Monday, February 19, 2024

ವ್ಯಾಸ ವೀಕ್ಷಿತ - 76 ಮೇಲೆ ನವಿರು, ಒಳಗೆ ಸಂಚು! (Vyaasa Vikshita - 76Mele Naviru, Olage Sanchu!)

(ಪ್ರತಿಕ್ರಿಯಿಸಿರಿ lekhana@ayvm.in)




ಆ ಬಳಿಕ ದುರ್ಯೋಧನನೂ ರಾಧೇಯನೂ (ಎಂದರೆ ಕರ್ಣನೂ) ಧೃತರಾಷ್ಟ್ರನ ಬಳಿ ಹೋಗಿ ಈ ಮಾತನ್ನು ಹೇಳಿದರು:

"ನೀನು ಹೇಳುತ್ತಿರುವುದು ಸರಿಯಲ್ಲವೆಂಬುದನ್ನು ವಿದುರನು ಎದುರಿಗೇ ಇದ್ದಾಗ ಹೇಳಲು ನಮ್ಮಿಬ್ಬರಿಗೂ ಆಗಲಿಲ್ಲ. ಈಗ ಏಕಾಂತವಿದೆಯೆಂಬ ಕಾರಣಕ್ಕೆ ಹೇಳುತ್ತೇವೆ, ಕೇಳು. ನೀನು ಮಾಡಹೊರಟಿರುವುದೇನು? ಶತ್ರುಗಳಿಗೆ ಉಂಟಾಗಿರುವ ವೃದ್ಧಿಯನ್ನು ನನ್ನ ವೃದ್ಧಿಯೆಂದೇ ಭಾವಿಸಿದ್ದೀಯೆಲ್ಲಾ! ಹಾಗೂ ವಿದುರನೆದುರಿಗೆ ನಮ್ಮ ಶತ್ರುಗಳನ್ನೇ ಹೊಗಳುವೆಯಲ್ಲಾ! ರಾಜನೇ, ಪಾಪರಹಿತನೇ, ಕರ್ತವ್ಯವಾಗಿರುವುದೇ ಬೇರೆ, ನೀನು ಮಾಡುತ್ತಿರುವುದೇ ಬೇರೆ - ಅಲ್ಲವೇ? ಅಪ್ಪಾ, ಅವರ ಬಲ-ವಿಘಾತವನ್ನೇ ನಾವು ಸರ್ವದಾ ಮಾಡುತ್ತಿರಬೇಕಲ್ಲವೇ?

ಸರಿಯಾದ ಸಮಯ ಈಗ ಬಂದಿದೆ. ಸರಿಯಾದ ಕಾರ್ಯವನ್ನು ಕುರಿತು ನಾವೀಗ ಮಂತ್ರಾಲೋಚನೆ ಮಾಡಬೇಕಾಗಿದೆ: ನಮ್ಮ ಮಕ್ಕಳು, ಸೈನ್ಯ, ಬಂಧುಗಳು - ಇವೆಲ್ಲವನ್ನೂ ಅವರು ನುಂಗಿಬಿಡಲಾಗದಂತೆ ನಾವು ಏನು ಮಾಡಬೇಕೆಂಬುದನ್ನು ಚಿಂತಿಸಬೇಕಲ್ಲವೇ?" - ಎಂದು.

ಆಗ ಧೃತರಾಷ್ಟ್ರನು ಹೇಳಿದನು "ನೀವು ಹೇಗೋ ನಾನೂ ಹಾಗೆಯೇ: ನಾನೂ ಇದನ್ನೇ ಮಾಡಲು ಬಯಸುವವ. ಆದರೆ ನಮ್ಮ ಆಶಯವನ್ನು ವಿದುರನ ಮುಂದೆ ಪ್ರಕಟಪಡಿಸಲು ನಾನು ಬಯಸುವುದಿಲ್ಲ. ಆದುದರಿಂದಲೇ ಅವನೆದುರಿನಲ್ಲಿ ವಿಶೇಷವಾಗಿ ಪಾಂಡವರ ಗುಣವನ್ನೇ ನಾನು ಉಲ್ಲೇಖಿಸುವುದು: ನಮ್ಮ ಅಂತರಂಗವನ್ನು ವಿದುರನು ಅರಿತುಕೊಂಡುಬಿಡಬಾರದೆಂದು. ಈ ಸಮಯಕ್ಕೆ ಯೋಗ್ಯವಾದುದೇನೆಂಬುದಾಗಿ ನೀನು ಭಾವಿಸುವೆ, ಹೇಳು ದುರ್ಯೋಧನಾ! ಹಾಗೆಯೇ ಈಗ ಸಮಯೋಚಿತವಾದುದೇನೆಂಬುದನ್ನು ನೀನೂ ಹೇಳು, ಕರ್ಣಾ!" ಎಂದನು.

ಆಗ ದುರ್ಯೋಧನನು ಹೇಳಿದನು: ಕುಶಲರಾದ, ಆಪ್ತರಾಗಿ ವರ್ತಿಸುವ, ಮತ್ತು ಏನನ್ನೂ ತೋರ್ಪಡಿಸಿಕೊಳ್ಳದ, ವಿಪ್ರರನ್ನು ನಾವು ಬಳಸಿಕೊಳ್ಳಬೇಕು; ಬಳಸಿಕೊಂಡು ಹೀಗೇನಾದರೂ ಮಾಡಬೇಕು: 

(೧) ಕುಂತೀಪುತ್ರರಾದ ಪಾಂಡವರಿಗೂ ಮಾದ್ರೀಪುತ್ರರಾದ ಪಾಂಡವರಿಗೂ ಮಧ್ಯದಲ್ಲಿ ಒಡಕನ್ನು ಉಂಟುಮಾಡಬೇಕು; 

(೨) ಅಥವಾ ಹೀಗಾದರೂ ಮಾಡಬೇಕು - ದ್ರುಪದನನ್ನೂ ಆತನ ಪುತ್ರರನ್ನೂ ಆತನ ಮಂತ್ರಿಗಳನ್ನೂ ಹೇರಳವಾಗಿ ಹಣವಿತ್ತು ಪ್ರಲೋಭನೆಗೊಳಪಡಿಸಬೇಕು. ಅದರ ಪರಿಣಾಮವಾಗಿ ಕುಂತೀಪುತ್ರನಾದ ಯುಧಿಷ್ಠಿರನನ್ನು ಆತನು ತ್ಯಜಿಸಿಬಿಡಬೇಕು. 

(೩) ಅಥವಾ ಅಲ್ಲಿಯೇ (ಎಂದರೆ ದ್ರುಪದನ ರಾಜ್ಯದಲ್ಲಿಯೇ) ಈ ಕುಂತೀಪುತ್ರರು ವಾಸವನ್ನು ಇಷ್ಟಪಡುವಂತೆ ಅವರು ಮಾಡಬೇಕು. 

(೪) ಅವರುಗಳು ಬೇರೆಬೇರೆಯಾಗಿ ಪಾಂಡವರಲ್ಲಿಗೆ ಹೋಗಲಿ; ಪಾಂಡವರು ಇಲ್ಲೇ ನೆಲೆಸುವಲ್ಲಿ ತೊಡಕಿದೆಯೆನ್ನಲಿ; ಪಾಂಡವರು ಪಂಚಾಲದೇಶದಲ್ಲಿಯೇ ವಾಸಮಾಡಲು ಮನಸ್ಸಾಗುವಂತೆ ಮಾಡಲಿ; 

(೫) ಅಥವಾ, ಕುಶಲರೂ ಉಪಾಯನಿಪುಣರೂ ಆದ ಕೆಲವರು ಪಾಂಡವರಲ್ಲಿಗೆ ಹೋಗಿ ಪ್ರೀತಿಯ ಮಾತುಗಳನ್ನಾಡಿ, ಪಾರ್ಥರನ್ನು (ಎಂದರೆ ಪಾಂಡವರನ್ನು) ಪರಸ್ಪರ ಒಡಕು ಬಂದಂತಹವರನ್ನಾಗಿಸಿಬಿಡಲಿ; 

(೬) ಅಥವಾ ದ್ರೌಪದಿಯೇ ಅವರ ವಿರುದ್ಧವಾಗಿ ಏಳುವಂತೆ ಮಾಡುವುದಾಗಲಿ: ಪತಿಗಳು ಹಲವರಿರುವಾಗ ಅದು ಸುಕರವಾಗುವುದಲ್ಲವೇ? 

(೭) ಅಥವಾ, ಪಾಂಡವರಿಗೇ ಅವಳಲ್ಲಿ ವಿರಸವಾಗುವಂತೆ ಮಾಡಲಿ; 

(೮) ಅಥವಾ ಹೀಗೂ ಮಾಡಬಹುದು: ಉಪಾಯಕುಶಲರಾದವರು ಮರೆಮಾಚಿಕೊಂಡಿದ್ದು ಭೀಮನನ್ನು ಕೊಂದುಹಾಕಿಬಿಡಲಿ; ಎಷ್ಟಾದರೂ ಅವರಲ್ಲಿ ಎಲ್ಲರಿಗಿಂತಲೂ ಆತನೇ ಬಲಶಾಲಿಯಲ್ಲವೇ? ಆತನನ್ನು ನೆಚ್ಚಿಕೊಂಡೇ ಅಲ್ಲವೆ, ಯುಧಿಷ್ಠಿರನು ನಮ್ಮನ್ನು ಲೆಕ್ಕಿಸದಿರುವುದು? ಆತನೇ ತೀಕ್ಷ್ಣನಾದವನೂ, ಶೂರನಾದವನೂ. ಅವರುಗಳಿಗೆ ಆತನೇ ಆಸರೆ. ಆತನೊಬ್ಬನು ಕೊಲ್ಲಲ್ಪಟ್ಟರೆ, ಓ ರಾಜನೇ, ಪಾಂಡವರ ಉತ್ಸಾಹವು ಧ್ವಂಸವಾಗುವುದು; ಅವರ ಬಲವು ನಷ್ಟವಾಗುವುದು! ಅಲ್ಲವೇ?

ಸೂಚನೆ :18 /2/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.