ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೨೮. ಸುಖ ಯಾವುದು?
ಉತ್ತರ - ಎಲ್ಲದರಿಂದ ದೂರವಿರುವುದು.
ಈ ಪ್ರಶ್ನೆ ಬಹಳ ಉತ್ತಮವಾದದ್ದು. ಏಕೆಂದರೆ ಪ್ರತಿಯೊಂದು ಜೀವವು ಇದನ್ನೇ ಹುಡುಕುತ್ತಿರುತ್ತವೆ. ಮತ್ತು ಇದಕ್ಕಾಗಿ ನಿರಂತರ ಪ್ರಯತ್ನಶೀಲವಾಗಿರುತ್ತವೆ. ಯಾವಯಾವುದನ್ನೋ ಸುಖವೆಂದು ಭ್ರಮಿಸುತ್ತಿರುತ್ತವೆ. ಸುಖಕ್ಕಾಗಿ ಪದಾರ್ಥಗಳ ಸಂಗ್ರಹದಲ್ಲಿ ತೊಡಗಿರುತ್ತವೆ. ಬಯಸುವುದು ಸುಖವನ್ನೇ. ಸುಖ ಬೇಕು, ದುಃಖ ಬೇಡ ಎಂಬುದು ಪ್ರತಿಯೊಂದು ಜೀವವು ಬಯಸುವಂಥದ್ದು - "ಸುಖಂ ಮೇ ಭೂಯಾತ್, ದುಃಖಂ ಮನಾಗಪಿ ಮಾ ಭೂಯಾತ್" ಎಂದು. ಯಾರಿಗೆತಾನೇ ಸುಖ ಬೇಡ! ಸುಖಕ್ಕಾಗಿ ಬದುಕು; ಸುಖವೇ ಬದುಕಿನ ಸಾರ. ಸುಖಕ್ಕಾಗಿಯೇ ಸುಖದ ಸಾಧನಗಳು ಹಾಗು ಅವುಗಳನ್ನು ಅನ್ವೇಷಿಸುವ ಮನಸ್ಸು, ಹೇಗೆ? ಎಲ್ಲಿ? ಯಾವುದರಿಂದ ಸುಖ ಹೇಗೆ ಸಿಗುತ್ತದೆ? ಎಂಬ ಹುಡುಕಾಟವೇ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಆದರೆ ಇಂದಿಗೂ ಇದು ಬಹಳ ದೊಡ್ಡ ಪ್ರಶ್ನೆಯಾಗಿಯೇ ಕಾಡಿಸುತ್ತಿದೆ "ಸುಖ ಯಾವುದು?" ಎಂದು. ಯಾರಿಗೆ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆಯೋ, ಅವನು ಬದುಕಲ್ಲಿ ಜಯವನ್ನು ಪಡೆದ ಎಂದೇ ಅರ್ಥ. ಇದು ಅರ್ಥವಾಗುವುದೇ ಬಹಳ ಕಷ್ಟ. ಆದರೆ ಇಲ್ಲಿ ಬಹಳ ಸುಲಭವಾದ ಉತ್ತರವನ್ನು ಕೊಟ್ಟಂತೆ ಕಾಣುತ್ತದೆ. ಉತ್ತರ - "ಎಲ್ಲವನ್ನು ಬಿಡುವುದು" ಎಂಬುದಾಗಿ.
ಎಲ್ಲವನ್ನು ಬಿಡುವುದು ಹೇಗೆ ಸುಖವಾಗುತ್ತದೆ? ಆದರೆ ನಾವಂದು ಅಂದುಕೊಂಡಿದ್ದೇವೆ - ಸುಖ ಎಲ್ಲವನ್ನು ಪಡೆದಾಗ ಅಂತ. ಉದಾಹರಣೆಗೆ ಒಬ್ಬ ವ್ಯಕ್ತಿ ಬದುಕಬೇಕೆಂದರೆ ಅವನಿಗೆ ಆಹಾರ, ಮನೆ, ವಸ್ತು, ವಾಹನಗಳು ಹೀಗೆ ಇನ್ನೂ ಹತ್ತು ಹಲವು ಜೀವನಾವಶ್ಯಕ ಸಾಧನ ಸಲಕರಣೆಗಳು ಬೇಕು. ಇವುಗಳನ್ನು ಅಮಿತವಾಗಿ ಬಯಸುವುದನ್ನು ನಾವು ಕಾಣುತ್ತೇವೆ. ಒಂದು ಮನೆಯನ್ನು ಮಾಡಿದಮೇಲೆ, ಇನ್ನೊಂದು ಮನೆಯನ್ನು ಮಾಡಬೇಕೆಂಬ ಬಯಕೆ; ಏಕೆಂದರೆ ಮನೆಯಿಂದ ಸುಖ ಎಂಬ ಭಾವನೆ. ಒಂದು ವಾಹನವನ್ನು ಖರೀದಿಸಿದರೆ ಇನ್ನೊಂದು ವಾಹನ ಖರೀದಿಸುವ ಆಸೆ. ಏಕೆಂದರೆ ವಾಹನದಿಂದ ಸುಖ ಎಂಬ ಭಾವನೆ. ಸಾಧಾರಣವಾಹನವನ್ನು ಖರೀದಿಸಿದವನಿಗೆ ಇನ್ನೂ ಉನ್ನತಗುಣಮಟ್ಟದ ವಾಹನವನ್ನು ಬಳಸಬೇಕೆಂಬ ಬಯಕೆ. ಹೀಗೆ ಸುಖದ ಸಾಧನದ ಉತ್ಕೃಷ್ಟತೆಯನ್ನು ಹೆಚ್ಚಿಸುತ್ತಾ ಸಾಗುತ್ತೇವೆ. ಅಂದರೆ ಸುಖವು ಸಾಧನದಿಂದ ಸಿಗುತ್ತದೆ ಎಂಬ ಭ್ರಮೆಯಲ್ಲಿ ನಾವಿದ್ದಂತೆ ತೋರುತ್ತದೆ. ಆದರೆ ಇಲ್ಲಿನ ಉತ್ತರ ಇದಕ್ಕೆ ವಿರುದ್ಧವಾದದ್ದು. ಇದೇ ಉತ್ತರದಲ್ಲಿನ ಸೊಬಗು ಅಥವಾ ಆಳ. ಅಂದರೆ ಯಾವುದೇ ವಸ್ತುವಿನಿಂದ ಸುಖ ಸಿಗುವುದಿಲ್ಲ; ಎಲ್ಲದರಿಂದ ದೂರ ಇರುವುದರಿಂದಲೇ ಸುಖ ಸಿಗುತ್ತದೆ ಎಂಬುದಾಗಿ ತಿಳಿಸಲಾಗಿದೆ. ಎಷ್ಟೆಷ್ಟು ಸಾಧನಗಳು ನಮ್ಮ ಜೊತೆಯಲ್ಲಿ ಇರುತ್ತವೆಯೋ, ಅಷ್ಟಷ್ಟು ನಮಗೆ ದುಃಖಗಳು ಬರುತ್ತವೆ ಎಂಬುದು ನಮಗೆ ಅರ್ಥವಾಗಿಲ್ಲ. ವಾಸ್ತವವಾಗಿ ಎಲ್ಲವನ್ನು ಬಿಡುವುದೇ ಸುಖ. ಉದಾಹರಣೆಗೆ ನಿದ್ದೆ ಬರುವಾಗ ಯಾವೆಲ್ಲ ಸಾಧನೆಗಳು ಬೇಕಾಗಿದ್ದರೂ, ನಿದ್ದೆಗೆ ಜಾರಿದ ಮೇಲೆ ಆ ಯಾವ ಸಾಧನೆಗಳೂ ಅವಶ್ಯಕವಲ್ಲ. ನಿದ್ದೆಯೇ ಪರಮಸುಖ. ಆದ್ದರಿಂದ ನಿದ್ದೆಯಲ್ಲಿ ಯಾವ ವಸ್ತುವೂ ಬೇಕಾಗಿಲ್ಲ. ಆದ್ದರಿಂದಲೇ ಅದು ಸುಖ. ಇಂತಹ ಕೋಟಿ ಕೋಟಿ ಸುಖವನ್ನು ಪಡೆಯುವ ಆಸೆ ಮನುಷ್ಯನದ್ದು. ಅಂತಹ ಆಸೆ ಈಡೇರಬೇಕೆಂದರೆ ವಸ್ತುವಿನ ತ್ಯಾಗ, ತ್ಯಾಗಮಯ ಜೀವನ, ಕೊನೆಗೆ ಜೀವವನ್ನೇ ತ್ಯಜಿಸುವುದು, ಹೇಗೆ ತ್ಯಾಗದಿಂದಲೇ ಆತ್ಯಂತಿಕ ಸುಖ ಸಿಗುತ್ತದೆ ಎಂಬುದು ಈ ಪ್ರಶ್ನೋತ್ತರದ ಆಶಯವಾಗಿದೆ.