Monday, February 26, 2024

ಅಷ್ಟಾಕ್ಷರೀ​ - 53 ವಕ್ತಾ ಶ್ರೋತಾ ಚ ದುರ್ಲಭಃ (Astaksari 53 Vakta Shrota Cha Durlabhah)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಲೋಕದಲ್ಲಿ ತುಂಬ ಜನರು ಜಾಣರಲ್ಲವೆಂದೇ ಹೇಳಬೇಕಾಗುವುದೋ ಏನೋ! ಏಕೆ? ಏಕೆಂದರೆ ಜಾಣರಾದವರು ಸ್ವಾನುಭವವಿಲ್ಲದೆಯೂ ಎಚ್ಚರಿಕೆಯ ಪಾಠಗಳನ್ನು ಕಲಿಯುತ್ತಾರೆ. ಅದು ಹೇಗೆ? ಹೇಗೆಂದರೆ ಬೇರೆಯವರ ಜೀವನಾನುಭವಗಳನ್ನು ಗಮನಿಸಿಕೊಂಡೇ ಅವರು ಎಚ್ಚರಗೊಂಡುಬಿಡುವರು! ನಮ್ಮ ಇತಿಹಾಸ-ಪುರಾಣಗಳನ್ನೇ ಒಮ್ಮೆ ನೋಡಿ: ಅಲ್ಲೇನು ಬರೀ ರಾಜ-ಮಹಾರಾಜರುಗಳ ಕಥೆಯೇ? ಅಥವಾ ಕೇವಲ ಋಷಿ-ಮುನಿಗಳ ಕಥೆಯೇ? ಅದೆಷ್ಟು ದುಷ್ಟರ ಅನಿಷ್ಟಪ್ರವೃತ್ತಿಗಳ ಕಥನವಿರುವುದು! ದುರ್ಜನರು ಬೀಸುವ ಬಲೆಗೆ ಸಿಲುಕಿ ನರಳುವ ಅದೆಷ್ಟು ಮಂದಿ ಸಜ್ಜನರು! ಸಜ್ಜನರ ಉಪದೇಶ-ಉದಾಹರಣೆಗಳಿಂದ ಉದ್ಧಾರಗೊಂಡ ಅದೆಷ್ಟೊಂದು ದುರ್ಜನರು! ಸನ್ಮಾರ್ಗ-ದುರ್ಮಾರ್ಗಗಳಲ್ಲಿ ಸಂಚರಿಸುವ ಮನುಷ್ಯರ ಮನಸ್ಸುಗಳ ಬಗೆಬಗೆಯ ನಡೆಗಳನ್ನು ಬಿಂಬಿಸಲೆಂದೇ ಕಿರುಗತೆಗಳೂ ನೀಳ್ಗತೆಗಳೂ ಲಕ್ಷಾಧಿಕಶ್ಲೋಕಾತ್ಮಕವಾದ ಪುರಾಣಸಾಹಿತ್ಯದಲ್ಲಿ ತುಂಬಿವೆ.

ಆದರೆ ಒಮ್ಮೆ ಉಪದೇಶವಿತ್ತರೂ ತನ್ನ ತಪ್ಪನ್ನು ತಿದ್ದಿಕೊಳ್ಳದ ಭೂಪರ ಬಗ್ಗೆ ಏನೆಂದು ಹೇಳೋಣ? ಅದರಲ್ಲಿಯೂ ಮತ್ತೊಮ್ಮೆಯೂ ಉಪದಿಷ್ಟರಾದರೂ (ಎಂದರೆ ಉಪದೇಶವನ್ನು ಪಡೆದರೂ) ದುಷ್ಟತನವನ್ನು ಬಿಡದವರಾದರೆ ಏನು ಹೇಳುವುದು? ಇಬ್ಬರು ಬೇರೆಬೇರೆ ವ್ಯಕ್ತಿಗಳು ಬೇರೆಬೇರೆ ಸಂದರ್ಭಗಳಲ್ಲಿ ಒಂದೇ ಹಿತವಚನವನ್ನು ನುಡಿದಲ್ಲಿ ಆಗಲೂ ತಿದ್ದಿಕೊಳ್ಳದಿರುವುದುಂಟೆ?

ಉಂಟು! ಲೋಕಕಂಟಕನಾದ ರಾವಣನಿಗೆ ಎರಡು ಬಾರಿ ಅಪ್ತಜನರಿಂದಲೇ ಸಮಾನವಾದ ವಚನಗಳಲ್ಲೇ ಉಪದೇಶವಾಯಿತು; ಸರಿದಾರಿಗೆ ಎಳೆಯಲು ಯತ್ನಿಸಿರುವುದುಂಟು, ವಾಲ್ಮೀಕಿ ರಾಮಾಯಣದಲ್ಲಿ. ಆ ಇಬ್ಬರು ಯಾರೆಂದರೆ ಮಿತ್ರ ಮಾರೀಚ (ಅರಣ್ಯಕಾಂಡದಲ್ಲಿ) ಹಾಗೂ ತಮ್ಮ ವಿಭೀಷಣ (ಯುದ್ಧಕಾಂಡದಲ್ಲಿ). ರಾವಣನು ಇಡಬೇಕೆಂದಿರುವ ಹೆಜ್ಜೆಯನ್ನು ವಿರೋಧಿಸಿಯೇ ಇಬ್ಬರೂ ಹೇಳುವುದು. ಇಬ್ಬರೂ ಆತನಿಗೆ ಎಚ್ಚರವನ್ನು ಕೊಟ್ಟಿದ್ದರು: ತಾನಾಯ್ದುಕೊಂಡಿರುವ ದಿಕ್ಕು ಯಾವ ದುರ್ಗತಿಗೊಯ್ಯುವುದೆಂದು. ಎಚ್ಚರಗೊಳ್ಳದ ರಾವಣ ಸ್ವವಿನಾಶ-ಸ್ವಜನವಿನಾಶಗಳನ್ನು ತನ್ನ ಕೈಯಾರೆ ತಂದುಕೊಳ್ಳುವಂತಾಯಿತು.

ಏನು ಅವರಿತ್ತ ಹಿತನುಡಿ? ಅದು ರಾಕ್ಷಸರು ರಾಕ್ಷಸರಿಗೆ ಹೇಳಿಕೊಳ್ಳುವ ಹಿತವಚನ ಮಾತ್ರವೇ? ಅಥವಾ ಇಂದಿಗೂ ಏನಾದರೂ ಉಪಯುಕ್ತವೇ? - ಎಂಬುದನ್ನೊಮ್ಮೆ ನೋಡಬೇಕಲ್ಲವೆ? ಹೌದು, ಇಂದಿಗೇ ಹೆಚ್ಚಿನ ಉಪಯೋಗವಿರುವ ಮಾತೆಂದೇ ಅದನ್ನು ಹೇಳಬಹುದು.
ಹಾಗಾದರೆ ಏನದು? ಅವರ ಮಾತಿನ ಅಭಿಪ್ರಾಯ ಹೀಗಿದೆ: "ರಾಜನೇ, ಪ್ರಿಯವಾದ ಮಾತುಗಳನ್ನು ಯಾವಾಗಲೂ ಆಡುವವರು ಲೋಕದಲ್ಲಿ ಸುಲಭವಾಗಿ ದೊರೆಯುವರು; ಅಪ್ರಿಯವಾದರೂ ಪಥ್ಯವಾದ ನುಡಿಯನ್ನು ಹೇಳುವವರು ದೊರಕರು; ಅದನ್ನು ಕೇಳಿಸಿಕೊಳ್ಳುವವರೂ ದೊರಕರು!"

ಒಂದೇ ಮಾತನ್ನು ಸ್ಥಾನದಲ್ಲೂ ಬಲದಲ್ಲೂ ಹಿರಿಯನೆನಿಸಿದ್ದ ರಾವಣನಿಗೆ ಇವರಿಬ್ಬರೂ ಹೇಳುವರು. ಹೇಳಿದರೂ ಹಠಬಿಡದವ ರಾವಣ; ಆತನ ಮಾತನ್ನು ಮೀರಲಾಗದೆ ರಾಮನ ಬಾಣಕ್ಕೆ ತುತ್ತಾಗಿ ಪ್ರಾಣಕಳೆದುಕೊಂಡ, ಮಾರೀಚ; ಹಿತೋಕ್ತಿ ಹೇಳಿದರೂ ಆಸಕ್ತಿ ತಾಳದ ಅಣ್ಣನನ್ನು ತೊರೆದು ಬಂದು ರಾಮನಿಗೆ ಶರಣಾಗಿ ಸ್ವರಕ್ಷೆ-ಸ್ವಜನರಕ್ಷೆಗಳನ್ನು ಸಾಧಿಸಿದ, ವಿಭೀಷಣ.

ಇಬ್ಬರೂ ಹೇಳಿದ ಮಾತಿನ ಸಾರವೇನು? ಇಂದಿಗಿನ ಅನ್ವಯವೇನು? ಲೋಕದಲ್ಲಿ ಸದಾ ಪ್ರಿಯವಾಗಿ ನುಡಿಯುವ ಮಂದಿ ಹಲವರು ದೊರೆಯುವವರು - ಎಂಬುದು ನುಡಿಯ ಮೊದಲ ಭಾಗ. ಐಶ್ವರ್ಯದಲ್ಲೋ ಅಧಿಕಾರದಲ್ಲೋ ಎತ್ತರದಲ್ಲಿರುವವರನ್ನು ಆಶ್ರಯಿಸುವವರು ಅನೇಕರು. ಅವರಲ್ಲಿ ಸ್ವಕಾರ್ಯಸಾಧಕರಾದವರು ಮಾತಾಡುವುದರಲ್ಲಿ ನುರಿತವರಾಗಿರುವರು; ಹೊಗಳಿಗೆಯ ಮಾತುಗಳಿಂದಲೋ, ಪ್ರಿಯವಾದ ನುಡಿಗಳಿಂದಲೋ ಆ ಗರಿಮೆಯುಳ್ಳವರನ್ನು ಮರುಳು ಮಾಡಿ ತಮಗೆ ಬೇಕಾದುದನ್ನು ಪಡೆದುಕೊಂಡುಬಿಡುವರು.

ಉನ್ನತಸ್ಥಾನದಲ್ಲಿರುವರೂ ಅಂತಹ ಮಾತುಗಳಿಗೆ ಮರುಳಾಗುವವರೇ. ಪ್ರಿಯವಾಗಿ ಮಾತನಾಡುತ್ತಿರುವ ವ್ಯಕ್ತಿಯು ಸ್ವಾರ್ಥಸಾಧನೆಗೆಂದೇ ಹಾಗೆ ಮಾತನಾಡುತ್ತಿರಬಹುದೆಂಬ ಶಂಕೆಯೂ ಅವರಿಗೆ ಹುಟ್ಟುವುದಿಲ್ಲ.

ಆದರೆ ಹಿತೈಷಿಗಳ ನಡೆಯೇ ಬೇರೆ; ಅಂತೆಯೇ, ಅವರ ನುಡಿಯೂ ಬೇರೆಯೇ. ಇರುವುದನ್ನು ಇರುವಂತೆಯೇ ಹೇಳುವವರವರು: ಬಣ್ಣಕಟ್ಟಿ ಹೇಳಿ ಕಣ್ಣಿಗೆ ಮಣ್ಣೆರಚುವವರಲ್ಲ. ಅವರು ಹೇಳುವುದು ಪಥ್ಯ: ಹಾಗೆಂದರೆ, ಕೇಳುಗನು ಸಾಗಬೇಕಾದ ಪಥಕ್ಕೆ (ಎಂದರೆ ದಾರಿಗೆ) ಒಳ್ಳೆಯದಾಗುವಂತಹುದು. ಆಯುರ್ವೇದವೈದ್ಯರು 'ಪಥ್ಯ' ಹೇಳುವರಲ್ಲವೆ? ಆರೋಗ್ಯ ಪಡೆಯುವ ಹಾದಿಗೆ ಸುಗಮತೆಯನ್ನು ಉಂಟುಮಾಡುವುದದು. ಇಂತಹ ಹಿತೋಕ್ತಿಯನ್ನು ನುಡಿಯುವವರು ದೊರೆಯುವುದು ಕಷ್ಟವೆಂಬುದಿರಲಿ, ಅದನ್ನು ಕೇಳಿಸಿಕೊಳ್ಳುವವರೂ ದೊರೆಯರು! ವಕ್ತಾರರೂ ಅಲಭ್ಯರು; ಶ್ರೋತಾರರೂ ಅಲಭ್ಯರು - ಒಳ್ಳೆಯ ಮಾತುಗಳಿಗೆ!

ಇದೋ, ಯಾರಾದರೂ ಹೆಚ್ಚು ಹೊಗಳಿದರೆ ಎಚ್ಚರಗೊಳ್ಳೋಣ; ಅಪ್ರಿಯವಾಗಿದ್ದರೂ ಹಿತವಚನವನ್ನು ಯಾರಾದರೂ ಆಡಿದರೆ ಒಮ್ಮೆ ಕಿವಿಗೊಡೋಣ. ಅಲ್ಲವೇ? "ಹಿತ" ವೆಂದರೇನೆಂಬುದನ್ನೂ ಇಲ್ಲೊಮ್ಮೆ ಗಮನಿಸಿಕೊಳ್ಳಬೇಕು. ಶ್ರೀರಂಗಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ:"ಪುರುಷಾರ್ಥಸಾಧನೆಗೆ ವಿರೋಧವಲ್ಲ ರೀತಿಯಲ್ಲಿ ಯಾವುದು ಕೆಲಸಕ್ಕೆ ಬರುತ್ತದೋ ಅದೇ ಹಿತ; ಇಲ್ಲದ್ದು ಹತ!"

ಸೂಚನೆ: 24/02/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.