Monday, August 11, 2025

ಪ್ರಜೆಗಳಿಗೆ ಏನೇನನ್ನು ತಿಳಿಸುತ್ತಿರಬೇಕು/ಬಾರದು? 149 (Vyaasa Vikshita 149)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಅಲ್ಲದೆ, ಕರ್ತವ್ಯವಾದ ಕಾರ್ಯಗಳನ್ನು ಕ್ಷಿಪ್ರವಾಗಿ ಆರಂಭಿಸಬೇಕು. ಜೊತೆಗೆ ಒಮ್ಮೆ ಆರಂಭವಾದ ಕಾರ್ಯಕ್ಕೆ ವಿಘ್ನಗಳನ್ನು ನಾವೇ ಒಡ್ಡಿಕೊಳ್ಳುವಂತಿರಬಾರದು. ನೀನು ಈ ಬಗ್ಗೆಯೆಲ್ಲಾ ಎಚ್ಚರವಾಗಿರುವೆ ತಾನೆ?


ಕೃಷಿಕರು, ಕಾರ್ಮಿಕರು ಮುಂತಾದವರು ನಿನ್ನ ಬಳಿ ಸುಳಿಯಲು ಧೈರ್ಯವಿಲ್ಲದೆ ದೂರವುಳಿದುಕೊಂಡುಬಿಟ್ಟಿಲ್ಲ ತಾನೆ? ಎಲ್ಲರೂ ನಿನ್ನೊಂದಿಗೆ ಸಹಭಾವವುಳ್ಳವರಷ್ಟೆ? ಏಕೆಂದರೆ ಎಲ್ಲರೊಂದಿಗಿನ ಸಂಸರ್ಗವೇ ಪ್ರಗತಿಗೆ ಕಾರಣವಾಗತಕ್ಕದ್ದು.

ನಂಬುಗೆಗೆ ಯೋಗ್ಯರಾದವರು ಹಾಗೂ ಲೋಭವಿಲ್ಲದವರು ಮತ್ತು ಕ್ರಮಬದ್ಧವಾಗಿ ಮಾಡತಕ್ಕವರು - ಇಂತಹವರ ಮೂಲಕ ಕೆಲಸಗಳನ್ನು ಮಾಡಿಸುತ್ತಿರುವೆಯಲ್ಲವೇ?

ಕೆಲಸಗಳು ಎರಡು ಬಗೆ. ಕೃತವಾದವು, ಎಂದರೆ ಮಾಡಿಮುಗಿಸಿರುವಂತಹವು, ಮತ್ತು ಕೃತಪ್ರಾಯವಾದವು, ಎಂದರೆ ಇನ್ನೇನು ಮುಗಿಯಲಿರುವಂತಹ ಕ್ರಿಯೆಗಳು. ಇವುಗಳೆಲ್ಲವೂ ಪ್ರಜೆಗಳ ಗಮನಕ್ಕೆ ಬರುತ್ತಿರಬೇಕು. ಇನ್ನು ನೀನು ಇನ್ನೂ ಸಾಧಿಸಲಾಗಿಲ್ಲದವು ಅವರ ಗಮನಕ್ಕೆ ಬರಬಾರದು. (ರಾಜನು ಮಾಡುತ್ತಿರುವ ಸತ್ಕಾರ್ಯಗಳ ಬಗ್ಗೆ ಪ್ರಜೆಗಳಿಗೆ ಆಗಾಗ್ಗೆ ಅರಿವನ್ನು ಉಂಟುಮಾಡುತ್ತಿರಬೇಕು. ಆಗಲೇ ಪ್ರಜೆಗಳಿಗೆ ರಾಜನ ವಿಷಯದಲ್ಲಿ ಅಭಿಮಾನ ಮೂಡುವುದು. ಇವುಗಳ ಬದಲಾಗಿ, ಇನ್ನೂ ಪೂರೈಸದ ಅಥವಾ ಇನ್ನೂ ಆರಂಭಿಸಿಲ್ಲದ ಕೃತ್ಯಗಳೇ ಅವರ ಗಮನಕ್ಕೆ ಬರುತ್ತಿದ್ದಲ್ಲಿ, ಅರಸನ ಕುರಿತಾದ ಆದರವು ಕಡಿಮೆಯಾಗುವುದು). ಹಾಗೆಯೇ ಆಗುತ್ತಿದೆ ತಾನೆ?

ನಾನಾಶಾಸ್ತ್ರಗಳಲ್ಲಿ ಕೋವಿದರಾದ ಶಿಕ್ಷಕರು ಧರ್ಮ-ಮರ್ಮಜ್ಞರಾಗಿ ಧರ್ಮವನ್ನು ಬೋಧಿಸುವರಷ್ಟೆ? (ಎಂದರೆ, ಕಾರ್ಯಕಾರಣ-ಬದ್ಧವಾಗಿ ಧರ್ಮವನ್ನು ಅರಿಯುವಂತೆ ಮಾಡುತ್ತಿದ್ದಾರಷ್ಟೆ? ಧರ್ಮ-ಬೋಧನವೆಂಬುದು ಬರೀ ಮಾಡಬೇಕು-ಬಾರದುಗಳ ಪಟ್ಟಿಯಾಗಿಬಿಟ್ಟರೆ ಅದು ನೀರಸವಾಗಿಬಿಡುವುದು. ಅದರ ಬಗ್ಗೆ ಆಸ್ಥೆಯು ಕಡಿಮೆಯಾಗಿಬಿಡುವುದು. ಮಾಡಬೇಕು-ಬೇಡಗಳ ಹಿಂದಿರುವ ಕಾರಣಗಳ ಅರಿವು ಬರುವಂತಿರಬೇಕು.  ಇಲ್ಲದಿದ್ದರೆ ಅವುಗಳ ತರ್ಕಬದ್ಧತೆಯು ಗೋಚರಿಸದು. ಅಲ್ಲದೆ, ಇದು ರಾಜಕುಮಾರರ ಹಾಗೂ ಪ್ರಧಾನ-ಯೋಧರ ವಿಷಯಕ್ಕಂತೂ ಬಹುಮುಖ್ಯವಾಗಿ ಅನ್ವಯಿಸುವಂತಹುದು. ಸೈನಿಕರ ಸಭೆಯೊಂದರಲ್ಲಿ ಯುದ್ಧವು ಕೆಟ್ಟದ್ದೆಂದೂ ಶಾಂತಿಯೇ ಮುಖ್ಯವೆಂದೂ ಭಾಷಣ ಮಾಡಿದ ರಾಜಕೀಯವ್ಯಕ್ತಿಯ ಬಗ್ಗೆ ಗುರೂಜಿ ಗೋಳವಲಕರರರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಪ್ರತಿಯೊಬ್ಬರಿಗೂ ಸ್ವಧರ್ಮದ ಪರಿಜ್ಞಾನದ ಅರಿವು ಮೂಡುವಂತಿರಬೇಕು).

ಪ್ರತಿಯೊಬ್ಬರಿಗೂ ಅರ್ಥಕೃಚ್ಛ್ರಗಳು ಬರುವುವು. ಎಂದರೆ ಈಗ ಯಾವ ಗುರಿಸಾಧಿಸಲು ಕೆಲಸಮಾಡಬೇಕು? - ಎಂಬ ಬಗ್ಗೆ ನಿಶ್ಚಯವೇ ಉಂಟಾಗದಿರುವುದು ಎಂದರ್ಥ. ಅಂತಹ ಸಂದರ್ಭಗಳಲ್ಲಿ, ಯಾವುದು ಅತ್ಯಂತಶ್ರೇಯಸ್ಕರವೋ ಅದನ್ನು ಪಂಡಿತನಾದವನೇ ಸಾಧಿಸತಕ್ಕವನು; ಪಂಡಿತನೆಂದರೆ ಆ ವಿಷಯವನ್ನು ಚೆನ್ನಾಗಿ ಬಲ್ಲವನೇ. ಹಾಗಿರುವುದರಿಂದ ಸಾವಿರ ಮೂರ್ಖರನ್ನು ತೊರೆದಾದರೂ ಒಬ್ಬ ಪಂಡಿತನನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಹಾಗಿರುವುದರಿಂದ, ಬಲ್ಲವರನ್ನೇ ನೀನು ಮಾರ್ಗದರ್ಶಕರನ್ನಾಗಿ ಇಟ್ಟುಕೊಂಡಿರುವೆಯಲ್ಲವೆ?

ಸರಿಯಾದ ಕೋಟೆಕೊತ್ತಲಗಳೆಂದರೆ ಧನ-ಧಾನ್ಯ-ಆಯುಧ-ಜಲ ಹಾಗೂ ಯಂತ್ರಗಳು - ಇವುಗಳಿಂದ ಪರಿಪೂರ್ಣವಾಗಿರಬೇಕು. ಜೊತೆಗೆ ಶಿಲ್ಪಿಗಳೂ ಹಾಗೂ ಧನುರ್ಧರರೂ, ಎಂದರೆ ಬಿಲ್ವಿದ್ಯೆಯಲ್ಲಿ ಪಳಗಿದವರೂ, ಇರತಕ್ಕದ್ದು. ನಿನ್ನ ದುರ್ಗಗಳೆಲ್ಲವೂ ಹಾಗಿವೆ ತಾನೆ?

ಮೇಧಾವಿಯೂ ಶೂರನೂ ಸಂಯಮವುಳ್ಳವನೂ ಚತುರನೂ ಆಗಿರುವ ಮಂತ್ರಿಯು ಒಬ್ಬನೇ ಇದ್ದರೂ ಸಾಕು; ರಾಜನಿಗೂ ರಾಜಕುಮಾರನಿಗೂ ಮಹತ್ತಾದ ಸಂಪತ್ತು ಬಂದು ಸೇರುವಂತೆ ಅಂತಹವನು ಮಾಡಬಲ್ಲನು. ಇದು ನಿನಗೆ ತಿಳಿದಿರಲಿ.
ಯುಧಿಷ್ಠಿರಾ, ಶತ್ರುಪಕ್ಷದ ಹದಿನೆಂಟು ಮಂದಿಯ ಮೇಲೂ, ಸ್ವಪಕ್ಷದ ಹದಿನೈದು ಮಂದಿಯಮೇಲೂ ರಾಜನು ಕಣ್ಣಿಟ್ಟಿರತಕ್ಕದ್ದು. ಅವರು ಯಾರಾರೆಂದು ಹೇಳುವೆ, ಕೇಳು.

ಸೂಚನೆ : 10/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.