಣಾಮಯನೇ ? ಭಾಗ-೨ (Bhagavanta Karunamayane? Bhaga-2)

 

ಹಿಂದಿನ ಸಂಚಿಕೆಯಲ್ಲಿ ಭಗವಂತನ ಕರುಣೆಯ ಬಗ್ಗೆ ಆಲೋಚಿಸಿದೆವು. ಹಾಗಾದರೆ ನಮ್ಮ ದುಃಖ ದೈನ್ಯಗಳಿಗೆ ಕಾರಣವೇನು ಎಂದು ವಿಚಾರ ಮಾಡೋಣ.


ನಮ್ಮ ಕರ್ಮಗಳ ದೋಷವನ್ನು ಮೇಲಿನವನ ಮೇಲೆ ಹೇಳುತ್ತಿದ್ದೆವೆಯೇ?:

 

ಒಬ್ಬ ಅಜ್ಞಾನಿ ಬೆಂಗಳೂರಿನ ರಸ್ತೆಯಲ್ಲಿ ನಡೆದುಹೋಗುತ್ತಿದ್ದ. ಗೊತ್ತಾಗದೇ ದಾರಿಯಲ್ಲಿನ ಸಗಣಿಯನ್ನು ತುಳಿದ. ಸ್ವಲ್ಪಹೊತ್ತಿನ ನಂತರ ಮಳೆ ಆರಂಭವಾಯಿತು. ಮಳೆಯಿಂದ ರಕ್ಷಣೆ ಪಡೆಯಲು ತನ್ನ ಕಾಲಿನ ಚಪ್ಪಲಿಯನ್ನು ತಲೆಯ ಮೇಲಿಟ್ಟು ನಡೆದ. ಮಳೆಯ ನೀರಲ್ಲಿ ಕರಗಿ ಅವನೇ ತುಳಿದ ಸಗಣಿ ಮೈಗೆಲ್ಲಾ ಇಳಿಯಿತು. ಅದನ್ನು ನೋಡಿ ಅವನು ಈ ಊರಿನಲ್ಲಿ ಸಗಣಿಯ ಮಳೆ ಬರುತ್ತದೆ ಎಂದನಂತೆ. ಕಥೆಯ ತಮಾಷೆ ಒಂದು ಭಾಗ. ಇಲ್ಲಿ ಮಳೆಯ ದೋಷವೇನೂ ಇಲ್ಲದೇ ಶುದ್ಧವಾಗಿ ಸುರಿಯುತ್ತಿದ್ದರೂ  ಅವನು ತನ್ನ ಅವಿವೇಕದಿಂದ ಆದ ಪರಿಣಾಮವನ್ನು ಮೇಲಿಂದ ಬೀಳುವ ಮಳೆಯಮೇಲೆ ಹೇಳಿದ. ಪ್ರಾಯಃ ನಾವೂ ಸಹ ನಮ್ಮ ಕರ್ಮಗಳಿಂದಾದ ದೋಷಗಳನ್ನು , ನಮ್ಮ ಇಂದ್ರಿಯಗಳಿಂದ ನಮ್ಮ ಅಜ್ಞಾನದ ಪರಿಣಾಮವಾಗಿ ಆಗಿರುವ ದೋಷಗಳನ್ನು ಇಂದ್ರಿಯಾತೀತನಾಗಿ ಮೇಲೆ ಬೆಳಗುವ ಭಗವಂತನ ಮೇಲೆ ಹಾಕುತ್ತಿದ್ದೇವೆ. 

 

ನಮ್ಮ ದುಷ್ಕರ್ಮಗಳೇ ನಮ್ಮ ದುಃಖಕ್ಕೆ ಕಾರಣ:

 

ಮನಸ್ಸಿನ ಕಡಿವಾಣವಿಲ್ಲದ ನಮ್ಮ ಅತಿಯಾದ ಇಂದ್ರಿಯ ಲಾಲಸೆ ಈ ಎಲ್ಲಾ ಕಷ್ಟಗಳಿಗೆ ಕಾರಣವಾದ ದುಷ್ಕರ್ಮಗಳನ್ನು ನಮ್ಮಿಂದ ಮಾಡಿಸಿತು.ಈ ಇಂದ್ರಿಯಗಳೆಲ್ಲವನ್ನು ಅವನು ನಮ್ಮ ಸುಖ ಸಂತೋಷಗಳಿಗಾಗಿಯೇ ಕೊಟ್ಟಿದ್ದಾನೆ. ಆದರೆ ಅವುಗಳ ಅನುಭವಕ್ಕೆ ಧರ್ಮ-ಮೋಕ್ಷಗಳ ಸೀಮೆ ಇದ್ದರೆ ಮಾತ್ರ ಅವುಗಳ ಪೂರ್ಣ ಆನಂದವನ್ನು ಅನುಭವಿಸಿ ಸುಖ ಪಡಬಹುದು ಎಂಬ ವಿಜ್ಞಾನ, ಋಷಿದೃಷ್ಟಿ ನಮ್ಮಲ್ಲಿ ಮರೆಯಾಯಿತು. ನಮ್ಮ ಮನಸ್ಸು ಇಂದ್ರಿಯ ನಿಗ್ರಹ ಮಾಡುವ ಬದಲು ತಾನೇ ಇಂದ್ರಿಯಗಳಿಗೆ ವಶವಾಗಿ ಆತ್ಮನ ಸುಖವನ್ನು ಮರೆಯಿತು. ಅತಿಯಾದ ಇಂದ್ರಿಯ ಸುಖಗಳ ಅಪೇಕ್ಷೆಯೇ ಹೀಗೆ ಮರೆಯುವಂತೆ ಮಾಡಿತು. ಹಸಿವಿದೆ. ಹಾಗೆಯೇ ರುಚಿಯೂ ಇದೆ. ಹಾಗೆಂದು ಅತಿಯಾಗಿ ದೇಹಾರೋಗ್ಯಕ್ಕೆ ಸಲ್ಲದಿರುವುದನ್ನು ತಿಂದರೆ ಅದರ ಕಹಿಯನ್ನು ಅನುಭವಿಸಬೇಕಲ್ಲವೇ?

 

ಎಂದೋ ಮಾಡಿದ್ದು ಇನ್ನೆಂದೋ ಅನುಭವಿಸಬೇಕು:


ಕೆಲವೊಮ್ಮೆ ಇಂದು ತಿಂದ ಅಂತಹ ಆಹಾರಗಳು ಬಹಳ ಕಾಲದ ನಂತರ  ದುಷ್ಪರಿಣಾಮ ಮಾಡಬಹುದು. ನಮಗೆ ನಾವು ತಿಂದದ್ದು ಮರೆತುಹೋಗಲೂ ಬಹುದು. ಹಾಗೆಂದು ಒಳಗೆ ಹೋದ ಆಹಾರ ತನ್ನ ಪ್ರಭಾವ ಬೀರದೇ ಬಿಡದು. ಹಾಗೆಯೇ ನಮ್ಮ ಅನ್ಯಾನ್ಯ ದುಷ್ಕರ್ಮಗಳು ಜನ್ಮಾನ್ತರಗಳಿಂದ ಸಂಚಿತವಾಗಿವೆ. ನಮಗೆ ಅವೆಲ್ಲ "ಅದೃಷ್ಟ" ವಾಗಿರಬಹುದು. ಅದೃಷ್ಟ ಎಂದರೆ ಕಾಣದಿರುವುದು. ಅವೆಲ್ಲವೂ ಇಂದು ಫಲಕೊಡಲು ಆರಂಭಿಸುವ ಸಾಧ್ಯತೆ ಇರುತ್ತದೆ.


ಕರ್ಮ ವ್ಯವಸ್ಥೆಯೇ ಭಗವಂತನ ಕರುಣೆ:

 

ಭಗವಂತನ ಸೃಷ್ಟಿಯಲ್ಲಿ ಈ ಕರ್ಮಫಲಾನುಭವ ಇರುವುದರಿಂದಲೇ ಜೀವಲೋಕ ತನ್ನೆಲ್ಲಾ ಪಾಪ ಕರ್ಮಗಳನ್ನು ತೊಳೆದುಕೊಂಡು ಮತ್ತೆ ಸುಖಾನುಭವ ಮಾಡುವ ಸ್ಥಿತಿಗೆ ಬರುವಂತಾಗುವುದು. ಅವನ ಈ ವ್ಯವಸ್ಥೆಯೂ ಜೀವಲೋಕದ ಮೇಲಿನ ಕರುಣೆಯಿಂದಲೇ ಇದೆ. ಹೀಗೆ ನಮ್ಮ ದುಷ್ಕರ್ಮಗಳಿಂದಲೇ ಎಲ್ಲಾ ಸುಖಗಳಿಗೂ ಮಿಗಿಲಾದ ಆತ್ಮ ಸುಖವನ್ನು ನಾವು ದೂರಮಾಡಿಕೊಂಡೆವು.ನಮ್ಮ ಅಸಾವಧಾನತೆಯಿಂದ ಕರ್ಮಪರಂಪರೆಯನ್ನೇ ಹೆಣೆದೆವು.ಇವೆಲ್ಲದರ ಪರಿಣಾಮವಾಗಿ ಬಂದ ದುಃಖ ದೈನ್ಯಗಳಿಗೆ ಕಡೆಯಲ್ಲಿ ದಯಾಮಯನಾದ ಭಗವಂತನೇ ಕಾರಣ ಎಂದುಬಿಟ್ಟೆವು.

 

ಅವನ ಸೃಷ್ಟಿ ಸಂಕಲ್ಪವೇ ಎಲ್ಲದಕ್ಕೂ ಕಾರಣವೇ?:

 

ಅವನ ಸೃಷ್ಟಿಯ ಕಾರಣದಿಂದಲೇ ಇಷ್ಟೆಲ್ಲಾ ಸಮಸ್ಯೆಗಳಾದುವು. ಅವನು ಸೃಷ್ಟಿಯನ್ನೇ ಮಾಡಬಾರದಿತ್ತು. ಎಂದು ಕೆಲವೊಮ್ಮೆ ಅನ್ನಿಸಿಬಿಡುತ್ತದೆ. ತೆಂಗಿನ ಗಿಡ ಎಂದು ಇದ್ದಿದ್ದರಿಂದಲೇ ಹಳದಿ ರೋಗ ಬರುವಂತಾಯಿತು. ಅದೇ ಇರಬಾರದಿತ್ತು ಎಂದರೆ ಹೇಗೆ? ರೋಗರಹಿತವಾದ ತೆಂಗಿನ ಗಿಡದ ಎಳನೀರು, ಕಾಯಿ ಎಲ್ಲವನ್ನೂ ನಾವು ಚಪ್ಪರಿಸಿ ಸವಿದು ಆನಂದಿಸಲಿಲ್ಲವೇ? ಆಗ ಅದು ಬೇಡವೆಂದು ನಮಗೆ ಅನ್ನಿಸಿತ್ತೆ? ನಮ್ಮ ಹ್ರಸ್ವ ದೃಷ್ಟಿಯೇ ಇಂತಹ ಆಲೋಚನೆಗಳಿಗೆ ಕಾರಣವೇ ಹೊರತು ಭಗವಂತನ ಸೃಷ್ಟಿಯಲ್ಲ ಎಂಬುದು ಗಮನಿಸಬೇಕಾದ ವಿಷಯ. 

 

ಜೀವಲೋಕದ ಹಿತಕ್ಕಾಗಿಯೇ ಸೃಷ್ಟಿ:

 

ಸಾವಿರಾರು ಜನಗಳಿಗೆ ಜೀವನೋಪಾಯವಾದ ಒಂದು ಕಾರ್ಖಾನೆ ಇದೆ. ಅಲ್ಲಿ ಬಗೆ ಬಗೆಯ ಯಂತ್ರಗಳಿವೆ. ಅದರ ಸದುಪಯೋಗದಿಂದ ನಮಗೆ ಬೇಕಾದ ವಸ್ತುಗಳನ್ನು ಪಡೆಯಬಹುದಾಗಿದೆ. ಆದರೆ ಯಾರೋ ತಮ್ಮ ಅಸಾವಧಾನತೆಯಿಂದ ಒಂದು ಯಂತ್ರದ ಒಳಗೆ ತನ್ನ ಕೈ ಇಟ್ಟು  ಕೈ ಕಳೆದುಕೊಳ್ಳುತ್ತಾನೆ. ಹಾಗೆಂದು ಕಾರ್ಖಾನೆ ಪ್ರಾರಂಭಿಸಿದ್ದರಿಂದಲೇ ಅವನ ಕೈ ಹೋಯಿತು ಎನ್ನೋಣವೇ? ಹಾಗಲ್ಲ. ಅವನ ಅಸಾವಧಾನತೆಯಿಂದ ಕೈ ಕಳೆದುಕೊಂಡ ಎನ್ನುವುದೇ ಸರಿಯಾದುದು. ಹಾಗೆಯೇ ಭಗವಂತನ ಈ ಸೃಷ್ಟಿಯಲ್ಲಿ ಸ್ವರೂಪತಃ ಕೆಡುಕಾದುದು ಯಾವುದೂ ಇಲ್ಲ. ಎಲ್ಲವೂ ಅವವುಗಳ ವಿಜ್ಞಾನದೊಂದಿಗೆ ನಮ್ಮ ಉಪಯೋಗಕ್ಕಾಗಿಯೇ ಸೃಷ್ಟಿಯಾಗಿದೆ.ಎಲ್ಲವೂ ತಮ್ಮ ತಮ್ಮ ಧರ್ಮದೊಂದಿಗೆ ಬಂದಿವೆ. ಅದರದರ ಧರ್ಮ ವಿಶೇಷವನ್ನು ಅರ್ಥ ಮಾಡಿಕೊಂಡು ಬಳಸಿದರೆ ಜೀವನ ಅತ್ಯಂತ ಸುಖಮಯ. ಹರಿತವಾದ ಕತ್ತಿ ಇದೆ. ಅದು ತರಕಾರಿ ಕತ್ತರಿಸುವಾಗ ಹರಿತವಾಗಿದ್ದು, ನಾವು ಗೊತ್ತಾಗದೇ ಕೈ ಇಟ್ಟಾಗ ಮೊಂಡಾಗುವಂತೆ ಅದನ್ನು ಸೃಷ್ಟಿಸಲಾಗದು. ಹಾಗೆ ಅದು ಕೈ ಕತ್ತರಿಸಿದಾಗ ಕತ್ತಿಯನ್ನು ತಯಾರಿಸಿದ್ದೇ ತಪ್ಪು ಎನ್ನುವ ಮೂರ್ಖತನದಂತೆ ಭಗವಂತನ ಸೃಷ್ಟಿಯನ್ನು ಹಳಿಯುವುದೂ ಸಹ.


ಈ ಮಾನವ ದೇಹ-ಭಗವಂತನ ಕರುಣೆಯ ಪರಿಣಾಮವೇ:

 

ಜಾಗ್ರತ್,ಸ್ವಪ್ನ,ಸುಷುಪ್ತಿ,ತುರೀಯ ಗಳೆಂಬ ನಾಲ್ಕೂ ಸ್ಥಿತಿಗಳನ್ನು ಅನುಭವಿಸಿ ಆನಂದಮಯವಾಗಿ ಬಾಳುವ ಪೂರ್ಣ ವ್ಯವಸ್ಥೆಯುಳ್ಳ  ಮಾನವ ದೇಹವಿದು. ಅದು ಜೀವಿಗಳ ಮೇಲಿನ ಕರುಣೆಯಿಂದಲೇ ಅವನು ದಯಪಾಲಿಸಿರುವುದು.ಅದನ್ನು ನಾವು ಹಾಗೆ ಬಳಸದೇ ಹಾಳುಮಾಡಿಕೊಂಡಿದ್ದೇವೆ. ನಮ್ಮ ಸಹಜ ಸ್ಥಿತಿ ನಮಗೀಗ ಇಲ್ಲವಾಗಿದೆ.ಖಾಯಿಲೆ ಎಷ್ಟು ಉಲ್ಬಣಗೊಂಡಿದೆ ಎನ್ನುವುದಕ್ಕೆ ಯಾರ ಮಾತು ಪ್ರಮಾಣ? ಖಾಯಿಲೆಯಲ್ಲಿ ಬಳಲುವ ರೋಗಿಯದೋ ಅಥವಾ ಅವನ ಚಿಕಿತ್ಸೆ ಮಾಡುತ್ತಿರುವ ವೈದ್ಯನದೋ? ಹಾಗೆಯೇ ನಾವೆಲ್ಲಾ ರೋಗಿಗಳು. ಭಗವಂತ ವೈದ್ಯ.ಅವನ ಕರುಣೆಯ ವಿಷಯ ನಮಗೆ ನಾವು ಗುಣಮುಖರಾಗುವವರೆಗೂ ಗೊತ್ತಾಗದು. ವೈದ್ಯರು ಆಪರೇಷನ್ ಎಂದು ಹೊಟ್ಟೆ ಕೊಯ್ಯುವುದೇ? ಎಂತಹ ನಿಷ್ಕರುಣಿ! ಎಂದಂತೆ ನಾವೂ ಭಗವಂತನನ್ನು ಕರುಣೆಯಿಲ್ಲದವನು ಎನ್ನುವುದೂ ಸಹ. ಹೀಗೆ ನಮ್ಮ ದುಃಖಗಳಿಗೆಲ್ಲ ಕಾರಣ ಅವನು ಕೊಟ್ಟ ಮನಸ್ಸು ಬುದ್ಧಿಗಳನ್ನು ದುರುಪಯೋಗ ಮಾಡಿರುವುದೇ ಆಗಿದೆ. 


ಭಗವಂತನ ಸಂಹಾರಕಾರ್ಯ, ಮರೆವು  ಕರುಣೆ ಹೇಗಾದೀತು? ಜೀವಲೋಕದ ಮೇಲೆ ಕರುಣೆ ಮುಂದಿನ ಸಂಚಿಕೆಯಲ್ಲಿ ನೋಡೋಣ

 

ಮುಂದುವರೆಯುವುದು

ಸೂಚನೆ : 06/07/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, June 29, 2024

ಭಗವಂತ ಕರುಣಾಮಯನೇ? ... (Bhagavanta Karunamayane? ...)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)




ಭಗವಂತನನ್ನು ಕರುಣಾಮಯ, ಕನಿಕರ ಮೂರ್ತಿ, ಕರುಣೆಯ ಕಡಲು ಹೀಗೆಲ್ಲಾ ಕರೆಯುತ್ತಾರೆ. ವಾಸ್ತವವಾಗಿ ಭಗವಂತನಿಗೆ ಕರುಣೆ ಇದೆಯೇ? ಎಂಬ ಪ್ರಶ್ನೆ ಪಕ್ಕದಲ್ಲೇ ಇದೆ. ನಾವು ಜೀವಿಸುವ ಜಗತ್ತನ್ನೊಮ್ಮೆ ನೋಡಿ. ಎಷ್ಟೊಂದು ದುಃಖ ದೈನ್ಯಗಳು! ಹೊಟ್ಟೆಗಿಲ್ಲದೇ ಸಾಯುವವರು, ಜೀವನದ ಪ್ರಾಥಮಿಕ ಅವಶ್ಯಕತೆಗಳೇ ಪೂರೈಕೆಯಾಗದೇ ಗುಳಿಬಿದ್ದ ಕಣ್ಣುಗಳೆಷ್ಟು! ನೆರಿಗೆಯಾದ ಮುಖಗಳೆಷ್ಟು! ಒಂದೆಡೆ ಬಡಜೀವಿಗಳ ತಲೆಯೊಡೆದು ಐಷಾರಾಮದ ಜೀವನ ನಡೆಸುತ್ತಾ ಯಾವ ಭಯವೂ ಇಲ್ಲದೇ ಸ್ವಚ್ಚಂದವಾಗಿ ಬದುಕುವವರ ಅಟ್ಟಹಾಸ! ಇನ್ನೊಂದೆಡೆ ಇವರೆಲ್ಲರ ಕಾಲ್ತುಳಿತಕ್ಕೆ ಒಳಗಾಗಿ ನಳುಗಿಹೊದವರ ಆಕ್ರಂದನ! ಭರ್ತೃಹರಿಯ ಮಾತೊಂದು ಹೀಗಿದೆ- ಕ್ವಚಿದ್ ವಿದ್ವದ್ಗೋಷ್ಠಿ ಕ್ವಚಿದಪಿ ಸುರಾಮತ್ತ ಕಲಹ: ಕ್ವಚಿದ್ ವೀಣಾ ನಾದಃ ಕ್ವಚಿದಪಿ ಹಾಹೇತಿ ರುದಿತಂ| ಕ್ವಚಿದ್ ರಮ್ಯಾರಾಮಾ ಕ್ವಚಿದಪಿ ಜರಾ ಜರ್ಝರ ತನು: | ನ ಜಾನೇ ಸಂಸಾರಃ ಕಿಮಮೃತಮಯಃ ಕಿಂ ವಿಷಮಯಃ||- ಒಂದೆಡೆ ವಿದ್ವಾಂಸರ ಸಭೆ.ಇನ್ನೊಂದೆಡೆ ಹೆಂಡ ಕುಡುಕರ ಜಗಳ. ಒಂದೆಡೆ ಸುಶ್ರಾವ್ಯವಾದ ವೀಣಾನಾದ. ಇನ್ನೊಂದೆಡೆ ಹಾ ಹಾ ಎಂಬ ನೋವಿನ ಚೀತ್ಕಾರ. ಒಂದೆಡೆ ಸುಂದರಿಯಾದ ತರುಣಿ. 

ಇನ್ನೊಂದೆಡೆ ಮುಪ್ಪಿನಿಂದ ಜರ್ಝರಿತವಾದ ಶರೀರ. 


ಇದರಿಂದ ಈ ಸಂಸಾರವು ಅಮೃತಮಯವೇ, ವಿಷಮಯವೇ ಎಂಬುದೇ ತಿಳಿಯದು ಎನ್ನುತ್ತಾನೆ. ಏನಿದು ವಿಪರ್ಯಾಸ? ಇಷ್ಟಲ್ಲದೇ ಒಬ್ಬ ವ್ಯಕ್ತಿಯ ಬದುಕಲ್ಲೇ ಎಷ್ಟು ವೈಪರೀತ್ಯಗಳು! ಇವತ್ತು ಚೆನ್ನಾಗಿದ್ದವನು ನಾಳೆ ಖಾಯಿಲೆಯಿಂದ ಬಳಲುತ್ತಾನೆ. ಬದುಕೆಲ್ಲವೂ ಬವಣೆಯಲ್ಲೆ ಕಳೆದುಹೋಗುತ್ತಿದೆ. ಜೊತೆಗೇ ರೋಗ, ಮುಪ್ಪು,ಸಾವು, ನೋವುಗಳು..ಇಷ್ಟೇ ಅಲ್ಲದೇ ಪ್ರಳಯಕಾಲದಲ್ಲಿ ಎಲ್ಲಾ ಜೀವಿಗಳನ್ನೂ ಒಳ್ಳೆಯ ಕೆಟ್ಟವರೆಂದಲ್ಲದೇ ಸಂಹಾರ ಮಾಡುತ್ತಾನೆ. ನಿತ್ಯದಲ್ಲೂ ಜೀವಿಗಳ ಮರಣಕ್ಕೂ ಅವನೇ ಕಾರಣ. ಹೀಗೆ ಇನ್ನಿಲ್ಲದ ದುಃಖ ಸಾಗರದಲ್ಲಿ ಮುಳುಗಿದ ಜಗತ್ತನ್ನು ನೋಡಿಯೂ ಈ ಜಗದ ಒಡೆಯನನ್ನು ಕರುಣಾಮಯ ಎನ್ನುವುದೇ? ದಾಸಶ್ರೇಷ್ಠರಾದ ಪುರಂದರ ದಾಸರೇ ಒಂದೆಡೆ -ಕರುಣಾಮಯ ನೀನೆಂಬುವುದ್ಯಾತಕೋ ಭರವಸವಿಲ್ಲೆನಗೆ" ಎಂದಿದ್ದಾರಲ್ಲಾ ಕರುಣಾಮಯ ಎಂಬ ಈ ವಿಶೇಷಣ ಅವನಿಗೆ ಸಲ್ಲದು ಎಂದೇ ಅನ್ನಿಸಿಬಿಡುತ್ತದೆ. ಹಾಗಾದರೆ ಜ್ಞಾನಿಗಳು, ಭಕ್ತರು ಎಲ್ಲಾ ಏಕೆ ಅವನನ್ನು ಹೀಗೆನ್ನುತ್ತಾರೆ? ವಿಚಾರ ಮಾಡಬೇಕಾದ ವಿಷಯ. ಕೆಲವು ಉದಾಹರಣೆಗಳನ್ನು ಗಮನಿಸೋಣ.

 

ಕರುಣೆಯ ಸ್ವರೂಪವೇನು?:   

 

ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು-ಮಗುವಿನ ಜಾತಕರ್ಮಕ್ಕಾಗಿ ಲಾಡು ಮಾಡಿಸಿರುತ್ತಾರೆ. ಬಂದವರೆಲ್ಲರಿಗೂ ಲಾಡು ಬಡಿಸಿ ಸಂತೋಷಪಡಿಸಿದ್ದರೂ ಆ ಮಗುವಿಗೇ ಸ್ವಲ್ಪವೂ ಲಾಡು ಕೊಡದಿರುವ ತಾಯಿ ಎಷ್ಟು ನಿಷ್ಕರುಣಿ ಅಲ್ಲವೇ ? ಎಂದರೆ ಏನೆನ್ನಬೇಕು? ಆ ತಾಯಿ ಏನಾದರೂ ಮಗುವಿನ ಬಾಯಿಗೆ ಲಾಡನ್ನು ಹಾಕಿದರೆ ಮಗುವಿನ ಪರಿಸ್ಥಿತಿ ಏನಾಗಬಹುದು? ಆಗ ಅವಳನ್ನು ಕರುಣಾಮಯಿ ಎನ್ನಲಾದೀತೇ?

 

 ಒಬ್ಬ ಚಿಕ್ಕ ಹುಡುಗನಿಗೆ ತಂದೆ ಹೆದರಿಸಿ, ಹೊಡೆದು, ಪಾಠ ಓದಿಸಿದರೆ ಆ ಸನ್ನಿವೇಶದಲ್ಲಿ ಹುಡುಗನಿಗೆ ತಂದೆ ನಿಷ್ಕರುಣಿ, ತನಗೆ ಶತ್ರುವಿನಂತೆ ಇದ್ದಾನೆ ಎನ್ನಿಸಿದರೆ ಆಶ್ಚರ್ಯವಿಲ್ಲ. ಆದರೆ ಮಗನ ಮೇಲಿನ ಕರುಣೆಯೇ ಈಗ ತಂದೆಯಿಂದ ಇಂತಹ ಕೆಲಸ ಮಾಡಿಸುತ್ತಿದೆಯಲ್ಲವೇ? ಆದರೆ ತಂದೆಯ ಕರುಣೆ ಆ ಮಗುವಿಗೆ ಅರ್ಥವಾಗುವುದು ಮುಂದೆ ಅವನು ಚೆನ್ನಾಗಿ ಓದಿ ದೊಡ್ಡವನಾದಾಗ. ತಂದೆ ಅಂದು ಹಾಗೆ ಮಾಡದಿದ್ದರೆ ಇಂದು ತಾನು ಇಷ್ಟು ಒಳ್ಳೆಯ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಎಂದು ಗದ್ಗದಿತನಾಗಿ ಅವನು ತಂದೆಯನ್ನು ನೆನಪಿಸಿಕೊಳ್ಳುತ್ತಾನೆ. ನಮಗೆ ಭಗವಂತನ ಕರುಣೆಯ ಸ್ವರೂಪ ತಿಳಿಯದಿದ್ದಾಗ ಹುಡುಗ ಆರಂಭದಲ್ಲಿ ತಂದೆಯನ್ನು ಭಾವಿಸಿದಂತೆ ನಾವೂ ಅವನನ್ನು ನಿಷ್ಕರುಣಿ ಎಂದುಕೊಳ್ಳುತ್ತೇವೆ.

 

ಅಪರಾಧಿಗೆ ನ್ಯಾಯಾಧೀಶರು ಶಿಕ್ಷೆ ಕೊಡಬಹುದೇ:

 

 ಕಳ್ಳತನ ಮಾಡಿದವನಿಗೆ ನ್ಯಾಯಾಧೀಶರು ಜೈಲು ಶಿಕ್ಷೆ ವಿಧಿಸುತ್ತಾರೆ. ಹಾಗಾದರೆ ನ್ಯಾಯಾಧೀಶರು ನಿಷ್ಕರುಣಿಯೇ? ಶಿಕ್ಷೆ ಕೊಡದೇ ಹಾಗೇ ಬಿಟ್ಟರೆ ನಮಗೆ ಅದು ಒಪ್ಪಿಗೆಯಾಗುತ್ತದೆಯೇ? ಶಿಕ್ಷೆ ಎನ್ನುವುದೇ ಒಬ್ಬನನ್ನು ಸರಿದಾರಿಗೆ ತರಲು ಇರುವ ವ್ಯವಸ್ಥೆ. ಅವನನ್ನು ಸರಿದಾರಿಗೆ ತರಬೇಕೆನ್ನುವ ಮಾನಸಿಕ ಸ್ಥಿತಿ ಕರುಣೆಯೇ ಅಲ್ಲವೇ? ಹೀಗೆ ಸರಿದಾರಿಗೆ ತರುವ ಕ್ರಮ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿರುತ್ತದೆ. ಅವರವರ ಪೂರ್ವ ಸಂಸ್ಕಾರದ ಮೇಲೆ ಯಾವ ಯಾವ ಉಪಾಯಗಳನ್ನು ಮಾಡಿದರೆ ಒಬ್ಬನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಸರಿದಾರಿಗೆ ಬರುತ್ತಾನೆ ಎಂದು ವಿಚಾರ ಮಾಡಿ ಸಜ್ಜನರು ಅಂತಹ ನಿಯಮಗಳನ್ನು ಮಾಡಿರುತ್ತಾರೆ.

 

ಭಗವಂತನ ಸೃಷ್ಟಿಯೆಲ್ಲವೂ ಕರುಣೆಯಿಂದಲೇ ಆದುದು:

 

ಹಾಗೆಯೇ ಭಗವಂತನೂ ಜೀವಲೋಕದ ಮೇಲಿನ ಕರುಣೆಯಿಂದಲೇ ಜೀವಕ್ಕೆ ಬೇಕಾದುದೆಲ್ಲವನ್ನೂ ಕೊಟ್ಟು ಸೃಷ್ಟಿಸಿದ್ದಾನೆ. ದಿವಿಯ ಆನಂದದಿಂದ ಭುವಿಯ ಸಂತೋಷಗಳ ವರೆಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಈ ಬ್ರಹ್ಮಾಂಡದ ಸೊಬಗನ್ನೊಮ್ಮೆ ನೋಡಿ- ಅಕ್ಷಯ ಸಂಪದ್ಭರಿತಳಾದಈ ನಮ್ಮ ಭೂಮಿ ತಾಯಿ, ನಯನ ಮನೋಹರ ಗಿರಿ ಪರ್ವತಗಳು,ತಂಪಾದ ನದಿಗಳು, ವಿಶಾಲ ಸಮುದ್ರ,ಅಸಂಖ್ಯ ನಕ್ಷತ್ರನಿಬಿಡವಾದ ನೀಲಾಕಾಶ, ಇನ್ನು ನಮ್ಮ ಈ ಪಿಂಡಾಂಡದಅದ್ಭುತವನ್ನು ಏನೆಂದು ಹೇಳೋಣ..ನಮ್ಮೊಳಗೇ ಬ್ರಹ್ಮಾಂಡದ ಸೋಬಗನ್ನೆಲ್ಲ ಅನುಭವಿಸುವುದಕ್ಕೆ ಬೇಕಾದ ಜ್ಞಾನ ಕರ್ಮೇಂದ್ರಿಯಗಳ ವೈಭವ. ಇಂದ್ರಿಯ ಸುಖಗಳ ಜೊತೆಗೇ ಅದನ್ನೂ ಮೀರಿದ ಆತ್ಮನ ಸುಖವನ್ನೂ ಅನುಭವಿಸಲು ಸಮರ್ಥವಾಗಿರುವ ಅದ್ಭುತವಾದ ಮಾನವ ದೇಹ. ಇವೆಲ್ಲವನ್ನೂ ಜೀವಲೋಕದ ಮೇಲಿನ ಕರುಣೆಯಿಂದಲ್ಲವೇ ಅವನು ಅನುಗ್ರಹಿಸಿರುವುದು? ಹಾಗಾದರೆ ಮೇಲೆ ಹೇಳಿದ ದುಃಖ ದೈನ್ಯಗಳಿಗೆ ಯಾರು ಜವಾಬ್ದಾರರು? ಮುಂದಿನ ಸಂಚಿಕೆಯಲ್ಲಿ ನೋಡೋಣ

 

ಮುಂದುವರೆಯುವುದು 


ಸೂಚನೆ : 29/6/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.

Thursday, June 27, 2024

ಸದಾ ಲೋಕಹಿತ ಚಿಂತನೆ ಮಹಾತ್ಮರ ಲಕ್ಷಣ(Sada Lokahita Cintane Mahatmara Laksana)

Friday, May 3, 2024

ದಾನಕ್ಕೊಂದು ಪರಮಾದರ್ಶ (Danakkondu Paramadarsa)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)


ಒಮ್ಮೆ ಸೋದರರಾದ  ಅಷ್ಟಕ,  ಪ್ರತರ್ದನ,  ವಸುಮನಸ,  ಮತ್ತು  ಶಿಬಿ  ದೇವರ್ಷಿ ನಾರದರಲ್ಲಿ  ಪ್ರಶ್ನಿಸುತ್ತಾರೆ.  


"ನಾವು  ನಾಲ್ಕೂ  ಜನ ನಮಗೆ  ತಿಳಿದಿದ್ದಷ್ಟು ಧರ್ಮಮಾರ್ಗದಲ್ಲಿಯೇ  ರಾಜ್ಯಭಾರ  ನಡೆಸಿದ್ದೇವೆ.  ಯಾರಿಗೂ  ನೋವಾಗದಂತೆ  ನಡೆದುಕೊಂಡಿದ್ದೇವೆ.  ಅದರಿಂದ ನಮಗೆ  ಸ್ವರ್ಗಪ್ರಾಪ್ತಿಯಾಗುವುದು ನಿಸ್ಸಂಶಯ.  ಆದರೆ   ಸ್ವರ್ಗವೂ  ಕೂಡ  ನಿತ್ಯಶಾಶ್ವತವೇನೂ  ಅಲ್ಲ.  ಸತ್ಕರ್ಮದ  ಫಲಗಳೆಲ್ಲಾ  ಕಡಿಮೆಯಾಗುತ್ತಿದ್ದಂತೆಯೇ  ನಾವೆಲ್ಲರೂ  ಸ್ವರ್ಗದಿಂದ  ಚ್ಯುತರಾಗುತ್ತೇವೆ.  ನಮ್ಮಲ್ಲಿ  ಯಾರು  ಮೊದಲು  ಸ್ವರ್ಗದಿಂದ  ಕೆಳಗೆ  ಬೀಳುತ್ತೇವೆ ?"  ಎಂಬುದಾಗಿ. 


ನಾರದರ ಉತ್ತರ - "ನಿಮ್ಮ  ನಾಲ್ಕು  ಜನರಲ್ಲಿ  ಅಷ್ಟಕ  ಮೊದಲು  ಚ್ಯುತನಾಗುತ್ತಾನೆ".  ಕಾರಣ- " ಒಮ್ಮೆ  ಅವನೊಡನೆ ಹೋಗುತ್ತಿದ್ದಾಗ  ಬೇರೆ  ಬೇರೆ  ಬಣ್ಣದ  ಸಾವಿರಾರು  ಹಸುಗಳನ್ನು  ನಾನು  ನೋಡಿದೆ.  ನಾನು  ಅವನನ್ನು  ಇದು  ಯಾರದ್ದು  ಎಂದು  ಕೇಳಿದೆ.  ಆಗ  ಅಷ್ಟಕ -  "ಸ್ವಾಮಿ,  ಇವೆಲ್ಲವೂ  ನನ್ನದೇ  ಆಗಿತ್ತು,  ಈಗ ಬ್ರಾಹ್ಮಣರಿಗೆ  ದಾನ  ಕೊಟ್ಟುಬಿಟ್ಟಿದ್ದೇನೆ"  ಎಂದನು.  ಅವನು  ಕೊಟ್ಟ  ದಾನದಲ್ಲಿ  ಇನ್ನೂ  "ನನ್ನದು"  ಎಂಬ ಭಾವ  ಇಟ್ಟುಕೊಂಡಿದ್ದ್ದರಿಂದ ದಾನದಲ್ಲಿ  ದೋಷ  ಬಂತು.  ಹಾಗಾಗಿ  ಇವನು  ಸ್ವರ್ಗದಿಂದ  ಮೊದಲು  ಚ್ಯುತನಾಗುತ್ತಾನೆ."  ಎಂದು  ಹೇಳಿದರು.  


ಹಾಗೆಯೇ "ಪ್ರತರ್ದನ  ಎರಡನೆಯವನು"  ಎಂದರು ನಾರದರು. ಕಾರಣ-  "ಅವನು ದಾನಶೀಲ,  ಆದರೂ  ಅವನು  ಒಮ್ಮೆ  ನನ್ನನ್ನು  ರಥದಲ್ಲಿ  ಕರೆದುಕೊಂಡು  ಹೋಗುತ್ತಿದ್ದ.  ಆಗ  ಒಬ್ಬ  ಬ್ರಾಹ್ಮಣ  ಬಂದು - "ನನಗೆ  ಒಂದು  ರಥದ  ಕುದುರೆ ಬಹಳ  ಶೀಘ್ರವಾಗಿ ಬೇಕಾಗಿದೆ."  ಎಂದನು.   ತ್ವರೆ  ಮಾಡಿ  ನನಗೆ  ದಾನ  ಕೊಡುತ್ತೀಯಾ"  ಎಂದು  ಕೇಳುತ್ತಾನೆ.   ಅದಕ್ಕೆ  ಪ್ರತರ್ದನನು  "ಸರಿ,  ನಾನು  ರಾಜಧಾನಿಗೆ  ಹಿಂತಿರುಗಿದ  ನಂತರ  ದಾನ  ಕೊಡುತ್ತೇನೆ.  ಆಗಬಹುದೇ"  ಎಂದು  ಕೇಳುತ್ತಾನೆ.  ಆಗ  ಬ್ರಾಹ್ಮಣನು  "ಇಲ್ಲ,  ನನಗೆ  ಈಗಲೇ  ಬೇಕೆಂದು"  ಒತ್ತಾಯ  ಮಾಡಿದಮೇಲೆ  ಇವನು  ಕುದುರೆಯನ್ನು  ಕೊಡುತ್ತಾನೆ.  ಸ್ವಲ್ಪದೂರ  ಹೋದಾಗ  ಮತ್ತೊಬ್ಬ, ಹೀಗೇ ನಾಲ್ಕೂ ಜನ ಬ್ರಾಹ್ಮಣರು ಒಂದೊಂದೂ ಕುದುರೆ ಕೇಳಿದಾಗಲೂ  "ವಾಪಸ್ಸು  ಹೋಗಿ  ಕೊಡಬಹುದೇ  ಎಂದು  ಪ್ರಶ್ನೆ  ಕೇಳಿ ನಂತರ ಕೊಡುತ್ತಾನೆ. ದಾನದಲ್ಲೊಂದು ಹಿಡಿತ. ಅಂದರೆ,   ಕೇಳಿದ  ತಕ್ಷಣ  ರಾಜನು  ಯೋಚನೆ  ಮಾಡದೇ  ಕೊಟ್ಟುಬಿಡಬೇಕು  ಎನ್ನುವ  ನಿಯಮವನ್ನು ತಪ್ಪಿದ್ದರಿಂದ  ಎರಡನೆಯವನಾಗಿ  ಸ್ವರ್ಗದಿಂದ  ಕೆಳಗಿಳಿಯುತ್ತಾನೆ.  


ವಸುಮನಸನು ಮೂರನೆಯವನಾಗಿ  ಕೆಳಗಿಳಿಯುತ್ತಾನೆ ಎನ್ನುತ್ತಾರೆ. ಅವನ  ಸಮಸ್ಯೆ  ಏನು?  ಎಂದರೆ  ಅವನೂ  ಕೂಡ  ಧರ್ಮಾತ್ಮನೇ  ಸರಿ.  ಅವನು  ಅನೇಕ  ಯಜ್ಞಗಳನ್ನು, ಅನೇಕ  ಧರ್ಮಕಾರ್ಯ, ಗೋಸಂರಕ್ಷಣೆಗಳನ್ನು  ಮಾಡಿದ್ದ.       ಅದರ ಫಲವಾಗಿ , ಅವನಿಗೆ  ದೇವತೆಗಳು  ದಿವ್ಯವಾದ ದೇವಲೋಕದ  ಒಂದು  ಪುಷ್ಪರಥವೊಂದನ್ನು  ಕೊಟ್ಟು  ಸ್ವಸ್ತಿವಾಚನ  ಮಾಡುತ್ತಾ,  ನಿನಗೆ  ಒಳ್ಳೆಯದಾಗಲೀ  ಎಂದು  ಹೇಳುತ್ತಿರುವ  ಸಮಯದಲ್ಲಿ  ನಾರದರು  ಅಲ್ಲಿಗೆ  ಬರುತ್ತಾರೆ.  ವಸುಮನಸನು  ನಾರದರಿಗೆ  -.  "ಸ್ವಾಮೀ,  ನೀವೇ  ಇದಕ್ಕೆ  ಯೋಗ್ಯರು,  ಯೋಗ್ಯರಾಗಿ  ಬಂದಿದ್ದೀರಿ  ನೀವು,  ಈಗ  ದಾನವನ್ನು  ಸ್ವೀಕರಿಸಿ.  ಎಂದು  ಸಮರ್ಪಿಸಿದನು. ಹೀಗೆ ಎರಡನೆಯ ಬಾರಿ ದೇವತೆಗಳಿಂದ ಬಂದ ಪುಷ್ಪರಥವನ್ನೂ ದಾನ ಮಾಡುತ್ತಾನೆ.ಆದರೆ ಹೀಗೆಯೇ  ಮೂರನೇಬಾರಿಯೂ ಅತ್ಯದ್ಭುತವಾದ  ಪುಷ್ಪರಥ ದೊರೆತಾಗಲೂ ಪೂಜ್ಯ   ನಾರದರು   "ನಿನಗೆ  ಇದರಿಂದ  ಶ್ರೇಯೋಭಿವೃದ್ಧಿಯುಂಟಾಗಲಿ  ಎಂದು  ಸ್ವಸ್ತಿವಾಚನ  ಮಾಡುತ್ತಾರೆ.  ಈಗ  ಮಾತ್ರ  ಅವನು  ದಾನ  ಕೊಡಲು  ಹಿಂಜರಿದುಬಿಡುತ್ತಾನೆ.  " ತಮ್ಮ  ಸ್ವಸ್ತಿವಾಚನ  ತುಂಬಾ ಚೆನ್ನಾಗಿತ್ತು"  ಎಂದು  ಹೇಳಿ  ಮೃದುವಾಗಿ  ಮಾತನಾಡಿ  ಕಳುಹಿಸಿಬಿಡುತ್ತಾನೆ. ಪದಾರ್ಥದ ಮೇಲಿನ ಅಂಟು  ಅವನ  ದಾನದಲ್ಲಿ  ಹಿಡಿತ  ತರಿಸಿತು.  ಆ  ಕಾರಣದಿಂದಾಗಿ  ಅವನು  ಮೂರನೆಯವನಾಗಿ  ಸ್ವರ್ಗದಿಂದ  ಕೆಳಗೆ  ಬೀಳುತ್ತಾನೆ  ಎಂದರು.


ಇನ್ನು  ಉಳಿದವನು  ಶಿಬಿ. ಉಳಿದ  ರಾಜಕುಮಾರರು  ನಾರದರನ್ನು  ಕುರಿತು  "ನಾರದರೇ  ನೀವು  ಮತ್ತು  ಶಿಬಿ  ಇಬ್ಬರೂ  ಏಕಕಾಲದಲ್ಲಿ  ಸ್ವರ್ಗಪ್ರವೇಶ  ಮಾಡಿದರೆ  ನಿಮ್ಮಿಬ್ಬರಲ್ಲಿ  ಯಾರು  ಮೊದಲು  ಸ್ವರ್ಗದಿಂದ  ಚ್ಯುತರಾಗಿ ಕೆಳಗೆ  ಬೀಳುತ್ತಾರೆ?"  ಎಂದು  ಪ್ರಶ್ನಿಸುತ್ತಾರೆ.  ನಾರದರು  ಸ್ವಲ್ಪವೂ  ಹಿಂಜರಿಯದೇ  "ನಾನೇ  ಮೊದಲು  ಕೆಳಗೆ  ಬರುತ್ತೇನಪ್ಪಾ.  ಶಿಬಿಯಷ್ಟು  ದೊಡ್ಡವನಲ್ಲ  ನಾನು." ಎಂದರು.  ಎಲ್ಲರಿಗೂ  ಬಹಳ ಆಶ್ಚರ್ಯವಾಯಿತು.  ದೇವರ್ಷಿಗಳು, ತ್ರಿಕಾಲಜ್ಞರು, ತ್ರಿಲೋಕಸಂಚಾರಿಗಳಾದ  ನಾರದರೇ  ಹೀಗೆ  ಹೇಳಿದರಲ್ಲಾ  ಎಂದು.  ಆಗ  ನಾರದರು ಹೇಳುತ್ತಾರೆ-


"ಶಿಬಿ  ಮಹಾರಾಜನು  ರಾಜ್ಯವಾಳುತ್ತಿದ್ದಾಗ  ಒಬ್ಬ  ಬ್ರಾಹ್ಮಣನು  ಅತಿಥಿಯಾಗಿ  ಬರುತ್ತಾನೆ.  ರಾಜನು  ಅವರ  ಭೋಜನಕ್ಕಾಗಿ  ವಿಚಾರಿಸಲು  ಆ ಬ್ರಾಹ್ಮಣನು  "ನಿನ್ನ  ಮಗನನ್ನು  ಕೊಂದು  ಅವನ  ಮಾಂಸವನ್ನು  ನನಗೆ  ಭೋಜನಾತಿಥ್ಯವಾಗಿ  ಕೊಡಬೇಕು  ಎಂದನು.  ಶಿಬಿಯು ಸ್ವಲ್ಪವೂ  ವಿಚಲಿತನಾಗಲಿಲ್ಲ,  ವಿವರ್ಣನಾಗಲಿಲ್ಲ.  ಅವರು  ಹೇಳಿದಂತೆ  ತನ್ನ  ಮಗನ  ಮಾಂಸದಿಂದ  ಬ್ರಾಹ್ಮಣರಿಗೆ  ಭೋಜನಮಾಡಿಸಲೆಂದು  ಆ ಭೋಜನಪಾತ್ರೆಯನ್ನು  ತಲೆಯಮೇಲಿಟ್ಟುಕೊಂಡು  ಆ  ಬ್ರಾಹ್ಮಣನಿರುವ  ಸ್ಥಳಕ್ಕೆ  ಹೊರಡುತ್ತಾನೆ.  ಆ  ವೇಳೆಗೆ  ಈ  ಬ್ರಾಹ್ಮಣನು  ರಾಜನ  ಅಂತಃಪುರಕ್ಕೆ ಬೆಂಕಿ  ಹಚ್ಚಿಬಿಡುತ್ತಾನೆ.  ಆ  ಬೆಂಕಿಯು  ಅರಮನೆ,   ಗೋಶಾಲೆ,  ಗಜಶಾಲೆಗಳಿಗೆಲ್ಲಾ  ವಿಸ್ತರಿಸಿಬಿಡುತ್ತದೆ.  ಇಷ್ಟೆಲ್ಲಾ ಆ ಬ್ರಾಹ್ಮಣನಿಂದ ಆದರೂ   ಶಿಬಿಚಕ್ರವರ್ತಿಯು  ಸ್ವಲ್ಪವೂ   ವಿಚಲಿತನಾಗಲಿಲ್ಲ,  ಅವನಿಗೆ ಕೋಪವೂ  ಬರಲಿಲ್ಲ.  ಅವನು ವಿನಮ್ರನಾಗಿ  ಬ್ರಾಹ್ಮಣನನ್ನು  ಕುರಿತು-  ಭೋಜನವನ್ನು   ಸ್ವೀಕರಿಸಬೇಕೆಂದು  ವಿನಂತಿಸಿಕೊಂಡನು.  ಆ  ಬ್ರಾಹ್ಮಣನು  ರಾಜನನ್ನು  ಇನ್ನೂ  ಪರೀಕ್ಷೆಮಾಡಲು  "ಅದನ್ನು  ನೀನೇ  ತಿನ್ನು"  ಎಂದನು.  ಆಗಲೂ  ರಾಜನು  ಸಮಾಹಿತ ಮನಸ್ಕನಾಗಿದ್ದು ಬ್ರಾಹ್ಮಣನ ಆಜ್ಞೆಯನ್ನು ಪಾಲಿಸಲು  ಸಿದ್ಧನಾದನು.  ತಕ್ಷಣ  ಆ  ಬ್ರಾಹ್ಮಣನು  ಸಂತೋಷಗೊಂಡು ರಾಜನನ್ನು  ತಡೆದು  ಪ್ರೀತಿಯಿಂದ  "ಎಲೈ  ರಾಜನೇ,  ನೀನು  ಕೋಪವನ್ನು  ಜಯಿಸಿದ  ಮಹಾಶೂರ. ದಾನ  ಕೊಡದೇ  ಇರಬಹುದಾದಂತಹ  ಯಾವುದನ್ನೂ  ನೀನು  ಉಳಿಸಿಕೊಂಡಿಲ್ಲ.  ಪತ್ನೀ,  ಪುತ್ರರು,  ರಾಜ್ಯ,  ಧನ,  ಕನಕ,  ತನು,  ಮನ  ಇವೆಲ್ಲವನ್ನೂ  ದಾನಮಾಡಲು  ಸಿದ್ಧವಾಗಿರುವೆಯಲ್ಲಾ!  ನಿನ್ನದು  ಎಂಥಹ  ಶ್ರೇಷ್ಠವಾದ  ವ್ಯಕ್ತಿತ್ವ!  ಎಂದು  ಹೇಳಿ  ಅಂತಃಕರಣಪೂರ್ವಕವಾಗಿ  ಅವನನ್ನು  ಆಶೀರ್ವದಿಸುತ್ತಾನೆ.  ಸತ್ತ ಮಗನೂ ಬದುಕುತ್ತಾನೆ ಎಂಬ ಕಥೆ ಬೇರೆ. 


ದಾನಮಾಡುವಾಗ  ಅಥವಾ  ಭಗವಂತನಲ್ಲಿ  ಸಮರ್ಪಣೆ  ಮಾಡುವಾಗ  ನಮ್ಮ  ಮನೋಧರ್ಮವು  ಹೇಗಿರಬೇಕು  ಎನ್ನುವುದನ್ನು  ನಿರ್ದೇಶನ  ಮಾಡುವಂತಹ ಒಂದು  ಕಥೆ.


ಶ್ರೀರಂಗಮಹಾಗುರುಗಳ ಮಾತೊಂದು ಸ್ಮರಣೀಯ-"ಐಶ್ವರ್ಯ  ಎನ್ನುವ  ಒಂದು  ಪದವೇ  ಈಶ್ವರನನ್ನು  ಜೊತೆಯಲ್ಲಿಟ್ಟುಕೊಂಡಿದೆಯಪ್ಪಾ.  ಈಶ್ವರ  ಎನ್ನುವ  ಪದದಿಂದಲೇ  ಈ  ಐಶ್ವರ್ಯ  ಎನ್ನುವ  ವಿಷಯ  ಬಂದಿದೆ.  ಅವನ  ಜಗತ್ತಿನಲ್ಲಿ  ಏನೇನಿದೆಯೋ  ಅವೆಲ್ಲಾ  ಅವನೇ  ಕೊಟ್ಟಿರುವಂಥಹುದು.  ಅವನು  ಕೊಟ್ಟಿದ್ದನ್ನು  ಅವನಿಗೇ  ಕೊಡುವುದೇ  ಐಶ್ವರ್ಯದ  ಒಂದು  ಸದುಪಯೋಗವಾದಂತೆ.  ದೈವ  ಕೊಟ್ಟಿದ್ದನ್ನು  ದೈವಕ್ಕೇ  ಉಪಯೋಗಿಸಬೇಕು.  ಅದೇ  ಸಮರ್ಪಣೆ"  .  ದಾನ  ಮಾಡುವಾಗ  ತನ್ನದು  ಎಂದು  ಯಾವ    ಅಂಟನ್ನೂ  ಇಟ್ಟುಕೊಳ್ಳಬಾರದು  ಎಂಬ  ಮಾತನ್ನು  ಅವರು  ಹೇಳುತ್ತಿದ್ದರು.


ಅಷ್ಟಕನ  ದಾನದಲ್ಲಿ  ತನ್ನದೆಂಬ  ಒಂದು  ಅಂಟು  ಇದ್ದೇ  ಇದೆ.  ಹೀಗಾಗಿ  "ಇದಂ  ನ  ಮಮ"  ಎಂದು  ಬಾಯಲ್ಲಿ  ಹೇಳಿದರೂ  ಕೂಡ  ಒಳ  ಮನಸ್ಸಿನಲ್ಲಿ  ಇದೆಲ್ಲಾ  ನನ್ನದಾಗಿತ್ತು  ಎನ್ನುವ  ಒಂದು  ಅಂಟು. ಉಳಿದವರದ್ದೂ ಹೀಗೇ. ಈ  ಬಗೆಯ  ಅಂಟು  ಇದ್ದರೆ  ಅದು ದಾನವಾಗದು. ಆದರೆ  ಶಿಬಿಯದು  ಅಂಟಿಲ್ಲದ ದಾನ .  "ಎಲ್ಲ  ಐಶ್ವರ್ಯವೂ  ಭಗವಂತನದೇ.  ಈಗ  ನನ್ನ  ಸುಪರ್ದಿಗೆ  ಬಂದಿದೆ  ಎಂದ  ಕಾರಣಕ್ಕೆ  ಇದು  ನನ್ನದಲ್ಲ,  ನಾನು  ಕೇವಲ  ನಿಮಿತ್ತ  ಮಾತ್ರನಾಗಿದ್ದೇನೆ.  ವ್ಯಾವಹಾರಿಕವಾಗಿ  ಈಗ  ಅದು  ನನಗೆ  ಸಂಬಂಧಪಟ್ಟಿದೆ  ಎಂದರೂ  ಸಹ  ಯಾರ  ಮೂಲಕ  ಬಂದು  ನೀನೂ  ಏನೇನು  ಕೇಳುತ್ತೀಯೋ  ಅದನ್ನೆಲ್ಲಾ  ನಿನಗೆ  ಸಮರ್ಪಣೆ  ಮಾಡುವುದು  ನನ್ನ  ಹೆಚ್ಚುಗಾರಿಕೆಯಲ್ಲ,  ಹೊಣೆಗಾರಿಕೆ,  ಕರ್ತವ್ಯ.  ದಾನ  ಮಾಡುವಾಗ  ನಮ್ಮ  ಮನಸ್ಸು  ಹೇಗಿರಬೇಕು  ಎನ್ನುವುದಕ್ಕೆ  ಶಿಬಿ  ಚಕ್ರವರ್ತಿಯು  ಪರಮಾದರ್ಶ.  

ನಾವು  ಯಜ್ಞ,  ಯಾಗಗಳನ್ನು ಮಾಡುವಾಗ- "ಇಷ್ಟೆಲ್ಲಾ   ಖರ್ಚುಮಾಡಿ    ಮಾಡಿದೆ,  ಎಂಬುದಾಗಿ  ಹೊಗಳಿಕೊಳ್ಳುತ್ತಲೇ  ಇರುತ್ತೇವೆ.  ಆದರೆ  "ಎಲ್ಲವೂ  ಭಗವಂತನಿಂದ  ಬಂದಿದ್ದು,  ಅವನಿಗೇ  ಸಮರ್ಪಣೆಯಾಗುತ್ತಿದೆ."  ಎಂಬ  ಭಾವ  ನಮಗಿರುವುದಿಲ್ಲ.  ನಮ್ಮದೆಂಬ ಆ ಭಾರದಿಂದ  ಭಾರವಾದ  ಜೀವನ  ಮಾಡುತ್ತೇವೆ. ನಾವು  ಹಗುರವಾಗಿ  ಮೇಲಿನ  ಲೋಕಕ್ಕೆ  ಹೋಗಲು  ತಯಾರಾಗುವುದೇ  ಇಲ್ಲ.  ಶಿಬಿ ಚಕ್ರವರ್ತಿಯಂತಹ  ಒಂದು  ಸಮಾಹಿತ  ಮನಸ್ಕತೆ  ಅಂದರೆ  "ಎಲ್ಲವೂ ಭಗವಂತನಿಗೆ  ಸಮರ್ಪಿತ"  ಎನ್ನುವ  ಮನೋಭಾವ ನಮ್ಮದಾಗಬೇಕು  ಎನ್ನುವುದೇ  ಈ  ಕಥೆಯ   ಆದರ್ಶ. ನಮಗೆಲ್ಲರಿಗೂ ದಾನದ  ಆ  ಭಗವದರ್ಪಣ  ಬುದ್ಧಿಯನ್ನು  ಭಗವಂತನು  ಅನುಗ್ರಹಿಸಲಿ  ಎಂದು  ಪ್ರಾರ್ಥಿಸೋಣ.


ಸೂಚನೆ:  02/05/2024 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Sunday, April 28, 2024

ಮರ್ಯಾದೆ ನಿಜಕ್ಕೂ ಯಾರಿಗೆ? (Maryade Nijakku Yarige?)


ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
 (ಪ್ರತಿಕ್ರಿಯಿಸಿರಿ lekhana@ayvm.in)


 ಪಂಡರಾಪುರದಲ್ಲೊಬ್ಬ ಭಕ್ತ. ಅವನಿಗೆ ವಿಠಲನನ್ನು ಊರ ಬೀದಿಯಲ್ಲೆಲ್ಲ ಬಿಜಯಮಾಡಿಸುವ ಆಸೆ. ಇವನು ಬಡವ. ರಥ ಎಲ್ಲಿಂದ ತರುವುದು? ಅಲ್ಲೊಂದು ಅಗಸನ ಕತ್ತೆ. ಸ್ವತಂತ್ರವಾಗಿ ಓಡಾಡುತ್ತಿತ್ತು. ಈ ಭಕ್ತ ಆ ಕತ್ತೆಯನ್ನು ತಂದ. ಅದನ್ನು ಸ್ನಾನ ಮಾಡಿಸಿ ಶುಚಿಗೊಳಿಸಿದ. ಅದರ ಬೆನ್ನಮೇಲೆ ವಿಠಲನ ವಿಗ್ರಹವನ್ನಿಟ್ಟ. ಹೊರಟಿತು ಉತ್ಸವ. ಪಾಂಡುರಂಗನಿಗೆ ಜಯವಾಗಲಿ ಘೋಷಣೆ ಮೊಳಗಿತು. ಇನ್ನೂ ಅನೇಕಜನ ಭಕ್ತರು ಜೊತೆಗೂಡಿದರು. ಮನೆಮನೆಯಲ್ಲಿ ವಿಠಲನಿಗೆ ತಿಲಕವಿಟ್ಟರು. ಹೂಮಾಲೆ ಹಾಕಿದರು. ಅದು ದೊಡ್ಡವನ ಚಿಕ್ಕವಿಗ್ರಹ. ಹೂಮಾಲೆಗಿನ್ನು ಜಾಗವಿಲ್ಲದಾಯಿತು. ಜನ ವಿಠಲನನ್ನು ಹೊತ್ತ ಕತ್ತೆಯ ಕೊರಳಿಗೆ ಮಾಲೆ ಹಾಕಿದರು. ಕತ್ತೆಗೆ ಸಂಭ್ರಮ. ತನಗೆ ಇಷ್ಟು ಗೌರವ ಯಾವತ್ತೂ ಯಾರೂ ತೋರಿಸಿಲ್ಲ. ತನ್ನ ಯಜಮಾನ ಅಗಸ ಕೇವಲ ಏಟು ಕೊಟ್ಟಿದ್ದಾನೆ. ಭಾರ ಹೊರಿಸಿದ್ದಾನೆ.ತನ್ನ ಕೆಲಸ ಆದೊಡನೆ ನನ್ನನ್ನು ಮೇಯಲು ಅಟ್ಟಿದ್ದಾನೆ. ನನ್ನ ಯೋಗ್ಯತೆ ಇಷ್ಟು ದೊಡ್ಡದು ಎಂದುಕೊಂಡಿರಲಿಲ್ಲ. ಹಾರ ತುರಾಯಿಗಳೇನು! ಆರತಿಯೇನು! ತಿಲಕವೇನು! ಬಾಳೆಹಣ್ಣನ್ನು ಕೊಡುವವರೇನು! ಹೀಗೆ ಯೋಚಿಸುತ್ತಾ ಕತ್ತೆ ಹಿಗ್ಗಿಹೋಯಿತು. ಸಂಜೆ ಉತ್ಸವ ಮುಗಿಯಿತು. ವಿಠಲನ ವಿಗ್ರಹವನ್ನು ಇಳಿಸಿ ಕತ್ತೆಯನ್ನು ಮುಕ್ತಗೊಳಿಸಿದರು. ಮಾರನೇ ದಿನ ಕತ್ತೆ ಅಗಸನ ಹತ್ತಿರ ಹೋಗಲಿಲ್ಲ. ರಾಜ ಬೀದಿಯಲ್ಲೆಲ್ಲಾ ಓಡಾಡಿತು. ಯಾರೂ ಹಾರ ಹಾಕಲಿಲ್ಲ. ಆರತಿ ಇಲ್ಲ. ಅಷ್ಟೇ ಅಲ್ಲ. ರಸ್ತೆಯಲ್ಲಿ ತೊಂದರೆಯಾಗುತ್ತಿದೆ ಎಂದು ಏಟು ಕೊಟ್ಟರು. ಕತ್ತೆ ವಿಧಿಯಿಲ್ಲದೇ ಮತ್ತೆ ಅಗಸನ ಹತ್ತಿರ ಹೋಯಿತು. ಅಲ್ಲೂ ಪೆಟ್ಟು ತಿಂದಿತು.

ವಿಠಲನಿಗೆ ಕೊಡುತ್ತಿರುವ ಮರ್ಯಾದೆ

ಏಕೆ ಹೀಗಾಯಿತು? ಮೇಲಿದ್ದ ವಿಠಲನ ಮೂರ್ತಿಗೆ ಎಲ್ಲಾ ಮರ್ಯಾದೆ ಸಲ್ಲುತ್ತಿದೆ ಎಂದು ಕತ್ತೆಗೆ ಅರಿವಾಗಲಿಲ್ಲ. ತನಗೇ ಎಂದುಕೊಂಡಿತು.  ಈ ಕಥೆ ಆಳವಾದ ತತ್ತ್ವದತ್ತ ಕೈದೊರುತ್ತದೆ.  ನಮ್ಮೊಳಗೇ ಬೆಳಗುವ ಚೈತನ್ಯ ಒಂದುಂಟು. ಅದಿರುವುದರಿಂದ ನಮ್ಮ ಇಂದ್ರಿಯಗಳೆಲ್ಲ ಕೆಲಸ ಮಾಡುತ್ತಿವೆ. ನಮ್ಮ ಬುದ್ಧಿ ಮನಸ್ಸುಗಳು ಅದರ ಬಲದಿಂದಲೇ ಅನೇಕ ಸಾಧನೆಗಳನ್ನು ಮಾಡುತ್ತವೆ. ಎಂಬುದು ಈ ದೇಶದ ಮಹರ್ಷಿಗಳ ಸಮಗ್ರ ಜೀವನ ದೃಷ್ಟಿ. ಆದರೆ ನಮ್ಮ ಸಾಧನೆಗಳಿಂದ ಬರುವ ಕೀರ್ತಿಯನ್ನೆಲ್ಲ ಒಳಗಿರುವ ದೇವನಿಗೆ ನಾವು ಸಮರ್ಪಿಸುವುದಿಲ್ಲ. ಎಲ್ಲವೂ ನನ್ನದೇ ಎಂದು ಬೆನ್ನು ತಟ್ಟಿಕೊಳ್ಳುತ್ತೇವೆ. ಆ ಕತ್ತೆಯಂತೆ.ಆದರೆ ಇಲ್ಲೊಂದು ವ್ಯತ್ಯಾಸ. ಗೌರವ ಕೊಡುವವರಿಗೂ ಯಾರಿಗೆ ಕೊಡುತ್ತಿದ್ದೇವೆ ಎಂಬ ಅರಿವಿಲ್ಲ. ತೆಗೆದುಕೊಂಡ ನಮಗೂ ಅದು ಎಲ್ಲಿಗೆ ಸಲ್ಲಬೇಕೆಂಬ ನಿಗವಿಲ್ಲ.

ಒಳ ಬೆಳಗುವ ಆತ್ಮ ವಸ್ತುವಿನ ಭಿಕ್ಷೆಯಿಂದ ನಮ್ಮ ಬದುಕು. ಯಾಜ್ಞವಲ್ಕ್ಯರು ಮೈತ್ರೇಯಿಗೆ ಹೇಳುತ್ತಾರೆ- ಒಳಗೆ ಬೆಳಗುವ ಆತ್ಮವಸ್ತುವಿಂದಲೇ ಪತ್ನಿ,ಪುತ್ರರು,ಎಲ್ಲರೂ ಪ್ರಿಯವಾಗುತ್ತಾರೆ. ಅದರಿಂದ ಆತ್ಮವೇ ನೋಡಬೇಕಾದುದು,ಕೇಳಬೇಕಾದುದು, ಮನನ ಮಾಡಬೇಕಾದುದು, ಏಕಾಗ್ರತೆಯಿಂದ ಧ್ಯಾನ ಮಾಡಬೇಕಾದುದು ಎಂಬುದಾಗಿ. ಒಳಗಿರುವ ದೇವ ಈ ದೇಹದ ಯಜಮಾನ. ನಮ್ಮ ಲಕ್ಷ್ಯ ಯಜಮಾನನ ಕಡೆಗೆ ಇರಬೇಕಾಗಿತ್ತು. ಯಜಮಾನನ ಶಕ್ತಿಯಿಂದಲೇ ನಾವು ಎಲ್ಲಾ ಸುಖಗಳನ್ನೂ ಪಡೆಯುತ್ತಿದ್ದೇವೆ. ಯಜಮಾನನನ್ನು ಮರೆತಿದ್ದೇವೆ. ಭಾರತೀಯ ಜೀವನದ ಸಂಸ್ಕಾರ, ಅನುಷ್ಠಾನ, ಪೂಜೆ, ಪುರಸ್ಕಾರಗಳೆಲ್ಲವೂ ನಮ್ಮೆಲ್ಲರ ಮೂಲನಾದ ಯಜಮಾನನನ್ನು ನೆನಪಿಸುವುದಾಗಿದೆ. ನಾವು ವೃಕ್ಷದ ಬೇರಿಗೆ ನೀರೆರೆಯುತ್ತೇವೆ. ಮೇಲಿನ ಎಲೆ, ಕೊಂಬೆಗಳಿಗಲ್ಲ. ನಮಗೆ ಎಲೆ ಕೊಂಬೆಗಳ ಮೇಲೆ ದ್ವೇಷವಲ್ಲ. ಅವು ಬೇಡವೆಂದೂ ಅಲ್ಲ. ಅವುಗಳು ಸೊಂಪಾಗಿ ಬೆಳೆಯಬೇಕಾದರೆ ಬೇರಿಗೇ ನೀರೆರೆಯಬೇಕು. "ಜೀವನವೆಂದರೇನು?ಎನ್ನುವುದನ್ನರಿತು ಜೀವನವನ್ನೂ ಅದರ ವಿಕಾಸಾವಸ್ಥೆಯನ್ನೂ ನೋಡದಿದ್ದರೆ ಬೇರನ್ನು ಮರೆತು ಮರದ ತುದಿಯಲ್ಲಿರುವ ಹಣ್ಣುಗಳನ್ನು ನೋಡುವವನಂತೆ ಆಗುತ್ತದೆ ನಮ್ಮ ಸ್ಥಿತಿ.ಆದ್ದರಿಂದ ಮೂಲವರಿತು ನೋಡುವ ಶ್ರದ್ಧೆ ನಮಗೆ ಬೇಕಾಗಿದೆ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಹಾಗೆಯೇ ಈ ಜೀವನ ವೃಕ್ಷದ ಬೇರು ಒಳಗಿರುವ ಚೈತನ್ಯ. ಅದರ ಆಶಯದಂತೆ ಧರ್ಮ,ಅರ್ಥ ಕಾಮಗಳನ್ನು ಅನುಭವಿಸಬೇಕು ಎಂಬುದು ಈ ವೃಕ್ಷದ ಪರಿಚಯವಿರುವ ಋಷಿಗಳ ಮಾತು. ಬೇರನ್ನೇ ಕಡೆಗಣಿಸಿ ಆರೈಕೆ ಎಲ್ಲವನ್ನೂ ಮೇಲು ಮೇಲೆ ಕಾಣುವುದಕ್ಕೆ ಮಾತ್ರ ಮಾಡತೊಡಗಿದರೆ ಆ ವೃಕ್ಷ ಸರ್ವಾಂಗ ಸುಂದರವಾಗಿ ಬೆಳೆಯದು. ಈ ಸತ್ಯಾರ್ಥವನ್ನು ಅರ್ಥ ಮಾಡಿಕೊಂಡು ನಮ್ಮ ಹಿರಿಯರು ಹಾಕಿದ ಮಾರ್ಗದಲ್ಲಿ ಆತ್ಮ ನಿಷ್ಠರಾಗಿ ಬದುಕಲು ಪ್ರಯತ್ನಿಸೋಣ.

ಸೂಚನೆ: 27/04/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Friday, February 9, 2024

ಮನಸ್ಸೆಂಬ ದುಂಬಿಗೆ ಜ್ಞಾನಿಗಳ ಕಿವಿಮಾತು (Manassemba Dumbige Gyanigala Kivimatu)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)

ಚೇತೋ ಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ |

ಭಜ ಭಜ ಲಕ್ಷ್ಮೀನರಸಿಂಹಾನಘ ಪದಸರಸಿಜ ಮಕರಂದಂ ||


ಎಲೈ ಮನಸ್ಸೆಂಬ ದುಂಬಿಯೇ, ಸಂಸಾರವೆಂಬ ಮರುಭೂಮಿಯಲ್ಲಿ ಸುಮ್ಮನೇ ನೀರಸವಾಗಿ ಏಕೆ ಸುತ್ತುತ್ತೀಯೇ ? ಅದರಿಂದ ಏನೂ ಪ್ರಯೋಜನವಿರದು. ಅದರ ಬದಲು ಪವಿತ್ರವಾದ ಲಕ್ಷ್ಮೀನರಸಿಂಹನ ಪದಕಮಲಗಳನ್ನು ಬಿಡದೇ ಸೇವಿಸುತ್ತಿದ್ದರೆ ಅದೇ  ನಿತ್ಯಸುಖದ ಅಮೃತಪಾನ. ಆ ಪದಕಮಲದ ಮಕರಂದವು ಎಷ್ಟು ಸೇವಿಸಿದರೂ ಮುಗಿಯದು. ಇದು ಶಂಕರಭಗವತ್ಪಾದರ ಮೇಲಿನ ಸ್ತೋತ್ರದ ಅಭಿಪ್ರಾಯ. 

ವಾಸ್ತವವಾಗಿ ನಮ್ಮ ಮನಸ್ಸುಗಳಿಗೆ ನಾವೇ ಹೇಳಬೇಕಾದ ಮಾತಿದು. ನಮ್ಮ ಮನಸ್ಸು ಹುಟ್ಟಿದಾರಭ್ಯಸುಖವನ್ನು ಅರಸುತ್ತಾ ಒಂದೆಡೆಯಿಂದ ಇನ್ನೊಂದೆಡೆಗೆ ಹಾರುತ್ತಾ ಚಲಿಸುತ್ತಾ ಸಾಗುತ್ತಿದೆ. ಒಮ್ಮೆ ಒಳ್ಳೆಯ ತಿಂಡಿ ತಿನಿಸುಗಳು ಸುಖವೆನಿಸುವುವು. ಅದನ್ನು ಸವಿದ ಮೇಲೆ ಅದಲ್ಲ, ನಮಗೆ ಇಷ್ಟವಾದ ಉಡುಪುಗಳನ್ನು ಧರಿಸುವುದು ಸುಖ ಎನಿಸುವುದು. ನಂತರ ಅದೂ ಬೇಸರ ತರಿಸುವುದು. ಬಾಲ್ಯದಲ್ಲಿ ಸುಖವೆಂದು ಬಯಸುವ ಆಟಿಕೆಗಳು ಯೌವನದಲ್ಲಿ ಬೇಡವಾಗುತ್ತವೆ, ಬಾಲಿಶ ಎನಿಸುತ್ತವೆ. ಅಂದು ಅವೆಲ್ಲ ಬಹಳ ಸುಖವನ್ನು ಕೊಡುವ ಸಾಮಗ್ರಿಗಳೆಂದು ಹಿರಿಯರೊಡನೆ ಹಠ ಮಾಡಿ ತೆಗೆದುಕೊಂಡೆವಲ್ಲ . ಹೌದು. ಆದರೆ ಬಾಲ್ಯದಲ್ಲಿ ಸುಖ ಕೊಟ್ಟ ವಸ್ತುಗಳು, ವಿಷಯಗಳು ಯೌವನದಲ್ಲಿ ಕೊಡದು. ಯೌವನದಲ್ಲಿ ಬೇರೆ ಆಸೆಗಳು. ಸುಂದರವಾಗಿ ಕಾಣುವ ಆಸೆ, ಹುಡುಗ ಹುಡುಗಿಯರ ಪರಸ್ಪರ ಆಕರ್ಷಣೆ. ಅವನಿಗಾಗಿ ಅಥವಾ ಅವಳಿಗಾಗಿ ಏನು ಬೇಕಾದರೂ ಬಿಡಲು ಸಿದ್ಧ ಎಂಬ ಮನಸ್ಥಿತಿ. ಅದರಲ್ಲೇ ನನ್ನ ಸುಖ ಇರುವುದೆಂಬ ನಿಶ್ಚಯ. ನಂತರ ವೃದ್ಧಾಪ್ಯದಲ್ಲಿ ಇವು ಯಾವುದರಲ್ಲೂ ಸುಖವಿಲ್ಲ ಇನ್ನೇನೋ ಬೇಕು ಎನಿಸುತ್ತೆ. ಟಿವಿ ನೋಡುವುದು, ಸಿನಿಮಾ ನೋಡುವುದು, ಕ್ರಿಕೆಟ್ ನೋಡುವುದು, ಆಟ ಆಡುವುದು, ಕಾರ್ ಕೊಳ್ಳುವುದು ಹೀಗೆ ಸುಖದ ಅರಸುವಿಕೆ ಕೊನೆ ಮೊದಲಿಲ್ಲದೇ ಸಾಗುತ್ತದೆ. ಇಷ್ಟೆಲ್ಲಾ ಆದಮೇಲೆ ಸುಖ ಸಿಕ್ಕಿದೆಯೇ ಎಂದರೆ ನಿರಾಸೆಯ ನಿಟ್ಟುಸಿರೇ ಹೆಚ್ಚು ಜನರಲ್ಲಿ. ದಿನದ ೨೪ ಘಂಟೆಗಳೂ ಸುಖ ಯಾವುದರಿಂದ ಸಿಗುತ್ತದೆ ಎಂಬ ಹುಡುಕಾಟ ಮಾತ್ರ ನಿಲ್ಲದು.

ನಮ್ಮ ಮಹರ್ಷಿಗಳೂ ಜೀವನದಲ್ಲಿ ಸುಖಕ್ಕಾಗಿ ಹುಡುಕಿದವರೇ. ಇಂದ್ರಿಯ ಸುಖಗಳನ್ನೂ ಅನುಭವಿಸಿದವರೇ. ಆದರೆ ಸುಖವನ್ನು ಹುಡುಕುತ್ತಾ ಹೊರ ಜೀವನದಲ್ಲೇ ನಿಲ್ಲಲಿಲ್ಲ. ಈ ಜೀವನದ ವಿಕಾಸ ಎಲ್ಲಿಂದ ಆರಂಭ, ಎಲ್ಲಿ ಇದರ ನೆಲೆ ಎಂಬುದನ್ನೇ ತಮ್ಮ ಹುಡುಕಾಟದ ಪ್ರಧಾನ ವಿಷಯವಾಗಿ ಅವರು ತೆಗೆದುಕೊಂಡರು. ಈ ಸುಖವೆಂಬುದರ ಮೂಲವೇನು? ಇಂದ್ರಿಯಗಳಿಗೂ ಸಹ ಸುಖ ಎಲ್ಲಿಂದ ಹರಿಯುತ್ತಿದೆ ಎಂಬುದರ ಬಗೆಗೆ ಹುಡುಕು ನೋಟ ಹರಿಸಿದರು. ಅದು ಬುದ್ಧಿಯ ಮುಂದೆ ಹರಡಿದ ವಿಷಯ, ವಸ್ತುಗಳಲ್ಲಿನ ಹುಡುಕಾಟವಾಗಿರಲಿಲ್ಲ. ಬುದ್ಧಿಯ ಹಿಂಬದಿಯಲ್ಲಿ ಚೈತನ್ಯರೂಪವಾಗಿ ಯಾವ ಪರಂಜ್ಯೋತಿಯು ಬೆಳಗುತ್ತಿದೆಯೋ ಅದರೆಡೆಗೆ ಅವರ ಅಂತರಂಗದ ಪ್ರಯಾಣ ಸಾಗಿತ್ತು. ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ-"ಜೀವನದ ವಿಕಾಸವನ್ನು ಗಮನಿಸಿದಾಗ ಉದ್ದಕ್ಕೂ ಜ್ಯೋತಿಯ ಆಶಯವನ್ನೇ ವ್ಯಾಖ್ಯಾನ ಮಾಡಿಕೊಂಡು ಜೀವನ ಬೆಳೆದುಬರುತ್ತಿದೆ. ಆದ್ದರಿಂದಲೇ ಜೀವದ ವಿಕಾಸದ ಹಿಂದಿರುವ ಪ್ರಕಾಶವನ್ನೂ ಅರಿಯಲು ಸಾಧ್ಯವಾಗುವುದು".

ಈ ದೇಶದ ಜ್ಞಾನಿಗಳು  ನಿರಂತರ ತಪಸ್ಸಿನಿಂದ ಮನಸ್ಸನ್ನು ಹೊರ ಇಂದ್ರಿಯಗಳಿಂದ ಹಿಂದೆ ಸೆಳೆದರು. ಮೂಲದಲ್ಲಿ ಎಲ್ಲದಕ್ಕೂ ತನ್ನ ಶಕ್ತಿಯನ್ನು ಹರಿಸುತ್ತಿರುವ, ತಾನೇ ತಾನಾಗಿ ಬೆಳಗುತ್ತಿರುವ ಆ ಪರಾತ್ಪರ ವಸ್ತುವಿನಲ್ಲಿ ಮನಸ್ಸನ್ನು ನೆಲೆ ನಿಲ್ಲಿಸಿದರು. ಅದೊಂದು ನಿತ್ಯಾನಂದದ ಸಮುದ್ರ. ಅಲ್ಲಿ ಅವರು ಹಿಂದೆಂದೂ ಕಂಡಿರದ, ಅನುಭವಿಸಿರದ ಸುಖ, ಶಾಂತಿ,ನೆಮ್ಮದಿಗಳ ಅನುಭೂತಿ ಅವರಿಗಾಯಿತು. ಭವದ ಬೆಂಗಾಡು ಅಂತಹ ಸುಖವನ್ನು ನೀಡಲಾರದು. ಆ ಬೆಂಗಾಡಿನಲ್ಲೇ ಇದ್ದರೆ ಸುಖದ ಅರಸುವಿಕೆಯೂ ನಿಲ್ಲದು.  ಅವರು ಕಂಡ  ಆ ಆನಂದದ ಎದುರು ಭೌತಿಕ ಲೋಕದ ಎಲ್ಲಾ ಸುಖ,ಆನಂದಗಳೂ ತೃಣಸಮಾನವಾಗಿ ಅವರಿಗೆ ಕಂಡಿತು. ಅಂತಹ ಆನಂದದ ಸೆಲೆಯೇ ಇಲ್ಲಿ ಹೇಳಿರುವ ಆ ಸರ್ವಮೂಲನಾದ ಲಕ್ಷ್ಮೀನರಸಿಂಹ ದೇವನ ಪಾದಕಮಲ. ಅಲ್ಲಿನ ಪರಮಸುಖದ ಮಕರಂದ ಎಂದಿಗೂ ಬತ್ತದು. ಶಂಕರ ಭಗವತ್ಪಾದರು ಘೋಷಣೆ ಮಾಡುತ್ತಿರುವುದೂ ಆ ಪಾದ ಕಮಲಗಳ ಅಮೃತಪಾನವನ್ನೇ. ಅಂತಹ ನಿತ್ಯಸುಖದ ತಾಣದಲ್ಲಿ ಎಲ್ಲರ ಮನಸ್ಸುಗಳು ರಮಿಸಲಿ ಎಂಬ ಜೀವಕಾರುಣ್ಯದಿಂದ ಶಂಕರರು ಆಡಿದ ಮೇಲಿನ ಅಮೃತಮಯವಾದ ಮಾತು ನಮ್ಮೆಲ್ಲರ ಜೀವನಕ್ಕೆ ಪ್ರೇರಣೆಯಾಗಲಿ ಎಂದು ಆ ಲಕ್ಷ್ಮೀನರಸಿಂಹನನ್ನು ಪ್ರಾರ್ಥಿಸೋಣ.

ಸೂಚನೆ:  09/02/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Monday, February 5, 2024

ಓಂಕಾರ ಎಂದರೆ ಏನು ? (Ōnkara Endare Enu?)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ 

(ಪ್ರತಿಕ್ರಿಯಿಸಿರಿ lekhana@ayvm.in)



ನಮ್ಮ ದೇಶದಲ್ಲಿ, ಅಷ್ಟೇ ಏಕೆ, ಜಗತ್ತಿನಲ್ಲೇ ಓಂಕಾರದ ಬಗ್ಗೆ ಕೇಳದೇ ಇರುವವರೇ ಇಲ್ಲ. ನಮ್ಮ ಭಾರತೀಯ ಸಂಪ್ರದಾಯದಲ್ಲಿ ಬಂದಂತಹ ಎಲ್ಲಾ ಸಂಸ್ಕಾರಗಳ ಆರಂಭಮಧ್ಯ ಮತ್ತು ಅಂತ್ಯಗಳಲ್ಲಿ ಈ ಓಂಕಾರವೆಂಬ ಪ್ರಣವ ಘೋಷವನ್ನು ನಾವು ಕೇಳಿಯೇ ಇರುತ್ತೇವೆ. 

 

ಏನಿದು ಓಂಕಾರ?  ಕೇವಲ ಎರಡು ತುಟಿಗಳನ್ನು ಒಟ್ಟು ಮಾಡಿ ಓಂ ಎಂದು ಹೇಳಿಬಿಟ್ಟರೆಅಷ್ಟಕ್ಕೇ ಇದರ ಅರ್ಥ ವಿಸ್ತಾರ ಮುಗಿಯದು. ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಇದು ಕೇವಲ ನಾವು ತುಟಿಗಳನ್ನು ಒಟ್ಟು ಮಾಡಿ ಹೇಳುವಂತಹ ಅಥವಾ ಮೊಳಗಿಸುವಂತಹ ಶಬ್ದ ಮಾತ್ರವಲ್ಲದೇಯೋಗಿಗಳುನಮ್ಮ ದೇಶದ ಮಹರ್ಷಿಗಳುಯಾರು ನಿರಂತರವಾದ ಆಧ್ಯಾತ್ಮಿಕ ಸಾಧನೆ ಮತ್ತು ತಪಸ್ಸಿಯಲ್ಲಿ ತೊಡಗಿದ್ದರೋಅಂತಹವರ ಅಂತರಂಗದಲ್ಲಿ ತಾನೇ ತಾನಾಗಿ ಸದಾ ಕಾಲ ಮೊಳಗುತ್ತಿರುವ ಒಂದು ಅನಾಹತ ನಾದ ಎಂದು ಹೇಳುತ್ತಾರೆ. 

 

ಏನಿದು ಅನಾಹತಎಂದರೆಸಾಮಾನ್ಯವಾಗಿ ಆಹತವೆಂದರೆ ಎರಡು ವಸ್ತುಗಳ ಸಂಘರ್ಷದಿಂದ ಉತ್ಪತ್ತಿಯಾಗುವ ಶಬ್ದ. ಆದರೆ ಈ ಓಂಕಾರವು ನಮ್ಮ ಮಹರ್ಷಿಗಳ ಹೃದಯದಲ್ಲಿ ಯಾವ ಸಂಘರ್ಷವೂ ಇಲ್ಲದೆ ತಾನೇ ತಾನಾಗಿಯೇ ಸದಾಕಾಲ ಮೊಳಗುತ್ತಾ ಇರುವಂತಹ ಒಂದು ನಾದವಾಗಿದೆ. ಯೋಗಿಗಳ ಅನುಭವದ ಪ್ರಕಾರಓಂಕಾರವು ಇಡೀ ವಿಶ್ವಕ್ಕೆಬ್ರಹ್ಮಾ೦ಡಕ್ಕೆಪಿಂಡಾಂಡಕ್ಕೆ ಮತ್ತು ಸೃಷ್ಟಿಗೆ ಬೀಜ ಭೂತವಾಗಿದೆ. ಹೀಗಾಗಿ ಸಾಕ್ಷಾತ್ ಭಗವಂತನನ್ನು ಕೂಡ "ಓಂಎಂದೇ ಕರೆಯಬಹುದು. ಇದು ಭಗವಂತನ ವಾಚಕವಾಗಿದೆ. ಏನಿದುಕೇವಲ ಒಂದು ಧ್ವನಿಯುವಿಶ್ವದ ಬೀಜ ಎಂದು ಹೇಳಿಬಿಟ್ಟರೆಇದನ್ನು ಹೇಗೆ ನಂಬುವುದುಎಂದು ಪ್ರಶ್ನೆಯಾಗುವುದು ಸಹಜ. ಇದಕ್ಕೆ ನಮ್ಮ ಶ್ರೀರಂಗ ಮಹಾಗುರುಗಳ ಮನಸ್ಸಿಗೆ ಮುಟ್ಟುವಂತಹಒಂದು ಉದಾಹರಣೆ ಹೀಗಿದೆ.-

ಆಲದ ಮರವು ವಿಸ್ತಾರವಾದ ಶಾಖೋಪಶಾಖೆಗಳೊಂದಿಗೆ ಕೂಡಿರುತ್ತದೆ. ದೀರ್ಘಾಯುಷ್ಯಕ್ಕೆಉತ್ತಮ ಆರೋಗ್ಯಕ್ಕೆ, ಹಲವಾರು ರೋಗಗಳಿಗೆ ಔಷಧಿಯಾಗಿರುವಂತಹ  ಇಷ್ಟು ದೊಡ್ಡ ಆಲದ ವೃಕ್ಷಕ್ಕೆ ಯಾವುದು ಮೂಲಎಂದರೆಕೇವಲ ಒಂದು ಉಗುರಳತೆಯಲ್ಲಿ ಸಿಗಬಹುದಾದಂತಹ ಸಣ್ಣ ಬೀಜವಷ್ಟೇ. ಈ ಸಂಗತಿಯು ನಮಗೆ ನಂಬಲು ಕಷ್ಟವೆನಿಸಿದರೂ ಕೂಡವ್ಯವಸಾಯ ಮಾಡುವವನು ಈ ಸತ್ಯವನ್ನು ಚೆನ್ನಾಗಿ ಬಲ್ಲ. ಇಷ್ಟು ಸಣ್ಣ ಬೀಜದಿಂದಲೇ ಅಷ್ಟು ದೊಡ್ಡದಾಗಿ ಆಲದ ಮರವು ಬೆಳೆಯುತ್ತದೆ ಎಂದು ನಿಸರ್ಗವನ್ನು ಬಲ್ಲವನು ಹೇಗೆ ತಿಳಿಯುತ್ತಾನೆಯೋ ಅಂತೆಯೇ ನಮ್ಮ ಮಹರ್ಷಿಗಳು ತಮ್ಮ ಅಂತರಂಗದಲ್ಲಿ ದರ್ಶನ ಮಾಡಿಅನುಭವಿಸಿಇಡೀ ಜಗತ್ತಿಗೆ ಓಂಕಾರವೇ ಬೀಜವಾಗಿದೆಈ ಓಂಕಾರದಿಂದಲೇ ಇಡೀ ಜಗತ್ತು ವಿಸ್ತಾರವಾಗಿದೆ ಎನ್ನುವ ಸತ್ಯವನ್ನು ಸಾರಿದರು. ಧ್ವನಿ ವಿಜ್ಞಾನವನ್ನರಿತು ಇಂದು ಎಲ್ಲೋ ಆಡಿದ ಮಾತುಗಳು, ಹಾಡಿದ ಹಾಡುಗಳು ನಮ್ಮ ಮನೆಯ ದೂರದರ್ಶನದಲ್ಲಿ,ಆಕಾಶವಾಣಿಯಲ್ಲಿ ಬರುವಂತಾಗಿದೆಯಲ್ಲವೇ?


ನಮಗೇಕೆ ಇದು  ಅರ್ಥವಾಗುತ್ತಿಲ್ಲ ಎಂದರೆನಾವು ನಮ್ಮ ಪೂರ್ವಿಕರಾದ ಋಷಿ ಮಹರ್ಷಿಗಳoತೆ ಸಾಧನೆತಪಸ್ಸುಗಳನ್ನು ಮಾಡಿಲ್ಲ. ಆಯುರ್ವೇದದ ಒಂದು ಮಾತು- ನ ಶಕ್ಯಃ ಚಕ್ಷುಷಾ ದ್ರಷ್ಟುಂ ದೇಹೇ ಸೂಕ್ಷ್ಮತಮೋ ವಿಭು: | ದೃಷ್ಯತೇ ಜ್ಞಾನ ಚಕ್ಷುರ್ಭಿ: ತಪಶ್ಚಕ್ಷುರ್ಭಿರೇವಚ||- ಈ ದೇಹದಲ್ಲಿ ಸೂಕ್ಷ್ಮವಾಗಿರುವ ಸರ್ವವ್ಯಾಪಿಯಾದ ಚೈತನ್ಯವನ್ನು ಈ ಚರ್ಮ ಚಕ್ಷುಸ್ಸಿನಿಂದ ನೋಡಲಾಗದು. ಅದಕ್ಕೆ ಜ್ಞಾನದ ಕಣ್ಣು,ತಪಸ್ಸಿನ ಕಣ್ಣು ಬೇಕಾಗುತ್ತದೆ. ಎಂಬುದಾಗಿ. ನಮ್ಮ ಜೀವನಗಳು ಶುದ್ಧವಾಗಿದ್ದು ಜನ್ಮಾಂತರ ಸಂಸ್ಕಾರಗಳಿಂದ ಸಹಜವಾದ ಇಂದ್ರಿಯಸಂಯಮದಿಂದ ಒಳಗಿರುವ ಬೆಳಕನ್ನು ನೋಡುವಂತಹ ಪ್ರಕೃತಿ ನಮ್ಮದಿದ್ದಾಗ ಜ್ಞಾನದ ಕಣ್ಣು ಸಹಜವಾಗಿ ತೆರೆಯುವಂತಾಗುತ್ತದೆ. ಆದರೆ ಅದು ಎಲ್ಲರಿಗೂ ಸಾಧ್ಯವಾಗದು. ನಮ್ಮ ಜನ್ಮಾಂತರ ಕರ್ಮಗಳಿಂದ ಪ್ರಕೃತಿ ಕಲುಷಿತವಾಗಿದ್ದಾಗ ಅದನ್ನು ಒಳ ಅನುಭವವನ್ನು ಪಡೆಯಲು ಸಜ್ಜುಗೊಳಿಸಬೇಕಾಗುತ್ತದೆ. ಅದಕ್ಕಾಗಿ ಜ್ಞಾನೀಜನ ಪ್ರಣೀತವಾದ ನಾನಾ ಬಗೆಯ ತಪಸ್ಸು, ಸಾಧನೆಗಳ ಅಭ್ಯಾಸ ಮಾಡಿದಾಗ ನಮ್ಮ ಶರೀರವು ಸಹಜ ಸ್ಥಿತಿಗೆ ಬಂದು ಒಳ ಅನುಭವವನ್ನು ಪಡೆಯುವಂತಾಗುವುದು ತಪಸ್ಸಿನ ಕಣ್ಣು. ಹಾಗೆ ನಾವು  ಪರಮಗುರುವಿನ ನಿರ್ದೇಶನದಲ್ಲಿ ತೊಡಗಿದರೆ ನಮಗೂ ಕೂಡ ಮಹರ್ಷಿಗಳಿಗಾದ ಅನುಭವವು ಉಂಟಾಗಿ ಅರಿವು ಮೂಡುತ್ತದೆ. ಹಾಗಾದಾಗ ಎಲ್ಲಾ ಶುಭ ಕಾರ್ಯಗಳ ಆರಂಭ, ಮಧ್ಯ, ಅಂತ್ಯಗಳೂ ಸೃಷ್ಟಿಮೂಲವಾದ ಪ್ರಣವಘೋಷದಿಂದ ತುಂಬಿರುವುದು ಅರ್ಥವತ್ತಾಗುತ್ತದೆ.


ಇಡೀ ವಿಶ್ವವನ್ನು ತನ್ನಲ್ಲಿ ಅಡಗಿಸಿಕೊಂಡುಈ ವಿಶ್ವದ ವಿಸ್ತಾರಕ್ಕೆ ಈ ಓಂಕಾರವು ಕಾರಣವಾಗಿದೆ ಎನ್ನುವ ಸತ್ಯಾರ್ಥವನ್ನು ನಾವೂ ಕಂಡು ಅನುಭವಿಸುವಂತಾಗಲಿ ಎಂದು ಭಗವಂತನನ್ನು ಪ್ರಾರ್ಥಿಸೋಣ.


ಸೂಚನೆ :
3/2/2024 ರಂದು ಈ ಲೇಖನವು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.