Monday, February 5, 2024

ಅಷ್ಟಾಕ್ಷರೀ​ - 52 ಯಥಾ ದೃಷ್ಟಿಃ ಶರೀರಸ್ಯ (Astakshara Darshana 52 Yatha Drishtih Sharirasya)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)




ಭಾರತವು ಬಹಳ ವಿಶಾಲವಾದ ದೇಶ. ಬಹಳ ದೀರ್ಘವಾದ ಇತಿಹಾಸವನ್ನು ಹೊಂದಿರುವ ದೇಶ. ಪ್ರಾಯಶಃ ಜಗತ್ತಿನಲ್ಲೇ ಪ್ರಾಚೀನತಮವಾದದ್ದೂ ಹೌದೆನ್ನಬಹುದೇನೋ? ಅನೇಕಾನೇಕ ರಾಜರುಗಳು ಆಳಿಹೋಗಿರುವ ದೇಶ. ಆದ್ದರಿಂದ, ಒಂದು ದೇಶವು ಚೆನ್ನಾಗಿರಬೇಕೆಂದರೆ ಆಳ್ವಿಕೆ ಹೇಗಿರಬೇಕು? ರಾಷ್ಟ್ರನಾಯಕನ ಪಾತ್ರವೆಂತಹುದು? - ಮುಂತಾದ ಪ್ರಶ್ನೆಗಳಿಗೆ ಉತ್ತರಗಳಿಗಾಗಿ ಒಂದಿಷ್ಟು ಮಥನಗಳು ನಡೆದೇ ಇರಬೇಕು. ಇರಬೇಕೇನು? ವಿಪುಲವಾಗಿ ನಡೆದೇ ಇವೆ.

ದೇಶದಲ್ಲೀಗ ಪರಮಸಂಭ್ರಮದಿಂದ ಪ್ರಧಾನಿಗಳ ಕಣ್ಗಾವಲಿನಲ್ಲಿ ನಡೆಯುತ್ತಿರುವ ರಾಮೋತ್ಸವಸಂದರ್ಭದಲ್ಲಿ, "ಈ ಬಗ್ಗೆ ರಾಮಾಯಣವೇನಾದರೂ ಹೇಳಿದೆಯೇ?" - ಎಂಬ ಜಿಜ್ಞಾಸೆಯು ಯುಕ್ತವೇ ಸರಿ.

ಹೌದು, ಈ ನಿರೀಕ್ಷೆ ಸರಿಯಾದದ್ದೇ. ರಾಮಾವತಾರವಾದ ಮೇಲೆ ಆದ ಕೃಷ್ಣಾವತಾರವನ್ನು ಚಿತ್ರಿಸುವ ಮಹಾಭಾರತದಲ್ಲೂ ರಾಜಧರ್ಮವನ್ನು ಕುರಿತಾಗಿ ಸುದೀರ್ಘವಾದ ವಿಮರ್ಶೆಗಳೇ ಬಂದಿರುವುವಾದರೂ, ರಾಮಾಯಣದಲ್ಲಿ ಆ ಬಗ್ಗೆ ಉದ್ಬೋಧಕವಾದ ಮಾತುಗಳು ಕಡಿಮೆಯೇನಿಲ್ಲ. ಅವಲ್ಲೊಂದು ಕಿರುನುಡಿಯನ್ನು "ರುಚಿನೋಡಲೆಂದು" ಇಲ್ಲಿ ಕಿಂಚಿತ್ತಾಗಿ ಪರಿಶೀಲಿಸಿದೆ.

ರಾಜನು ದೇಶದ ನಾಯಕನಲ್ಲವೇ? 'ನಾಯಕ' ಎಂಬ ಪದವು ಏನನ್ನು ಹೇಳುತ್ತದೆ? - ಎಂಬ ಬಗ್ಗೆ ಕುತುಕ ಸಹಜವೇ. ನಾಯಕ ಎಂಬುದು ಸಂಸ್ಕೃತಪದ. ಆದ್ದರಿಂದ ಆ ಪದದ ವ್ಯುತ್ಪತ್ತಿ (ಹುಟ್ಟು) ಏನು ಎಂಬುದು ಪರಿಶೀಲನೀಯ. ಏಕೆಂದರೆ, ಎಷ್ಟೋ ಪದಗಳ ಹುಟ್ಟೇ ಅವುಗಳ ಗುಟ್ಟನ್ನು ಹೇಳುತ್ತವೆ. ಸಂಸ್ಕೃತದಲ್ಲಂತೂ ಇದು ಹೆಚ್ಚು ಸತ್ಯವೆಂದರೆ ತಪ್ಪಾಗಲಾರದು. ಆ ಪದವೊಂದೇ ಅಲ್ಲ; ತತ್ಸಂಬಂಧಿಯಾದ ಇನ್ನಿತರಪದಗಳೂ ಅರ್ಥಜ್ಞಾನಕ್ಕೆ ಸಹಕಾರಿ.

ನಾಯಕನೆಂಬ ಪದವು ಬಂದಿರುವುದು 'ನೀ' ಎಂಬ ಧಾತುವಿನಿಂದ. 'ನಯತಿ' ಎಂದರೆ ಒಯ್ಯುತ್ತಾನೆ. 'ನಯನ'  ಎಂದರೆ 'ಕಣ್ಣು' ಎಂಬ ಅರ್ಥ ಎಲ್ಲರಿಗೂ ಗೊತ್ತಿರುವುದೇ. ನೇತ್ರ ಎಂಬುದಕ್ಕೂ ಅದೇ ಅರ್ಥ; ಹಾಗೆಯೇ, ನೇತಾ ಎಂದರೂ ನಾಯಕನೇ ತಾನೆ?

ನಮ್ಮನ್ನು ಸ್ಥಳದಿಂದ ಸ್ಥಳಕ್ಕೆ ಒಯ್ಯುವುದು ನಮ್ಮ ಕಾಲು, ಅಲ್ಲವೇ? ಆದರೆ ವಾಸ್ತವವಾಗಿ, ನಮ್ಮನ್ನು ನಿಜವಾಗಿ ಒಯ್ಯುವುದು ಕಣ್ಣೇ. ಕಾಲು ಬರೀ ನಡೆಯುತ್ತದೆ – ಕಣ್ಣು ಹೇಳಿದಲ್ಲಿಗೆ. ಕಣ್ಣಿಲ್ಲದವ ಕಾಲು ಗಟ್ಟಿಯಾಗಿದೆಯೆಂದು ರಭಸದಿಂದ ನಡೆದರೆ ಏನಾದೀತು? ಎಲ್ಲೋ ಡಿಕ್ಕಿಯೋ, ಹಳ್ಳಕ್ಕೆ ಬೀಳುವುದೋ, ಕಟ್ಟಿಟ್ಟದ್ದೇ. ಹೀಗಾಗಿ, ಕಣ್ಣೇ ನಮ್ಮನ್ನು ಒಯ್ಯುವುದು, ಬರೀ ಕಾಲಲ್ಲ.

ನಾಯಕನೆಂದರೂ ಹಾಗೆಯೇ: ಜನರಿಗೆ ಮಾರ್ಗದರ್ಶನ ನೀಡಿ ನಡೆಸುವ ಮುಂದಾಳು. ಹಾಗಾದರೆ ಯಾರು ನಿಜವಾದ ನಾಯಕ? ಯಾರು ನಮ್ಮನ್ನು ಜೀವನಲಕ್ಷ್ಯದತ್ತ ಒಯ್ಯುವನೋ ಆತನೇ. ಯೋಗ್ಯರಾಜನಿಗಿರುವ ಈ ಸಾಮರ್ಥ್ಯದಿಂದಾಗಿ ಆತನನ್ನು "ಮನುಷ್ಯರ ಪ್ರಭು," "ನರರ ಇಂದ್ರ" - ಎಂದು ಕರೆಯುವುದೂ ಉಂಟು. ನರೇಂದ್ರನೆಂದರೆ ರಾಜನೇ.

ರಾಮಾಯಣವೂ ಹಲವೆಡೆ ಅದೇ ಪದವನ್ನೇ ಬಳಸಿದೆ. "ಶರೀರಕ್ಕೆ ಕಣ್ಣು ಹೇಗೋ - ಯಥಾ ದೃಷ್ಟಿಃ ಶರೀರಸ್ಯ - ರಾಷ್ಟ್ರಕ್ಕೆ ನರೇಂದ್ರನು ಹಾಗೆ (ತಥಾ ನರೇಂದ್ರೋ ರಾಷ್ಟ್ರಸ್ಯ)" ಎನ್ನುತ್ತದೆ ವಾಲ್ಮೀಕಿಕೃತಿ.

ಎಲ್ಲಿ? ದಶರಥನು ಮೃತನಾದಾಗ, ಭರತನಿನ್ನೂ ಆಗಮಿಸಿಲ್ಲವಾದಾಗ; ಆಗ ದಶರಥನ ಮಂತ್ರಿಗಳು ವಸಿಷ್ಠರಿಗೆ ಜ್ಞಾಪಿಸುತ್ತಾರೆ: ರಾಜನಿಲ್ಲದಿದ್ದರೆ ಪ್ರಜೆಗಳು ದಿಕ್ಕೆಡುತ್ತಾರೆ, ಬಗೆಬಗೆಯ ಏರುಪೇರುಗಳು ಅದರಿಂದುಂಟಾಗುತ್ತವೆ - ಎಂಬುದನ್ನವರಿಗೆ ಜ್ಞಾಪಿಸುವಾಗಿನ ಮಾತಿದು.

ಜೀವನದಲ್ಲಿ ಮೊದಲಾಗಬೇಕಾದದ್ದು, "ಒಳ್ಳೆಯದು ಯಾವುದು? ಕೆಟ್ಟದ್ದು ಯಾವುದು?" - ಎಂಬುದನ್ನು ಸರಿಯಾಗಿ ತಿಳಿದುಕೊಳ್ಳುವುದು . ಆಮೇಲಾಗಬೇಕಾದದ್ದೆಂದರೆ, ಒಳ್ಳೆಯದನ್ನೇ ಸಾಧಿಸುವ ಪರಿಯನ್ನರಿತು ಆಚರಿಸುವ ಬಿಗಿಯನ್ನು ಸಂಪಾದಿಸುವುದು. ಮೊದಲನೆಯದನ್ನು ಸತ್ಯವೆಂದೂ ಎರಡನೆಯದನ್ನು ಧರ್ಮವೆಂದೂ ಹೇಳಲಾಗುವುದು. ಹೀಗಾಗಿ, ಸತ್ಯ-ಧರ್ಮಗಳೇ ಜನರಿಗೆ ಸುಖ-ನೆಮ್ಮದಿಗಳನ್ನು ಉಂಟುಮಾಡತಕ್ಕವು.

ಅಲ್ಲಿಗೆ, ರಾಜನ ಕರ್ತವ್ಯವೆಂದರೆ ಎರಡು: ಸತ್ಯವನ್ನರಿಯಲು ತಾನು ಶ್ರಮಿಸುವುದು; ಜನತೆಗೆ ಧರ್ಮಾಚರಣೆಗೆ ಅನುವುಮಾಡಿಕೊಡುವುದು.

"ಸರಿಯಾಗಿ ನೋಡಿ  ಗುರಿಯತ್ತ ನಡೆಸು" – ಎನ್ನುವೀ ಕೆಲಸವನ್ನು ತಾನೆ ಶರೀರಕ್ಕೆ ಕಣ್ಣು ಮಾಡುವುದು? ಶರೀರದ ಭಾಗವೇ ತಾನಾಗಿದ್ದೂ, ಶರೀರವನ್ನು ನಿಷ್ಕಂಟಕವಾದ ಹಾದಿಯಲ್ಲಿ ಒಯ್ದು ಗಮ್ಯವನ್ನು ಮುಟ್ಟಿಸುವುದೇ ಅದು. ಅಂತೆಯೇ ಧರ್ಮಕಂಟಕರನ್ನು ಇಲ್ಲವಾಗಿಸಿ, ಶ್ರೇಷ್ಠಲಕ್ಷ್ಯದತ್ತ ರಾಷ್ಟ್ರವನ್ನು ಒಯ್ಯುವವನೇ ಯೋಗ್ಯ ನರೇಂದ್ರ! "ಯಾವನಲ್ಲಿ ಧರ್ಮವು ವಿರಾಜಿಸುವುದೋ ಆತನೇ ನಿಜವಾದ ರಾಜ" - ಎಂಬುದಾಗಿ ಶ್ರೀರಂಗಮಹಾಗುರುಗಳು ನಿರೂಪಿಸಿದ್ದಾರೆ.

ಮೈಗೆ ಕಣ್ಣೆಂತೋ ರಾಷ್ಟ್ರಕ್ಕೆ ನರೇಂದ್ರನಂತು! – ಎಂಬ ವಾಲ್ಮೀಕಿಗಳ ಮಾತು ಎಷ್ಟು ಮಾರ್ಮಿಕವಲ್ಲವೇ?

ಸೂಚನೆ : 4/2/2024 ರಂದು ಈ ಲೇಖನವು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.