Sunday, February 11, 2024

ವ್ಯಾಸ ವೀಕ್ಷಿತ - 75 ದುಃಖಿ ದುರ್ಯೋಧನ – ಕಪಟಿ ಧೃತರಾಷ್ಟ್ರ ( Vyaasa Vikshita - 75 Duhkhi Duryodhana - Kapati Dhrtarashtra)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)

ದ್ರೌಪದಿಯು ಅರ್ಜುನನನ್ನು ವರಿಸಿದಳೆಂಬುದನ್ನು ಕಂಡು ದುರ್ಯೋಧನನು ಬಹಳವೇ ದುಃಖಿತನಾದನು. ತನ್ನ ಸಹೋದರರು, ಅಶ್ವತ್ಥಾಮ, ಮಾವನಾದ ಶಕುನಿ, ಕರ್ಣ ಹಾಗೂ ಕೃಪ - ಇವರುಗಳೊಂದಿಗೆ ಹಸ್ತಿನಾವತಿಗೆ ಹಿಂದಿರುಗಿದನು. ಬರುತ್ತಿರುವಾಗ, ದುಃಶಾಸನನು ನಾಚಿಕೆಪಟ್ಟುಕೊಳ್ಳುತ್ತಾ ಮೆಲ್ಲಮೆಲ್ಲಗೆಂಬಂತೆ ಹೀಗೆ ಹೇಳಿದನು: ಈ ಅರ್ಜುನನು ಬ್ರಾಹ್ಮಣವೇಷದಲ್ಲಿ ಇರಲಿಲ್ಲವಾಗಿದ್ದಲ್ಲಿ ದ್ರೌಪದಿಯನ್ನು ಪಡೆಯಲಾಗುತ್ತಿರಲಿಲ್ಲ. ಆತನು ವಾಸ್ತವವಾಗಿ ಅರ್ಜುನನೆಂಬುದನ್ನು ಯಾರೂ ತಿಳಿದಿರಲಿಲ್ಲ. ನನಗೆ ತೋರುತ್ತದೆ – "ದೈವಂ ಚ ಪರಮಂ ಮನ್ಯೇ: ವಿಧಿಯೇ ಬಲಶಾಲಿ; ಹಾಗೂ ಪೌರುಷವು ಅನರ್ಥಕ (ಎಂದರೆ ಏನೂ ಕೆಲಸಮಾಡುವುದಿಲ್ಲ). ಪೌರುಷಕ್ಕೆ ಧಿಕ್ಕಾರವಿರಲಿ! ಏಕೆಂದರೆ, ನೋಡು, ಪಾಂಡವರು ಇನ್ನೂ ಬದುಕಿಯೇ ಇದ್ದಾರೆ".

ಹೀಗೆ ಮಾತನಾಡಿಕೊಳ್ಳುತ್ತಾ ಪುರೋಚನನನ್ನು ನಿಂದಿಸುತ್ತಾ ದೀನರೂ ಮನಸ್ಸೇ ಇಲ್ಲದವರೂ ಆಗಿ, ಹಸ್ತಿನಾವತಿಯನ್ನು ಅವರು ಪ್ರವೇಶಮಾಡಿದರು.

ಮಹಾತೇಜಸ್ಕರಾದ ಪಾಂಡವರು ಬೆಂಕಿಯಿಂದ ತಪ್ಪಿಸಿಕೊಂಡುದು, ದ್ರುಪದನೊಂದಿಗೆ ಸಂಬಂಧ ಬೆಳೆಸಿದುದು, ಎಲ್ಲ ಬಗೆಯ ಯುದ್ಧಗಳಲ್ಲೂ ವಿಶಾರದರೆನಿಸಿದ ಧೃಷ್ಟದ್ಯುಮ್ನ, ಶಿಖಂಡಿ ಮತ್ತಿತರರ ಸಾಮರ್ಥ್ಯ - ಇವೆಲ್ಲವನ್ನೂ ಚಿಂತಿಸಿಕೊಂಡು ದುರ್ಯೋಧನಾದಿಗಳು ಬೆದರಿದವರೂ ಹತಾಶರೂ ಆದರು.

ದ್ರೌಪದಿಯು ಪಾಂಡವರನ್ನು ವರಿಸಿದುದನ್ನೂ, ಧೃತರಾಷ್ಟ್ರಪುತ್ರರು ದರ್ಪವಡಗಿ ಹಿಂದಿರುಗಿದುದನ್ನೂ ಕೇಳಿದ ವಿದುರನಿಗೆ ಸಂತೋಷವೇ ಆಯಿತು. ಆತನು ಧೃತರಾಷ್ಟ್ರನಲ್ಲಿಗೆ ಹೋಗಿ, "ಸುದೈವದಿಂದ ಕುರುವಂಶದವರಿಗೆ ಅಭಿವೃದ್ಧಿಯಾಗಿದೆ!" ಎಂದು ಹೇಳಿದನು. ವಿದುರನ ಆ ಮಾತನ್ನು ಕೇಳಿದ ಧೃತರಾಷ್ಟ್ರನಿಗೆ ಬಹಳವೇ ಸಂತೋಷವಾಯಿತು. "ಆಹಾ ಅದೃಷ್ಟವೇ ಆಹಾ ಅದೃಷ್ಟವೇ!" ಎಂದುದ್ಗರಿಸಿದನು. ಪ್ರಜ್ಞಾನೇತ್ರನಾದ (ಎಂದರೆ ಕುರುಡನಾದ!) ಧೃತರಾಷ್ಟ್ರನು ಸರಿಯಾದ ಅರಿವಿಲ್ಲದೆ ಅಂದುಕೊಂಡದ್ದು "ದ್ರೌಪದಿಯು ತನ್ನ ಜ್ಯೇಷ್ಠಪುತ್ರನನ್ನು ವರಿಸಿದಳು" – ಎಂದು!

ಹಾಗೆ ಭಾವಿಸಿಕೊಂಡು, ಆತನು ತನ್ನ ಸೇವಕರಿಗೆ ಅಪ್ಪಣೆಯಿತ್ತನು. "ದ್ರೌಪದಿಗಾಗಿ ತುಂಬಾ ಆಭರಣಗಳನ್ನು ತನ್ನಿ! ಕೃಷ್ಣೆಗೂ ದುರ್ಯೋಧನನಿಗೂ ಸ್ವಾಗತವಾಗಲಿ!!" ಎಂದನು.

ಆ ಬಳಿಕವೇ ವಿದುರನು ಧೃತರಾಷ್ಟ್ರನಿಗೆ ಪಾಂಡವರು ಬದುಕುಳಿದುದನ್ನೂ, ಎಲ್ಲರೂ ಕುಶಲಿಗಳಾಗಿರುವರೆಂಬುದನ್ನೂ, ಪಾಂಡವರನ್ನು ದ್ರೌಪದಿಯು ವರಿಸಿದುದನ್ನೂ, ಆ ವೀರರೆಲ್ಲರಿಗೆ ದ್ರುಪದನಿಂದ ಆದರವು ದೊರೆತುದುದನ್ನೂ ತಿಳಿಸಿದನು. ಹಾಗೂ ಅದೇ ಸ್ವಯಂವರದಲ್ಲಿಯೇ ಬಹುಸೇನಾಸಮನ್ವಿತರಾದ ದ್ರುಪದನ ಅನೇಕ ಸಂಬಂಧಿಗಳೂ ಪಾಂಡವರೊಂದಿಗೆ ಸ್ನೇಹ ಬೆಳೆಸಿದುದನ್ನೂ ಹೇಳಿದನು.

ಆಗ ಧೃತರಾಷ್ಟ್ರನು "ಹೀಗೋ ವಿದುರ, ನಿನಗೆ ಒಳ್ಳೆಯದಾಗಲಿ. ಪಾಂಡವರು ಬದುಕಿದ್ದಾರೆಂದಾದಲ್ಲಿ ಅದು ಬಹಳ ಸಂತೋಷವೇ. ಯುಧಿಷ್ಠಿರಾದಿಗಳು ಪಾಂಡುವಿನ ಪುತ್ರರು ಹೌದೇ. ಆದರೆ ಅದಕ್ಕಿಂತಲೂ ಹೆಚ್ಚಾಗಿಯೇ ನನ್ನ ಮಕ್ಕಳು ಅವರು. ಅವರ ವಿಷಯದಲ್ಲಿ ನನ್ನ ಮತಿಯು ಅಧಿಕವೇ ಇದೆ. ಈಗಂತೂ ಅವರು ಕುಶಲಿಗಳೂ ಮಿತ್ರಸಂಪನ್ನರೂ ಆಗಿರುವರು. ಅವರ ಸಂಬಂಧಿಗಳೂ ಅನೇಕರೂ ಮಹಾಬಲಶಾಲಿಗಳೂ ಆಗಿರುವರು. ಅಯ್ಯಾ ವಿದುರನೇ, ಯಾರು ತಾನೇ, ಸಿರಿಯನ್ನೂ ಕಳೆದುಕೊಂಡಿದ್ದವರಾದರೂ ಸಹ, ಬಂಧುಸಮೇತನಾದ ದ್ರುಪದನನ್ನು ಮಿತ್ರನನ್ನಾಗಿ ಹೊಂದಿರಲು ಇಷ್ಟಪಡರು?" ಎಂದನು.

ಹಾಗೆ ಹೇಳುತ್ತಿದ್ದ ಧೃತರಾಷ್ಟ್ರನನ್ನು ಕುರಿತು ವಿದುರನು "ನೂರು ವರ್ಷಗಳ ಕಾಲ ನಿನ್ನ ಬುದ್ಧಿಯು ಇದೇ ರೀತಿಯಲ್ಲಿರಲಿ, ರಾಜನೇ" ಎಂದು ಹೇಳಿ ತನ್ನ ಮನೆಗೆ ಹೊರಟುಹೋದನು.


ಸೂಚನೆ : 
 11/02/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.