Sunday, August 3, 2025

ಕೃಷ್ಣಕರ್ಣಾಮೃತ 72 ತ್ರಿಲೋಕಪ್ರಭುವಿನ ಚರಣದ ಸವಿ-ಸೊಬಗುಗಳು (Krishakarnamrta 72)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಇದೋ ಬರುತ್ತಿದ್ದಾನೆ, ನಮ್ಮ ದೇವ - ಎಂಬುದಾಗಿ ಕೃಷ್ಣನನ್ನು ಕುರಿತಾಗಿ ಹೇಳುತ್ತಾನೆ, ಲೀಲಾಶುಕ. ಯಾರಾದರೂ ಬಂದಾಗ ನಮಗೆ ಬಹಳ ಸಂತೋಷವೇ ಆಗಿಬಿಟ್ಟರೆ, ಆ ಸಂಭ್ರಮವೇ ನಮ್ಮ ಬಾಯಲ್ಲಿ "ಇದೋ ಇದೋ ಬಂದರು" - ಎಂಬ ದ್ವಿರುಕ್ತಿಯನ್ನು ಮೂಡಿಸುತ್ತದೆ. ದ್ವಿರುಕ್ತಿಯೆಂದರೆ ಎರಡೆರಡು ಬಾರಿ ಹೇಳುವುದು. ಎಂದೇ "ಅಯಂ ಅಯಂ" ಎಂದಿಲ್ಲಿ  ಹೇಳಿರುವುದು.

ದೇವನೆಂಬ ಪದವೇ ಎರಡು ಅರ್ಥಗಳನ್ನು ಹೊಂದಿದೆ. ಕಾಂತಿಯಿಂದ ಕೂಡಿರುವವನು ಎಂಬ ಅರ್ಥವೊಂದಿದೆ. ವಿಶೇಷವಾಗಿ ಕ್ರೀಡಿಸುವನೆಂಬ ಅರ್ಥವೂ ಇದೆ. ಕೃಷ್ಣನ ಕ್ರೀಡೆಗಳೇನು ಒಂದೇ ಎರಡೇ? ಎಂದೇ, ದೇವನೆಂದರೆ ಅನೇಕ ಲೀಲೆಗಳಿಂದ ಕೂಡಿದವನೆಂದೂ ಆಗುವುದೇ.

ಹೇಗೆ ಬರುತ್ತಿದ್ದಾನೆ, ನಮ್ಮ ಕೃಷ್ಣದೇವ? ವೇಣುಗಾನವನ್ನು ಮಾಡುತ್ತಾ ಬರುತ್ತಿದ್ದಾನೆ. ನರ್ತನವನ್ನು ಚೆನ್ನಾಗಿ ಬಲ್ಲವರು ಸುಮ್ಮನೆ ನಡೆದುಬರುತ್ತಿದ್ದರೂ, ಅವರ ನಡೆಯಲ್ಲೇ ಒಂದು ತಾಳದ ಬಗೆಯು ತೋರುವುದಲ್ಲವೇ? ಹಾಗೆಯೇ ಶ್ರೀಕೃಷ್ಣನು ಹೆಜ್ಜೆಯಿಡುವುದರಲ್ಲೇ ಒಂದು ಬಗೆಯಿದೆ.

ಆ ಬಗೆಯನ್ನು ಆತನ ಗೆಜ್ಜೆಗಳ ಧ್ವನಿಯೇ ತೋರಿಸಿಕೊಟ್ಟೀತು. ಮತ್ತೆ ಆತನ ವೇಣುಗಾನವಾದರೂ ಅದಕ್ಕೆ ಅನುಸಾರವಾಗಿಯೇ, ಎಂದರೆ ಆ ತಾಳಕ್ಕೆ ಹೊಂದಿಕೊಂಡಂತೆಯೇ, ಇರುವುದು. ಅದನ್ನೇ ಇಲ್ಲಿ ಅನುಕೂಜನವೆಂದಿರುವುದು. ತನ್ನ ನಡೆಯ ಬಗೆಯನ್ನೇ ಅದು ಅನುಸರಿಸಿಬರುತ್ತಿದೆ. ಅಷ್ಟೇ ಅಲ್ಲ. ಅನುಸ್ಯೂತವಾದ ಕೂಜನವೂ ಅನುಕೂಜನವೇ. ಕೂಜನವೆಂದರೆ ಇಂಪಾದ ಧ್ವನಿ. ಕೋಗಿಲೆಯ ಕೂಗಿಗೆ ಕೂಜನವೆನ್ನುವರು. ಈ 'ಕೂಜನ'ವೆಂಬ ಪದವೇ ಕನ್ನಡದಲ್ಲಿ ಕೂಗು – ಎಂದಾಗಿರುವುದು.

ಕೃಷ್ಣನು ಕಾಲ್ನಡಿಗೆಯಿಂದ ಬರುತ್ತಿದ್ದಾನೆ. ಅರ್ಥಾತ್, ಯಾವುದೋ ವಾಹನದಿಂದಲ್ಲ. ಅದುವೇ ನನ್ನ ಭಾಗ್ಯ. ಏಕೆಂದರೆ ಆತನ ಚರಣಗಳ ದರ್ಶನವಾಗಲು ಹೆಚ್ಚು ಅನುಕೂಲವಾಯಿತಲ್ಲವೇ?

ಕೃಷ್ಣನ ಆಗಮನದಲ್ಲಿ ಆತನ ಪಾದಗಳ ನಡೆಯೇ ಕವಿಯನ್ನು ವಿಶೇಷವಾಗಿ ಆಕರ್ಷಿಸಿರುವುದು. ಹೇಗಿವೆ ಆತನ ಪಾದಗಳು? - ಎಂಬುದನ್ನು ಆರು ವಿಶೇಷಣಗಳಿಂದ ತಿಳಿಸುತ್ತಾನೆ.

ತ್ರಿಭುವನವನ್ನೇ ಸರಸವನ್ನಾಗಿಸಿರುವ ಪಾದಗಳು, ಅವು. ಸರಸವೆಂದರೆ ರಸದಿಂದ ಕೂಡಿರತಕ್ಕವು, ಅರ್ಥಾತ್ ಆನಂದದಿಂದ ಕೂಡಿರುವಂತಹವು. ರಸವೆಂದರೇ ಆನಂದ. ಅಥವಾ ರಸದ ಫಲವೇ ಆನಂದ.

ರಸವೆಂದರೆ ಶೃಂಗಾರರಸವೂ ಆಗಬಹುದಲ್ಲವೇ? ಲೋಕಸಾಮಾನ್ಯದಲ್ಲಿ ಶೃಂಗಾರರಸವಿರುವೆಡೆಯಲ್ಲೇ ಅಲ್ಲವೆ, ಸಂತೋಷೋಲ್ಲಾಸಗಳು ಚಿಮ್ಮುವುದು, ಜೀವನದ ಲವಲವಿಕೆಯು ತೋರುವುದು?

ಕೃಷ್ಣನಿಲ್ಲವೋ ನಿಜವಾದ ಮತ್ತು ಪೂರ್ಣವಾದ ಮಧುರರಸವದೆಂತು ಸಾಧ್ಯ? ಆತನು ಹೆಜ್ಜೆಯಿಡುತ್ತಲೇ ಲೋಕಗಳೆಲ್ಲ ನಳನಳಿಸುವಂತಾಗಿರುವುದು. ಹೀಗಾಗಿ ಶ್ರೀಕೃಷ್ಣಚರಣಗಳೇ ತ್ರಿಭುವನ-ಸರಸಗಳು.

ಹಾಗಾಗುವುದೂ ಏಕೆ? ಏಕೆಂದರೆ ಆ ಕೃಷ್ಣಪದಗಳು ದಿವ್ಯಲೀಲಾಕುಲಗಳು. ಎಂದರೆ ದಿವ್ಯಲೀಲೆಗಳಿಂದ ಆಕುಲವಾಗಿರತಕ್ಕವು. ಆಕುಲವೆಂದರೆ ತುಂಬಿಹೋಗಿರುವುದು. ಎಂತಹವು ಕೃಷ್ಣನ ಲೀಲೆಗಳು? ಮದಗಜದ ಲೀಲೆಯನ್ನು ಹೋಲತಕ್ಕವು. ಮತ್ತ-ಮಾತಂಗಗಳ ಲೀಲೆಯನ್ನು ಮೀರಿಸತಕ್ಕವೆಂದರೂ ಅಷ್ಟೇ ಸರಿಯೇ.

ಎಂದೇ, ಮೂರನೆಯದಾಗಿ, ಅವು ದಿಕ್ಕುದಿಕ್ಕುಗಳಲ್ಲಿಯೂ ತರಲವಾದವು. ತರಲವೆಂದರೆ ಚಂಚಲ. ಕೃಷ್ಣನು ವೇಣುಗಾನಕ್ಕೆ ಪ್ರಸಿದ್ಧನಿರಬಹುದು. ಆತನು ನಾಟ್ಯಜ್ಞನೆಂಬುದೂ ಅಷ್ಟೇ ಪ್ರಸಿದ್ಧವೇ. ಕಾಳಿಯಸರ್ಪದ ಫಣೆಯ ಮೇಲೆ ನರ್ತನಗೈಯಲಿಲ್ಲವೇ ಆತ? ನರ್ತಿಸುತ್ತಿರುವವರ ಚರಣಗಳು ನಿಶ್ಚಲವಾಗಿರುವುದೆಂತು? ರಂಗಮಂಚದಲ್ಲೆಲ್ಲಾ ಸುಳಿದಾಡುವುವು ನರ್ತಕರ ಪಾದಗಳು. ಕೃಷ್ಣನರ್ತನಕ್ಕೆ ಮಂಚವೇ ಆದವು ಈ ಫಣಿಯ ಹೆಡೆಗಳು. ಪಟುಗತಿಯ ನಟನೇ ಈ ಕೃಷ್ಣ-ವಟು.

ನಾಲ್ಕನೆಯದಾಗಿ, ಅವು ದೀಪ್ತಭೂಷಾ-ಪರಗಳು. ದೀಪ್ತಭೂಷೆಗಳೆಂದರೆ ಹೊಳೆಯುವ ಭೂಷಣಗಳು. ಪಾದಾಂಗದ, ನೂಪುರ - ಮುಂತಾದುವು ಪಾದಭೂಷಣಗಳು. ಈ ಪಾದಾಭರಣಗಳಿಂದಾಗಿ ಉತ್ಕೃಷ್ಟವೆನಿಸಿರುವ ಪಾದಗಳು, ಶ್ರೀಕೃಷ್ಣನವು. ಪರವೆಂದರೆ ಶ್ರೇಷ್ಠವಲ್ಲವೇ?

ಐದನೆಯದಾಗಿ, ಅವು ಅಶರಣರಿಗೆ ಶರಣವೆನಿಸತಕ್ಕವು. ಹಾಗೆಂದರೆ, ಆಸರೆಯಿಲ್ಲದವರಿಗೆ ರಕ್ಷಕವಾದಂತಹವು. ಮತ್ತ ಇಷ್ಟೆಲ್ಲ ಕಾರಣಗಳಿಂದಾಗಿಯೇ ಅವು, ಆರನೆಯದಾಗಿ, ಅದ್ಭುತಗಳು.

ಇಂತಹ ಅದ್ಭುತಪಾದಗಳಿಂದ ಹೆಜ್ಜೆಯಿಟ್ಟು ಬರುತ್ತಿರುವ ಕೃಷ್ಣದೇವನು ಕಣ್ಣಿಗೆ ಹಬ್ಬವಾಗಿದ್ದಾನೆ.

ತ್ರಿಭುವನ-ಸರಸಾಭ್ಯಾಂ, ದಿವ್ಯ-ಲೀಲಾಕುಲಾಭ್ಯಾಂ
ದಿಶಿ ದಿಶಿ ತರಲಾಭ್ಯಾಂ ದೀಪ್ತ-ಭೂಷಾ-ಪರಾಭ್ಯಾಮ್ |
ಅಶರಣ-ಶರಣಾಭ್ಯಾಂ ಅದ್ಭುತಾಭ್ಯಾಂ ಪದಾಭ್ಯಾಂ
ಅಯಂ ಅಯಂ ಅನುಕೂಜದ್-ವೇಣುರಾಯಾತಿ ದೇವಃ ||


***

ಜಗತ್-ಪ್ರಳಯವಾದಾಗ ಭಗವಂತನೇನು ಮಾಡುತ್ತಿರುತ್ತಾನೆ? - ಎಂಬ ಪ್ರಶ್ನೆ ಒಮ್ಮೊಮ್ಮೆ ಬರುವುದಲ್ಲವೇ? ಆ ಪ್ರಶ್ನೆಗೆ ಉತ್ತರ ಈ ಶ್ಲೋಕದಲ್ಲಿದೆ.

ಆಗಲೇ ಕೃಷ್ಣನು ಎಳೆಯ ಶಿಶುವಾಗಿ ಆಲದೆಲೆಯ ಮೇಲೆ ಮಲಗಿರುವುದು. ಎಲೆಯ ಮೇಲೆ ಶಯಿಸಿರುವ ಮಗುವನ್ನು ಪುರಂದರದಾಸರೂ ಕೊಂಡಾಡಿರುವರಲ್ಲವೇ? "ಪಾಲಗಡಲೊಳು ಪವಡಿಸಿದವನೆ/ಆಲದೆಲೆಯ ಮೇಲೆ ಮಲಗಿದ ಶಿಶುವೇ/ಶ್ರೀಲತಾಂಗಿಯರ ಚಿತ್ತವಲ್ಲಭನೆ/ಬಾಲ ನಿನ್ನನು ಪಾಡಿ ತೂಗುವೆನಯ್ಯಾ" ಎಂಬುದು ಆ ನುಡಿ. "ಜೋ ಜೋ ಜೋ ಕೃಷ್ಣ ಪರಮಾನಂದ" – ಎಂಬ ಅವರ ಹಾಡಿನ ಒಂದು ಚರಣವದು.

ಆಗ ಆ ಬಾಲಮುಕುಂದನು ಏನು ಮಾಡುತ್ತಿರುವನು? ಎಲ್ಲಾಎಳೆಯ ಮಕ್ಕಳು ಮಾಡುವುದನ್ನೇ ಆತನೂ ಮಾಡುವನು. ಏನದು? ಕಾಲನ್ನೋ ಕಾಲ್ಬೆರಳನ್ನೋ ಹಿಡಿದು ಬಾಯಲ್ಲಿಟ್ಟುಕೊಂಡು ಚೀಪುವುದು.

ಈ ಬಾಲಕೃಷ್ಣನ ಕೈಗಳು ಕಮಲದಂತೆ. ಎಂದರೆ ಅದರಂತೆ ಕೋಮಲ, ಅದರಂತೆ ಸುಂದರ. ಎಂದೇ ಅದನ್ನು ಕರಕಮಲ ಅಥವಾ ಕರಾರವಿಂದ ಎನ್ನುವುದು. ಬರೀ ಕೈಗಳೇನು, ಕಾಲ್ಗಳೂ ಹಾಗೆಯೇ. ಆದುದರಿಂದ ಅದು ಪದಾರವಿಂದವಾಯಿತು. ಕೈಕಾಲುಗಳೇ ಕಮಲದಂತಿರುವುದಾದರೆ ವದನದ ಬಗ್ಗೆ ಹೇಳುವುದೇನು? ಮುಖವಂತೂ ಮತ್ತೂ ಮೃದುಲವೂ ಮತ್ತೂ ಮಧುರವೂ ಆಗಿದ್ದು ಅದೂ ಕಮಲವನ್ನು ಮತ್ತೂ ಹೋಲುವುದೇ ಸರಿ. ಅಲ್ಲಿಗೆ ತನ್ನ ಕೈಯೆಂಬ ಕಮಲದಿಂದ ಕಾಲೆಂಬ ಕಮಲವನ್ನು ಬಾಯೆಂಬ ಕಮಲದೊಳಗೆ ಇಡುತ್ತಿದ್ದಾನೆ, ಮುದ್ದು ಕೃಷ್ಣ.

ಪುರಾಣಗಳು ಹೇಳುವಂತೆ, ಇದು ಮಾರ್ಕಂಡೇಯನಿಗಾದ ದರ್ಶನವಂತೆ. ಆತನು ಭಗವಂತನನ್ನು ಕುರಿತು ತಪಸ್ಸು ಮಾಡಿ ಆತನ ಮಾಯೆಯನ್ನು ತೋರಬೇಕೆಂದು ಕೇಳಿಕೊಂಡಿದ್ದನಂತೆ. ಒಮ್ಮೆ ನದೀತೀರದಲ್ಲಿ ಆತನಿದ್ದಾಗ ಭಾರಿ ಗಾಳಿಮಳೆಗಳು ಬಂದು ಸಾಕ್ಷಾತ್ ಪ್ರಳಯದ ಅನುಭವವಾಯಿತಂತೆ. ಆಗಿನ ಕತ್ತಲಲ್ಲಿ ಬಳಲಿ ಮಾರ್ಕಂಡೇಯನು ತತ್ತರಿಸುತ್ತಿದ್ದಾಗ ವಟಪತ್ರಶಾಯಿಯಾಗಿ ಕಾಲ್ಬೆರಳನ್ನು ಚೀಪುತ್ತಿದ್ದ ಸುಂದರಶಿಶುವೊಂದರ ದರ್ಶನವಾಗಿ ಒಡನೆಯೇ ಸರ್ವಾಯಾಸಪರಿಹಾರವೂ ಆಗಿ ಮಹಾನಂದವಾಯಿತಂತೆ. ಆ ಶಿಶುವೇ ಈ ಬಾಲಕೃಷ್ಣ.

ಇದರ ತತ್ತ್ವಾರ್ಥವನ್ನು ಶ್ರೀರಂಗಮಹಾಗುರುಗಳು ವಿವರಿಸಿದ್ದಾರೆ. ತನ್ನ ಸೃಷ್ಟಿಯು ಹೇಗಿದೆಯೆಂಬುದನ್ನು ದೇವನು ಆಸ್ವಾದನೆ ಮಾಡುವ ಪರಿಯಿದು - ಎಂದು. ಆತನ ಪಾದವೇ ಜಗತ್ತಾಗಿರುವುದು – ಎಂಬುದಾಗಿ ಪುರುಷಸೂಕ್ತವು ಹೇಳುತ್ತದಲ್ಲವೇ? ಸೃಷ್ಟೀಶನೇ ಸ್ವ-ಸೃಷ್ಟಿಯ ಸವಿಗಾಣುವ ಸೊಗಸಿನ ಸಂದರ್ಭವಿದು.

ಕಿರಿದಾದ ಶ್ಲೋಕ, ಸಾಕಷ್ಟು ಪ್ರಸಿದ್ಧವಾದದ್ದೇ.

ಕರಾರವಿಂದೇನ ಪದಾರವಿಂದಂ / 

ಮುಖಾರವಿಂದೇ ವಿನಿವೇಶಯಂತಂ |

ವಟಸ್ಯ ಪತ್ರಸ್ಯ ಪುಟೇ ಶಯಾನಂ / 

ಬಾಲಂ ಮುಕುಂದಂ ಮನಸಾ ಸ್ಮರಾಮಿ ||

ಸೂಚನೆ : 2/08/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.