Wednesday, August 20, 2025

ಕೃಷ್ಣಕರ್ಣಾಮೃತ 74 ಎಂತು ಕಳೆಯಲಿ ಕೃಷ್ಣನನ್ನು ಕಾಣದ ದಿನಗಳನ್ನು? (Krishakarnamrta 74)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಕೃಷ್ಣನನ್ನು ಕಾಣಬೇಕೆಂಬ ಹಂಬಲವು ತೀವ್ರವಾದಾಗ ಉಂಟಾಗುವ ವೇದನೆಯನ್ನು ಹೇಳುವುದು ಸುಲಭವಲ್ಲ. ಎಂದೇ ಆತನನ್ನೇ ಕೇಳಿಕೊಳ್ಳುವುದಾಗುತ್ತದೆ: ಅಯ್ಯೋ ಹೇಗಪ್ಪಾ ಕಳೆಯಲಿ ಈ ದಿನಗಳನ್ನು? - ಎಂದು. 

ನನ್ನ ಈ ದಿನಗಳು ಅಧನ್ಯವಾಗಿವೆ. ನಿನ್ನ ದರ್ಶನವೆಂಬುದಿಲ್ಲದೆ ಹೇಗೆ ಕಳೆಯಲಪ್ಪಾ ಇವನ್ನು?

ಗೋಪಿಕೆಯರಿಗೆ ಶ್ರೀಕೃಷ್ಣನು ಅತ್ಯಂತ ಪ್ರೀತಿಪಾತ್ರನಾದವನು. ಅವನಿಲ್ಲದ ಒಂದೊಂದು ಕ್ಷಣವೂ ಅವರಿಗೆ ಒಂದೊಂದು ಯುಗದಂತೆ ಭಾಸವಾಗುತ್ತಿತ್ತಂತೆ! 

ನಮ್ಮ ಸುಖ-ದುಃಖಗಳನ್ನು ವಿಚಾರಿಸುವ ಹಿರಿಯರು ಯಾರಾದರೂ ಇರಬೇಕು. ಅಂತಹವರು ಯಾರೂ ಇಲ್ಲದಿರುವವರನ್ನೇ ಅನಾಥರೆನ್ನುವುದು. ಹಾಗಿರುವವ ರಿಗೆಲ್ಲ ಕೃಷ್ಣನೇ ಬಂಧು.ಕೃಷ್ಣನೇಕೆ ಅನಾಥಬಂಧುವಾಗಿದ್ದಾನೆ? ಏಕೆಂದರೆ ಆತನು ಕರುಣಾಸಮುದ್ರನಲ್ಲವೇ?

ವಿರಹವೇದನೆಯು ಉತ್ಕಟವಾದಾಗ ಕಾಲಕಳೆಯುವುದೇ ಕಡುಕಷ್ಟ! ದಿನಗಳೆರಡರ ನಡುವಣ ಭಾಗವೆಂದರೆ ರಾತ್ರಿಯೇ ಸರಿ. ದಿನಗಳು ಹೇಗೋ ಕಳೆದುಹೋಗುತ್ತವೆ - ಏನೇನೋ ಕೆಲಸಗಳಲ್ಲಿ. ಆದರೆ ರಾತ್ರಿಗಳನ್ನು ಕಳೆಯುವುದೇ ಕಷ್ಟ. ಎಲ್ಲರೂ ನಿದ್ರಿಸುತ್ತಿರಲು ತನಗೆ ನಿದ್ರೆ ಬಾರದೆ, ಕೃಷ್ಣನಿಗಾಗಿ ಹಂಬಲಿಸುವುದಷ್ಟೇ ಆಗು(ತ್ತಿರು)ವುದು! ಹೀಗಿರಲು ಆ ಕಾಲವನ್ನು ನಾನು ಹೇಗೆ ಕಳೆಯಲೆಂಬುದನ್ನು ನೀನೇ ಹೇಳಬೇಕು.

ಹಾ, ಹಂತ - ಎಂಬ ಸಂಸ್ಕೃತ-ಪದಗಳು ಖೇದ-ವಿಷಾದಗಳನ್ನು ತಿಳಿಸುತ್ತವೆ. ದುಃಖವು ತೀವ್ರವಾದಾಗ ಆ ಪದಗಳನ್ನೇ ಎರಡೆರಡು ಬಾರಿ ಹೇಳುವುದು.  

ನಮ್ಮ ಚಿತ್ತವನ್ನು ಅಪಹರಿಸಿರುವ ನೀನೇ ನಮ್ಮ ಚಿತ್ತದ ನೋವನ್ನು ಪರಿಹರಿಸಬೇಕು – ಎಂಬ ಭಾವ. ಶ್ಲೋಕ ಹೀಗಿದೆ:

ಅಮೂನ್ಯಧನ್ಯಾನಿ ದಿನಾಂತರಾಣಿ/

ಹರೇ ತ್ವದಾಲೋಕನಂ ಅಂತರೇಣ |

ಅನಾಥ-ಬಂಧೋ! ಕರುಣೈಕ-ಸಿಂಧೋ!/

ಹಾ ಹಂತ ಹಾ ಹಂತ! ಕಥಂ ನಯಾಮಿ? ||

 ***

ಗೋಪಿಕೆಯೊಬ್ಬಳ ಹೃದಯವೇದನೆಯನ್ನು ಕವಿಯು ಬಿಂಬಿಸುತ್ತಾನೆ. "ಏನು ಮಾಡೋಣ, ಯಾರಲ್ಲಿ ಹೇಳಿಕೊಳ್ಳೋಣ? ಸಾಕೀ ಆಸೆ. ಕೃಷ್ಣನನ್ನು ಬಿಟ್ಟು ಬೇರಿನ್ನಾವುದಾದರೂ ಮಾತನ್ನಾಡಿ" ಎಂದು ಹಲುಬುತ್ತಿದ್ದಾಳೆ, ಆಕೆ. 

ಎಂತಹ ಆಸೆಯನ್ನಿಟ್ಟುಕೊಳ್ಳಬೇಕು? ಇಂದೋ ನಾಳೆಯೋ ತೀರುವಂತಹುದನ್ನು. ಆದರೆ ಕೃಷ್ಣನನ್ನು ಪಡೆಯಬೇಕೆಂಬ ಆಸೆ ಈಡೇರುವುದೋ ಇಲ್ಲವೋ ಬಲ್ಲೆವೇ? 

ಕೃಷ್ಣನ ಕಥೆ ಬೇಡವೆನ್ನುತ್ತಲೂ, ಮತ್ತೆ ಕೃಷ್ಣನತ್ತಲೇ ಆಕರ್ಷಣೆ! ಈ ಕೃಷ್ಣನು ನನ್ನ ಹೃದಯದಲ್ಲೇ ಹುದುಗಿರುವನು! ಆತನ ಆಕಾರವದೆಂತಹುದು! ಮುಗುಳ್ನಗೆಯಿಂದ ಕೂಡಿರುವುದು. ಎಂದೇ ಮಧುರಮಧುರವಾಗಿರುವಂತಹುದು! ಎಂದರೆ  ಅತಿಶಯಿತವಾಗಿ ಮಧುರವಾಗಿರುವುದು. 

ಹೀಗೆ ಕಂಗೊಳಿಸುವ ಕೃಷ್ಣನು ಮನೋನಯನೋತ್ಸವನಾಗಿರುವನು. ಎಂದರೆ ಮನಸ್ಸಿಗೂ ಹಬ್ಬ, ಕಣ್ಣುಗಳಿಗೂ ಹಬ್ಬವಾಗಿರುವನು.ಅಂತಹ ಕೃಷ್ಣನಲ್ಲಿಯೇ ನನ್ನ ಮನಸ್ಸು ಅಂಟಿಕೊಳ್ಳುತ್ತಿದೆ. ಎಂದರೆ ಅದನ್ನೆನ್ನ ಮನಸ್ಸಿನಿಂದ ದೂಡಲಾಗದು. ನನ್ನ ಹಂಬಲಿಕೆಯೋ ಎಷ್ಟು ಉತ್ಕಟವೆಂದರೆ ಎಷ್ಟು ಕೊಟ್ಟರೂ  ಮತ್ತೂ ಬೇಕೆನಿಸುತ್ತಿರುವಂತಹುದು. 

ಸಿಗದವನು ಅವನು - ಎಂದು ಲೆಕ್ಕ ಹಾಕಿ ಮನಸ್ಸಿನಿಂದ ದೂಡಬೇಕೆಂದುಕೊಂಡರೂ, ಆತನು ಕಣ್ಣಿಗೆ ಕಟ್ಟಿದ್ದಾನೆ, ಮನಸಿಗೆ ಗಂಟುಬಿದ್ದಿದ್ದಾನೆ!

ಕಿಮಿಹ ಶೃಣುಮಃ, ಕಸ್ಯ ಬ್ರೂಮಃ, ಕಥಂ ಕೃತಮಾಶಯಾ /

ಕಥಯತ ಕಥಾಮನ್ಯಾಂ ಧನ್ಯಾಂ ಅಹೋ  ಹೃದಯೇಶಯಃ |

ಮಧುರ-ಮಧುರ-ಸ್ಮೇರಾಕಾರೇ ಮನೋ-ನಯನೋತ್ಸವೇ /

ಕೃಪಣ-ಕೃಪಣಾ ತೃಷ್ಣಾ ಕೃಷ್ಣೇ ಚಿರಂ ಬತ ಲಂಬತೇ ||

***

ಕೃಷ್ಣಾ, ನೀನದೆಂದು ನನ್ನ ಕಣ್ಗಳಿಗೆ ಕಾಣಿಸಿಕೊಳ್ಳುವೆ? - ಎಂದಿಲ್ಲಿ ಕೇಳಿದೆ. ಕೃಷ್ಣನನ್ನು ಎಂಟು ಪದಗಳಿಂದ ವಿಶೇಷಿಸಿದೆ. ಪ್ರತಿಯೊಂದಕ್ಕೂ ಒಂದು ವಿಶೇಷವಾದ ಅರ್ಥವಿದೆ. 'ಹೇ' ಎಂಬ ಸಂಬೋಧನೆಯು ಒಂಭತ್ತು ಬಾರಿ ಬಂದಿದೆ.

ಹೇ ದೇವ! ಎಂಬುದೇ ಮೊದಲನೆಯ ಸಂಬೋಧನೆ. ಯಾರು ದೇವನೆಂದರೆ? ಯಾವನು ಹೊಳೆಯುವನೋ ಅವನೇ ದೇವ. ದೇವತೆಗಳೆಲ್ಲರೂ ತೇಜೋವಿಶೇಷದಿಂದ ಕೂಡಿರುವವರು. ಆಡುವವನು - ಎಂಬ ಅರ್ಥವೂ ಯುಕ್ತವೇ. ಕ್ರೀಡಾಪರನಾಗಿರುವ ಲಕ್ಷಣವೂ ಕೃಷ್ಣನಿಗೆ ಸಲ್ಲುತ್ತದೆ. ಸಂತೋಷಪಡುವುದೂ ದೇವತೆಗಳ ಒಂದು ಲಕ್ಷಣ. ದೇವತೆಗಳಿಗಾಗುವ ಸಂತೋಷದ ಮಟ್ಟವೇ ಸಾಕಷ್ಟು ಹಿರಿದೆಂಬ ಲೆಕ್ಕವಿದೆ. ಮಾನುಷಾನಂದಕ್ಕೂ ಮಿಗಿಲಾದುದಲ್ಲವೇ ದೇವಾನಂದ?

ದೇವ - ಎನ್ನುವುದು ಸಂಸ್ಕೃತಪದ. ಸಂಸ್ಕೃತಪದಗಳು ಧಾತುಗಳಿಂದ ನಿಷ್ಪನ್ನವಾಗತಕ್ಕವು. ಧಾತುಗಳಿಗೆ ನಾನಾರ್ಥಗಳು ಇರುವುದುಂಟು. ತದನುಸಾರ ನಾಮಪದಗಳಿಗೂ ಹಲವು ಅರ್ಥಗಳು ಸಂಭವಿಸುವುವು. ಹೀಗಾಗಿ ಕಾಂತ್ಯರ್ಥ-ಕ್ರೀಡಾರ್ಥ-ಮೋದಾರ್ಥಗಳು ವಿಶೇಷವಾಗಿ ಕೃಷ್ಣನಿಗೆ ಅನ್ವಯಿಸುವುವು. 

ಹೇ ದಯಿತ! ಎಂದೂ ಕರೆದಿದೆ. ದಯಿತನೆಂದರೆ ಅತಿ ಪ್ರಿಯ ಎಂದರ್ಥ. ದಯೆತೋರುವವನು ಎಂಬರ್ಥವೂ ಆಗಬಹುದು. 

ಇನ್ನು ಆತನು ಭುವನೈಕಬಂಧು. ಬಂಧುವೆಂದರೆ ಹಿತಕಾರಿ. ಸಾಮಾನ್ಯವಾಗಿ ನಮಗೆಲ್ಲ ಮೊಟ್ಟ ಮೊದಲ ಬಂಧುಗಳೆಂದರೆ ಅಮ್ಮ-ಅಪ್ಪ. ಅಣ್ಣತಮ್ಮಂದಿರೂ ಅಕ್ಕತಂಗಿಯರೂ ಬಂಧುಗಳೇ; ಬೇರೆಯವರೂ ಉಂಟು. ಭಗವಂತನನ್ನು "ತ್ವಮೇವ ಮಾತಾ ಚ ಪಿತಾ ತ್ವಮೇವ" ಎನ್ನುವಲ್ಲಿ, ಆತನಲ್ಲಿಯ ತಾಯ್ತನ-ತಂದೆತನಗಳು ವ್ಯಕ್ತವಾಗುತ್ತವೆ. ಲೌಕಿಕಜೀವನದಲ್ಲಿ ಅಪ್ಪಅಮ್ಮಂದಿರೇ ಕೆಲವೊಮ್ಮೆ ದಯಾಹೀನರಾಗಿ ವರ್ತಿಸುವುದೂ ಇಲ್ಲದಿಲ್ಲ. ಆದರೆ ನಿಜವಾದ ಬಂಧುವೆಂದರೆ ಮೂರು ಲೋಕಗಳಲ್ಲಿಯೂ ಈತನೊಬ್ಬನೇ. ಇವನನ್ನೇ ನೆಚ್ಚಬಹುದಾದುದು.

ಕೃಷ್ಣ ಎಂಬುದನ್ನು ಸಹ ವಿಶೇಷಣವೆಂದೇ ಪರಿಗಣಿಸಬಹುದು. ಯಾರು ಎಲ್ಲರನ್ನೂ ಆಕರ್ಷಿಸುವನೋ ಆತನೇ ಕೃಷ್ಣ. ಇದು "ಕೃಷ್ಣ"ಪದದ ಧಾತುವಿನಿಂದಲೂ ಗೊತ್ತಾಗುತ್ತದೆ. ಕೃಷ್ಣನ ಕಥೆಯಿಂದಲೂ ಗೊತ್ತಾಗುತ್ತದೆ. 

ಕೃಷ್ಣನನ್ನು ಚಪಲ ಎಂದು ಪ್ರೀತಿಯ ಬೈಗುಳವಾಗಿಯೂ ಹೇಳಬಹುದು. ನನ್ನನ್ನು ಬಿಟ್ಟು ಬೇರೆಯವರೊಂದಿಗೂ ಸೇರುವೆಯೆಲ್ಲಾ? - ಎಂಬ ಅಸೂಯೆ ಇಂತಹ ಮಾತನ್ನು ಬರಿಸುತ್ತದೆ.  

ಇವಕ್ಕೂ ಮಿಗಿಲಾದುದು ಆತನು ಕರುಣೈಕಸಿಂಧುವೆಂಬುದು. ಆತನು ಕೃಪಾಸಾಗರ. ಆತನಲ್ಲಿ ಆಗೊಮ್ಮೆ ಈಗೊಮ್ಮೆ ಬೇರೆ ಭಾವಗಳು ಕಂಡರೂ, ಅವೆಲ್ಲದರ ಹಿಂದೆ ಆಡುವುದು ಆತನ ದಯೆಯೊಂದೇ. ಆಳವಾಗಿ ನೋಡಿದರಷ್ಟೆ ಇದು ಗೊತ್ತಾಗುವುದು.

ಲೋಕದಲ್ಲಿ ದಯಾಮಯರು ಎಷ್ಟೋ ಮಂದಿ ಇರಬಹುದು. ದಯೆಯ ಜೊತೆಗೆ ಸಾಮರ್ಥ್ಯವಿಲ್ಲದಿದ್ದರೆ ಪ್ರಯೋಜನವೇನು? ಕೃಷ್ಣನೋ ತ್ರಿಲೋಕದೊಡೆಯ. ಎಂದೇ ಸರ್ವಸಮರ್ಥ. ಅಂತಹವನ ದಯೆಗೇ ಬೆಲೆ. 

ಇನ್ನು ನಾಥ ಎಂದರೆ ಪ್ರಭು ಎಂದರ್ಥ. ತನ್ನ ಅಧೀನದಲ್ಲಿರುವವರ ಬಗ್ಗೆ ಸದಾ ಕಾಳಜಿ ವಹಿಸಿ ಅವರ ಬೇಡಿಕೆ-ಅಪೇಕ್ಷೆಗಳನ್ನು ತುಂಬಿಸಿಕೊಡುವವನನ್ನೇ ನಾಥನೆನ್ನುವುದು. ಕೃಷ್ಣನು ಅಂತಹವನೇ.

ರಮಣನೆಂದರೆ ಚಿತ್ತಕ್ಕೆ ಆನಂದವನ್ನು ಉಂಟುಮಾಡುವವನು. ಆತನೇಕೆ ರಮಣ? ಆತನು ನಯನಾಭಿರಾಮನಾದ್ದರಿಂದಲೇ. ಹಾಗೆಂದರೆ ನಯನಗಳಿಗೆ ನಲಿವನ್ನು ಉಂಟಮಾಡತಕ್ಕವನು.

ಹಾ! ಹಾ! ಎಂದು ಕೊನೆಯಲ್ಲಿ ಎರಡು ಬಾರಿ ಹೇಳಿರುವುದು ಅತಿಖೇದವನ್ನು ಸೂಚಿಸುತ್ತದೆ: ಕೃಷ್ಣನು ಕಣ್ಣುಗಳಿಗೆ ಕಾಣಬೇಕು. ಅಲ್ಲಿಯ ತನಕ ಮನಸ್ಸಿಗೆ ನೆಮ್ಮದಿಯಿಲ್ಲ, ತುಡಿತಕ್ಕೆ ನಿಲುಗಡೆಯಿಲ್ಲ, ಮೊರೆಗೆ ಮುಗಿತಾಯವಿಲ್ಲ. 

ಎಂದೇ ಅದಕ್ಕಾಗಿಯೇ ಇಲ್ಲಿ ಹಂಬಲಿಸಿದೆ:

ಹೇ ದೇವ ಹೇ ದಯಿತ ಹೇ ಭುವನೈಕ-ಬಂಧೋ/

ಹೇ ಕೃಷ್ಣ ಹೇ ಚಪಲ ಹೇ ಕರುಣೈಕ-ಸಿಂಧೋ |

ಹೇ ನಾಥ ಹೇ ರಮಣ ಹೇ ನಯನಾಭಿರಾಮ/

ಹಾ ಹಾ ಕದಾ ನು ಭವಿತಾಸಿ ಪದಂ ದೃಶೋರ್ಮೇ? ||

ಸೂಚನೆ : 16/08/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.