Saturday, February 24, 2024

ಕೃಷ್ಣಕರ್ಣಾಮೃತ - 3 ಕರ್ಣಕ್ಕೆ ಅಮೃತವೇ? ಯಾರಿಗೆ? (Karnakke amrtave ? Yarige)


ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)ಲೀಲಾಶುಕನು ತನ್ನ ಕೃತಿಯನ್ನು ನೇರವಾಗಿ ಕೃಷ್ಣಚರಿತವೆಂದೇ ಕರೆಯಬಹುದಿತ್ತಲ್ಲವೇ? ಆತನು ತನ್ನ ಕೃತಿಗೆ ಕೊಟ್ಟಿರುವ ಅಭಿಧಾನ "ಕೃಷ್ಣಕರ್ಣಾಮೃತ"ವೆಂದು. (ಅಭಿಧಾನವೆಂದರೆ ಹೆಸರು). ಹಾಗೇಕೆ ಹೆಸರು?

ಕೃಷ್ಣಕರ್ಣಾಮೃತವು ಗೇಯಗುಣದಿಂದ ತುಂಬಿದೆಯೆಂಬುದಕ್ಕೆ ಇನ್ನೂ ಒಂದು ಕುರುಹನ್ನೂ ಹೇಳಬಹುದು. ತನ್ನ ಹೆಸರಿನಲ್ಲೇ ಆ ಗುಣವನ್ನು ತೋರಿಸಿದೆ, ಈ ಕೃತಿ. ಈ ಕಾವ್ಯವು ಕರ್ಣಾಮೃತ. ಕರ್ಣವೆಂದರೆ ಕಿವಿ. ಆದ್ದರಿಂದ ಒಂದು ಪ್ರಶ್ನೆ. ಇಲ್ಲಿ ಹೇಳುತ್ತಿರುವುದು ಯಾರ ಕರ್ಣದ ಬಗ್ಗೆ? ಕೃಷ್ಣನ ಕರ್ಣವನ್ನು ಕುರಿತೋ, ನಮ್ಮ ಕರ್ಣವನ್ನು ಕುರಿತೋ?

ಅದಕ್ಕೆ ಮೊದಲು ಇನ್ನೊಂದು ಪ್ರಶ್ನೆ.

ಒಳ್ಳೆಯ ಪಾಯಸವನ್ನೋ ಕ್ಷೀರಾನ್ನವನ್ನೋ ಚಪ್ಪರಿಸುತ್ತಾ "ಆಹಾ! ಅಮೃತದ ಹಾಗಿದೆ!" ಎನ್ನುವುದುಂಟು. ಬಿಸಿಬಿಸಿ ಗಸಗಸೆಪಾಯಸವನ್ನು ಪಾನಮಾಡಿದರೆ ಅದು ಆಸ್ವಾದ್ಯವೆನಿಸಬಹುದು; ಜೊತೆಗೆ ಒಂದಿಷ್ಟು ಮತ್ತನ್ನೂ ಬರಿಸಬಹುದು. ಅಂತಹ ಸೊಗಸಾದ ಪಾಯಸವನ್ನು ಕಾಣುತ್ತಲೇ ಬಾಯಿಯಲ್ಲಿ ನೀರೂರಬಹುದು. ಆದರೆ, ಅದನ್ನು ಆಸೆಪಟ್ಟು ನೋಡುವ ಕಣ್ಣುಗಳನ್ನು ಸಂಬೋಧಿಸಿ, "ಕಣ್ಣುಗಳೇ, ಅದೇನು ಹಾಗೆ ಮಿಕಿಮಿಕಿ ನೋಡುತ್ತಿದ್ದೀರಿ? ನೀವೂ ಸ್ವಲ್ಪ ತೆಗೆದುಕೊಳ್ಳಿ!  - ಎಂದು ಹೇಳಿಕೊಂಡು, ಕಣ್ಣಿಗೇ ಒಂದಿಷ್ಟು ಪಾಯಸ ಹಾಕಲಾಗುವುದೇ?" (ಇದು ಬೇರೊಂದು ಸಂದರ್ಭದಲ್ಲಿ – ಒಂದೊಂದು ಇಂದ್ರಿಯದ ಕ್ಷೇತ್ರವೂ ಕಾರ್ಯವೂ ಬೇರೆಬೇರೆಯೆಂದು ಉದಾಹರಣೆಗಾಗಿ ಪ್ರತಿಪಾದಿಸುವ ಸಂದರ್ಭದಲ್ಲಿ - ಶ್ರೀರಂಗಮಹಾಗುರುಗಳು ಆಡಿದ ತಮಾಷೆಯ ಮಾತು).

ಹಾಗಾದರೆ ಕರ್ಣಾಮೃತವೆಂದರೇನು?


ಕಣ್ಣಿನಿಂದ ಕುಡಿಯುವುದೇ ನೆಕ್ಕುವುದೇ?

ನಾಲಿಗೆಗೆ ಅಮೃತವೆಂತು ಆಪ್ಯಾಯಕವೋ, ಅಂತೆಯೇ ಕಿವಿಗಳಿಗೆ ಆಪ್ಯಾಯಕವಾಗಿರುವುದು ಕರ್ಣಾಮೃತ. (ಪದಗಳ ಪರಿಚಯ: ಯಾವುದು ಆಪ್ಯಾಯನವನ್ನು ಉಂಟುಮಾಡುವುದೋ ಅದು ಆಪ್ಯಾಯಕ ಅಥವಾ ಆಪ್ಯಾಯನಕರ. ಆಪ್ಯಾಯನವೆಂದರೆ ಉತ್ಕಟತೃಪ್ತಿ; ಸಂತೋಷದಿಂದ ಉಬ್ಬಿಹೋಗುವುದು. ಆಪ್ಯಾಯಮಾನವೆಂದರೆ ಅಂತಹ ಸ್ಥಿತಿಯನ್ನು ಉಂಟುಮಾಡು(ತ್ತಿರು)ವಂತಹುದು).

ಇಲ್ಲಿ ನಾಲಿಗೆಯಿಂದ ಅನುಭವಿಸುವ ಪರಿಯನ್ನು ಕಿವಿಗೆ "ಆರೋಪಿಸಿದೆ". (ಆರೋಪಿಸುವುದೆಂದರೆ ಒಂದು ವಸ್ತುವಿನಲ್ಲಿ ಇಲ್ಲದ ಧರ್ಮವನ್ನು ಅದರ ಮೇಲೆ ಏರಿಸುವುದು, ಹೊರಿಸುವುದು; ಧರ್ಮವೆಂದರೆ ಗುಣ-ಸ್ವಭಾವಗಳು.) ಒಂದು ಇಂದ್ರಿಯದ ನಡೆಯನ್ನು ಕಾವ್ಯಾತ್ಮಕವಾಗಿ ಮತ್ತೊಂದು ಇಂದ್ರಿಯದ ಮೇಲೆ ಹೀಗೆ ಆರೋಪಿಸುವುದಾದಲ್ಲಿ ಇಂಗ್ಲೀಷಿನಲ್ಲಿ ಅದಕ್ಕೆ ಸೈನೇಸ್ತಟಿಕ್ಸ್ ಎನ್ನುತ್ತಾರೆ. ಏನು ಹಾಗೆಂದರೆ? 'ಏಸ್ತೆಟಿಕ್' ಎಂದರೆ ಇಂದ್ರಿಯಕ್ಕೆ ವಿಷಯವಾಗುವುದು; ಸೈನೇಸ್ತೆಟಿಕ್ ಎಂದರೆ ಒಂದು ಇಂದ್ರಿಯದ ಕೆಲಸವನ್ನು ಮತ್ತೊಂದು ಮಾಡುವಂತೆ ಚಿತ್ರಿಸುವುದು. ಇದಕ್ಕೆ ಪ್ರಸಿದ್ಧಕಾವ್ಯವೊಂದರಿಂದ ಉದಾಹರಣೆಯನ್ನು ಕೊಡಬಹುದು.

ಕಾಳಿದಾಸನ ರಘುವಂಶದಲ್ಲಿ ಬರುವ ಮಾತಿದು. ದಿಲೀಪನು ನಂದಿನೀಧೇನುವಿನ ಸೇವೆಯನ್ನು ಒಂದಿಷ್ಟುಕಾಲ ಮಾಡಿ ವರವನ್ನು ಪಡೆದು ತನ್ನ ರಾಜಧಾನಿಗೆ ಪತ್ನಿಯೊಂದಿಗೆ ಚಿರಕಾಲವಾದ ಮೇಲೆ ಹಿಂದಿರುಗುತ್ತಿದ್ದಾನೆ. ಪ್ರಜೆಗಳು ಆತನ ಬರುವಿಕೆಗಾಗಿ ಬಹುವಾಗಿ ಹಾತೊರೆಯುತ್ತಿದ್ದರು. ಆತನು ಬಂದೊಡನೆ "ಆತನನ್ನು ಪ್ರಜೆಗಳು 'ಕಣ್ಗಳಿಂದ ಕುಡಿದರು' (ನೇತ್ರೈಃ ಪಪುಃ)" ಎನ್ನುತ್ತಾನೆ, ಕವಿ! "ಕಣ್ತುಂಬ ನೋಡಿದರು" ಎಂದು ಹೇಳುವುದನ್ನು ಮತ್ತೂ ಒತ್ತುಕೊಟ್ಟು ಹೇಳಲು ಹಾಗೆ ಹೇಳಿರುವುದು: ಕಣ್ಣುಗಳು "ಕುಡಿದ"ವಂತೆ!  ಹಾಗೆಯೇ ಮತ್ತೊಬ್ಬ ಕವಿಯು ಒಬ್ಬನನ್ನು, "ಆತನು ಮನ್ಮಥನಂತೆ ಸುಂದರನಾದವನು" ಎಂದು ಹೇಳುವುದಕ್ಕೆ "ರತಿಯ ಕಣ್ಣುಗಳೇ ನೆಕ್ಕಲು ಬಯಸುವಂತಹ ರೂಪ ಆತನದು" ಎಂದು ಚಿತ್ರಿಸಿದ್ದಾನೆ: ಕಣ್ಣುಗಳು "ನೆಕ್ಕುವು"ವಂತೆ!

ಹೀಗೆ ಕಣ್ಣಿನಿಂದಲೋ ಕಿವಿಯಿಂದಲೋ "ಕುಡಿಯುವುದನ್ನು" ಕವಿಗಳು ಹೇಳುವುದುಂಟು.

ಈ ಪ್ರಕಾರವಾಗಿಯೇ, ಕಿವಿಗಳಿಗೆ ಅತ್ಯಂತ ಪ್ರಿಯವಾಗುವಂತಹುದನ್ನು ಕರ್ಣರಸಾಯನ, ಕರ್ಣಾಮೃತ ಮುಂತಾದ ಪದಗಳಿಂದ ಕರೆಯುವರು; ಅಮೃತವನ್ನಾಗಲಿ ರಸಾಯನವನ್ನಾಗಲಿ ಆಸ್ವಾದಿಸತಕ್ಕವು ನಾಲಿಗೆಗಳೇ ಆದರೂ, ಅಮೃತ-ರಸಾಯನಗಳೊದಗಿಸುವ ತೃಪ್ತಿಯು ಕಿವಿಗಳಿಗೆ ಇಲ್ಲಿ ಈಗ ಒದಗಿದೆ - ಎಂಬ ತಾತ್ಪರ್ಯವಿಲ್ಲಿದೆ.


ಶ್ರೋತೃಗಳಿಗೆ ಕರ್ಣಾಮೃತ

ಹೀಗೆ ಕಿವಿಗಳ ಮೇಲೆ ಬಿದ್ದಷ್ಟೂ ಉನ್ನತಸುಖವನ್ನೇ ಕೊಡತಕ್ಕ ಕೃತಿಯಿದು. ಓದುಗರು ಈ ಕಾವ್ಯವನ್ನು ಮನಸ್ಸಿನಲ್ಲಿ ಓದಿಕೊಂಡು ಅಲ್ಲಿಯ ಸುಂದರವಾದ ಭಾವಗಳಿಗೆ ಸಂತೋಷಿಸುವುದು ಮಾತ್ರವಲ್ಲ; ಇದನ್ನು ಗಟ್ಟಿಯಾಗಿ ಓದಿ ಕರ್ಣಾನಂದವನ್ನೂ ಪಡೆಯಬೇಕು: ಭಾಷೆಯ ಸೌಂದರ್ಯ, ನುಡಿಗಟ್ಟಿನ ಸೌಂದರ್ಯ, ಅನುಪ್ರಾಸಾದಿಗಳ ಸೌಂದರ್ಯ, ಅರ್ಥಾಲಂಕಾರಗಳ ಸೌಂದರ್ಯ, ಧ್ವನಿಯ ಸೌಂದರ್ಯ - ಇವುಗಳಿಗೂ ಕಿವಿಗೊಟ್ಟು ಚಪ್ಪರಿಸಬೇಕು.

ಅಷ್ಟೇ ಅಲ್ಲ, ಇಲ್ಲಿಯ ಶ್ಲೋಕಗಳ ಗಾನವನ್ನೂ ಆಸ್ವಾದಿಸಬೇಕು. ಸರಿಯಾದ ಉಚ್ಚಾರಣೆಯನ್ನು ಬಲ್ಲವರು ಹಾಡಿದರೆ ಸೊಗಸು. ಪದಗಳ ಅರ್ಥವನ್ನು ಗಮನಿಸಿಕೊಳ್ಳುತ್ತಾ ಹಾಡುವವರಾದರೆ ಮತ್ತೂ ಚೆನ್ನೇ. ರಸಾನುಭವದೊಂದಿಗೆ ಹಾಡಿದರೆ ಹಾಡಿಗೇ ಕಳೆಕಟ್ಟುತ್ತದೆ. ಶ್ರೀಕೃಷ್ಣನಲ್ಲಿ ಪರಮಭಕ್ತಿಯನ್ನು ಹೊಂದಿ ಹಾಡುವವರಾದರಂತೂ ಅದಿದೋ ಕಳಶಪ್ರಾಯವಾದುದು! ಇವೆಲ್ಲವೂ ಶ್ರೋತ್ರಗಳಿಗೆ, ಎಂದರೆ ಕಿವಿಗಳಿಗೆ, ಗೋಚರ. (ಶ್ರೋತೃವೆಂದರೆ ಕೇಳುಗ; ಶ್ರೋತ್ರವೆಂದರೆ ಕಿವಿ.) ಹೀಗಾಗಿ ಶ್ರೋತೃಗಳ ಶ್ರೋತ್ರಗಳಿಗೆಲ್ಲಾ ಕರ್ಣಾಮೃತವಾದದ್ದು, ಈ ಕೃತಿ.

ಮೇಲಾಗಿ, ನವವಿಧಭಕ್ತಿಗಳಲ್ಲಿ ಶ್ರವಣಭಕ್ತಿಗೇ ಅಗ್ರಸ್ಥಾನವಲ್ಲವೇ? ಹೀಗಾಗಿ ಶ್ರವಣಾನಂದವನ್ನೂ ಭಗವದ್ಭಕ್ತಿಯನ್ನೂ ತುಂಬಿಕೊಂಡು, ಅಂತಹ ಗಾನದ ಶ್ರವಣವನ್ನು ಮಾಡಿದವರ ಭಾಗ್ಯ ಅಸಾಮಾನ್ಯವಾದುದೇ!

ಗೀತಗೋವಿಂದವನ್ನು ಕುರಿತೂ ಹೀಗೆಯೇ ಹೇಳುವುದು: "ಶ್ರುತಿಪುಟ-ಪರಿಪೇಯಂ ಗೀತಗೋವಿಂದ-ಗೇಯಮ್". ಎಂದರೆ, ಕಿವಿದೆರೆಗಳಿಂದ ಕುಡಿಯಬೇಕಾದದ್ದು, ಈ ಗೀತಗೋವಿಂದವೆಂಬ ಗೇಯಕೃತಿ! (ಇಲ್ಲಿಯೂ  "ಗೇಯ"-"ಪೇಯ"ಗಳ ಮನೋಹರವಾದ ಅನುಪ್ರಾಸವು ಕಿವಿಗಳಿಗೆ ಆಪ್ಯಾಯಕವಾಗಿರುವುದಷ್ಟೆ.)


ಕೃಷ್ಣನಿಗೂ ಕರ್ಣಾಮೃತವೇ!

ಈ ಕರ್ಣಾಮೃತವೆಂಬುದು ಶ್ರೋತೃಗಳಾಗಿ ಬರುವ ಸಂಸ್ಕಾರಶಾಲಿ-ಸುಜನರಿಗಾಗಿ ಮಾತ್ರವಲ್ಲ. ಇದು ಸಾಕ್ಷಾತ್ ಶ್ರೀಕೃಷ್ಣನೆಂಬ ಶ್ರೋತೃವಿನ ಕರ್ಣಗಳಿಗೇ ಅಮೃತವಾಗಿರುವಂತಹುದು! ಹಾಗೆಂಬುದು ನಮ್ಮ ಲೆಕ್ಕಾಚಾರವಲ್ಲ, ಊಹೆಯಲ್ಲ. ಅದು ಶ್ರೀಲೀಲಾಶುಕನೇ ಕಂಠೋಕ್ತವಾಗಿ ಹೇಳಿರುವುದು!

ಪೂರ್ಣಶ್ಲೋಕದಲ್ಲಿ ಇನ್ನೂ ಹಲವು ಸೊಗಸುಗಳುಂಟು. ಅದನ್ನು ತೋರುವ ಮೊದಲು ಕನಕದಾಸರ ಉಪಮೆಯೊಂದನ್ನು ಆಸ್ವಾದಿಸಿದರೆ ಇಲ್ಲಿಯ ಸೊಬಗು ಚೆನ್ನಾಗಿ ತೋರುವುದು. ಅವರ ಹರಿಭಕ್ತಿಸಾರವೆಂಬ ಕೃತಿಯಲ್ಲಿಯ ಸುಂದರವಾದ ಈ ಒಂದು ಪದ್ಯವನ್ನು ನೋಡಿ:  

"ಗಿಳಿಯ ಮರಿಯನು ತಂದು, ಪಂಜರದೊಳಗೆ ಪೋಷಿಸಿ, ಕಲಿಸಿ ಮೃದು ನುಡಿಗಳನು, ಲಾಲಿಸಿ, ಕೇಳ್ವ ಪರಿಣತರಂತೆ -ನೀನೆನಗೆ ತಿಳುಹಿ ಮತಿಯನು, ಎನ್ನ ಜಿಹ್ವೆಗೆ ಮೊಳಗುವಂದದಿ ನಿನ್ನ ನಾಮಾವಳಿಯ ಪೊಗಳಿಕೆಯಿತ್ತು, ರಕ್ಷಿಸು ನಮ್ಮನನವರತ! ||"

ನಾವೇ ಸಾಕಿದ ಗಿಳಿಮರಿಯಿರಬಹುದು. ಆದರೆ ಅದು ಮಧುರವಾದ ಧ್ವನಿಗಳನ್ನು ಮಾಡುವುದನ್ನೋ, ನಮ್ಮ ಉಕ್ತಿಗಳನ್ನೇ ಪ್ರತಿಧ್ವನಿಸುವುದನ್ನೋ ಮಾಡಿದಾಗ, ಅದರಲ್ಲಿ ಒಂದಿಷ್ಟು ಅಸ್ಪಷ್ಟತೆಯಿದ್ದರೂ, ಅದರ ರೂಪದ ಮುದ್ದು, ಕಂಠದ ಮುದ್ದುಗಳನ್ನೋ, ಅದಾಡುವ ಮಾತುಗಳ ಒಟ್ಟಿನ ಸವಿಯನ್ನೋ, ಮೆಚ್ಚಿ ಸಂತೋಷಿಸುವುದುಂಟಲ್ಲವೆ? ಪರಿಣತರಿಗೆ ವಾಕ್-ಶುದ್ಧಿಯ ಕಡೆ ವಿಶೇಷ ಗಮನವಿರುತ್ತದೆ; ಆದರೂ ಮಕ್ಕಳ, ಮರಿಗಳ ತೊದಲುನುಡಿಗಳನ್ನೂ ಅವರೂ ಆಸ್ವಾದಿಸುವರೇ ಸರಿ!

ಇದನ್ನೇ "ಮಂಜೂನಿ ಪಂಜರ-ಶಕುಂತ-ವಿಜಲ್ಪಿತಾನಿ" ಎನ್ನುವರು. ಶುಕವೆಂದರೆ ಗಿಣಿ. ಮುದ್ದಿಗಾಗಿ ಪ್ರೀತಿಗಾಗಿ ಸಾಕಿದ ಗಿಳಿಯನ್ನೇ "ಲೀಲಾಶುಕ"ವೆನ್ನುವುದು. ಇದೋ, ನಮ್ಮ ಕವಿಯ ಹೆಸರೂ ಅದೇ! ಆದ್ದರಿಂದ ಕವಿಯು ಈ ಅರ್ಥದಲ್ಲೂ ತನ್ನನ್ನು  ಹಾಗೆಂದು ನಿರ್ದೇಶಿಸಿಕೊಂಡು, "ಓ ಕೃಷ್ಣದೇವನೇ, ಲೀಲಾಶುಕದಂತಿರುವ ಈ ಲೀಲಾಶುಕನಿಂದ ರಚಿತವಾದ ಈ ಕೃತಿಯು ನಿನ್ನ ಕಿವಿಗಳಿಗೆ ಅಮೃತಪ್ರಾಯವಾಗಲಿ" ಎಂದು ಅಂತ್ಯಮಂಗಲಶ್ಲೋಕವೊಂದರಲ್ಲಿ ಬೇಡಿಕೊಳ್ಳುತ್ತಾನೆ! "ಲೀಲಾಶುಕೇನ ರಚಿತಂ ತವ ದೇವ ಕೃಷ್ಣ ಕರ್ಣಾಮೃತಂ"!

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ24/2/2024 ರಂದು ಪ್ರಕವಾಗಿದೆ.