ಪ್ರಶ್ನೆ ೨೭. ನರಕ ಯಾವುದು?
ಉತ್ತರ - ಪರರ ವಶದಲ್ಲಿ ಇರುವುದು.
ನರಕ ಯಾವುದು? ಎಂಬದು ಈಗಿನ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ಪರರ ವಶದಲ್ಲಿ ಇರುವುದು ಅಂದರೆ ಬೇರೆಯವರ ಅಧೀನವಾಗಿ ಇರುವುದು ಎಂದರ್ಥ. ನರಕವೆಂದರೆ ದುಃಖ - ಸಂಕಟ - ಕಷ್ಟ. ಅದನ್ನು ಅನುಭವಿಸುವುದು. ಇಂತಹ ಸಂಕಟ ಎಲ್ಲಿ ಬರುತ್ತದೆ? ಅಂದರೆ ಪ್ರತಿಯೊಂದು ವಿಷಯದಲ್ಲೂ ಬೇರೆಯವರನ್ನು ಆಶ್ರಯಿಸುವುದರಿಂದ. ಅಂತಹ ನರಕ ಯಾತನೆ ಎಂಬುದು ಪ್ರಶ್ನೋತ್ತರದ ಆಶಯವಾಗಿದೆ. ಈ ಪ್ರಶ್ನೆಯ ಜೊತೆಯಲ್ಲಿ ನಮಗೊಂದು ಪ್ರಶ್ನೆ ಬರುತ್ತದೆ. ಬೇರೆಯವರನ್ನು ಆಶ್ರಯಿಸದೆ ಈ ಪ್ರಪಂಚದಲ್ಲಿ ಬದುಕಲು ಸಾಧ್ಯವೇ? ಎಂದು. ಖಂಡಿತವಾಗಿ ಇಲ್ಲ. ನಾವು ಬದುಕಬೇಕೆಂದರೆ ಇನ್ನೊಬ್ಬರನ್ನು ಅಥವ ಅವರಿಗೆ ಸಂಬಂಧಿಸಿದ ಪದಾರ್ಥವನ್ನು ಆಶ್ರಯಿಸಲೇಬೇಕು; ಆಶ್ರಯಿಸದೆ ಬದುಕಲು ಅಸಾಧ್ಯ. ಹೀಗಿರುವಾಗ ಬೇರೆಯವರನ್ನು ಆಶ್ರಯಿಸುವುದು ನರಕ ಹೇಗಾಗುತ್ತದೆ? ಎಂಬುದು ಇಲ್ಲಿ ಚಿಂತಿಸಬೇಕಾದ ವಿಷಯವಾಗಿದೆ.
ಇಲ್ಲಿ ಹೇಳುತ್ತಿರುವುದು ಅರ್ಥ ವಿಭಿನ್ನವಾದುದು. ಬೇರೆಯವರನ್ನು ಆಶ್ರಯಿಸದೆ ಬದುಕಬೇಕು ಎಂಬ ಅರ್ಥದಲ್ಲಿ ಹೇಳುವ ವಿಷಯವಲ್ಲ. ಮತ್ತೇನು ಹಾಗಾದರೆ? ಸ್ವತಂತ್ರವಾದ ಜೀವನ ಇರಬೇಕು ಎಂದರ್ಥ. ಅಂದರೆ ತನ್ನ ಪರಿಶ್ರಮದಿಂದ ಕಟ್ಟಿಕೊಂಡ ವಿದ್ಯೆ ಸಂಪತ್ತು ಸಾಮರ್ಥ್ಯ ಇವುಗಳ ಮೇಲೆ ಬದುಕನ್ನು ಸಾಗಿಸುವಂಥಾದರೆ ಅದುವೇ ನಿಜವಾಗಿ ಸ್ವಾತಂತ್ರ್ಯ ಎಂದಾಗುತ್ತದೆ. ಅಂತಹ ಸ್ವತಂತ್ರವಾದ ಬದುಕು ಹೇಗಿರಲು ಸಾಧ್ಯ? ಎಂಬುದಕ್ಕೆ ಕಾಳಿದಾಸನು ರಘುವಂಶ ಮಹಾರಾಜರ ಜೀವನವಿಧಾನವನ್ನು ದೃಷ್ಟಾಂತವಾಗಿ ತಿಳಿತ್ತಾನೆ - ಬಾಲ್ಯದಲ್ಲಿ ಚೆನ್ನಾಗಿ ವಿದ್ಯೆಯನ್ನು ಗಳಿಸಬೇಕು; ಇದರ ಬಲದ ಮೇಲೆ ಗೃಹಸ್ಥಜೀವನದಲ್ಲಿ ವಿಷಯದ ಉಪಭೋಗ; ವಿದ್ಯೆ ಮತ್ತು ಉಪಭೋಗದ ಆಧಾರದ ಮೇಲೆ ಬದುಕಿನ ಚರಮಸ್ಥಿತಿಯಾದ ಯೋಗಮಯಜೀವನ. ಈ ಕ್ರಮದಲ್ಲಿ ಜೀವನ ನಡೆಸುವಂತಿದ್ದರೆ ಅದು ನಿಜವಾಗಿ ಸ್ವತಂತ್ರವಾದ ಜೀವನ. ಇದಕ್ಕೆ ಹೊರತಾಗಿದ್ದು ಪರತಂತ್ರ. ಯಾವಾಗ ತನ್ನ ಪರಿಶ್ರಮದಿಂದ ವಿದ್ಯೆ, ಸಂಪತ್ತು, ಸಾಮರ್ಥ್ಯ ಇವುಗಳನ್ನು ಗಳಿಸಿಕೊಳ್ಳುವುದಿಲ್ಲವೋ ಆಗ ಅವನು ಪರಾವಲಂಬಿಯಾಗಿಯೇ ಜೀವಿಸಬೇಕಾಗುತ್ತದೆ. ಜೀವಿಕೆಗೆ ಒಂದಷ್ಟು ವಸ್ತುಗಳು ಬೇಕು. ಅದನ್ನು ಖರೀದಿಸಲು ಅವನಲ್ಲಿ ಕಾಸು ಇಲ್ಲದಾದಾಗ ಬೇರೆಯವರಲ್ಲೇ ಅದನ್ನು ಕೇಳಬೇಕಾಗುತ್ತದೆ. ಇದುತಾನೆ ಪರಾವಲಂಬನೆ. ಮತ್ತು ವಿದ್ಯೆ ಗಳಿಸಲಿದ್ದರೆ ಅಂದರೆ ಅರಿವನ್ನು ಪಡೆಯದಿದ್ದರೆ ಮತ್ತೊಬ್ಬರಿಂದಲೇ ತಿಳಿಯುವ ಪಾರತಂತ್ರ್ಯ ನಮ್ಮದಾಗುತ್ತದೆ. ಅದರಿಂದ ನಾವು ಮೋಸ ಹೋಗುವ ಸಾಧ್ಯತೆ ಇರುತ್ತದೆ. ಇದರ ಫಲ ದುಃಖವಷ್ಟೇ. ದುಃಖವೇ ನರಕ; ಸುಖವೇ ಸ್ವರ್ಗ. ಆದ್ದರಿಂದ ಸಾಮರ್ಥ್ಯವನ್ನು ಗಳಿಸದಿದ್ದರೆ ಆಗ ನಾವು ಇನ್ನೊಬ್ಬರನ್ನು ಆಶ್ರಯಿಸುವುದು ಅತ್ಯಂತ ಅನಿವಾರ್ಯ. ಸಾಮರ್ಥ್ಯವನ್ನು ಗಳಿಸಿಕೊಂಡಾಗ ಇನ್ನೊಬ್ಬರನ್ನು ಆಶ್ರಯಿಸುವುದು ಕಡಿಮೆಯಾಗುತ್ತದೆ. ಸಾಮರ್ಥ್ಯ ಎಂದರೆ ದೈಹಿಕ, ವಾಚಿಕ ಮತ್ತು ಮಾನಸಿಕವಾದ ದೃಢತೆ. ಇವುಗಳು ಇಲ್ಲದಿದ್ದಾಗ ನಾವು ಬೇರೆಯವರನ್ನು ಆಶಯಿಸುವುದು ಅತ್ಯಂತ ಅನಿವಾರ್ಯವಾಗುತ್ತದೆ. ಆಗ ಬೇರೆಯವರು ಹೇಳಿದಂತೆ ನಡೆದುಕೊಳ್ಳುತ್ತಾ ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಮುಂದೆ ನರಕಯಾತನೇಯನ್ನೇ ಅನುಭವಿಸಬೇಕಾಗುತ್ತದೆ. ನರಕದಲ್ಲಿ ಅನುಭವಿಸುವಷ್ಟೇ ಯಾತನೆಯನ್ನು ನಾವು ಅನುಭವಿಸುತ್ತಾ ಅನುಭವಿಸುತ್ತಾ ಜೀವಿಸಬೇಕಾಗುತ್ತದೆ. ಹಾಗಾಗಿ ಇವು ಇಲ್ಲದಿರುವಿಕೆಯೇ ವಸ್ತುತಃ ಸ್ವಾತಂತ್ರ್ಯ. ಹಾಗಾಗಿ ಇವುಗಳನ್ನು ನಾವು ಪರಿಶ್ರಮದಿಂದ ಸಂಪಾದಿಸಿಕೊಳ್ಳೋಣ ಎಂಬುದು ಇದರ ತಾತ್ಪರ್ಯವಾಗಿದೆ.
ಸೂಚನೆ : 3/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.