ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೨೯. ಸತ್ಯ ಯಾವುದು?
ಉತ್ತರ - ಭೂತಹಿತ.
'ಯಾವುದು ಸತ್ಯ' ? ಎಂಬ ಪ್ರಶ್ನೆ. ಇದಕ್ಕೆ ಉತ್ತರ - 'ಭೂತಹಿತವಾದದ್ದು ಯಾವುದೋ ಅದು ಸತ್ಯ' ಎಂಬುದು. ಅಂದರೆ ಯಾವ ವಿಷಯ ಎಲ್ಲ ಭೂತಕೋಟಿಗಳಿಗೂ ಒಳ್ಳೆಯದನ್ನು ಉಂಟುಮಾಡುತ್ತದೆಯೋ ಅದನ್ನೇ 'ಸತ್ಯ' ಎಂಬುದಾಗಿ ಕರೆಯಲಾಗಿದೆ. ಇಲ್ಲಿ ಹೇಳುತ್ತಿರುವಂತಹ ವಿಷಯಕ್ಕೆ ಭೂತಹಿತವಾಗುವಂತೆ ವರ್ತಿಸುವುದು ಎಂಬುದು ಅರ್ಥವಿದೆ. ಈ ವರ್ತನೆ ಮೂರು ವಿಧದಲ್ಲಿ ಇರುತ್ತದೆ. ಕಾಯಿಕವಾದ ವರ್ತನೆ, ವಾಚಿಕವಾದ ವರ್ತನೆ ಮತ್ತು ಮಾನಸಿಕವಾದ ವರ್ತನೆ ಎಂಬುದಾಗಿ. ಅಂದರೆ ಭೂತಗಳಿಗೆ - ಜೀವಿಗಳಿಗೆ ಈ ಮೂರು ವಿಧದಲ್ಲಿ ಹಿತವನ್ನು ಉಂಟುಮಾಡಲು ಸಾಧ್ಯ ಎಂದರ್ಥ. ಇದೇ ಮೂರು ಸಾಧನಗಳಿಂದ ಜೀವಿಗಳಿಗೆ ಅಹಿತವನ್ನೂ ಉಂಟುಮಾಡಲು ಸಾಧ್ಯ ಎಂಬುದು ಇದರ ಅಭಿಪ್ರಾಯ. ಆದ್ದರಿಂದ ಪ್ರಧಾನವಾದ ಈ ಮೂರು ಸಾಧನೆಗಳಿಂದ ಭೂತಕೋಟಿಗೆ ಸುಖವನ್ನು, ಸುಖಸಂಪತ್ತನ್ನು ಉಂಟುಮಾಡಬೇಕು ಎಂಬ ಬೋಧನೆ ಇಲ್ಲಿದೆ. ಅದಕ್ಕೆ ಒಂದು ಮಾತು ಹೀಗಿದೆ 'ಯದ್ಭೂತಹಿತಂ ತತ್ಸತ್ಯಂ' ಎಂಬುದಾಗಿ. ಸಾಮಾನ್ಯವಾಗಿ ಸತ್ಯ ಎಂಬುದಕ್ಕೆ ಮಾತು ಎಂಬ ಅರ್ಥ ಇದೆ. 'ಸತ್ಯಂ ವದ, ಧರ್ಮಂ ಚರ' ಎಂಬ ಉಪನಿಷತ್ತಿನ ಮಾತು ಮಾತಿನ ಸತ್ಯದ ವಿಚಾರವನ್ನು ಸಾರುತ್ತದೆ. ವಸ್ತುತಃ ಸತ್ಯ ಎಂಬ ಶಬ್ದಕ್ಕೆ ಪರಮಾತ್ಮ ಎಂಬ ಅರ್ಥವಿದೆ. ಮಾತು ಸತ್ಯವಾಗಲು ಮೂಲತಃ ಸತ್ಯಸ್ವರೂಪೀ ಭಗವಂತ ಆ ಮಾತಿನ ಹಿಂದೆ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ. ಯಾವ ಸತ್ಯವು ಈ ಬ್ರಹ್ಮಾಂಡದಲ್ಲಿ ಅಥವಾ ಪ್ರಪಂಚದಲ್ಲಿ ವಿಸ್ತಾರವಾಗಿದೆಯೋ, ಅದನ್ನೇ ಸತ್ಯ ಎಂಬುದಾಗಿ ಕರೆಯಲಾಗಿದೆ. ಅಂದರೆ ಈ ಸೃಷ್ಟಿಯಲ್ಲಿ ಸತ್ಯವು ಎಲ್ಲೆಲ್ಲೂ ಅಡಗಿದೆ. ಅದನ್ನು ಕಂಡವನು ಮಾತ್ರ ಆ ಸತ್ಯವಾದ ಭಗವಂತನ ಅಂಶವನ್ನು ಎಲ್ಲ ಜೀವಿಗಳಲ್ಲೂ ಕಾಣುತ್ತಾನೆ. ಎಲ್ಲ ಭೂತಗಳಿಗೆ ಹಿತವಾಗುವಂತೆ ಆತ ವರ್ತಿಸುತ್ತಾನೆ. ಹಾಗೆ ವರ್ತಿಸಬೇಕಾದದ್ದು ಪ್ರತಿಯೊಬ್ಬನ ಕರ್ತವ್ಯ ಎಂಬುದನ್ನು ಈ ಪ್ರಶ್ನೋತ್ತರ ಸೂಚಿಸುತ್ತಿದೆ. ಹಾಗಾಗಿ ಯಾರು ಕೂಡ ಇನ್ನೊಂದು ಜೀವಿಯ ಬದುಕಿನಲ್ಲಿ ಅಹಿತವಾಗುವಂತೆ ನಡೆದುಕೊಳ್ಳಬಾರದು. ಅವನು ಮಾತಿನಿಂದ ಕ್ರಿಯೆಯಿಂದ ಅಥವಾ ಮನಸ್ಸಿನ ಆಲೋಚನೆಯಿಂದ ಹೀಗೆ ಮೂರು ರೀತಿಯಿಂದಲೂ ಎಲ್ಲರಿಗೂ ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು, ಒಳ್ಳೆಯದನ್ನೇ ಆಲೋಚಿಸಬೇಕು. ಈ ರೀತಿಯಾಗಿ ಇದ್ದಾಗ ಮಾತ್ರ ಅದು ಜೀವಹಿತವನ್ನು ಉಂಟುಮಾಡುತ್ತದೆ ಎಂದರ್ಥ.
ಈ ಪ್ರಪಂಚದಲ್ಲಿ 84 ಲಕ್ಷ ಜೀವಜಾತಿಗಳು ಇವೆ ಎಂಬುದಾಗಿ ನಮ್ಮ ವೇದಾತಿ ಸಾಹಿತ್ಯಗಳು ಸಾರುತ್ತವೆ. ಎಲ್ಲದರಲ್ಲೂ ಭಗವಂತನ ಅಂಶವೆಂಬುದು ಹಾಸುಹೊಕ್ಕಾಗಿ ಇದೆ. ಹಾಗಾಗಿ ಭಗವಂತನನ್ನು ಕಾಣುವ ಅಭಿಲಾಷೆಯುಳ್ಳ ಯಾವುದೇ ವ್ಯಕ್ತಿಯು ಕೂಡ ಇನ್ನೊಂದು ಜೀವಿಯಲ್ಲಿಯೂ ಆ ಸತ್ಯವನ್ನೇ ಕಾಣುತ್ತಾನೆ. ಅವನು ಯಾವುದೇ ಕಾರಣಕ್ಕೂ ಸತ್ಯವಲ್ಲದ್ದನ್ನು ಕಾಣಲಾರನು, ಭಾವಿಸಲಾರನು. ಆಗ ಅವನಿಂದ ಹಿತವೇ ಘಟಿಸುತ್ತದೆ; ಅಹಿತವು ಘಟಿಸಲಾರದು. ಅಂತಹ ಜೀವಹಿತಕ್ಕೋಸ್ಕರ ಜೀವನ ಮಾಡುವಂತಿದ್ದರೆ ಅದುವೇ ಸತ್ಯಜೀವನ. ಅದೇ ಜೀವನದ ಸತ್ಯವಾದ ವಿಷಯ.