Monday, February 19, 2024

ಕೃಷ್ಣಕರ್ಣಾಮೃತ - 2 ಶೈವಕವಿಯ ಗೇಯ ಕೃಷ್ಣಕಾವ್ಯ (Shaiva Kaviya Geya Krishna-kavya)


ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಲೀಲಾಶುಕನು ಬರೆದ ಶ್ರೀಕೃಷ್ಣಕರ್ಣಾಮೃತವು ಒಂದು ಖಂಡಕಾವ್ಯ. ಖಂಡಕಾವ್ಯವೆಂದರೇನೆಂಬುದನ್ನು ಬಲ್ಲೆವು: ಕಾವ್ಯದ ಏಕದೇಶವನ್ನು ಅನುಸರಿಸುವುದೇ ಖಂಡಕಾವ್ಯ. ಏಕದೇಶವೆಂದರೆ ಒಂದು ಭಾಗ, ಪಾರ್ಶ್ವ, ಅಥವಾ ಅಂಗ. ಹೀಗಾಗಿ ಗಾತ್ರದಲ್ಲೂ ಲಕ್ಷಣಗಳಲ್ಲೂ (ಮಹಾ)ಕಾವ್ಯದ ಒಂದು ಕಿರಿದಾದ ಮೂರ್ತಿಯೇ ಖಂಡಕಾವ್ಯ.


ಕಾವ್ಯವೆಂದರೇನು?

ಹಾಗಾದರೆ ಕಾವ್ಯವೆಂದರೇನು? ಹೀಗೆ ಕೇಳಿದಾಗಲೇ ಗೊತ್ತಾಗುವುದು: ಎಷ್ಟೋ ಪ್ರಶ್ನೆಗಳನ್ನು ಕೇಳುವುದು ಸುಲಭ, ಉತ್ತರಿಸುವುದು ಸುಲಭವಲ್ಲ! - ಎಂಬುದು. ಅಷ್ಟೇ ಅಲ್ಲ. ನಮ್ಮಲ್ಲಿ ಬಹುಮಂದಿ "ಸುಕುಮಾರಮತಿ"ಗಳು. ಎಂದರೆ ಮಕ್ಕಳ ಮನಸ್ಸು ಅವರದು: ಮಕ್ಕಳು ಎಷ್ಟೊಂದು ಪ್ರಶ್ನೆಗಳನ್ನು ಕೇಳುತ್ತವೆ! ಯಾವುದಕ್ಕಾದರೂ ನೀಳವೋ ಆಳವೋ ಆದ ಉತ್ತರ ಕೊಡುವುದಾದರೆ, ಕೇಳಿಸಿಕೊಳ್ಳುವ ಉತ್ಸಾಹವೇ ಮಾಯ!

ಎಂದೇ, ಕಾವ್ಯವೆಂದರೆ ಏನೆಂಬುದನ್ನು ಕಿರಿದಾಗಿ ಉತ್ತರಿಸುವ ಒಂದೆರಡು ಮಾತುಗಳನ್ನಷ್ಟೇ ಆಡಿ ಮೂಲಕೃತಿಯತ್ತ ತಿರುಗೋಣ. ಸರಳವಾಗಿ, ಸಾರಾಂಶವಾಗಿ, ಕಾವ್ಯವೆಂದರೆ ರಮಣೀಯವಾದ ಅರ್ಥವನ್ನು ತಕ್ಕುದಾದ ಪದಗಳಿಂದ ನಿರೂಪಿಸುವುದು. (ರಮಣೀಯ ಎಂದರೇನು? - ಎಂದು ಕೇಳುತ್ತಾ ಜಿಜ್ಞಾಸೆಯನ್ನು ಈಗ ಬೆಳೆಸುವುದು ಬೇಡ: ಆ ಚರ್ಚೆ ನಮ್ಮನ್ನು ಸುದೂರಕ್ಕೆ ಸೆಳೆದೀತು!). ಕಾವ್ಯವೆಂದರೆ ರಸಾತ್ಮಕವಾದ ನುಡಿಯೆಂದರೂ ಆದೀತು. ಮೇಲೆ ಹೇಳಿದುದು ಕಾವ್ಯಮೀಮಾಂಸೆಯ ಕ್ಷೇತ್ರದಲ್ಲಿ ದಿಗ್ಗಜಗಳೆನಿಸಿರುವ ಜಗನ್ನಾಥ, ವಿಶ್ವನಾಥ ಎಂಬ ಹೆಸರಿನ ವಿದ್ವನ್ಮಣಿಗಳ ಮಾತಿನ ಸಾರ.

ರಾಬರ್ಟ್ ಫ್ರಾಸ್ಟ್ ಎಂಬ ಕವಿ ಹೇಳಿರುವ ಒಂದು ಕಿರುನುಡಿಯಿದೆ. ಅದೂ ಚೆನ್ನಾಗಿದೆ. "ಯಾವುದನ್ನು ಅನುವಾದ ಮಾಡಿದರೆ ಸ್ವಾರಸ್ಯ ಕೆಡುವುದೋ ಅದೇ ಕಾವ್ಯ" - ಎನ್ನುತ್ತಾನೆ, ಆತ! ಈ ಮುಂದೆ ನಾವು ಶ್ರೀಕೃಷ್ಣಕರ್ಣಾಮೃತಕಾವ್ಯದ ಕೆಲ ಶ್ಲೋಕಗಳ ಅನುವಾದವನ್ನೂ ಕೊಡಲಿದ್ದೇವಲ್ಲವೇ? ಅದಕ್ಕಾಗಿ ಈ ಎಚ್ಚರದ ಮಾತನ್ನು ಹೇಳಬೇಕಾಯಿತು!

ಆದರೆ ಇವೆಲ್ಲದರ ಜೊತೆಗೆ, ಅಥವಾ ಇವೆಲ್ಲಕ್ಕಿಂತಲೂ ಮುಖ್ಯವಾಗಿ, ಮತ್ತೊಂದಂಶವಿದೆ. ಅದೆಂದರೆ, ಕಾವ್ಯವೆಂದಾಗ ಎದ್ದುಕಾಣುವ ಒಂದು ದೊಡ್ಡಗುಣ: ಅದೆಂದರೆ ಅದನ್ನು ಹಾಡಲಾಗುವಂತಹುದು. ಶ್ರೀಕೃಷ್ಣಕರ್ಣಾಮೃತದ ಒಂದೊಂದು ಪದ್ಯವೂ ಹಾಡಿಕೊಂಡು ಸಂತೋಷಪಡಲಿಕ್ಕೆ ಯೋಗ್ಯವಾಗಿರುವಂತಹುದು. ಗೇಯತೆಯು ಈ ಕೃತಿಯ ಒಂದು ಕಮನೀಯವಾದ ಗುಣ.


ಕಾವ್ಯದಲ್ಲಿಯ ಗೇಯಗುಣ

ಪದ್ಯವೆಂದು ಹೇಳಿದರೆ ಸಾಕು, ಅದು ಛಂದೋಬದ್ಧವೆಂಬುದು ಗೊತ್ತಾಗುವುದು. (ಇಂದಿನ ಪದ್ಯಗಳ ಕಥೆಯೇ ಬೇರೆ; ಆ ಬಗ್ಗೆ ಇಲ್ಲಿ ಮಾತು ಬೆಳೆಸುವುದು ಅನಾವಶ್ಯಕವೇ ಸರಿ.) ಸಂಸ್ಕೃತದಲ್ಲಿ ಗದ್ಯವನ್ನು ಸಹ ಕಾವ್ಯವೆನ್ನುವರು, ಗೊತ್ತೆ?  ಸಂಸ್ಕೃತಭಾಷೆಯಲ್ಲಿಯ ಶಬ್ದಭಂಡಾರ ಬಹಳ ವಿಪುಲವಾದದ್ದರಿಂದ ಗದ್ಯದಲ್ಲಿ ಗೇಯಾಂಶವನ್ನು ತರುವುದು ಅಸಾಧ್ಯವೂ ಅಲ್ಲ, ಅಪರೂಪವೂ ಅಲ್ಲ! ಉದಾಹರಣೆಗೆ "ರಘುವೀರಗದ್ಯ": ರಾಮನನ್ನು ಕುರಿತಾದ ಒಂದು ರಮ್ಯ ಗದ್ಯಪ್ರಬಂಧವದು.  ಹಲವು ಮಂದಿ ಅದನ್ನು ಹಾಡಿರುವುದುಂಟು!

ಗೀತಗೋವಿಂದವಂತೂ ಗಾನಯೋಗ್ಯತೆಯಲ್ಲಿ ಸಾಟಿಯಿಲ್ಲದ ಪದ್ಯಕಾವ್ಯ! ಅದು ಮಾತ್ರವಲ್ಲ; ಆಶ್ಚರ್ಯದ ಮಾತೆಂದರೆ ಇದು: ಭಗವದ್ಗೀತೆಯೂ ಗೀತವೇ, ವಿಷ್ಣುಸಹಸ್ರನಾಮವೂ ಅಷ್ಟೇ! "ಗೇಯಂ ಗೀತಾ-ನಾಮಸಹಸ್ರಂ" - ಎಂದಿಲ್ಲವೇ? ಹೀಗೆ, ಸಂಸ್ಕೃತದಲ್ಲಿರುವ ತತ್ತ್ವಾತ್ಮಕ ಕೃತಿಗಳೂ, ಭಗವಂತನ ಗುಣಕೀರ್ತನದ ಕೃತಿಗಳೂ ಗೇಯವೇ ಸರಿ. ಇವೇ ಹೀಗೆಂದ ಮೇಲೆ, ಕೃಷ್ಣಕರ್ಣಾಮೃತ-ಗೀತಗೋವಿಂದಗಳ ಬಗ್ಗೆ ಹೇಳಬೇಕಾದುದೇ ಇಲ್ಲ! ಅವಂತೂ ಸಾಕ್ಷಾದ್ ಭಗವಂತನಿಗೇ - ಗಾನಲೋಲನಾದ ಶ್ರೀಕೃಷ್ಣನಿಗೆಂದೇ - ಹೇಳಿಮಾಡಿಸಿಟ್ಟ ಅಪ್ರತಿಮಗೇಯಗಳು!


ಕಲಾರತ್ನ

ಎಷ್ಟಾದರೂ, ಗಾನಕ್ಕೆ ಭಾರತೀಯರು ಕೊಟ್ಟಿರುವ ಸ್ಥಾನ ಬಹಳ ಹಿರಿದಾದದ್ದೇ. ಎಂದೇ ಆ ಬಗ್ಗೆ ಹೇಳುವುದು "ಕಲಾರತ್ನಂ ಗಾನಂ" ಎಂದು! ಹಾಗೆಂದರೇನು? ಕಲೆಗಳಲ್ಲಿ ರತ್ನವೆನಿಸತಕ್ಕದ್ದು ಗಾನ - ಎಂದು. ಏನು ರತ್ನವೆಂದರೆ? ಅದಕ್ಕೂ ಲಕ್ಷಣವುಂಟು: ಒಂದೊಂದು ಜಾತಿಯಲ್ಲೂ ಯಾವುದು ಉತ್ಕೃಷ್ಟವೆನಿಸುವುದೋ ಅದುವೇ ರತ್ನ: "ಜಾತೌ ಜಾತೌ ಯದ್ ಉತ್ಕೃಷ್ಟಂ ತದ್ ರತ್ನಮ್ ಅಭಿಧೀಯತೇ."

ಕಲೆಗಳೆಲ್ಲ ಒಂದು ಜಾತಿ. ಜಾತಿಯೆಂದರೆ ಮೂಲಾರ್ಥ ಹುಟ್ಟೆಂದೇ; ಅಲ್ಲದೆ, ಸಮಾನಧರ್ಮವಿರುವ ವಸ್ತುಗಳ ಗುಂಪನ್ನೂ ಜಾತಿಯೆನ್ನುವರು. ಹೀಗೆ ನಮ್ಮಲ್ಲಿ ಅರವತ್ತನಾಲ್ಕು ಕಲೆಗಳು ಉಂಟಲ್ಲವೇ? ಒಂದೊಂದು ಕಲೆಯಲ್ಲೂ ಒಂದೊಂದು ಹಿರಿಮೆಯುಂಟು. ಆದರೂ, ಗಾನದ ಗುಣಗಾನವನ್ನು ಮಾಡುತ್ತಾ ಹೇಳುವ ಮಾತೇ "ಕಲಾರತ್ನಂ ಗಾನಮ್". 

ಯಾವ ದೇವತೆಯನ್ನು ಕುರಿತು?

ಕುಲದೇವತೆ, ಇಷ್ಟದೇವತೆಗಳೆಂಬ ವಿಭಾಗ ನಮ್ಮಲ್ಲುಂಟು ಅಲ್ಲವೇ? ವಂಶದಲ್ಲೇ ಪರಂಪರೆಯಾಗಿ ಪೂಜಿಸಿಕೊಂಡು ಬಂದಿರುವ ದೇವತೆಯು ಕುಲದೇವತೆ; ನಮ್ಮ ಮನಸ್ಸನ್ನು ವಿಶೇಷವಾಗಿ ಸೆಳೆದಿರುವ ದೇವತೆಯು ಇಷ್ಟದೇವತೆ. ಶ್ರೀಕೃಷ್ಣಕರ್ಣಾಮೃತವನ್ನು ಬರೆದಿರುವ ಲೀಲಾಶುಕನ ಇಷ್ಟದೇವತೆಯೆಂದರೆ ಶ್ರೀಕೃಷ್ಣನೇ!

ಹಾಗೆಂದು ತೀರ್ಮಾನಿಸುವುದು ಹೇಗೆ? ತನ್ನ ಬಗ್ಗೆ ಏನನ್ನೂ ಕೇಳಿಕೊಳ್ಳದ  ಕವಿ, ಈ ಒಂದಂಶವನ್ನು ಹೇಳಿಕೊಂಡಿದ್ದಾನೆ. ಹೀಗೆ: "ನಾವು ಹುಟ್ಟಾ ಶೈವರು. ಆ ಬಗ್ಗೆ ಶಂಕೆಯೇ ಬೇಡ. ಪಂಚಾಕ್ಷರೀಮಂತ್ರ-ಜಪದಲ್ಲಿ ನಿರತರಾಗಿರುವವರು. ಹಾಗಿದ್ದರೂ, ನನ್ನ ಮನಸ್ಸು ಮಾತ್ರ ಮುದ್ದುಮುಗುಳ್ನಗೆಯುಳ್ಳ ಗೋಪಿಕಾ-ಕಿಶೋರನಾದ ಶ್ರೀಕೃಷ್ಣನನ್ನು - ಅತಸೀ-ಕುಸುಮದ ಕಾಂತಿಯನ್ನು ಹೊಂದಿರುವ ಕೃಷ್ಣನನ್ನೇ - ಸ್ಮರಿಸುತ್ತದೆ!" - ಎಂಬುದಾಗಿ ಆತನ ಉದ್ಗಾರ. (ಅತಸಿಯೆಂದರೆ ಅಗಸೆ. ಕೃಷ್ಣನನ್ನು ನೀಲವರ್ಣವೆನ್ನುವರಲ್ಲಾ, ಆ ಬಣ್ಣವೇ ಅಗಸೆಹೂವಿಗೂ; ಅಂತೂ ಹಾಗಿರುವ ಕೃಷ್ಣನನ್ನು ನೆನೆಯುತ್ತದೆ, ನನ್ನ ಮನಸ್ಸು - ಎನ್ನುತ್ತಾನೆ, ಲೀಲಾಶುಕ!). 

ಅದನ್ನು ಹೇಳುವ ಪೂರ್ಣಶ್ಲೋಕವಿಂತಿದೆ:

ಶೈವಾ ವಯಂ, ನ ಖಲು ತತ್ರ ವಿಚಾರಣೀಯಂ,

   ಪಂಚಾಕ್ಷರೀ-ಜಪರತಾ ನಿತರಾಂ, ತಥಾಪಿ ।

ಚೇತೋ ಮದೀಯಮ್ ಅತಸೀ-ಕುಸುಮಾವಭಾಸಂ

   ಸ್ಮೇರಾನನಂ ಸ್ಮರತಿ ಗೋಪವಧೂ-ಕಿಶೋರಮ್ ॥


ಪಂಚಾಕ್ಷರಿಯೆಂದರೆ ಐದು ಅಕ್ಷರಗಳ ಒಂದು ಸ್ತೋಮ. ಐದು ಅಕ್ಷರಗಳಿರುವ ಮಂತ್ರಕ್ಕೆ ಪಂಚಾಕ್ಷರೀ-ಮಂತ್ರವೆನ್ನುವರು. "ನಮಃ ಶಿವಾಯ" ಎಂಬುದೇ ಆ ಪಂಚಾಕ್ಷರೀ-ಮಂತ್ರ. ಸಾಮಾನ್ಯವಾಗಿ, ಯಾವ ಮಂತ್ರದ ಜಪವನ್ನು ಗುರೂಪದೇಶದಂತೆ ನಿಯತವಾಗಿ ಮಾಡಿಕೊಂಡುಬರುವೆವೋ ಆ ದೇವತೆಯಲ್ಲೇ ಮನಸ್ಸು ಸಹಜವಾಗಿ ಲಗ್ನವಾಗುವುದು. ಲಗ್ನವಾಗಿರುವುದೆಂದರೆ ಬಿಗಿಯಾಗಿ ಅಂಟಿಕೊಂಡಿರುವುದು. (ಲಗ್ ಎಂಬ ಧಾತುವಿಗೆ ಸಂಗ ಎಂಬ ಅರ್ಥ; ಲಗ್ನ ಎಂದರೆ ಸಕ್ತ). ಹಾಗಿದ್ದರೂ - ಎಂದರೆ ತಾನು ಶೈವಾನುಷ್ಠಾನಪರನಾಗಿದ್ದರೂ - ಶ್ರೀಕೃಷ್ಣನೇ ಲೀಲಾಶುಕನಿಗೆ ಪ್ರಾಣಪ್ರಿಯನಾದ ದೇವ.

ನಮ್ಮ ಕವಿ ಇಷ್ಟು ಆತ್ಮಕಥನ ಮಾಡಿಕೊಂಡಿರುವುದನ್ನೇ ಹೆಚ್ಚೆನ್ನಬೇಕೋ ಏನೋ! ಏಕೆಂದರೆ ಪ್ರಾಚೀನ-ಸಂಸ್ಕೃತ-ಕವಿಗಳಂತೂ ತಮ್ಮ ಬಗ್ಗೆ ಏನನ್ನೂ ಹೇಳಿಕೊಳ್ಳುವವರೇ ಅಲ್ಲ! 

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  17/2/2024 ರಂದು ಪ್ರಕವಾಗಿದೆ.