ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ನಾರದರ ಆಗಮನದಿಂದ ಪಾಂಡವರೆಲ್ಲರಿಗೂ ಸಂತಸವಾಯಿತು. ಅವರನ್ನು ಆದರಿಸಿದ ಬಳಿಕ ಅವರೇ ಕುಶಲಪ್ರಶ್ನೆಯನ್ನು ಮಾಡುತ್ತಾ, ಯುಧಿಷ್ಠಿರನ ರಾಜ್ಯಭಾರ-ವೈಖರಿಯ ಬಗ್ಗೆ ಕೆಲವು ಪ್ರಶ್ನೆಗಳನ್ನಿಟ್ಟರು. ಅಷ್ಟಕರ್ಮಗಳೆಂದರೆ ಕೃಷಿ, ವಾಣಿಜ್ಯ, ದುರ್ಗ, ಗಜಬಂಧನ, ಗಣಿ, ಆಯಕರ, ಪ್ರಾಂತಭೂಮಿಯಲ್ಲಿ ಯುಕ್ತರಾದವರ ನೇಮಕ. ಯುಧಿಷ್ಠಿರಾ, ನೀನು ಈ ಅಷ್ಟಕರ್ಮಗಳನ್ನು ಮಾಡುತ್ತಿರುವೆಯಷ್ಟೆ?
ರಾಜ, ಮಂತ್ರಿ, ಮಿತ್ರ, ಕೋಶ, ರಾಷ್ಟ್ರ, ದುರ್ಗ, ಸೈನ್ಯ - ಇವುಗಳಿಗೆ ಸಪ್ತಪ್ರಕೃತಿಗಳು ಎನ್ನುವರು. ಇವೆಲ್ಲವೂ ಬಲವಾಗಿವೆ ತಾನೆ?
ನಿನ್ನ ರಾಜ್ಯದಲ್ಲಿಯ ಧನಿಕರು ಚಟಗಳಿಗೆ ಸಿಲುಕಿಲ್ಲವಷ್ಟೆ? ಮತ್ತು ಅವರು ನಿನ್ನಲ್ಲಿಯೇ ಚೆನ್ನಾಗಿ ನಿಷ್ಠರಾಗಿರುವರಷ್ಟೆ? (ದೇಶದಲ್ಲಿಯ ಸಿರಿವಂತರು ದುಶ್ಚಟಗಳಲ್ಲಿ ಸಿಲುಕಿದರೂ, ದೇಶನಿಷ್ಠೆ-ಸ್ವಾಮಿನಿಷ್ಠೆಗಳನ್ನು ಕಳೆದುಕೊಂಡಿದ್ದರೂ ರಾಷ್ಟ್ರಕ್ಕೆ ಆಪತ್ತೇ. ಅವರ ಮೇಲೆ ಕಣ್ಣಿಟ್ಟಿರಬೇಕು).
ಸಂಶಯವೇ ಉಂಟಾಗದಂತೆ ನಡೆದುಕೊಳ್ಳುವ ಕೃತಕದೂತರು - ಎಂದರೆ ದೂತರೆಂಬಂತೆ ವರ್ತಿಸುವವರು ಇರುವರು. ಅವರು ಕಪಟಸ್ನೇಹ ತೋರಿ ನಿನ್ನಿಂದಲೋ ಮಂತ್ರಿಗಳ ಮೂಲಕವೋ ಮಂತ್ರಾಲೋಚನೆಗಳನ್ನು ಭೇದಿಸಿಬಿಡುತ್ತಿಲ್ಲ ತಾನೇ? (ನಮ್ಮ ದೇಶಕ್ಕೆ ಹಿತವಾದುದನ್ನೇ ತಾವು ಮಾಡುತ್ತಿದ್ದೇವೆಂದು ತೋರಿಸಿಕೊಂಡು ದೇಶದ್ರೋಹಮಾಡುತ್ತಿರುವ ಇಂದಿನ ವಿದೇಶೀ ಎನ್.ಜಿ.ಓಗಳನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು. ದೇಶದ ಗೃಹಮಂತ್ರಿಯು ಅವರ ಮೇಲೆ ಕಣ್ಣಿಟ್ಟಿದ್ದು ಕಾಲಕಾಲಕ್ಕೆ ಕಡಿವಾಣಗಳನ್ನು ಹಾಕುತ್ತಿರಬೇಕಾದುದು ಆದ್ಯಕರ್ತವ್ಯ).
ಮೂರು ಬಗೆಯ ಸಂಬಂಧದ ಜನರು ಪ್ರತಿಯೊಬ್ಬರಿಗೂ ಇರುವರು - ಶತ್ರು, ಮಿತ್ರ, ಹಾಗೂ ಉದಾಸೀನ (ಉದಾಸೀನನೆಂದರೆ ತಟಸ್ಥ) - ಎಂದು. ಮೂರೂ ಬಗೆಯ ಮಂದಿಯೂ ಏನೇನನ್ನು ಮಾಡಲು ಉತ್ಸುಕರಾಗಿರುವರೆಂಬುದನ್ನು ನೀನು ಅರಿತುಕೊಳ್ಳುತ್ತಿರುವೆ ತಾನೇ? ಸರಿಯಾದ ಸಮಯಗಳಲ್ಲಿ ಸಂಧಿಯನ್ನೂ ವಿಗ್ರಹವನ್ನೂ ಸಾಧಿಸುತ್ತಿರುವೆಯಲ್ಲವೇ? (ಸಂಧಾನ ಮಾಡಿಕೊಳ್ಳುವುದು ಸಂಧಿ; ವಿಗ್ರಹವೆಂದರೆ ಕದನ). ಉದಾಸೀನರಾದವರು ಹಾಗೂ ಮಧ್ಯಸ್ಥರಾದವರೊಂದಿಗೆ ಯಾವ ಬಗೆಯ ನೀತಿಯನ್ನಿಟ್ಟುಕೊಂಡಿರುವೆ?
ಮಂತ್ರಿಗಳನ್ನು ಆಯ್ದುಕೊಳ್ಳಬೇಕಾದಾಗ, ಅವರು ಸತ್ಕುಲದವರೇ, ದೇಶಾನುರಾಗಿಗಳೇ? - ಎಂಬುದನ್ನು ಮೊದಲು ಪರೀಕ್ಷಿಸಬೇಕು. ಹಾಗೆ ಮಾಡುತ್ತಿದ್ದೀಯೆ ತಾನೆ?
ವಿಜಯವೆಂಬುದು ಎಷ್ಟಾದರೂ ಮಂತ್ರವನ್ನೇ ಆಧರಿಸಿರುವುದಲ್ಲವೇ? (ವಿಜಯೋ ಮಂತ್ರಮೂಲೋ ಹಿ) - ಎಂದರೆ ಸರಿಯಾದ ಮಂತ್ರಾಲೋಚನೆಯಿಂದಲೇ ವಿಜಯವೆಂಬುದು ಶಕ್ಯ. ಅದಕ್ಕೆ ರಾಜನ ಅಮಾತ್ಯರು, ಎಂದರೆ ಮಂತ್ರಿಗಳು, ಶಾಸ್ತ್ರಕೋವಿದರಾಗಿರಬೇಕು; ಅಷ್ಟು ಮಾತ್ರವಲ್ಲದೆ, ಗುಪ್ತವಾಗಿ ನಡೆದ ಮಂತ್ರಾಲೋಚನೆಗಳನ್ನು ಗುಟ್ಟಾಗಿಯೇ ಇಟ್ಟಿರುವವರಾಗಿರಬೇಕು; ಅವರೆಲ್ಲಾ ಹಾಗಿದ್ದಾರೆ ತಾನೆ? ಏಕೆಂದರೆ, ಹಾಗಿದ್ದರೆ ಮಾತ್ರವೇ ರಾಷ್ಟ್ರವು ಸುರಕ್ಷಿತವಾಗಿರುವುದು, ಹಾಗೂ ಶತ್ರುಗಳಿಂದಾಗಿ ನಾಶಕ್ಕೆ ಈಡಾಗದೆ ಇರುವುದು.
ಅಲ್ಲದೆ, ನೀನು ಅಕಾಲದಲ್ಲಿ ನಿದ್ರಾವಶನಾಗಿಬಿಡುತ್ತಿಲ್ಲವಷ್ಟೆ? ಜೊತೆಗೆ, ಕಾಲಕ್ಕೆ ಸರಿಯಾಗಿ ಏಳುತ್ತಿದ್ದೀಯೆ ತಾನೆ? ಅರ್ಥಜ್ಞನಾಗಿ ಅಪರರಾತ್ರಕಾಲದಲ್ಲಿ, ಎಂದರೆ ರಾತ್ರಿಯ ಕೊನೆಯ ಭಾಗದಲ್ಲಿ, ಅರ್ಥ-ಚಿಂತನೆಯನ್ನು ಮಾಡಬೇಕು. (ಇಲ್ಲಿ ಅರ್ಥವೆಂದರೆ ಮಾಡಬೇಕಾದ ಕರ್ತವ್ಯಗಳು). ನೀನು ಹಾಗೆ ಮಾಡುತ್ತಿರುವೆ ತಾನೆ?
ಮಂತ್ರಾಲೋಚನೆಯನ್ನು ಒಬ್ಬೊಂಟಿಗನಾಗಿಯೇ ಮಾಡಿಬಿಡುವುದಲ್ಲ. ಹಾಗೆಂದು ಬಹುಮಂದಿಯೊಂದಿಗೂ ಮಾಡುವಂತಿಲ್ಲ (ಆರು ಕಿವಿಗಳನ್ನು ತಲುಪಿದರೆ ಗುಟ್ಟು ರಟ್ಟಾಗಿಬಿಡುವುದೆಂಬ ಮಾತಿದೆ). ಹಾಗಿರುವುದರಿಂದ, ನೀನು ಮಾಡಿದ ಮಂತ್ರಾಲೋಚನೆಗಳು, ಶತ್ರುರಾಷ್ಟ್ರಗಳ ಕೈಸೇರಿ ತೊಂದರೆಯಾಗುತ್ತಿಲ್ಲ ತಾನೆ?
ನಾವು ಮಾಡುವ ಕಾರ್ಯಗಳು ಲಘುಮೂಲ-ವಾಗಿರಬೇಕು; ಲಘುಮೂಲವೆಂದರೆ ಅಲ್ಪವಾದ ಪ್ರಯತ್ನ; ಜೊತೆಗೇ ಮಹೋದಯವೂ ಆಗಿರಬೇಕು; ಮಹೋದಯವೆಂದರೆ ಹಿರಿದಾದ ಫಲವುಳ್ಳದ್ದು: ಹಾಗಿರಬೇಕು. ನಿನ್ನ ಕಾರ್ಯಗಳು ಹಾಗಿವೆಯಷ್ಟೆ?
ಸೂಚನೆ : 3/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.