ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಯುಧಿಷ್ಠಿರನ ಸಭಾಗೃಹಪ್ರವೇಶಕ್ಕೆ ಋಷಿವರ್ಯರೂ ಗಣ್ಯಕ್ಷತ್ರಿಯರೂ ಭೂರಿ-ಸಂಖ್ಯೆಯಲ್ಲಿ ಬಂದಿದ್ದರಷ್ಟೆ? ಅವರೆಲ್ಲರ ಸತ್ಕಾರಗಳು, ಸಂತಸ-ಸಂಭ್ರಮಗಳೂ ಭವ್ಯವಾಗಿ ಕೂಡಿಕೊಂಡವಷ್ಟೆ? ಅದೆಲ್ಲ ಮುಗಿಯುವ ಹೊತ್ತಿಗೆ ಅಲ್ಲಿಗೆ ದೇವರ್ಷಿಗಳಾದ ನಾರದರು ಆಗಮಿಸಿದರು. ಅವರಿಗೆ ಅತ್ಯಾದರಪೂರ್ವಕವಾದ ಸತ್ಕಾರವೂ ಆಯಿತು, ಯುಧಿಷ್ಠಿರನಿಂದ.
ಆ ಸತ್ಕಾರದಿಂದ ಸಂತೋಷಗೊಂಡರು, ನಾರದಮಹರ್ಷಿಗಳು. ಉಳಿದ ಪಾಂಡವರೂ ಅವರನ್ನು ಆದರಿಸಿದರು. ವೇದಪಾರಂಗತರಾದ ಆ ಮಹರ್ಷಿಗಳು ಆಗ ಯುಧಿಷ್ಠಿರನನ್ನು ಹತ್ತಾರು ಪ್ರಶ್ನೆಗಳನ್ನು ಕೇಳಿದರು. ಅವೆಲ್ಲದರ ತಾತ್ಪರ್ಯ, "ರಾಜ್ಯಭಾರವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಿಯೆ ತಾನೆ?" – ಎಂಬುದೇ.
ಚೆನ್ನಾಗಿ ಎಂದರೇನು? – ಎಂಬುದನ್ನೇ ಅವರ ಪ್ರಶ್ನೆಗಳು ಸ್ಪಷ್ಟಪಡಿಸುತ್ತವೆ. ಅವರ ಪ್ರಶ್ನೆಗಳೆಲ್ಲವೂ ಹೆಚ್ಚುಕಡಿಮೆ ಇಂದಿಗೂ ಅನ್ವಯಿಸುತ್ತವೆ.
ನಾರದರು ಕೇಳಿದ ಪ್ರಶ್ನೆಗಳಿವು:
"ನಿನಗೆ ನಿನ್ನ ಕರ್ತವ್ಯಗಳನ್ನು ನಿರ್ವಹಿಸಲು ಎಷ್ಟು ಅವಶ್ಯವೋ ಅಷ್ಟು ಧನಸಂಪಾದನೆಯು ಆಗುತ್ತಿದೆಯಷ್ಟೆ?
ನಿನ್ನ ಮನಸ್ಸು ಧರ್ಮ(ಕಾರ್ಯ)ದಲ್ಲಿ ಸಂತೋಷಿಸುತ್ತದಷ್ಟೆ? ಸುಖಗಳನ್ನು ಅನುಭವಿಸುತ್ತಿರುವೆಯಷ್ಟೆ? ಮನಸ್ಸಿಗೆ ಯಾವುದೇ ಆಘಾತವಿಲ್ಲವಲ್ಲವೇ?
ಸಮಾಜದಲ್ಲಿಯ ಎಲ್ಲ ವರ್ಣಗಳ ಜನರನ್ನು ಕುರಿತಾಗಿಯೂ ನಿನ್ನ ಪೂರ್ವಿಕರು ಉದಾರವಾದ ನೀತಿಯನ್ನು ಪಾಲಿಸುತ್ತಿದ್ದರಲ್ಲಾ, ನೀನೂ ಅದನ್ನೇ ಅನುಸರಿಸುತ್ತಿದ್ದೀಯಷ್ಟೆ? ಪುರುಷಾರ್ಥಗಳಲ್ಲಿ ಅರ್ಥದಿಂದ ಧರ್ಮವನ್ನಾಗಲಿ, ಧರ್ಮದಿಂದ ಅರ್ಥವನ್ನಾಗಲಿ, ಬಹುಭೋಗ್ಯವೆನಿಸುವ ಕಾಮದಿಂದ ಇವೆರಡನ್ನಾಗಲಿ ಬಾಧಿಸುತ್ತಿಲ್ಲ ತಾನೆ? (ಎಂದರೆ ಒಂದಕ್ಕೆ ಪ್ರಾಧಾನ್ಯವನ್ನಿತ್ತು ಮತ್ತೊಂದನ್ನು ಅದು ಮೆಟ್ತುವಂತೆ ಆಗುತ್ತಿಲ್ಲ ತಾನೆ?) ಜಯಶಾಲಿಗಳಲ್ಲಿ ಶ್ರೇಷ್ಠನೂ, ವರಗಳನ್ನೂ ಕೊಡತಕ್ಕವನೂ ಆದ ನೀನು ಅರ್ಥ-ಧರ್ಮ-ಕಾಮಗಳಿಗೆ ಯಥೋಚಿತವಾದ ಸಮಯವನ್ನಿತ್ತು, ಕಾಲಜ್ಞನಾಗಿ ಅವು ಮೂರನ್ನೂ ಸೇವಿಸುತ್ತಿರುವೆಯಷ್ಟೆ?
ಅಲ್ಲದೇ, ರಾಜರಿಗೆ ಬೇಕಾದವು ಷಡ್ಗುಣಗಳು, ಸಪ್ತೋಪಾಯಗಳು, ಬಲಾಬಲಜ್ಞಾನ ಹಾಗೂ ಚತುರ್ದಶಪರೀಕ್ಷೆಗಳು.
(ಷಡ್ಗುಣಗಳೆಂದರೆ ಆರು ಗುಣಗಳು. ಅವಿವು - ವಕ್ತೃತ್ವ, ಎಂದರೆ ಯಾರೊಡನೆ ಎಂತಹ ಮಾತನ್ನಾಡಬೇಕೆಂಬ ಪರಿಜ್ಞಾನ; ಪ್ರಗಲ್ಭತೆ, ಎಂದರೆ ಶತ್ರುಗಳನ್ನು ಮೆಟ್ಟುವುದರಲ್ಲಿ ಪ್ರೌಢತೆ; ಮೇಧೆ ಎಂದರೆ ಯುಕ್ತಿಕೌಶಲ; ಸ್ಮೃತಿ, ಎಂದರೆ ಒಳ್ಳೆಯ ಸ್ಮರಣಶಕ್ತಿ; ನಯ, ಎಂದರೆ ರಾಜನೀತಿಜ್ಞಾನ; ಹಾಗೂ ಕವಿತ್ವ, ಎಂದರೆ ಶುಕ್ರಾಚಾರ್ಯರ ಜಾಣ್ಮೆ).
(ಇನ್ನು ಸಪ್ತೋಪಾಯಗಳೆಂದರೆ ಏಳು ಉಪಾಯಗಳು, ಶತ್ರುವನ್ನು ಸೋಲಿಸಲು ಬೇಕಾದವು. ಅವಿವು: ಸಾಮ-ದಾನ-ಭೇದ-ದಂಡಗಳೆಂಬ ನಾಲ್ಕು; ಮತ್ತು ಮಂತ್ರ-ಔಷಧ-ಇಂದ್ರಜಾಲಗಳೆಂಬ ಮೂರು.
ಇನ್ನು ಬಲಾಬಲ-ಜ್ಞಾನವೆಂಬುದು ಮೂರು ಬಗೆಯದು. ಸ್ವಬಲ-ಶತ್ರುಬಲಗಳು ಸಮವೇ, ಅಥವಾ ಶತ್ರುಬಲವೇ ನಮ್ಮದಕ್ಕಿಂತ ಅಧಿಕವೋ, ಸ್ವಬಲವೇ ಶತ್ರುಬಲಕ್ಕಿಂತ ಅಧಿಕವೋ - ಎಂಬುದಾಗಿ.
ಇನ್ನು ಚತುರ್ದಶ-ಪರೀಕ್ಷೆಗಳೆಂದರೆ ಹದಿನಾಲ್ಕು ಪರೀಕ್ಷೆಗಳು. ಇದು ಹದಿನಾಲ್ಕು ದೋಷಗಳ ಪರಿಜ್ಞಾನವೇ ಸರಿ. ಅವಿವು: ನಾಸ್ತಿಕ್ಯ, ಅನೃತ, ಕ್ರೋಧ, ಪ್ರಮಾದ (ಎಂದರೆ ಎಚ್ಚರವಾಗಿಲ್ಲದಿರುವುದು), ದೀರ್ಘಸೂತ್ರತೆ (ಕೆಲಸಗಳನ್ನು ಮುಂದುಮುಂದಕ್ಕೆ ಹಾಕುವ ಪ್ರವೃತ್ತಿ) ವೃದ್ಧಸೇವೆಯಿಲ್ಲದಿರುವಿಕೆ, ಆಲಸ್ಯ (ಚಟುವಟಿಕೆಯಿಲ್ಲದಿರುವಿಕೆ), ಇಂದ್ರಿಯದಾಸ್ಯ, ಏಕಚಿಂತನ (ಒಬ್ಬನೇ ಒಂದು ವಿಷಯವನ್ನು ಕುರಿತು ಯೋಚಿಸುತ್ತಿರುವುದು, ಅಥವಾ ಒಂದೇ ವಿಷಯವನ್ನು ಕುರಿತೇ ಯೋಚಿಸುತ್ತಿರುವುದು), ಮೂಢ-ಸಮಾಲೋಚನ (ಎಂದರೆ ಅಜ್ಞರೊಡನೆ ಸೇರಿ ವಿಚಾರಮಾಡುವುದು), ಕಾರ್ಯ-ಅನಾರಂಭ (ಮಾಡಬೇಕೆಂದು ತೀರ್ಮಾನಿಸಿದುದನ್ನು ಮಾಡದೆಯೇ ಕುಳಿತಿರುವುದು), ಮಂತ್ರ-ಅರಕ್ಷಣ (ರಹಸ್ಯನಿರ್ಣಯಗಳನ್ನು ಗುಟ್ಟಾಗಿ ಇಟ್ಟುಕೊಳ್ಳಲಾಗದಿರುವಿಕೆ), ಮಂಗಲ-ಅಕರಣ (ಮಂಗಳಕಾರ್ಯಗಳನ್ನು ಮಾಡದಿರುವುದು), ನಾನಾ-ವ್ಯಗ್ರತೆ (ನಾಲ್ಕಾರು ಕೆಲಸಗಳಿಗೆ ಒಟ್ಟಿಗೇ ಕೈಹಾಕಿಬಿಡುವುದು)
ಅಲ್ಲದೆ, ಸ್ವಸಮೀಕ್ಷೆ-ಶತ್ರುಸಮೀಕ್ಷೆಗಳನ್ನು ಮಾಡಿಕೊಳ್ಳುತ್ತಾ, ಅವಶ್ಯವೆನಿಸಿದಾಗ ಸಂಧಿಯನ್ನೂ ಮಾಡಿಕೊಳ್ಳುತ್ತಾ ಇರುವೆಯಷ್ಟೆ?