Friday, February 9, 2024

ಮನಸ್ಸೆಂಬ ದುಂಬಿಗೆ ಜ್ಞಾನಿಗಳ ಕಿವಿಮಾತು (Manassemba Dumbige Gyanigala Kivimatu)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)

ಚೇತೋ ಭೃಂಗ ಭ್ರಮಸಿ ವೃಥಾ ಭವಮರುಭೂಮೌ ವಿರಸಾಯಾಂ |

ಭಜ ಭಜ ಲಕ್ಷ್ಮೀನರಸಿಂಹಾನಘ ಪದಸರಸಿಜ ಮಕರಂದಂ ||


ಎಲೈ ಮನಸ್ಸೆಂಬ ದುಂಬಿಯೇ, ಸಂಸಾರವೆಂಬ ಮರುಭೂಮಿಯಲ್ಲಿ ಸುಮ್ಮನೇ ನೀರಸವಾಗಿ ಏಕೆ ಸುತ್ತುತ್ತೀಯೇ ? ಅದರಿಂದ ಏನೂ ಪ್ರಯೋಜನವಿರದು. ಅದರ ಬದಲು ಪವಿತ್ರವಾದ ಲಕ್ಷ್ಮೀನರಸಿಂಹನ ಪದಕಮಲಗಳನ್ನು ಬಿಡದೇ ಸೇವಿಸುತ್ತಿದ್ದರೆ ಅದೇ  ನಿತ್ಯಸುಖದ ಅಮೃತಪಾನ. ಆ ಪದಕಮಲದ ಮಕರಂದವು ಎಷ್ಟು ಸೇವಿಸಿದರೂ ಮುಗಿಯದು. ಇದು ಶಂಕರಭಗವತ್ಪಾದರ ಮೇಲಿನ ಸ್ತೋತ್ರದ ಅಭಿಪ್ರಾಯ. 

ವಾಸ್ತವವಾಗಿ ನಮ್ಮ ಮನಸ್ಸುಗಳಿಗೆ ನಾವೇ ಹೇಳಬೇಕಾದ ಮಾತಿದು. ನಮ್ಮ ಮನಸ್ಸು ಹುಟ್ಟಿದಾರಭ್ಯಸುಖವನ್ನು ಅರಸುತ್ತಾ ಒಂದೆಡೆಯಿಂದ ಇನ್ನೊಂದೆಡೆಗೆ ಹಾರುತ್ತಾ ಚಲಿಸುತ್ತಾ ಸಾಗುತ್ತಿದೆ. ಒಮ್ಮೆ ಒಳ್ಳೆಯ ತಿಂಡಿ ತಿನಿಸುಗಳು ಸುಖವೆನಿಸುವುವು. ಅದನ್ನು ಸವಿದ ಮೇಲೆ ಅದಲ್ಲ, ನಮಗೆ ಇಷ್ಟವಾದ ಉಡುಪುಗಳನ್ನು ಧರಿಸುವುದು ಸುಖ ಎನಿಸುವುದು. ನಂತರ ಅದೂ ಬೇಸರ ತರಿಸುವುದು. ಬಾಲ್ಯದಲ್ಲಿ ಸುಖವೆಂದು ಬಯಸುವ ಆಟಿಕೆಗಳು ಯೌವನದಲ್ಲಿ ಬೇಡವಾಗುತ್ತವೆ, ಬಾಲಿಶ ಎನಿಸುತ್ತವೆ. ಅಂದು ಅವೆಲ್ಲ ಬಹಳ ಸುಖವನ್ನು ಕೊಡುವ ಸಾಮಗ್ರಿಗಳೆಂದು ಹಿರಿಯರೊಡನೆ ಹಠ ಮಾಡಿ ತೆಗೆದುಕೊಂಡೆವಲ್ಲ . ಹೌದು. ಆದರೆ ಬಾಲ್ಯದಲ್ಲಿ ಸುಖ ಕೊಟ್ಟ ವಸ್ತುಗಳು, ವಿಷಯಗಳು ಯೌವನದಲ್ಲಿ ಕೊಡದು. ಯೌವನದಲ್ಲಿ ಬೇರೆ ಆಸೆಗಳು. ಸುಂದರವಾಗಿ ಕಾಣುವ ಆಸೆ, ಹುಡುಗ ಹುಡುಗಿಯರ ಪರಸ್ಪರ ಆಕರ್ಷಣೆ. ಅವನಿಗಾಗಿ ಅಥವಾ ಅವಳಿಗಾಗಿ ಏನು ಬೇಕಾದರೂ ಬಿಡಲು ಸಿದ್ಧ ಎಂಬ ಮನಸ್ಥಿತಿ. ಅದರಲ್ಲೇ ನನ್ನ ಸುಖ ಇರುವುದೆಂಬ ನಿಶ್ಚಯ. ನಂತರ ವೃದ್ಧಾಪ್ಯದಲ್ಲಿ ಇವು ಯಾವುದರಲ್ಲೂ ಸುಖವಿಲ್ಲ ಇನ್ನೇನೋ ಬೇಕು ಎನಿಸುತ್ತೆ. ಟಿವಿ ನೋಡುವುದು, ಸಿನಿಮಾ ನೋಡುವುದು, ಕ್ರಿಕೆಟ್ ನೋಡುವುದು, ಆಟ ಆಡುವುದು, ಕಾರ್ ಕೊಳ್ಳುವುದು ಹೀಗೆ ಸುಖದ ಅರಸುವಿಕೆ ಕೊನೆ ಮೊದಲಿಲ್ಲದೇ ಸಾಗುತ್ತದೆ. ಇಷ್ಟೆಲ್ಲಾ ಆದಮೇಲೆ ಸುಖ ಸಿಕ್ಕಿದೆಯೇ ಎಂದರೆ ನಿರಾಸೆಯ ನಿಟ್ಟುಸಿರೇ ಹೆಚ್ಚು ಜನರಲ್ಲಿ. ದಿನದ ೨೪ ಘಂಟೆಗಳೂ ಸುಖ ಯಾವುದರಿಂದ ಸಿಗುತ್ತದೆ ಎಂಬ ಹುಡುಕಾಟ ಮಾತ್ರ ನಿಲ್ಲದು.

ನಮ್ಮ ಮಹರ್ಷಿಗಳೂ ಜೀವನದಲ್ಲಿ ಸುಖಕ್ಕಾಗಿ ಹುಡುಕಿದವರೇ. ಇಂದ್ರಿಯ ಸುಖಗಳನ್ನೂ ಅನುಭವಿಸಿದವರೇ. ಆದರೆ ಸುಖವನ್ನು ಹುಡುಕುತ್ತಾ ಹೊರ ಜೀವನದಲ್ಲೇ ನಿಲ್ಲಲಿಲ್ಲ. ಈ ಜೀವನದ ವಿಕಾಸ ಎಲ್ಲಿಂದ ಆರಂಭ, ಎಲ್ಲಿ ಇದರ ನೆಲೆ ಎಂಬುದನ್ನೇ ತಮ್ಮ ಹುಡುಕಾಟದ ಪ್ರಧಾನ ವಿಷಯವಾಗಿ ಅವರು ತೆಗೆದುಕೊಂಡರು. ಈ ಸುಖವೆಂಬುದರ ಮೂಲವೇನು? ಇಂದ್ರಿಯಗಳಿಗೂ ಸಹ ಸುಖ ಎಲ್ಲಿಂದ ಹರಿಯುತ್ತಿದೆ ಎಂಬುದರ ಬಗೆಗೆ ಹುಡುಕು ನೋಟ ಹರಿಸಿದರು. ಅದು ಬುದ್ಧಿಯ ಮುಂದೆ ಹರಡಿದ ವಿಷಯ, ವಸ್ತುಗಳಲ್ಲಿನ ಹುಡುಕಾಟವಾಗಿರಲಿಲ್ಲ. ಬುದ್ಧಿಯ ಹಿಂಬದಿಯಲ್ಲಿ ಚೈತನ್ಯರೂಪವಾಗಿ ಯಾವ ಪರಂಜ್ಯೋತಿಯು ಬೆಳಗುತ್ತಿದೆಯೋ ಅದರೆಡೆಗೆ ಅವರ ಅಂತರಂಗದ ಪ್ರಯಾಣ ಸಾಗಿತ್ತು. ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ-"ಜೀವನದ ವಿಕಾಸವನ್ನು ಗಮನಿಸಿದಾಗ ಉದ್ದಕ್ಕೂ ಜ್ಯೋತಿಯ ಆಶಯವನ್ನೇ ವ್ಯಾಖ್ಯಾನ ಮಾಡಿಕೊಂಡು ಜೀವನ ಬೆಳೆದುಬರುತ್ತಿದೆ. ಆದ್ದರಿಂದಲೇ ಜೀವದ ವಿಕಾಸದ ಹಿಂದಿರುವ ಪ್ರಕಾಶವನ್ನೂ ಅರಿಯಲು ಸಾಧ್ಯವಾಗುವುದು".

ಈ ದೇಶದ ಜ್ಞಾನಿಗಳು  ನಿರಂತರ ತಪಸ್ಸಿನಿಂದ ಮನಸ್ಸನ್ನು ಹೊರ ಇಂದ್ರಿಯಗಳಿಂದ ಹಿಂದೆ ಸೆಳೆದರು. ಮೂಲದಲ್ಲಿ ಎಲ್ಲದಕ್ಕೂ ತನ್ನ ಶಕ್ತಿಯನ್ನು ಹರಿಸುತ್ತಿರುವ, ತಾನೇ ತಾನಾಗಿ ಬೆಳಗುತ್ತಿರುವ ಆ ಪರಾತ್ಪರ ವಸ್ತುವಿನಲ್ಲಿ ಮನಸ್ಸನ್ನು ನೆಲೆ ನಿಲ್ಲಿಸಿದರು. ಅದೊಂದು ನಿತ್ಯಾನಂದದ ಸಮುದ್ರ. ಅಲ್ಲಿ ಅವರು ಹಿಂದೆಂದೂ ಕಂಡಿರದ, ಅನುಭವಿಸಿರದ ಸುಖ, ಶಾಂತಿ,ನೆಮ್ಮದಿಗಳ ಅನುಭೂತಿ ಅವರಿಗಾಯಿತು. ಭವದ ಬೆಂಗಾಡು ಅಂತಹ ಸುಖವನ್ನು ನೀಡಲಾರದು. ಆ ಬೆಂಗಾಡಿನಲ್ಲೇ ಇದ್ದರೆ ಸುಖದ ಅರಸುವಿಕೆಯೂ ನಿಲ್ಲದು.  ಅವರು ಕಂಡ  ಆ ಆನಂದದ ಎದುರು ಭೌತಿಕ ಲೋಕದ ಎಲ್ಲಾ ಸುಖ,ಆನಂದಗಳೂ ತೃಣಸಮಾನವಾಗಿ ಅವರಿಗೆ ಕಂಡಿತು. ಅಂತಹ ಆನಂದದ ಸೆಲೆಯೇ ಇಲ್ಲಿ ಹೇಳಿರುವ ಆ ಸರ್ವಮೂಲನಾದ ಲಕ್ಷ್ಮೀನರಸಿಂಹ ದೇವನ ಪಾದಕಮಲ. ಅಲ್ಲಿನ ಪರಮಸುಖದ ಮಕರಂದ ಎಂದಿಗೂ ಬತ್ತದು. ಶಂಕರ ಭಗವತ್ಪಾದರು ಘೋಷಣೆ ಮಾಡುತ್ತಿರುವುದೂ ಆ ಪಾದ ಕಮಲಗಳ ಅಮೃತಪಾನವನ್ನೇ. ಅಂತಹ ನಿತ್ಯಸುಖದ ತಾಣದಲ್ಲಿ ಎಲ್ಲರ ಮನಸ್ಸುಗಳು ರಮಿಸಲಿ ಎಂಬ ಜೀವಕಾರುಣ್ಯದಿಂದ ಶಂಕರರು ಆಡಿದ ಮೇಲಿನ ಅಮೃತಮಯವಾದ ಮಾತು ನಮ್ಮೆಲ್ಲರ ಜೀವನಕ್ಕೆ ಪ್ರೇರಣೆಯಾಗಲಿ ಎಂದು ಆ ಲಕ್ಷ್ಮೀನರಸಿಂಹನನ್ನು ಪ್ರಾರ್ಥಿಸೋಣ.

ಸೂಚನೆ:  09/02/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.