Saturday, February 10, 2024

ಪ್ರಸಾದದ ಶ್ರೇಷ್ಠತೆ (Prasadada Shresthate)

ಲೇಖಕರು : ಪದ್ಮಿನಿ ಶ್ರೀನಿವಾಸನ್
ಪ್ರತಿಕ್ರಿಯಿಸಿರಿ (lekhana@ayvm.in)  ನಾದಯೋಗಿಗಳಾದ ನಾದಮುನಿಗಳ ಮೊಮ್ಮಗ ಯಾಮುನ ಚಿಕ್ಕ ಹುಡುಗ. ಶಿಷ್ಯನಾದ ಮಣಕ್ಕಾಲ್ನಂಬಿಗೆ ಯೋಗವಿದ್ಯೆಯನ್ನು ಅನುಗ್ರಹಿಸಿ, ಉಚಿತ ಕಾಲ ಒದಗಿದಾಗ ಯಾಮುನನಿಗೆ ಅನುಗ್ರಹಿಸುವಂತೆ ತಿಳಿಸಿ ಪರಮಪದವನ್ನು ಹೊಂದಿದರು. ಹುಡುಗ ದೊಡ್ಡಪಂಡಿತನಾದ. ಪಾಂಡ್ಯರಾಜರ ಆಸ್ಥಾನಪಂಡಿತರನ್ನು ಸೋಲಿಸಿ, ರಾಜ-ರಾಣಿಯರ ಮಧ್ಯೆ ಇದ್ದ ಶರತ್ತಿನಂತೆ ಅರ್ಧರಾಜ್ಯವನ್ನುಗೆದ್ದು, ಧರ್ಮದೊಂದಿಗೆ ರಾಜ್ಯವಾಳುತ್ತಿದ್ದ. ರಾಜಸುಖ-ಭೋಗಗಳೊಂದಿಗೆ ಜವಾಬ್ದಾರಿಗಳನ್ನೂ ಹೊತ್ತಿರುವಾಗ ಯೋಗವಂಶದ ಪರಂಪರೆಯ ಕಟ್ಟುನಿಟ್ಟು, ಪರಮಾತ್ಮನ ವಿಷಯಗಳು ಮರೆಯಾದವು!

ನಂಬಿಗಳು ಯೋಗವಿದ್ಯೆಯನ್ನು ಅನುಗ್ರಹಿಸಲು ಕಾತುರರಾಗಿದ್ದರೂ ರಾಜರನ್ನು ಭೇಟಿಮಾಡುವುದು ಅಸಂಭವವಾಗಿತ್ತು. ಉಪಾಯವೊಂದನ್ನು ಯೋಚಿಸಿ, ಶ್ರೇಷ್ಠವಾದ ಸೊಪ್ಪೊಂದನ್ನು ದೇವರಿಗೆ ನಿತ್ಯವೂ ನಿವೇದನ ಮಾಡಿ, ರಾಜರಿಗೆ ತಿನಿಸುವಂತೆ ಅಡುಗೆ ಭಟ್ಟರಿಗೆ ತಿಳಿಸಿದರು.

ರಾಜರಿಗೆ ರುಚಿ ಚೆನ್ನಾಗಿ ಹತ್ತಿದಂತೆ, ಸೊಪ್ಪನ್ನು ಕಳಿಸುವುದನ್ನು ನಿಲ್ಲಿಸಿದರು. ಸೊಪ್ಪೆಲ್ಲಿ? ಎಂದು ರಾಜರು ಕೇಳಲು, ಅದನ್ನು ತರುತ್ತಿದ್ದವರು ಬರಲಿಲ್ಲವೆಂದು ಭಟ್ಟರು ತಿಳಿಸಿದರು. ಅವರನ್ನು ಕರೆಸಿ, ಅವರಾರೆಂದು ರಾಜ ಕೇಳಲು - "ನಿಮ್ಮ ತಾತನ ಶಿಷ್ಯರು"- ಎಂದು ಪರಿಚಯಮಾಡಿಕೊಂಡು, "ನಿಮ್ಮ ತಾತ, ಒಂದು ದೊಡ್ಡ ನಿಧಿಯನ್ನು ತಲುಪಿಸುವಂತೆ ತಿಳಿಸಿದ್ದಾರೆ'  ಎಂದರು ನಂಬಿಗಳು. "ನನ್ನ ತಾತ ಉತ್ತಮ ಶ್ರೇಣಿಯ ಯೋಗಿಗಳು. ಅವರಲ್ಲಿ ಯಾವ ನಿಧಿಯೂ ಇರಲಿಲ್ಲ. ನಾನೇ ರಾಜನಾಗಿರುವಾಗ, ನನಗೇಕೆ ಆ ನಿಧಿ?" ಎಂದರು ರಾಜರು. "ನಿಮಗೆ ಗೊತ್ತಿಲ್ಲದೆ ಗುಪ್ತವಾಗಿ ಕಾಪಾಡಿದ್ದರು. ನಿಮಗೆ ತಲುಪಿಸುವಂತೆ ಅಪ್ಪಣೆ ಮಾಡಿದ್ದರು. ಆದರೆ, ಅದನ್ನು ಕೊಡುವ ಮುಂಚಿತವಾಗಿ ನಿಮ್ಮೊಂದಿಗೆ ಕೆಲವು ವಿಷಯಗಳು ಮಾತನಾಡಬೇಕು "ಎಂದರು ನಂಬಿಗಳು. ಹಲವಾರು ದಿವಸಗಳ ಪರಸ್ಪರ ಮಾತುಕಥೆಯ ಆನಂತರದಲ್ಲಿ, ಹಳೆಯ ನೆನಪುಗಳನ್ನು ಪುನರುದ್ದೀಪನ ಮಾಡಿದರು ನಂಬಿಗಳು. ರಾಜರು ಮತ್ತೆ ಮತ್ತೆ 'ನಿಧಿಯೆಲ್ಲಿ?' ಎಂದು ಕೇಳುತ್ತಿರಲು, ಒಂದು ದಿನ " ಗುಪ್ತವಾಗಿ ಕೊಡುವಂತಹದ್ದು. ರಾಜ್ಯನಿಧಿಗಿಂತಲೂ ಬಹುಪಾಲು ಶ್ರೇಷ್ಠವಾದದ್ದು. ಏಕಾಂತದಲ್ಲಿ, ಮೌನವಾಗಿ ಬಂದು ಸ್ವೀಕರಿಸುವಂತಹದ್ದು" ಎಂದರು ನಂಬಿ. ಧನದ ಆಸೆಯಿಲ್ಲದವರು ರಾಜರು. ವಂಶದ ಹಿರಿಯರ ಪ್ರಸಾದವೆಂದು ಭಾವಿಸಿ, ಸ್ವೀಕರಿಸಲು ಒಪ್ಪಿ ಹೊರಟರು. ರಾಜರನ್ನು ಶ್ರೀರಂಗಕ್ಷೇತ್ರಕ್ಕೆ ಕರೆದೊಯ್ದು "ಅಗೋ! ಆದಿಶೇಷನ ಮೇಲೆ ಮಲಗಿರುವುದೇ ನಿಧಿ" ಎಂದರು ನಂಬಿ. ಪೂರ್ವಸಂಸ್ಕಾರಗಳು ಜಾಗೃತವಾಗಿ, ವಿಸ್ಮಯಗೊಂಡು, ಭಗವಂತನ ಯೋಗದಿಂದ ಉಂಟಾದ ಸಂತೋಷದೊಂದಿಗೆ ದೇವರನ್ನು ನೋಡುತ್ತಾ ನಿಂತರು ರಾಜರು!

ನೈವೇದ್ಯ-ಪ್ರಸಾದಗಳ ಪರಿಣಾಮ

ದೇಹದಲ್ಲಿ ತ್ರಿದೋಷಗಳು(ವಾತ-ಪಿತ್ತ-ಶ್ಲೇಷ್ಮ) ತ್ರಿಮೂರ್ತಿಗಳನ್ನು ಪ್ರತಿನಿಧಿಸುತ್ತವೆ. ದೇಹದಲ್ಲಿನ ಮೂಲಭೂತ ಶಕ್ತಿಗಳೇ ಸಪ್ತಧಾತುಗಳು. ತ್ರಿದೋಷ ಹಾಗೂ ಸಪ್ತದಾತುಗಳ ಸಾಮ್ಯತೆ(ಊರ್ಧ್ವಗತಿಯನ್ನು ಪೋಷಿಸುವ ಸ್ಥಿತಿ)ಯಿಂದಲೇ ಧಾತುಪ್ರಸನ್ನತೆಯು ಏರ್ಪಡುತ್ತದೆ. ವೈದಿಕಸಂಪ್ರದಾಯವು, ಭೋಜನವು ದೇವರ ನೈವೇದ್ಯಕ್ಕಾಗಿ ಎಂಬ ಮನಸ್ಸಿನಿಂದಲೇ ಪಾಕವನ್ನು ಮಾಡಬೇಕೆನ್ನುತ್ತದೆ. ಪಾಕಶಾಸ್ತ್ರವು ಸತ್ವಪ್ರಧಾನವಾದ ಆಹಾರವನ್ನು ನಿವೇದನೆಗೆ ವಿಧಿಸುತ್ತದೆ. ಆ ಸೊಪ್ಪು ಧಾತುಸಾಮ್ಯತೆಯನ್ನು ತಂದುಕೊಡಬಲ್ಲದ್ದಾಗಿತ್ತು. ನಂಬಿಯವರು "ಇದನ್ನು ತಿಂದವರಿಗೆ ಭಗವತ್ಭಾವ ಉಂಟಾಗಲಿ" ಎಂಬ ಸಂಕಲ್ಪದೊಂದಿಗೆ ಯೋಗಬಲದಿಂದ ಭಗವದನುಗ್ರಹವೆಂಬ ದಿವ್ಯಶಕ್ತಿಯನ್ನು ಹರಿಸಿದ್ದರು. ಆ ಸೊಪ್ಪು ದೇವರಿಗೆ ನೈವೇದ್ಯವಾಗಿ ರಾಜನಿಗೆ ಬಡಿಸಲಾಗಿತ್ತು. ಆತ್ಮನಿಗೂ, ಇಂದ್ರಿಯಗಳಿಗೂ ನಡುವಿನ ಸೇತುವೆಯೇ ಮನಸ್ಸು. ಪ್ರಕೃತಿತತ್ವದಿಂದ ಮನಸ್ಸನ್ನು ಆತ್ಮನವರೆಗೆ ಹರಿಸಿ, ಆ ಮನೋಧರ್ಮವನ್ನು ಸೊಪ್ಪು ಮತ್ತು ಅಡುಗೆಭಟ್ಟರ ಮೂಲಕ ರಾಜರವರೆಗೂ ಹರಿಸಿ, ಆತನಲ್ಲಿ ಧಾತುಪ್ರಸನ್ನತೆಯನ್ನುಂಟು ಮಾಡಿದರು. ಧಾತುಪ್ರಸನ್ನತೆಯಿಂದಾಗುವ ಉತ್ತಮ ಮನೋಧರ್ಮದಿಂದ ಮನಸ್ಸು ಹಿಂದಕ್ಕೆ ಹರಿದು, ಭಗವಂತನ ದರ್ಶನವಾಗುತ್ತೆ, ಅನ್ನುವುದು ಮಹರ್ಷಿಗಳು ಯೋಗದಿಂದ ಕಂಡ ಸತ್ಯ. ಆ ಸೊಪ್ಪನ್ನು ತಿಂದವರೆಲ್ಲರಿಗೂ ಇಷ್ಟು ಆಳವಾದ ಪರಿಣಾಮವಾಗುವುದೆಂದು ಹೇಳಲಾಗದು!! ನೈವೇದ್ಯದ ನಂತರ ಸೇವಿಸುವ ಆಹಾರ, ದೇವರ ಕೃಪೆಯೊಂದಿಗೆ ಕೂಡಿದಾಗ ಪ್ರಸಾದವಾಗುತ್ತದೆ. ಅಂತಹ ಪ್ರಸಾದವು ಸಂತೋಷವನ್ನು, ಮನಃ ಪ್ರಸನ್ನತೆಯನ್ನು ತಂದುಕೊಡುವ ಶ್ರೇಷ್ಠವಾದ ಪದಾರ್ಥ. ಧಾತುಗಳಲ್ಲಿ ಸಾಮ್ಯತೆಯನ್ನು ತರುವುದು. ಈ ರೀತಿಯಾಗಿ , ಸಂಸ್ಕಾರಗಳೊಂದಿಗೆ ಪ್ರಸಾದವನ್ನು ಸೇವಿಸಿದರಿಂದಲೇ ರಾಜರು 'ಶ್ರೀರಂಗನಿಧಿ'ಯನ್ನು ಪಡೆಯುವಂತಾಯಿತು. ನಿತ್ಯವೂ ಪ್ರಸಾದ ಸೇವಿಸುವವರಾಗೋಣ ಪಾಕತಯಾರಿಕೆಯ ವಿಧಾನ, ಪರಿಕರಗಳ ಶುದ್ಧಿ, ತಯಾರಿಸುವವರ ಮನೋಧರ್ಮ, ಬಡಿಸುವ ವಿಧಾನ, ಬಡಿಸುವವರ ಮನೋಧರ್ಮ - ಎಲ್ಲ ಒಟ್ಟುಗೂಡಿ ಆಹಾರವನ್ನು ಸೇವಿಸಿದವರ ಮೇಲೆ ಪರಿಣಾಮವನ್ನು ಮಾಡುತ್ತದೆ. ಪ್ರಸಾದರೂಪವಾದ ಆಹಾರವು ಪೂರ್ವಸಂಕಲ್ಪಕ್ಕನುಗುಣವಾಗಿಯೇ ಪರಿಣಾಮವನ್ನು ಬೀರುವವು. ಪದಾರ್ಥಗಳ ಗುಣಧರ್ಮಗಳೂ ಕೂಡಿಕೊಂಡು, ಆಧ್ಯಾತ್ಮಿಕ ಬೆಳವಣಿಗೆಗೆ ಪೋಷಕವಾಗಿರುತ್ತವೆ.

ಇಂದು ಸಮಯದ ಕೊರತೆಯಿಂದ ಬಹುಮಟ್ಟಿಗೆ ಹೊರಗೆ ತಿನ್ನುವ ಅಭ್ಯಾಸವೇ ಹೆಚ್ಚುತ್ತಿದೆ. ಇದರಿಂದ ಬಿಡಿಸಿಕೊಂಡು ನಾವೇ ಉತ್ತಮ ಸಂಕಲ್ಪದೊಂದಿಗೆ ಪಾಕಮಾಡಿ ನಿತ್ಯವೂ ದೇವರಿಗೆ ನೈವೇದ್ಯ ಮಾಡೋಣ. ಪವಿತ್ರವಾದ ಪ್ರಸಾದವನ್ನು ಸೇವಿಸಿ ಭಗವದ್ಭಕ್ತಿಯನ್ನು ಮೂಡಿಸಿಕೊಳ್ಳಲು ಸಮರ್ಥರಾಗೋಣ. "ಅಡಿಗಡಿಗೆ ಭಗವತ್ ಸ್ಮರಣೆಯನ್ನು ತಂದುಕೊಡುವ ಅಡುಗೆಯೇ ಅಡುಗೆ" ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಉಲ್ಲೇಖಾರ್ಹವಾಗಿದೆ.

ಸೂಚನೆ: 18/05/2023 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.