Sunday, August 3, 2025

ಪ್ರಶ್ನೋತ್ತರ ರತ್ನಮಾಲಿಕೆ 26 (Prasnottara Ratnamalike 26)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೨೬. ಚಂದಿರನ ಕಿರಣಕ್ಕೆ ತುಲ್ಯರು ಯಾರು?

ಉತ್ತರ - ಸಜ್ಜನರು.

ಚಂದ್ರನ ಕಿರಣಕ್ಕೆ ಸಮಾನರಾದವರು ಯಾರು? ಎಂಬುದು ಇಲ್ಲಿನ ಪ್ರಶ್ನೆ. ಅದಕ್ಕೆ ಉತ್ತರ ಸಜ್ಜನ ಅಥವಾ ಸತ್ಪುರುಷರು ಎಂದು. ಇವರು ಹೇಗೆ ಚಂದ್ರನ ಕಿರಣಕ್ಕೆ ಹೋಲುವಂಥವರಾಗುತ್ತಾರೆ? ಎಂಬುದು ಇಲ್ಲಿನ ವಿಷಯವಾಗಿದೆ.


ಚಂದ್ರನು ಬೆಳದಿಂಗಳನ್ನು ಕೊಡುತ್ತಾನೆ. ಅವನಿಗೆ ಬೆಳಕು ಸೂರ್ಯನಿಂದ ಬರುತ್ತದೆ. ಬೆಳಕು ಅಂದರೆ ಪ್ರಕಾಶ. ಅದು ಅಗ್ನಿಯ ಸ್ವರೂಪ. ಸಾಮಾನ್ಯವಾಗಿ ಅಗ್ನಿ ಸುಡುವ ಲಕ್ಷಣವುಳ್ಳದ್ದು. ಆದರೆ ಈ ಚಂದ್ರನ ಕಿರಣ ಮಾತ್ರ ಸುಡುವ ಲಕ್ಷಣ ಉಳ್ಳದ್ದಲ್ಲ; ಬದಲಾಗಿ ಅದು ತಂಪಾಗಿರುತ್ತದೆ. ಇದು ಹೇಗೆ ಸಾಧ್ಯ? ಎಂಬುದು ನಮ್ಮ ಋಷಿಗಳ ವೈಜ್ಞಾನಿಕವಾದ ವಿಶ್ಲೇಷಣೆಯಿಂದ ಚಿಂತಿಸಬೇಕಾದ ವಿಷಯವಾಗಿದೆ. ಜ್ಯೌತಿಷಶಾಸ್ತ್ರದಲ್ಲಿ ಚಂದ್ರನನ್ನು ಜಲಸಂಬಂಧವಾದ ಗ್ರಹ ಎಂಬುದಾಗಿ ಹೇಳಲಾಗಿದೆ. ಅಂದರೆ ನೀರಿನ ಮೇಲೆ ಬೆಳಕು ಬಿದ್ದಾಗ ಅದು ಪ್ರತಿಫಲನಗೊಳ್ಳುತ್ತದೆ. ಅಂತೆಯೇ ಜಲಗ್ರಹವಾದ ಚಂದ್ರನ ಮೇಲೆ ಬೆಳಕು ಬಿದ್ದಾಗ ಅದು ಪ್ರತಿಫಲಿತವಾಗುತ್ತದೆ. ಅದನ್ನೇ ಚಂದ್ರನ ಕಿರಣ ಎನ್ನಲಾಗುತ್ತದೆ. ಹಾಗಾಗಿ ಅವು ಪ್ರತಿಫಲಿತವಾಗಿ ಬೆಳಕನ್ನು ಕೊಟ್ಟರೂ ತಂಪಾಗುರುತ್ತವೆ; ಆದ್ದರಿಂದ ಚಂದ್ರನ ಕಿರಣ ತಂಪಾಗಿರುತ್ತದೆ ಎಂಬುದಾಗಿ ಹೇಳುತ್ತಾರೆ. ಇದನ್ನೇ ಸಜ್ಜನರಿಗೆ ಹೋಲಿಕೆಯಾಗಿ ಕೊಡಲಾಗಿದೆ. ಸಜ್ಜನರು ಅಷ್ಟೇ ಪ್ರಕಾಶಮಾನರಾಗಿ ತೇಜೋವಂತರಾಗಿ ಇರುವವರು ಆದರೂ ಕೂಡ ಅಷ್ಟೇ ತಂಪನ್ನು ಕೊಡುವವರು ಎಂದರ್ಥ. ಆದರೆ ಹೇಗೆ ಸಜ್ಜನರಲ್ಲಿ ಅಂತಹ ಪ್ರಕಾಶ ಕಂಡು ಬರುತ್ತದೆ? ಎಂಬುದು ಇಲ್ಲಿನ ವಿಷಯ.


ಎಲ್ಲಾ ಪ್ರಕಾಶಕ್ಕೂ ಮೂಲವಾದ ಪ್ರಕಾಶ ಎಂದರೆ ಭಗವಂತ. ಭಗವಂತನಿಂದ ಸೂರ್ಯ, ಚಂದ್ರ, ನಕ್ಷತ್ರ, ಗ್ರಹ ಮತ್ತು ನಾವು ಭೂಮಿಯಲ್ಲಿ ಕಾಣುವಂತಹ ಅಗ್ನಿ, ಇವೆಲ್ಲವೂ ಪ್ರಕಾಶವನ್ನು ಪಡೆಯುತ್ತವೆ. ಆದರೆ ಇವುಗಳಲ್ಲಿ ಚಂದ್ರನನ್ನು ಬಿಟ್ಟು ಉಳಿದವುಗಳು ತಾಪವನ್ನು ಕೊಡುತ್ತವೆ. ಇಲ್ಲಿ ಭಗವಂತನು ಮಾತ್ರ ನಮಗೆ ಕಾಣುವ ಸೂರ್ಯನಿಗಿಂತಲು ಕೋಟಿ ಕೋಟಿ ಪ್ರಕಾಶ ಉಳ್ಳವನು; ಆದರೆ ಅವನು ಅತ್ಯಂತ ತಂಪಾಗಿದ್ದಾನೆ. ಒಮ್ಮೆ ಶ್ರೀರಂಗ ಮಹಾಗುರುಗಳ ಬಳಿ ಒಬ್ಬ ಶಿಷ್ಯ "ಭಗವಂತನನ್ನು ಕೋಟಿಸೂರ್ಯ ಸಮಪ್ರಭ ಎಂಬುದಾಗಿ ಕರೆಯುತ್ತಾರಲ್ಲ, ಹೌದೇ?" ಎಂದು ಕೇಳಿದಾಗ, "ಹೌದಪ್ಪ! ಕೋಟಿಸೂರ್ಯ ಸಮಪ್ರಭ ಮಾತ್ರ ಅಲ್ಲ, ಕೋಟಿ ಕೋಟಿ ಸೂರ್ಯ ಸಮಪ್ರಭ; ಹಾಗೆ ಕೋಟಿಚಂದ್ರಸಮಶೀತಲನೂ ಹೌದಪ್ಪ" ಎಂಬುದಾಗಿ ಹೇಳಿದ್ದರಂತೆ. ಅಂದರೆ ಭಗವಂತನು ತಂಪಾಗಿಯೂ, ತಾಪವಿಲ್ಲದ ಕಿರಣವನ್ನು ಜಗತ್ತಿಗೆಲ್ಲ ಕೊಡುವವ. ಅಂತಹ ಭಗವಂತನನ್ನು ಭಾವಿಸುವ ಸಜ್ಜನರೂ ಅವರ ಒಳಗೆ ಬೆಳಕನ್ನು ತುಂಬಿಕೊಂಡಿರುತ್ತಾರೆ. ಹಾಗಾಗಿಯೇ ಅವರು ತಂಪಾಗಿಯೂ ಇರುತ್ತಾರೆ. ಭಗವಂತನನ್ನು ತಮ್ಮೊಳಗೆ ತುಂಬಿಕೊಂಡು ಪರಿಪೂರ್ಣವಾಗಿ ತಮ್ಮ ಜೀವನದಲ್ಲಿ ಭಗವಂತನನ್ನು ಭಾವಿಸುವುದರಿಂದ ಅವರು ತೇಜೋಮಯರಾಗಿ ಕಾಣುತ್ತಾರೆ. ಆದ್ದರಿಂದ ಚಂದ್ರನ ಕಿರಣಕ್ಕೆ ಇಂತಹ ಸಜ್ಜನರನ್ನು ಹೋಲಿಸಿರುವುದು ಅಷ್ಟು ಸಮರ್ಪಕವಾಗಿದೆ! ಚಂದ್ರನು ಹೇಗೆ ಬೆಳದಿಂಗಳಿನಿಂದ ರಾತ್ರಿಯನ್ನು ತಂಪಾಗಿಸುತ್ತಾ, ಬೆಳಗಿಸುತ್ತಾನೋ, ಅಂತಯೇ ಸಜ್ಜನರು ಕೂಡ ತಾವೂ ತಂಪಾಗಿದ್ದು, ಸಂಸಾರದಲ್ಲಿ ಬೆಂದು ಬಳಲಿ ಬದುಕು ಬೇಡವೆಂಬ ನಿರ್ಧಾರಕ್ಕೆ ಬರುವವರ ಜನರ ಬದುಕಲ್ಲಿ ತಂಪನ್ನು, ಆಶಾಆಶಾಕಿರಣವನ್ನು ಹುಟ್ಟಿಸುವುದರಿಂದ ಚಂದ್ರಕಿರಣಕ್ಕೆ ಹೋಲುತ್ತಾರೆ ಎಂಬುದು ಈ ಪ್ರಶ್ನೋತ್ತರದ ಆಶಯವಾಗಿದೆ.


ಸೂಚನೆ : 27/7/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.