ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಜೀವವು ಸದಾ ಜಪಿಸುತ್ತಿರುತ್ತದೆ
ಯಾವುದಾದರೂ ಕೆಲಸವು ಬಹಳ ಸರಳವೂ ಸುಲಭವೂ ಆಗಿದ್ದಲ್ಲಿ, ಅದನ್ನು ಹೇಳಲು, "ಓ, ಅದೇನು ಮಹಾ ಕಷ್ಟ? ಅದು ನೀರು ಕುಡಿದಷ್ಟು ಸುಲಭ" ಎನ್ನುವುದುಂಟು. ಆಕಾಶದಲ್ಲಿ ಪಕ್ಷಿಯು ಅನಾಯಾಸವಾಗಿ ಹಾರಬಲ್ಲುದು; ಆದರೆ ಅದರ ಗುರುತುಗಳೇ ಅಲ್ಲಿರವು; ಹಾಗೆಯೇ ನೀರಿನಲ್ಲಿ ಮೀನಿನ ಈಜೂ: ಗುರುತುಗಳೇ ಉಳಿಯವು!
ಮೇಲೆ ಹೇಳಿದುದು ನೀರಿನ ಸಮಾಚಾರವಾಯಿತು. ಆದರೆ ಅದಕ್ಕಿಂತಲೂ ಕಷ್ಟವಾದುದು ಗಾಳಿಯ ಸಮಾಚಾರ. ನೀರನ್ನಾದರೂ ಕಂಡೇವು, ಗಾಳಿಯನ್ನು ಕಂಡೇವೇ? ಗಾಳಿಗೆ ರೂಪವಿಲ್ಲವಾಗಿ, ಕಣ್ಣದನ್ನು ಗ್ರಹಿಸಲಾಗದು. ಪಂಚೇಂದ್ರಿಯಗಳಲ್ಲಿ ಚರ್ಮಕ್ಕೆ ಮಾತ್ರವೇ ಸಿಗುವಂತಹುದದು.
ಇನ್ನು ಶರೀರದೊಳಗೆ ಸಂಚರಿಸುವ ವಾಯುವನ್ನೇ ಪ್ರಾಣವೆನ್ನುವುದು. ಅದರ ನಡೆಯನ್ನು ಹಿಡಿಯುವುದು ಮತ್ತೂ ಕಷ್ಟವೇ. ಅದು ಒಂದಿಷ್ಟು ಗೋಚರವಾಗುವುದು ಮೂಗಿನೊಳಗೆ. ಇನ್ನೂ ಸೂಕ್ಷ್ಮವಾಗಿ ಗಮನಿಸಿಕೊಂಡರೆ ಗಂಟಲಿನೆಡೆಯಲ್ಲಿ. ಆಮೇಲಿನ್ನೇನಿದ್ದರೂ ಎದೆ/ಹೊಟ್ಟೆಗಳ ಏರಿಳಿತದಲ್ಲಿ. ಅನಾರೋಗ್ಯವಿದ್ದಾಗ ಗುದದ್ವಾರದಿಂದ ಅದರ ನಿರ್ಗಮನದಲ್ಲಿ.
ಯೋಗವಿದ್ಯೆಯಲ್ಲಿ ಪ್ರಾಣದ ಸೂಕ್ಷ್ಮಭೇದಗಳನ್ನೂ ಗಮನಿಸಲಾಗುತ್ತದೆ. ಪ್ರಾಣಕ್ಕೇ ಐದು ಕೆಲಸಗಳೆಂದು ಹೇಳಿ, ತದನುಸಾರ ಪಂಚ-ನಾಮಗಳನ್ನು ಹೇಳಿದೆ: ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನಗಳೆಂದು.
ಸಾಧಾರಣವಾಗಿ ಯಾರೂ ಗಮನಿಸದ ಒಂದು ಅಂಶವನ್ನು ಯೋಗಶಾಸ್ತ್ರ-ತಂತ್ರಶಾಸ್ತ್ರಗಳು ಗಮನಿಸಿವೆ. ಅದೆಂದರೆ ನಮ್ಮ ಉಸಿರಾಟದಲ್ಲೇ ಒಂದು ವಿಶಿಷ್ಟಬಗೆಯಿರುವುದು. ಉಸಿರು ಹೊರಗೆ ಹೋಗುವಾಗ ಹಕಾರರೂಪವಾಗಿಯೂ, ಮತ್ತೆ ಉಸಿರೆಳೆದುಕೊಳ್ಳುವಾಗ ಸಕಾರರೂಪವಾಗಿಯೂ ಇರುತ್ತದೆ.
ಈ ಎರಡಕ್ಷರಗಳೊಂದಿಗೆ ಕ್ರಮವಾಗಿ ಅನುಸ್ವಾರ-ವಿಸರ್ಗಧ್ವನಿಗಳೂ ಸೇರಿಕೊಳ್ಳುವುದರಿಂದ ಹಂ ಮತ್ತು ಸಃ ಎಂದಾಗುತ್ತದೆ. ಇವುಗಳ ಸೇರ್ಪಡೆಯಿಂದ ನಮ್ಮ ಉಸಿರಾಟವೇ 'ಹಂ-ಸಃ ' ಎಂದಾಗುತ್ತಿರುತ್ತದೆ.
ಮಂತ್ರೋಪದೇಶವಾಗಿರುವವರು ಮಂತ್ರಜಪವನ್ನು ಕಾಲಕಾಲಕ್ಕೆ ಮಾಡುತ್ತಿರುವರಲ್ಲವೇ? ಏನು ಜಪವೆಂದರೆ? ಮಂತ್ರಾಕ್ಷರಗಳನ್ನು ಮತ್ತೆ ಮತ್ತೆ ಉಚ್ಚರಿಸುತ್ತಿರುವುದೇ ಅದು.
ನಮ್ಮ ಉಸಿರಾಟವು ಸದಾ ನಡೆಯುತ್ತಿದ್ದು "ಹಂಸಃ" ಎಂಬ ಉಚ್ಚಾರಣೆಯು ಅನುಸ್ಯೂತವಾಗಿ ನಡೆಯುತ್ತಲೇ ಇರುತ್ತದೆ. ಹೀಗಾಗಿ ಇದೇ ಒಂದು ಜಪ! ಹಂಸಮಂತ್ರದ ಜಪವಿದು. ಇದು ಸರ್ವದಾ ಆಗುತ್ತಿರುವುದನ್ನೇ, "ಜೀವವು ಸದಾ ಜಪಿಸುತ್ತಿರುವುದು" ಎನ್ನುತ್ತಾರೆ (ಜೀವೋ ಜಪತಿ ಸರ್ವದಾ).
ಜಪಮಾಡುತ್ತಿರುವಾಗ ಜಪಾಕ್ಷರಗಳು ಬೇರೆಯವರಿಗೂ ಕೇಳಿಸುವಂತಿದ್ದರೆ ಅದನ್ನು ಉಚ್ಚೈರ್ಜಪವೆನ್ನುವರು. ತುಟಿಗಳು ಅಲುಗಾಡುತ್ತಿರುವಷ್ಟೇ ಗೋಚರವಾಗುತ್ತಿದ್ದರೆ ಅದನ್ನು ಉಪಾಂಶು-ಜಪವೆನ್ನುವರು. ತುಟಿಯೂ ಆಡದೆ ಮನಸ್ಸಿನೊಳಗೇ ಜಪಕ್ರಿಯೆಯು ನಡೆಯುತ್ತಿದ್ದರೆ ಅದನ್ನು ಮಾನಸ-ಜಪವೆಂದು ಹೇಳುತ್ತಾರೆ. ಉಚ್ಚೈರ್ಜಪವು ಸಾಧಾರಣವೆಂದೂ, ಉಪಾಂಶು-ಜಪವು ಪ್ರಶಸ್ತವೆಂದೂ, ಮಾನಸ-ಜಪವೇ ಶ್ರೇಷ್ಠವೆಂದೂ ಪರಿಗಣಿತವಾಗಿವೆ.
ಅಯತ್ನವಾಗಿ ಆಗುತ್ತಿರುವ ಹಂಸಮಂತ್ರವು ಹೀಗೆ ತುಟಿಯ ಅಲ್ಲಾಡುವಿಕೆಯೆಂಬುದಿಲ್ಲದೆಯೂ ನಡೆಯುತ್ತಿರುತ್ತದೆ. ಅಲ್ಲದೆ, ಜಪಕ್ಕೆ ಅವಶ್ಯವಾದವು ಸಂಕಲ್ಪ ಹಾಗೂ ಜಪಸಂಖ್ಯಾ-ಗಣನೆ. ಅವಿಲ್ಲದೆಯೂ ನಡೆಯುವುದೆಂಬ ಕಾರಣಕ್ಕಾಗಿಯೇ ಇದನ್ನು ಅಜಪಾ-ಜಪವೆನ್ನುವುದು – ಎಂಬುದಾಗಿ ಶ್ರೀರಂಗಮಹಾಗುರುಗಳು ವಿವರಿಸಿದ್ದಾರೆ.
ಇತ್ತ ಸಂಸ್ಕೃತದ ಸಂಧಿನಿಯಮವನ್ನು ಗಮನಿಸಿದರೆ ಹಂಸಃ ಹಂಸಃ ಹಂ… ಎಂಬುದು ಹಂಸೋಹಂಸೋಹಂ… ಎಂದಾಗುತ್ತದೆ. ಹೀಗಾಗಿ, ಹಂಸೋ, ಹಂಸೋ ಎನ್ನುತ್ತಿರುವುದು ಸೋಹಂ, ಸೋಹಂ ಎನ್ನುವಂತೆ(ಯೂ) ಕೇಳಿಸುತ್ತದೆ.
ಸೇರಿಸಿದಾಗ ಹೀಗೆ ಕೇಳಿಸುವುದೇ, ಸೇರಿರುವುದನ್ನು ಬಿಡಿಸಿ ನೋಡಿದಾಗ ಮತ್ತೊಂದು ಬಗೆಯಾಗುವುದು! ಸೋಹಂ ಎನ್ನುವುದು ಸಃ ಅಹಂ ಎಂದಾಗುತ್ತದೆ.
ಸಂಸ್ಕೃತದಲ್ಲಿ ಸಃ ಎಂದರೆ ಅವನು, ಅಹಂ ಎಂದರೆ ನಾನು. ಇವು ಕ್ರಮವಾಗಿ ದೇವ-ಜೀವರನ್ನು ಸೂಚಿಸುತ್ತವೆ. ಹೀಗಾಗಿ ಈ ಜಪವು ಜೀವದೇವ-ಯೋಗವನ್ನೂ ತಿಳಿಸಿಕೊಡುತ್ತದೆ!
ವ್ಯಾಕರಣ ಪ್ರಕ್ರಿಯೆಯಲ್ಲೂ ಮಂತ್ರಶಾಸ್ತ್ರಪ್ರಕ್ರಿಯೆಯಲ್ಲೂ ಸ್ವರಗಳ ಸ್ವತಂತ್ರತೆಯನ್ನೂ ವ್ಯಂಜನಗಳ ಅಸ್ವತಂತ್ರತೆಯನ್ನೂ ಹೇಳಲಾಗುತ್ತದೆ. ಅಲ್ಲದೆ, ವ್ಯಂಜನಗಳು ಕಣಿಕದಂತೆ, ಸ್ವರಗಳು ಹೂರಣದಂತೆ.
ಪ್ರಕೃತ, ಸಕಾರ-ಹಕಾರಗಳು ವ್ಯಂಜನಗಳು. ವ್ಯಂಜನಗಳನ್ನು ಕಳೆದಾಗ ಸೋ ಮತ್ತು ಹಂ ಎಂಬಲ್ಲಿ ಉಳಿಯುವುವು ಓ ಮತ್ತು ಅಂ ಎಂಬುವಷ್ಟೇ. ಇವುಗಳ ನಡುವೆಯೂ ಪೂರ್ವರೂಪಸಂಧಿಯಾಗಿ ಓಂ ಎಂಬುದಷ್ಟೇ ಉಳಿಯುವುದು. ಸಂಧಿಗಳ ಸೃಷ್ಟಿಸಹಜತೆ-ವೈಜ್ಞಾನಿಕತೆಗಳನ್ನು ಶ್ರೀರಂಗಮಹಾಗುರುಗಳು ಪ್ರಯೋಗಬದ್ಧವಾಗಿ ತೋರಿಸಿಕೊಟ್ಟಿರುವರು.
ಈ ಸೂಕ್ಷ್ಮಗಳು ಯೋಗಿಗಳಿಗಷ್ಟೆ ಗೋಚರವಾಗುವ ವಿಷಯ. ಯೋಗಮಾರ್ಗದಲ್ಲಿ ಅವರ ಆಂತರಂಗಿಕವಾದ ನಡೆಯು ಖಗಗಳ ಖ-ಗತಿಯಂತೆ, ಎಂದರೆ ಪಕ್ಷಿಗಳ ಆಕಾಶ-ಗಮನದಂತೆ; ಮೀನುಗಳ ಜಲ-ಗಮನದಂತೆ: ಅಷ್ಟೇ ಅನಾಯಾಸವಾದುದು; ಹಾಗಿದ್ದೂಏನೂ ಗುರುತೇ ಉಳಿಯದುದೂ!
ಹೀಗಾಗಿ, ಯೋಗಿಗಳು ನಿರೂಪಿಸಿರುವಂತೆ, ನಮ್ಮ ಉಸಿರಾಟದೊಳಗೆ ಓಂಕಾರವೇ ಗರ್ಭೀಕೃತವಾಗಿದೆ! ಎಲ್ಲ ಮಂತ್ರಗಳಿಗೂ ಮಿಗಿಲಾದ ಓಂಕಾರಮಂತ್ರವು ಹೀಗೆ ನಮ್ಮ ಉಸಿರಾಟದ ಸಾರವೇ ಆಗಿರುವುದು ಪರಮಾಶ್ಚರ್ಯವಲ್ಲವೇ?
ಯೋಗಿಗಳ ಉಸಿರಾಟದ ಬಗೆಯಾಗಲಿ, ಅದರ ರಹಸ್ಯಗಳಾಗಲಿ, ಜನಸಾಮಾನ್ಯಕ್ಕೆ ಎಟುಕಿಬಿಡದೆಂಬುದೂ ಅಷ್ಟೇ ನಿಜವಲ್ಲವೇ?
ಸೂಚನೆ: 2/8//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.