Thursday, February 8, 2024

ಅನಧ್ಯಯನ ಮತ್ತು ಅದರ ಹಿನ್ನೆಲೆ (Anadhyayana Mattu Adara Hinnele)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)


ಅನಧ್ಯಾಯ, ಅನಧ್ಯಯನ ಎಂಬೆಲ್ಲಾ ಪದಗಳನ್ನು ಕೇಳಿರಬಹುದು. ವೇದ, ಸಂಸ್ಕೃತವನ್ನು ಪಾಠಮಾಡುವ ಪಾಠಶಾಲೆ, ಮಹಾವಿದ್ಯಾಲಯ ಮುಂತಾದ ಕಡೆ ಈ ಶಬ್ದದ ಬಳಕೆ ಬಹಳವಾಗಿ ಆಗುತ್ತಿತ್ತು. ಇಂದು ಈ ಪದವನ್ನು ಕೇಳುವುದೇ ವಿರಳವಾಗಿದೆ. ಆದ್ದರಿಂದ ಅದರ ಬಗ್ಗೆ ಕೆಲವು ಸಂಗತಿಗಳನ್ನು ತಿಳಿಯುವ ಕಾರ್ಯವಿದಾಗಿದೆ. ಅಧ್ಯಾಯ ಅಥವಾ ಅಧ್ಯಯನ ಇಲ್ಲದಿರುವ ದಿನಕ್ಕೆ ಅನಧ್ಯಾಯ ಅಥವಾ ಅನಧ್ಯಯನ ಎಂದು ಹೇಳಬಹುದು. ವಿರಾಮ ಅಥವಾ ರಜೆ ಎಂದು ಇದಕ್ಕೆ ಅರ್ಥ. ಅಧ್ಯಯನ ಎಂದರೆ ಗುರುವು ಹೇಳಿಕೊಟ್ಟ ಪಾಠದ ಕಡೆ ನಮ್ಮ ಲಕ್ಷ್ಯವಿಡುವ ಅತ್ತ ನಮ್ಮ ಮತ್ತಿಯನ್ನು ಹರಿಸುವ ಸಂದರ್ಭ. ಅನಧ್ಯಯನದ ದಿನಗಳಲ್ಲಿ ಈ ವ್ಯಾಪಾರ ಇರುವುದಿಲ್ಲ ಎಂದರ್ಥ. ಈ ದಿನಗಳಲ್ಲಿ ಅಧ್ಯಯನ ಇರುವುದಿಲ್ಲ ಎಂಬ ಅರ್ಥವಲ್ಲ. ಹೊಸದಾಗಿ ತಿಳಿಯುವ ಪ್ರಕ್ರಿಯೆ ಇರುವುದಿಲ್ಲ ಎಂಬುದಷ್ಟೇ ಅರ್ಥ. ನಮಗೆ ತಿಳಿಯದ ವಿಷಯವನ್ನು ತಿಳಿದವರಿಂದ ಅಂದರೆ ಗುರುಜನರಿಂದ ತಿಳಿಯುವ ವಿಧಾನವೇ ಅಧ್ಯಯನ. ತಿಳಿದ ವಿಷಯವನ್ನು ಮತ್ತೆ ಮತ್ತೆ ಅನುಸಂಧಾನವನ್ನು ಮಾಡುತ್ತಲೇ ಇರಬೇಕು. ಇದಕ್ಕೆ ಅಭ್ಯಾಸವೆಂದು ಕರೆಯಬಹುದು. ಇದಕ್ಕೆ ವಿರಾಮ ಅಥವ ರಜೆ ಎಂಬುದು ಇರುವುದಿಲ್ಲ. ಏಕೆಂದರೆ ಅದು ಪ್ರತಿನಿತ್ಯ ಮಾಡುವ ಕಾರ್ಯವಾಗಿರುತ್ತದೆ. ಅದಕ್ಕೆ ಉಪನಿಷತ್ತಿನಲ್ಲಿ 'ಸ್ವಾಧ್ಯಾಯ-ಪ್ರವಚನಾಭ್ಯಾಂ ನ ಪ್ರಮದಿತವ್ಯಮ್' ಎಂಬುದಾಗಿ ಅದನ್ನು ನಿತ್ಯಕರ್ಮ ಎಂಬುದಾಗಿ ಹೇಳಿದ್ದಾರೆ. ಯಾವುದು ನಿತ್ಯಕರ್ಮವೋ ಅದನ್ನು ಬಿಡುವಂತಿಲ್ಲ. ಬಿಟ್ಟರೆ ಅದು ನಿತ್ಯಕರ್ಮವೂ ಆಗುವುದಿಲ್ಲ. ನಿತ್ಯಕರ್ಮವಾಗಿದ್ದರೆ ಬಿಡುವುದರಿಂದ 'ಪ್ರತ್ಯವಾಯ' ಎಂಬ ದೋಷವೂ ಬರುತ್ತದೆ ಹಾಗಾಗಿ ಇಲ್ಲಿ ಹೇಳಿರುವ ವಿರಾಮವು ಸ್ವಂತ ಅಧ್ಯಯನಕ್ಕೆ ಹೇಳಿರುವದಲ್ಲ, ಹೊಸದಾಗಿ ತಿಳಿಯುವುದಕ್ಕೆ ಹೇಳಿರುವ ವಿರಾಮ. ಅಂದರೆ ಹೊಸದಾಗಿ ಗುರುವಿನಿಂದ ಅನಧ್ಯಯನದ ದಿನಗಳಲ್ಲಿ ಪಾಠವನ್ನು ಮಾಡಿಸಿಕೊಳ್ಳಬಾರದು ಎಂಬುದು ಈ ಅನಧ್ಯಯನ ಎಂಬ ಪದಕ್ಕಿರುವ ಅರ್ಥವಾಗಿದೆ.  ಹೊಸದಾಗಿ ತಿಳಿಯುವುದಕ್ಕೆ ಶಾಸ್ತ್ರದಲ್ಲಿ ಯಾವಾಗ ವಿರಾಮವನ್ನು ಕೊಟ್ಟಿದ್ದಾರೆ? ಆ ಆ ದಿನಗಳಲ್ಲೇ ಅಧ್ಯಯನಕ್ಕೆ ವಿರಾಮವನ್ನು ಕೊಡಲು ಕಾರಣವೇನು? ಎಂಬಿತ್ಯಾದಿ ವಿಚಾರಗಳನ್ನು ತಿಳಿಯೋಣ. 


ನಿತ್ಯ ಮತ್ತು ನೈಮಿತ್ತಿಕ ಎಂದು ಎರಡು ಬಗೆಯ ಅನಧ್ಯಾಯಗಳಿವೆ. ಯಾವುದೋ ಒಂದು ನಿಯತವಾದ ಕಾಲಘಟ್ಟದಲ್ಲಿ ಪಾಠವನ್ನು ಮಾಡಬಾರದು ಎಂದು ಹೇಳಿದ್ದಕ್ಕೆ 'ನಿತ್ಯಾಧ್ಯಯನ'ವೆಂದೂ, ಯಾವುದೋ ನಿಮಿತ್ತ ಒದಗಿದಾಗ ಹೇಳಿರುವ ವಿರಾಮಕ್ಕೆ 'ನೈಮಿತ್ತಿಕ ಅನಧ್ಯಯನ' ಎಂದೂ ಕರೆಯಲಾಗುತ್ತದೆ. ಚಾಂದ್ರಮಾನದ ಪ್ರಕಾರ ಚೈತ್ರ, ವೈಶಾಖ ಮೊದಲಾದ ಹನ್ನೆರಡು ಮಾಸಗಳು. ಅವುಗಳಲ್ಲಿ ಶುಕ್ಲ ಮತ್ತು ಕೃಷ್ಣ ಎಂಬುದಾಗಿ ಎರಡೆರಡು ಪಕ್ಷಗಳು, ಪ್ರತಿಪಕ್ಷದಲ್ಲೂ ಪಾಡ್ಯ, ಅಷ್ಟಮಿ, ಚತುರ್ದಶಿ, ಹುಣ್ಣಿಮೆ ಮತ್ತು ಅಮಾವಾಸ್ಯೆಗಳು ಬರುತ್ತವೆ. ಇವುಗಳನ್ನು ನಿತ್ಯಾನಧ್ಯಯನ ಎನ್ನಲಾಗುತ್ತದೆ. ಇದರ ಜೊತೆಗೆ ಋತುಸಂಧಿ, ಅಯನಸಂಧಿ, ಶ್ರಾದ್ಧದ ದಿನ ಹೀಗೆ ಇನ್ನೂ ಕೆಲವು ದಿನಗಳನ್ನು ನಿತ್ಯಾನಧ್ಯಯನ ಎನ್ನಲಾಗುತ್ತದೆ. ಸಂಧ್ಯಾಕಾಲದಲ್ಲಿ ಮೇಘಗರ್ಜನೆ, ಆಕಾಶದಲ್ಲಿ ಉಲ್ಕಾಪಾತ, ಭೂಕಂಪನ ಮೊದಲಾದ ನಿಮಿತ್ತ ಒದಗಿದಾಗಲೂ ಪಾಠವನ್ನು ಮಾಡುವಂತಿಲ್ಲ. ಇದನ್ನು ನೈಮಿತ್ತಿಕಾನಧ್ಯಯನ ಎನ್ನಲಾಗುತ್ತದೆ. ಇನ್ನೂ ಅನೇಕ ಅನಧ್ಯಾಯಗಳ ಪಟ್ಟಿಯನ್ನು ಶಾಸ್ತ್ರದಲ್ಲಿ ಮಾಡಲಾಗಿದೆ. ಹೀಗೆ ಇಂತಹ ದಿನಗಳು ಹೊಸದಾಗಿ ವಿದ್ಯೆಯನ್ನು ಆರಂಭ ಮಾಡಲು ಅಥವಾ ಕಲಿಯುತ್ತಿರುವ ವಿದ್ಯೆಯನ್ನು ಮುಂದುವರಿಸಲೂ ಸೂಕ್ತವಲ್ಲ ಎಂದು ಹೇಳಲಾಗಿದೆ. 


ಹಾಗಾದರೆ ಇದಕ್ಕೆ ಕಾರಣವೇನು? ಇಲ್ಲಿ ಏನಾದರೂ ವಿಜ್ಞಾನವಿದೆಯೇ? ಅಥವಾ ಯಾವುದೋ ಕಾಲದಿಂದ ತಿಳಿಯದೇ ಆಚರಣೆ ಮಾಡಿಕೊಂಡು ಬಂದ ಮೌಢ್ಯವೇ? ಇಂದು ನಾವು ಪ್ರತಿಭಾನುವಾರವನ್ನು ಸರಕಾರಿ ರಜೆ ಎಂಬುದಾಗಿ ತಿಳಿದು ಪಾಠಕ್ಕೆ ವಿರಾಮವನ್ನು ತೆಗೆದುಕೊಳ್ಳುತ್ತಿದ್ದೇವೆ. ಇದರಿಂದ ನಮಗೇನೂ ಆಪತ್ತಾಗಲಿ, ಬಾಧಕವಾಗಲಿ ಕಾಣಲಿಲ್ಲವಲ್ಲ! ಇಂತಹ ವಿಷಯಗಳಿಗೆ ನಾವು ಯಾವ ರೀತಿ ಸ್ಪಂದಿಸಬೇಕು? ಎಂಬ ಸಂಶಯ ನಮಗೆ ಬಾರದಿರದು. ಅದನ್ನು ತಿಳಿಯುವ ಕಿರು ಪ್ರಯತ್ನವಿದಾಗಿದೆ. 


ಯಾವುದೇ ವಿದ್ಯೆಯನ್ನು ಸಂಪಾದಿಸಲು ಮನಸ್ಸು ಪ್ರಸನ್ನವಾಗಿರಬೇಕು ಎಂಬುದನ್ನು ಒಪ್ಪಲೇಬೇಕು. ಮನಸ್ಸು ಪ್ರಸನ್ನವಾಗಿದ್ದಾಗ ಹೊಸದಾದ ಅರಿವನ್ನು ಅಲ್ಪಪ್ರಯತ್ನದಿಂದ ಪಡೆಯಲು ಸಾಧ್ಯ. ಇಂತಹ ಮನಸ್ಸು ಕೂಡಿಬರಲು ಕಾಲ, ದೇಶ, ಸನ್ನಿವೇಶ ಮೊದಲಾದವುಗಳೂ ಅಷ್ಟೇ ಪೂರಕ ಆಗಬಹುದು. ಇದರ ಜೊತೆಜೊತೆಗೆ ಕೆಲವು ಕಾಲಸನ್ನಿವೇಶಗಳು ಪೂರಕವಾಗದೆಯೂ ಇರಬಹುದು. ಮತ್ತು ಎಲ್ಲಾ ಕಾಲವೂ ಎಲ್ಲದಕ್ಕೂ ಯೋಗ್ಯವಲ್ಲ, ಎಲ್ಲದಕ್ಕೂ ಬಾಧಕವೂ ಅಲ್ಲ. ಓದಲು ಅನುಕೂಲವಾದುದು ಪೂಜೆಗೆ, ಧ್ಯಾನಕ್ಕೆ ಯೋಗ್ಯವಾಗದೇ ಇರಬಹುದು. ಇದನ್ನು ಪರಿಗಣಿಸಿ ನಮ್ಮ ಸನಾತನ ಋಷಿಗಳು ಇಂತಹ ದಿನವನ್ನು ಅನಧ್ಯಯನಕ್ಕೆ ಬಳಸಿಕೊಳ್ಳಿ; ಇಂತಹ ದಿನಗಳನ್ನು ಭಗವಂತನನ್ನು ಅರ್ಚಿಸಲು ಬಳಸಿಕೊಳ್ಳಿ ಎಂಬುದಾಗಿ ನಿರ್ದೇಶಿಸಿದ್ದಾರೆ ಎನ್ನಬಹುದು. ಕಾಲದಲ್ಲಿ ಕೆಲವು ಘಟ್ಟಗಳು ಬಾಹ್ಯವ್ಯವಹಾರಕ್ಕೂ, ಇನ್ನು ಕೆಲವು ನಮ್ಮ ಅಂತರಂಗದ ಸಾಧನೆಗೂ ಬಳಕೆಯಾಗುವಂತೆ ಇರುತ್ತವೆ. ಆದ್ದರಿಂದ ಅನಧ್ಯಾಯಗಳು ಅಂತರಂಗದ ಸಾಧನೆಗೆ ಮೀಸಲಾದ ದಿನಗಳು ಎಂದು ಭಾವಿಸಬೇಕಾದ ದಿನಗಳು. ಇಲ್ಲಿ ಹೇಳಲಾದ ನಿತ್ಯಾನಧ್ಯಾಯಗಳು ಯಾವುದೋ ಎರಡು ಕಾಲದ ಸಂಧಿಯನ್ನು ನಿಮಿತ್ತವಾಗಿ ಹೇಳಲ್ಪಟ್ಟಿವೆ. ಸಾಮಾನ್ಯವಾಗಿ ಸಂಧಿಯ ಕಾಲವನ್ನು ಅಂತರಂಗದ ಸಾಧನೆಗಾಗಿ ಬಳಸುವ ಅಭ್ಯಾಸವಿದೆ. ಅದಕ್ಕೆ ಸಂಧ್ಯಾವಂದನೆ ಎಂಬ ಹಿರಿದಾದ ನಿತ್ಯಕರ್ಮವನ್ನು ಆ ಕಾಲದಲ್ಲಿ ಮಾಡುವ ಅಭ್ಯಾಸ ಬಂದಿದೆ. ಈ ಸಮಯವು ವಿಶೇಷವಾಗಿ ಭಗವಂತನ ಧ್ಯಾನ ಪೂಜೆ ಮೊದಲಾದ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುವ ರೂಢಿ ನಮ್ಮಲ್ಲಿ ಬಂದಿದೆ. ಅಧ್ಯಯನವು ಬಾಹ್ಯವಾದ ವ್ಯವಹಾರವಾಗಿದೆ. ಆದ್ದರಿಂದ ಕಾಲಸಂಧಿಯನ್ನು ಪಾಠವನ್ನು ಗುರುವಿನಿಂದ ಹೇಳಿಸಿಕೊಳ್ಳಲು ಬಳಸಿಕೊಳ್ಳುವುದು ಸರಿಯಲ್ಲ ಎಂಬುದಾಗಿ ಚಿಂತಿಸಿ ಅದನ್ನು ಅನಧ್ಯಯನವಾಗಿ ಹೇಳಿದ್ದಾರೆ. ಇನ್ನು ನೈಮಿತ್ತಿಕ ಅನಧ್ಯಾಯಗಳಲ್ಲಿ ಓದಿಗೆ ಬೇಕಾದ ಅನುಕೂಲವಾದ ವಾತಾವರಣವಿರುವುದಿಲ್ಲ ಎಂಬ ಕಾರಣಕ್ಕೆ ಅನಧ್ಯಾಯ ಎಂದು ಗುರುತಿಸಿದ್ದಾರೆ. ಕಾಲದಲ್ಲಿ ಯಾವುದೂ ಕೆಟ್ಟದ್ದು  ಎಂಬುದಿಲ್ಲ; ಆದರೆ ಇದು  ಈ ಕಾರ್ಯಕ್ಕೆ ಒಳ್ಳೆಯದು, ಇದು ಈ ಕಾರ್ಯಕ್ಕೆ ಕೆಟ್ಟದ್ದು ಎಂದು ಕಾರ್ಯವನ್ನು ಆಧಾರವಾಗಿಟ್ಟುಕೊಂಡು ಸುಕಾಲ ಅಕಾಲ ಎಂಬ ವ್ಯವಸ್ಥೆಯನ್ನು ತಂದಿದ್ದಾರೆ. ಈ ನಿಯಮ ಪ್ರಸ್ತುತ ಅನಧ್ಯಾಯಕ್ಕೂ ಇದೆ ಎಂದು ನಾವು ಅಂದುಕೊಳ್ಳೋಣವಲ್ಲವೇ!. ಒಟ್ಟಾರೆ ಹೇಳುವುದಾದರೆ ಎಲ್ಲದಕ್ಕೂ ಮನಸ್ಸು ಕಾರಣ. ಅದನ್ನು ಹದವಾಗಿಟ್ಟುಕೊಳ್ಳಲು ಕಾಲವನ್ನು ಬಳಸಿಕೊಳ್ಳುವ ವಿಧಾನವಿದಾಗಿದೆಯಷ್ಟೆ.


ಸೂಚನೆ: 18/05/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಲ್ಲಿ ಪ್ರಕಟವಾಗಿದೆ.