Monday, February 26, 2024

ವ್ಯಾಸ ವೀಕ್ಷಿತ - 77 ದುರುಳರ ದುರುಪಾಯಗಳು (Vyaasa Vikshita - 77 Durulara Durupayagalu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)




ಕೌರವರನ್ನು ಹೇಗಾದರೂ ಮುಗಿಸಿಬಿಡಬೇಕೆನ್ನುವ ನಾನಾಸಂಚುಗಳನ್ನು ಹೇಳುತ್ತಾ, ಮತ್ತಿನ್ನಷ್ಟು ವಧೋಪಾಯಗಳನ್ನು ದುರ್ಯೋಧನನು ಧೃತರಾಷ್ಟ್ರನಿಗೆ ಸೂಚಿಸುತ್ತಿದ್ದಾನೆ!

(೮) ಪಾಂಡವರು ಅದು ಹೇಗೋ ಬೆಂಕಿಯಿಂದ ಬಚಾವಾದರಲ್ಲದೆ, ದ್ರೌಪದಿಯನ್ನೂ ವಿವಾಹವಾಗಿಬಿಟ್ಟರು!

ಆದರೆ, ಭೀಮಸೇನನ ವಧೆಯೊಂದಾಗಿಬಿಟ್ಟರೆ, ಪಾಂಡವರುಗಳು ಇನ್ನು ರಾಜ್ಯಕ್ಕೆ ಹಂಬಲಿಸಲೇ ಆರರು! ಅವನೇ ಅವರಿಗೆ ದೊಡ್ಡ ಆಶ್ರಯ. ರಣಾಂಗಣದಲ್ಲಿ ಹಿಂದಿನಿಂದ ಭೀಮಸೇನನು ರಕ್ಷಿಸುತ್ತಿದ್ದರೆ (ಮಾತ್ರವೇ) ಅರ್ಜುನನು ಅಜೇಯನಾಗಿರುವವನೇ ಸರಿ; ಆತನನ್ನು ಬಿಟ್ಟರೆ ಯುದ್ಧದಲ್ಲಿ ಆ ಅರ್ಜುನನು ಕರ್ಣನಿಗೆ ಕಾಲುಭಾಗಕ್ಕೂ ಸರಿದೂಗಲಾರನು! ಭೀಮಸೇನನಿಲ್ಲದೇ ಹೋದಲ್ಲಿ ತಮ್ಮ ದುರ್ಬಲತೆಯು ತೀವ್ರವೇ ಸರಿ – ಎಂದು ಅವರೂ ಅರಿತುಕೊಳ್ಳುವರು; ನಾವು ಅವರಿಗಿಂತಲೂ ಬಲಶಾಲಿಗಳೆಂಬುದನ್ನು ತಿಳಿಯುವರು; ಅದು ತಿಳಿದ ಬಳಿಕ ಇನ್ನು ಯುದ್ಧಮಾಡಲೇ ಯತ್ನಿಸರು!  

(೯) ಅಥವಾ ಅವರುಗಳು ಇಲ್ಲಿಗೆ ಬಂದವರಾಗಿ, ನಮ್ಮ ಆಜ್ಞೆಗನುಸಾರವಾಗಿ ಬಾಳಲಿ; ಆಗ ನೀತಿಶಾಸ್ತ್ರಾನುಗುಣವಾಗಿಯೇ ಅವರನ್ನು ಕೊಲ್ಲಿಸೋಣವಂತೆ;

(೧೦) ಇಲ್ಲದಿದ್ದಲ್ಲಿ ಸುಂದರಯುವತಿಯರ ಮೂಲಕ ಅವರಲ್ಲಿ ಪ್ರಲೋಭನೆಯುಂಟುಮಾಡಬಹುದು. ಕೌಂತೇಯರಲ್ಲಿ ಒಬ್ಬೊಬ್ಬರನ್ನಾಗಿ ಹಾಗೆ ಕಾಡಿಸಿ, ಕೊನೆಗೆ ಕೃಷ್ಣೆಗೇ ಅವರನ್ನು ಕಂಡರೆ ವಿಮುಖತೆಯುಂಟಾಗುವಂತೆ ಅವರು ಮಾಡಲಿ;

(೧೧) ಅಥವಾ ಇಲ್ಲಿಗೆ ಪಾಂಡವರ ಆಗಮನಕ್ಕಾಗಿ ರಾಧೇಯನನ್ನೇ ಕಳುಹಿಸೋಣ.  ನಾನಾಪ್ರಕಾರಗಳಿಂದ ಅವರನ್ನು ಇಲ್ಲಿಗೆ ಬರಮಾಡಿ, ನೆಚ್ಚಬಹುದಾದ ಮಂದಿಯಿಂದ ಅವರನ್ನು ಹೊಡೆಸಿ ಉರುಳಿಸಿಬಿಡೋಣ.

ಇಷ್ಟು ಉಪಾಯಗಳಲ್ಲಿ ಯಾವುದು ದೋಷರಹಿತವೆಂಬುದಾಗಿ ನಿನಗೆ ತೋರುವುದೋ ಅದರ ಪ್ರಯೋಗವನ್ನು ಮಾಡಿಬಿಡು. ಏಕೆಂದರೆ ಕಾಲವು ಮೀರಿಹೋಗುತ್ತಿದೆ. ಎಲ್ಲಿಯವರೆಗೆ ಅವರು ರಾಜಶ್ರೇಷ್ಠನೆನಿಸುವ ದ್ರುಪದನಲ್ಲಿ ವಿಶ್ವಾಸವನ್ನು ಇನ್ನೂ ಬೆಳೆಸಿಕೊಂಡಿಲ್ಲವೋ ಅಷ್ಟರೊಳಗೇ ಅವರನ್ನು ಮುಗಿಸಲು ಶಕ್ಯ; ಆ ಬಳಿಕ ಅಶಕ್ಯ!

ಅವರನ್ನು ನಿಗ್ರಹಿಸುವಲ್ಲಿ ನನಗಿಷ್ಟು ಹೊಳೆಯುತ್ತದೆ. ಇವುಗಳಲ್ಲಿ ಯಾವುದು ಚೆನ್ನು ಯಾವುದು ಅಲ್ಲ?  ಕರ್ಣ, ಈ ಬಗ್ಗೆ ನಿನ್ನ ಅಭಿಪ್ರಾಯವೇನು? – ಎಂದನು.

ಆಗ ಕರ್ಣನು ಹೇಳಿದನು:

ದುರ್ಯೋಧನಾ, ನಿನ್ನೀ ಚಿಂತನೆಯು ಚೆನ್ನಾಗಿದೆಯೆಂದು ನನಗೆ ತೋರುತ್ತಿಲ್ಲ. ಯಾವುದೇ ಉಪಾಯದಿಂದ ಆ ಪಾಂಡವರನ್ನು ಜಯಿಸುವುದು ಶಕ್ಯವಾಗಲಾರದು, ಕುರುವರ್ಧನ! ಸೂಕ್ಷ್ಮವಾದ ಉಪಾಯಗಳಿಂದ ಅವರನ್ನು ನಿಗ್ರಹಿಸಲು ಹಿಂದೆಯೇ ನೀನು ಯತ್ನಿಸಿದ್ದೆಯಲ್ಲವೇ? ಆದರೆ ಅದಾವುದೂ ಆಗಲಿಲ್ಲವಷ್ಟೆ?

ರಾಜನೇ, ಅವರುಗಳು ಹಿಂದೆ ಇಲ್ಲಿಯೇ ಇದ್ದರು - ಇನ್ನೂ ರೆಕ್ಕೆಗಳೇ ಹುಟ್ಟಿಲ್ಲದ ಮರಿಗಳಂತೆ (ಅಜಾತಪಕ್ಷಾಃ ಶಿಶವಃ); ಆಗಲೇ ಅವರನ್ನು ಬಾಧಿಸಲು ನೀನು ಸಮರ್ಥನಾಗಲಿಲ್ಲ - ಅಲ್ಲವೇ? ಈಗ ಅವರು ಹೇಗಿದ್ದಾರೆ! ರೆಕ್ಕೆ ಬಂದವರು (ತಮ್ಮ ಪಕ್ಷದವರಾಗಿರುವ ಅನೇಕಮಂದಿಯನ್ನೀಗ ಉಳ್ಳವರು); ವಿದೇಶದಲ್ಲಿರತಕ್ಕವರು; ಎಲ್ಲ ಪ್ರಕಾರಗಳಲ್ಲೂ ಚೆನ್ನಾಗಿ ಬೆಳೆದಿರುವವರು! ಉಪಾಯಗಳನ್ನು ಬಳಸಿ ಅವರನ್ನು ಮುಗಿಸುವುದು ಸಾಧ್ಯವಿಲ್ಲದ್ದಯ್ಯಾ!

ಅವರನ್ನು ಯಾವುದೇ ಸಂಕಟಗಳಲ್ಲಿ ಸಿಕ್ಕಿಹಾಕಿಸುವುದೂ ಸಾಧ್ಯವಾಗದ ಮಾತು. ದೈವವೇ ಅವರನ್ನು ಬಲಶಾಲಿಗಳನ್ನಾಗಿಸಿದೆ. ಈಗಂತೂ ಅವರು ಪಿತೃಪೈತಾಮಹವಾದ - ಎಂದರೆ ತಂದೆ-ಅಜ್ಜರಿಗೆ ಸೇರಿದ - ರಾಜ್ಯವನ್ನು ಪಡೆದುಕೊಳ್ಳುವ ಹಂಬಲವನ್ನು ಹೊಂದಿದ್ದಾರೆ.

ಅವರೊಳಗೆ ಪರಸ್ಪರವಾದ ಒಡಕನ್ನು ತಂದು ಹಾಕುವುದೂ ಶಕ್ಯವಾಗದು. ಒಬ್ಬಳೇ ಪತ್ನಿಯಲ್ಲಿ ಯಾರು ಅನುರಕ್ತರಾಗಿರುವರೋ ಅಂತಹವರನ್ನು ಪರಸ್ಪರವಾಗಿ ಒಡೆಯಲು ಸಾಧ್ಯವಾಗದು.

ಸೂಚನೆ : 25/2/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.