ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ರಾಜ್ಯಭಾರದ ಸ್ವರೂಪವನ್ನು ನಾರದರು ಯುಧಿಷ್ಠಿರನಿಗೆ ವಿವರಿಸುತ್ತಿದ್ದಾರೆ.
ಸೇನಾಪತಿಯೆಂದರೆ ಸತ್ಕುಲಜಾತನೂ ಸ್ವಾಮಿಭಕ್ತಿಯುಳ್ಳವನೂ ದಕ್ಷನೂ ಆಗಿರಬೇಕು. ನಿನ್ನ ಸೇನಾಪತಿಗಳು ಹಾಗಿರುವರಷ್ಟೆ?
ಸೈನ್ಯದ ಮುಖ್ಯಸ್ಥರು (ದಳಪತಿಗಳು) ಸರ್ವಪ್ರಕಾರದ ಯುದ್ಧಗಳಲ್ಲೂ ವಿಶಾರದರಾಗಿರಬೇಕು. ಜೊತೆಗೆ ಧೃಷ್ಟರೂ (ದಿಟ್ಟತನವುಳ್ಳವರೂ), ಶುದ್ಧಚಾರಿತ್ರರೂ, ಪರಾಕ್ರಮಸಂಪನ್ನರೂ ಆಗಿರಬೇಕು. ಹಾಗೂ ಅಂತಹವರನ್ನು ರಾಜನು ಸಂಮಾನಿಸಬೇಕು. ನೀನು ಹಾಗೆ ಮಾಡುತ್ತಿದ್ದೀಯೆ ತಾನೆ?
ಸೈನ್ಯದ ವಿಷಯದಲ್ಲಿ ರಾಜನು ಎರಡು ಎಚ್ಚರಗಳನ್ನು ತೆಗೆದುಕೊಳ್ಳಬೇಕು – ಅವರಿಗೆ ಆಹಾರವನ್ನೂ ವೇತನ(ಸಂಬಳ)ವನ್ನೂ ಯಥೋಚಿತವಾಗಿ ಮತ್ತು ಸರಿಯಾದ ಸಮಯಕ್ಕೆ ನೀಡಬೇಕು. ಅದನ್ನು ನೀನು ಮಾಡುತ್ತಿದ್ದೀಯಷ್ಟೆ? ಎಂದರೆ ವಿಲಂಬ ಮಾಡುತ್ತಿಲ್ಲವಷ್ಟೆ? ಭೋಜನದ ವಿಷಯದಲ್ಲಿ ಹಾಗೂ ಸಂಬಳದ ವಿಷಯದಲ್ಲಿ ಕಾಲಾತಿಕ್ರಮವನ್ನು ಮಾಡಿದರೆ ಭೃತ್ಯರು ಭರ್ತೃ(ಒಡೆಯನ)ವಿನ ಬಗ್ಗೆ ಕೋಪಗೊಳ್ಳುತ್ತಾರೆ. ಹಾಗಾದಲ್ಲಿ ಅದು ಒಂದು ದೊಡ್ಡ ಅನರ್ಥವೇ ಸರಿ.
ಇನ್ನು ಉತ್ತಮಕುಲಗಳಲ್ಲಿ ಜನಿಸಿದ ಕುಲಪುತ್ರರು ಪ್ರಧಾನವಾಗಿ ನಿನ್ನ ವಿಷಯದಲ್ಲಿ ಅನುರಾಗವುಳ್ಳವರು ತಾನೆ? ಎಷ್ಟೆಂದರೆ ಯುದ್ಧಸಂದರ್ಭಗಳಲ್ಲಿ ನಿನಗಾಗಿ ಪ್ರಾಣತ್ಯಾಗ ಮಾಡಲೂ ಅವರು ತಯಾರಿರುವರು ತಾನೆ?
ಯುದ್ಧಕ್ಕೆ ಸಂಬಂಧಿಸಿದಂತೆ ನಾಲ್ಕು ವಿಭಾಗಗಳಿರುವುವಲ್ಲವೆ? ಹಸ್ತಿ-ಅಶ್ವ-ರಥ-ಪಾದಾತ ಎಂಬುದಾಗಿ. ಈ ನಾಲ್ಕಕ್ಕೆ ನಾಲ್ಕು ಮಂದಿ ಅಧಿಪತಿಗಳಿರಬೇಕು. ಎಲ್ಲಕ್ಕೂ ಒಬ್ಬನೇ ಅಧಿಪತಿಯೆಂದಾದರೆ ಅಪಾಯ: ಆತನು ಮನಸ್ಸಿಗೆ ತೋರುವಂತೆಲ್ಲ ವರ್ತಿಸಿಯಾನು; ಶಾಸನಗಳನ್ನು ಉಲ್ಲಂಘಿಸಿಯಾನು. ಹಾಗೆ ಒಬ್ಬನಲ್ಲೇ ಎಲ್ಲವೂ ಕೇಂದ್ರೀಕೃತವಾಗಿಲ್ಲ ತಾನೆ?
ಕೆಲವು ಅಧಿಕಾರಿಗಳು ಸ್ವಪ್ರಯತ್ನವನ್ನು ವಿಶೇಷವಾಗಿ ಬಳಸಿ ಕೆಲಸವು ಕಳೆಕಟ್ಟುವಂತೆ ಮಾಡುವುದುಂಟು. ಅಂತಹವರಿಗೆ ಅಧಿಕವಾದ ಸಂಮಾನವನ್ನು ಮಾಡತಕ್ಕದ್ದು, ಅಥವಾ ಸಂಬಳವನ್ನು ಹೆಚ್ಚಿಸತಕ್ಕದ್ದು ಯುಕ್ತವಾಗುತ್ತದೆ. ನೀನು ಹಾಗೆ ಮಾಡುತ್ತಿರುವೆ ತಾನೆ?
ಕೆಲವರು ವಿದ್ಯಾವಿನಯಸಂಪನ್ನರಾಗಿರುತ್ತಾರೆ, ಜ್ಞಾನನಿಪುಣರಾಗಿರುತ್ತಾರೆ: ಅವರ ಗುಣಗಳನ್ನೂ ಗಮನಿಸಿಕೊಳ್ಳಬೇಕು, ಮತ್ತು ಅದಕ್ಕನುಗುಣವಾಗಿ ದಾನವಿತ್ತು ಆದರಿಸಬೇಕು. ನೀನು ಹಾಗೆ ಮಾಡುತ್ತಿರುವೆಯಷ್ಟೆ?
ನಿನಗೋಸ್ಕರವಾಗಿ ಪ್ರಾಣ ತೆತ್ತವರು ಕೆಲವರಿರುತ್ತಾರೆ, ಅಥವಾ ನಿನಗಾಗಿ ಶ್ರಮಿಸಿದ್ದು ಬಳಿಕ ಭಾರೀ ಕಷ್ಟದಲ್ಲಿರುತ್ತಾರೆ. ಅಂತಹವರ ಹೆಂಡತಿ ಮಕ್ಕಳನ್ನು ನೀನು ರಕ್ಷಿಸಿ ಪೋಷಿಸುತ್ತಿರುವೆಯಲ್ಲವೆ?
ಕೆಲವು ಶತ್ರುಗಳು ಭಯಭೀತರಾಗಿ ನಿನ್ನಲ್ಲಿ ಶರಣಾಗತರಾಗಿ ಬಂದಿರುತ್ತಾರೆ. ಅಥವಾ ದಾರಿದ್ರ್ಯದಲ್ಲಿರುತ್ತಾರೆ. ಇಲ್ಲವೇ ಯುದ್ಧದಲ್ಲಿ ಪರಾಜಿತರಾಗಿರುತ್ತಾರೆ. ಅವರನ್ನೆಲ್ಲಾ ನೀನು ಮಕ್ಕಳಂತೆಯೇ ನೋಡಿಕೊಳ್ಳುತ್ತಿರುವೆಯಲ್ಲವೆ?
ಭೂಮಂಡಲದ ಪ್ರಜೆಗಳೆಲ್ಲರೂ ನಿನ್ನನ್ನು ತಾಯಿಯಂತೆಯೂ ತಂದೆಯಂತೆಯೂ ಕಾಣಬೇಕು. ಎಲ್ಲರಿಗೂ ನೀನು ಸಮನಾಗಿರಬೇಕು ಹಾಗೂ ವಿಶ್ವಸನೀಯನಾಗಿರಬೇಕು. ಹಾಗಿರುವೆ ತಾನೆ?
ಶತ್ರುವು ಕೆಲವೊಮ್ಮೆ ಕೆಲವು ವ್ಯಸನಗಳಲ್ಲಿ ಮುಳುಗಿರುತ್ತಾನೆ. (ವ್ಯಸನಗಳೆಂದರೆ ಸ್ತ್ರೀವಿಷಯಕ-ಚಾಪಲ್ಯ, ಜೂಜು, ಮದ್ಯ ಇತ್ಯಾದಿ). ಆತನು ಹಾಗಿರುವನೆಂದು ತಿಳಿದೊಡನೆ ತ್ರಿವಿಧ-ಬಲದೊಂದಿಗೆ ಆತನ ಮೇಲೇರಿ ಹೋಗಬೇಕು (ತ್ರಿಬಲಗಳೆಂದರೆ ಮಂತ್ರಬಲ-ಕೋಷಬಲ-ಹಾಗೂ ಭೃತ್ಯಬಲ). ಅವನ್ನೆಲ್ಲಾ ಕೂಡಿಸಿಕೊಂಡು ಶತ್ರುವಿನ ಮೇಲೆ ದಂಡೆತ್ತಿಹೋಗುವುದು ಒಡನೆಯೇ ಮಾಡಬೇಕಾದ ಕರ್ತವ್ಯ. ನೀನು ಹಾಗೇ ಮಾಡುತ್ತಿದ್ದೀಯಷ್ಟೆ?
ಸರಿಯಾದ ಸಮಯವು ಬಂದೊಡನೆಯೇ ಶತ್ರುವಿನ ಮೇಲೇರಿ ಹೋಗುವುದು ಮುಖ್ಯ. ಇತ್ತ ಶತ್ರುವು ಯಾವುದೋ ಚಟಕ್ಕೆ ಬಿದ್ದಿರುವ ಸಮಯ, ತನ್ನವರು ಅವಕ್ಕೆ ಬಲಿಯಾಗಿಲ್ಲದಿರುವ ಸಮಯ, ಜ್ಯೌತಿಷ್ಕರು ಸೂಚಿಸುವ ಸಮಯ – ಇವುಗಳೆಲ್ಲವುಗಳನ್ನು ಮೇಳೈಸಿಕೊಂಡು ಯುದ್ಧಕ್ಕೆ ಹೋಗಬೇಕು. ಹೊರಡುವ ಮುನ್ನ ಸೈನಿಕರಿಗೂ ಸೇನಾಧಿಕಾರಿಗಳಿಗೂ ಮೊದಲೇ ವೇತನವನ್ನು ಕೊಟ್ಟಿರತಕ್ಕದ್ದು. ಹಾಗೆ ತಾನೆ ಮಾಡುತ್ತಿದ್ದೀಯೆ?
ಸೂಚನೆ : 24/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.