Monday, February 5, 2024

ವ್ಯಾಸ ವೀಕ್ಷಿತ - 74 ಕುಂತಿಯ ಆಶೀರ್ವಾದ – ಕೃಷ್ಣನ ಉಡುಗೊರೆ - ಸುದ್ದಿ ಮುಟ್ಟಿತು (Vyaasa Vikshita - 74 Kuntiya Ashirvada - Krishnana Udugore - Suddhi Muttitu)

(ಪ್ರತಿಕ್ರಿಯಿಸಿರಿ lekhana@ayvm.in)


 

ದ್ರೌಪದೀ-ಪಾಂಡವವಿವಾಹವು ವೈಭವದಿಂದ ನೆರವೇರಿತು. ತುಂಬು ಹೃದಯದಿಂದ ಕುಂತಿಯು ದ್ರೌಪದಿಯನ್ನು ಆಶೀರ್ವದಿಸಿದಳು: ಕುರು-ಜಾಂಗಲಪ್ರದೇಶದಲ್ಲಿರುವ ಮುಖ್ಯವೆನಿಸುವ ರಾಷ್ಟ್ರಗಳು ಹಾಗೂ ನಗರಗಳು ಏನುಂಟೋ ಅಲ್ಲೆಲ್ಲಾ ಪತಿಯೊಂದಿಗೆ ನೀನೂ ಅಭಿಷಿಕ್ತಳಾಗು. ಸದಾ ಧರ್ಮದ ವಿಷಯದಲ್ಲಿ ನಿನಗೆ ಸಹಜಪ್ರೀತಿಯೆಂಬುದಿರಲಿ. ನಿನ್ನ ಪತಿಗಳು ತಮ್ಮ ವಿಕ್ರಮದಿಂದಲೂ ಮಹಾಬಲದಿಂದಲೂ ಭೂಮಿಯನ್ನು ಗೆಲ್ಲುವರು; ಕಲ್ಯಾಣಮಯಿ ದ್ರೌಪದಿಯೇ! ಹಾಗೆ ಅವರು ಸಂಪಾದಿಸಿದುದೆಲ್ಲವನ್ನೂ ಅಶ್ವಮೇಧಮಹಾಯಜ್ಞದಲ್ಲಿ ದಾನವಾಗಿ ಬ್ರಾಹ್ಮಣರಿಗೆ ಸಲ್ಲಿಸುವವಳಾಗು. ಗುಣಶಾಲಿನಿಯೇ, ಭೂಮಿಯಲ್ಲಿ ಯಾವ ಯಾವ ಗುಣಸಂಪನ್ನರತ್ನಗಳುಂಟೋ ಅವೆಲ್ಲವನ್ನೂ ನೀನು ಪಡೆಯುವವಳಾಗು. ನೂರು ವರ್ಷಗಳ ಕಾಲ ನೀನು ಸುಖಪಡುವವಳಾಗು. ಕ್ಷೌಮವಸ್ತ್ರವನ್ನು (ಎಂದರೆ ರೇಷ್ಮೆಯ ಸೀರೆಯನ್ನು) ಉಟ್ಟು ಈಗ ನೀನು ಬಂದಿರುವೆ, ನಿನಗೆ ಅಭಿನಂದನೆಗಳು; ಜೊತೆಗೆ ಅದೇ ಪ್ರಕಾರವಾಗಿ ನೀನು ಪುತ್ರವತಿಯಾಗಿ ಗುಣಭರಿತೆಯಾಗಿ ಬರುವುದನ್ನೂ ಕಂಡು ನಾನು ಮತ್ತೆ ನಿನ್ನನ್ನು ಅಭಿನಂದಿಸುವಂತಾಗಬೇಕು!"  - ಹೀಗೆಂಬುದಾಗಿ ಆಶೀರ್ವದಿಸಿದಳು, ಕುಂತಿ.

ವಿವಾಹವು ಸಂಪನ್ನವಾಗಿರುವ ಪಾಂಡವರಿಗೆಂದು ಶ್ರೀಕೃಷ್ಣನು ತನ್ನ ಉಡುಗೊರೆಗಳನ್ನು ಕಳುಹಿಸಿದನು: ವಜ್ರವೈಡೂರ್ಯಗಳಿಂದ ಖಚಿತವಾದ ಚಿನ್ನದ ಆಭರಣಗಳು; ನಾನಾದೇಶಗಳ ಬೆಲೆಬಾಳುವ ವಸ್ತ್ರಗಳು; ರತ್ನಗಂಬಳಿಗಳು; ಹಿತಸ್ಪರ್ಶವುಳ್ಳ ಹಾಗೂ ಶುಭವಾದ ಶಯನಗಳು, ಆಸನಗಳು, ಪಲ್ಲಕ್ಕಿಗಳು; ಬೆಲೆಬಾಳುವ ಮಣಿ-ವಜ್ರಗಳಿಂದ ಆಶ್ಚರ್ಯಕರವಾಗಿ ಕಾಣುವ ನೂರಾರು ಪಾತ್ರೆಗಳು; ಇವಲ್ಲದೆ, ನಾನಾದೇಶಗಳವರೂ ಚೆನ್ನಾಗಿ ಅಲಂಕಾರ ಮಾಡಿಕೊಂಡಿರುವವರೂ ಸುರೂಪ ನವಯೌವನಗಳಿಂದಲೂ ದಾಕ್ಷಿಣ್ಯದಿಂದಲೂ ಕೂಡಿರುವವರೂ ಆದ ನಾನಾ ಪರಿಚಾರಿಕೆಯರು; "ಭದ್ರ" ಎಂಬ ಹೆಸರಿನ ವಶ್ಯವಾದ ಗಜಗಳು; ಚೆನ್ನಾಗಿ ಅಲಂಕರಿಸಲಾಗಿರುವ ಕುದುರೆಗಳು; ರಥಗಳು; ಅವಕ್ಕೆ ಸಲ್ಲುವ ಶುಭ್ರಪಟ್ಟಾಲಂಕಾರವುಳ್ಳ ಕುದುರೆಗಳು; ಕೋಟಿಗಟ್ಟಲೆ ಸುವರ್ಣನಾಣ್ಯಗಳು - ಇವೆಲ್ಲವನ್ನೂ ಸಾಲುಸಾಲಾಗಿ ಕಳುಹಿಸಿದನು. ಧರ್ಮರಾಜನಾದ ಯುಧಿಷ್ಠಿರನು ಅವೆಲ್ಲವನ್ನೂ ಗೋವಿಂದನಿಗೆ ಸಂತೋಷವಾಗಲೆಂದು ಪರಮಾನಂದದಿಂದ ಸ್ವೀಕರಿಸಿದನು.

ಆಮೇಲೆ ಗುಪ್ತಚರರ ಮೂಲಕ ಎಲ್ಲ ರಾಜರಿಗೂ ಸುದ್ದಿಯು ತಲುಪಿತು: ಶುಭಲಕ್ಷಣೆಯಾದ ದ್ರೌಪದಿಯ ವಿವಾಹವು ಪಾಂಡವರೊಂದಿಗೆ ನೆರವೇರಿದೆ - ಎಂಬುದಾಗಿ. ಆ ಬಿಲ್ಲನ್ನು ತೆಗೆದುಕೊಂಡು ಲಕ್ಷ್ಯಭೇದನವನ್ನು ಮಾಡಿದ ಮಹಾತ್ಮನು ಅರ್ಜುನನೇ; ಮಹಾಬಾಣ-ಮಹಾಧನುಸ್ಸುಗಳನ್ನು ಧರಿಸಿದ ಆತನು ಜಯಶಾಲಿಗಳಲ್ಲಿ ಶ್ರೇಷ್ಠನಾದವನು - ಎಂಬುದಾಗಿ. ಹಾಗೆಯೇ, ಮದ್ರರಾಜನಾದ ಶಲ್ಯನನ್ನು ಮೇಲಕ್ಕೆತ್ತಿ ಕೆಳಕ್ಕೆ ಬೀಳಿಸಿದ ಬಲಶಾಲಿಯು ಭೀಮನೇ – ಎಂಬುದಾಗಿ. ಆಗ ನಡೆದ ರಣದಲ್ಲಿ ಮಹಾಕ್ರೋಧದಿಂದ ಮರವನ್ನೇ ಎತ್ತಿಕೊಂಡು ಶೂರರನ್ನು ಬೆದರಿಸಿದವನೂ ಅವನೇ; ಯಾವುದೇ ಭಯಗಾಬರಿಗಳೆಂಬುದಿಲ್ಲದ ಆ ಮಹಾತ್ಮನ ಸ್ಪರ್ಶವೇ ಭಯಂಕರವಾದುದು; ಶತ್ರುಗಳ ಸೇನಾಂಗಗಳನ್ನು (ಆನೆ, ಕುದುರೆ ಮುಂತಾದುವನ್ನು) ಬೀಳಿಸುವ ವೀರ ಆ ಭೀಮನೇ - ಎಂಬುದಾಗಿ.

ಬ್ರಾಹ್ಮಣರೂಪವನ್ನು ಧರಿಸಿ ಅಲ್ಲಿಗೆ ಆಗಮಿಸಿದ್ದ ಪ್ರಶಾಂತವ್ಯಕ್ತಿಗಳು ಕುಂತೀಪುತ್ರರಾದ ಪಾಂಡವರು - ಎಂಬುದನ್ನು ಕೇಳಿಯಂತೂ ಆ ರಾಜರುಗಳಿಗೆ ಆಶ್ಚರ್ಯವೇ ಉಂಟಾಯಿತು. ಅವರು ಹಿಂದೆ ಕೇಳಿದ್ದೆಂದರೆ, ಮಕ್ಕಳೊಂದಿಗೆ ಕುಂತಿಯು ಜತುಹೃಹದಲ್ಲಿ ಸುಟ್ಟುಹೋದಳು - ಎಂಬುದಾಗಿ. ಈಗ ಅವರು ಮತ್ತೆ ಹುಟ್ಟಿಬಂದಿದ್ದಾರೆಂದು ಅವರು ಭಾವಿಸುವಂತಾಯಿತು! ಭೀಷ್ಮನನ್ನೂ ಕುರುವಂಶದ ಧೃತರಾಷ್ಟ್ರನನ್ನೂ ಆಗ ಅವರು ಧಿಕ್ಕರಿಸಿದರು: ಪುರೋಚನನು ಮಾಡಿದ ಅತ್ಯಂತಘಾತುಕವಾದ ಕೃತ್ಯಕ್ಕಾಗಿ.

ಸ್ವಯಂವರವು ನೆರವೇರಿರಲು ಪಾಂಡವರನ್ನೇ ವರಿಸಲಾಯಿತು - ಎಂದು ತಿಳಿದುಬರಲು, ಆ ಎಲ್ಲ ರಾಜರೂ ಸಹ ಹೇಗೆ ಬಂದರೋ ಹಾಗೆಯೇ ಹಿಂದಿರುಗಿದರು.

ಸೂಚನೆ : 4/2/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ
.