Monday, February 26, 2024

ಉತ್ತಮರ ಲಕ್ಷಣವೇನು ? (Uttamara Laksanavenu?)

ಡಾ. ಹೆಚ್. ಆರ್. ಮೀರಾ

ಪ್ರತಿಕ್ರಿಯಿಸಿರಿ (lekhana@ayvm.in)


 



ನಮ್ಮ ಪುರಾಣ-ಇತಿಹಾಸಗಳನ್ನು ಓದುವಾಗ ನಮಗೆ ಎಲ್ಲ ರೀತಿಯ ಪಾತ್ರಗಳೂ ಎದುರಾಗುತ್ತವೆ. ಅತ್ತ ಯಾವುದೇ ಕಾರಣಕ್ಕೂ ತಮ್ಮ ಇಹಲೋಕದ ಪಯಣ ಕೊನೆಗೊಳ್ಳಲೇಬಾರದೆಂಬ ಉದ್ದೇಶದಿಂದ ಅತಿಕಠೋರವಾದ ತಪಸ್ಸುಗಳನ್ನಾಚರಿಸಿದ್ದ ರಾಕ್ಷಸರೂ ಇದ್ದಾರೆ. ಇತ್ತ ಎಷ್ಟೇ ಕಷ್ಟಗಳು ಬಂದಾಗಲೂ ಎದೆಗುಂದದೆ ಅವನ್ನು ಎದುರಿಸಿ, ತಮ್ಮ ಜೀವದ ಹಂಗನ್ನು ತೊರೆದು ಧರ್ಮವನ್ನು ಆಚರಿಸಿದ ಸತ್ಪುರುಷರೂ ಇದ್ದಾರೆ. ಒಂದು ಕಡೆ ಹಿರಣ್ಯಕಶಿಪು-ರಾವಣರಂತಹವರು ಇದ್ದಾರೆ; ಅವರ ಜೀವನಧ್ಯೇಯಗಳ ಆಯ್ಕೆಗೆ ಕನ್ನಡಿಹಿಡಿಯುವಂತೆಯೋ ಏನೋ ಇನ್ನೊಂದೆಡೆ ಪ್ರಹ್ಲಾದ-ವಿಭೀಷಣರೂ ಇದ್ದಾರೆ.

"ಇವರು ಒಳ್ಳೆಯವರು; ಇವರು ಕೆಟ್ಟವರು" ಎಂದು ಇಬ್ಭಾಗವಾಗಿ ಕಪ್ಪು-ಬಿಳುಪೆಂಬಂತೆ ಪಾತ್ರಗಳು ನಮಗೆ ಹಲವು ಬಾರಿ ದೊರಕುತ್ತವೆ. ಇನ್ನು ಬೇರೆಡೆಗಳಲ್ಲಿ ಆಗೀಗ ಪೂರ್ಣ ಕಪ್ಪೂ ಅಲ್ಲದ ಪೂರ್ಣ ಬಿಳುಪೂ ಅಲ್ಲದ ಪಾತ್ರಗಳೂ ನಮಗೆ ದೊರೆಯುತ್ತವೆ. ಇತಿಹಾಸ-ಪುರಾಣಗಳನ್ನು ನಾವು ಓದುವುದು ನಮ್ಮ ಜೀವನಕ್ಕೆ ಅವುಗಳಿಂದ ಪಾಠಗಳನ್ನು ಕಲಿಯಲು. ಆದ್ದರಿಂದ ಯಾರಿಂದ ಯಾವ ಪಾಠ ಕಲಿಯಬೇಕು ಎನ್ನುವುದನ್ನು ಅರಿಯುವುದು ಮುಖ್ಯ. ಹಾಗಾದರೆ ಉತ್ತಮರು ಯಾರೆಂದು ಅರಿಯಲು ನಮಗೊಂದು ಮಾನ (ಎಂದರೆ ಅಳತೆಗೋಲು) ಬೇಕಲ್ಲವೇ?

ಯಾವುದೇ ವ್ಯಕ್ತಿ ಒಂದು ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿಬಿದ್ದಿದ್ದಾಗ, ಧರ್ಮಸಂದಿಗ್ಧತೆಯನ್ನು ಎದುರಿಸುತ್ತಿದ್ದಾಗ ಎತ್ತ ಹೆಜ್ಜೆಯಿಡುತ್ತಾನೆ - ಎನ್ನುವುದು ಈ ವಿಷಯದಲ್ಲಿ ಒಂದು ನಿರ್ಣಾಯಕವಾದ ಅಂಶ. ಪ್ರಾಣಾಂತಕ-ಪರಿಸ್ಥಿತಿಯಲ್ಲೂ ಧರ್ಮವನ್ನೇ ಆಯ್ಕೆಮಾಡುವುದು ಒಬ್ಬ ಉತ್ತಮನ ಲಕ್ಷಣವೇ ಸರಿ - ಎಂಬುದು ನಮ್ಮ ಪರಂಪರೆಯಲ್ಲಿ ಬಂದಿರುವ ಒಂದು ನೋಟ. ಏಕೆಂದರೆ ವ್ಯಕ್ತಿ ಧರ್ಮಿಷ್ಠನಾಗಿದ್ದರೆ (ಎಂದರೆ, ಧರ್ಮದಲ್ಲಿ ನೆಲೆನಿಂತಿದ್ದರೆ) ಮಾತ್ರ ಅಂತಹ ಸನ್ನಿವೇಶದಲ್ಲೂ ಧರ್ಮ್ಯವಾದದ್ದನ್ನೇ (ಎಂದರೆ ಧರ್ಮಕ್ಕೆ ಹೊಂದುವುದನ್ನೇ) ಆತನು ಅನುಸರಿಸುವುದು.

ಉದಾಹರಣೆಗೆ, ವಿಭೀಷಣನೂ ರಾವಣನೊಂದಿಗೇ ತಪಸ್ಸು ಮಾಡಿದ್ದವನು. ಅತ್ತ ರಾವಣನು ತಾನು ಯಾರುಯಾರಿಂದ ಅವಧ್ಯನಾಗಿರಬೇಕೆಂದು ಬ್ರಹ್ಮನಿಂದ ವರ ಕೇಳಿ ಪಡೆದು, ಮೂರ್ಲೋಕಗಳಲ್ಲೂ ಉಪದ್ರವ ಮಾಡಲು ತನ್ನ ಶಕ್ತಿಪ್ರಯೋಗ ಮಾಡುತ್ತಿದ್ದ. ಇತ್ತ ವಿಭೀಷಣನು ಕೇಳಿದುದಾದರೂ ಏನನ್ನು? "ಏನೇ ಆಪತ್ತೊದಗಿದರೂ ನನ್ನ ಮನಸ್ಸು ಯಾವಾಗಲೂ ಧರ್ಮದಲ್ಲೇ ರಮಿಸಲಿ" ಎಂದು! ತನ್ನ ಅಣ್ಣನ ಕ್ರೋಧಕ್ಕೆ ತುತ್ತಾಗುವುದನ್ನೂ ಲೆಕ್ಕಿಸದೆ ಧರ್ಮಕ್ಕೆ ಹೊಂದುವ ಸಲಹೆಗಳನ್ನೇ ವಿಭೀಷಣನು ಮುಂದಿಡುತ್ತಿದ್ದುದು. ಅದೇ ಕಾರಣಕ್ಕೇ ಮುಂದೆ ಅವನು ರಾಮನಿಗೆ ಶರಣಾಗತನಾದದ್ದು ಕೂಡ.

ಇದೇ ವಿಷಯವನ್ನು, ಎಂದರೆ, ಒಬ್ಬ ಉತ್ತಮಪುರುಷನ (ಇಲ್ಲಿ 'ಪುರುಷ' ಎಂದರೆ 'ಮನುಷ್ಯ' ಎಂದರ್ಥ) ಲಕ್ಷಣವನ್ನು ಸಂಸ್ಕೃತದಲ್ಲಿಯ ಒಂದು ಮುದ್ದಾದ ಸುಭಾಷಿತ ಮೂರು ಉದಾಹರಣೆಗಳ ಮೂಲಕ ಬಿಡಿಸಿಟ್ಟಿದೆ:

(೧) ಚಂದನ ಸ್ವಭಾವತಃ ಕಂಪು-ತಂಪುಗಳನ್ನು ಕೊಡುವಂತಹುದು. ಚಂದನದ ಕೊರಡನ್ನು ತೇಯುತ್ತಾ ಹೋದರೆ ಅದರ ಆಕಾರ ಕ್ಷೀಣವಾಗುತ್ತದೆಯಾದರೂ, ಅದರ ಸುವಾಸನೆ ಕಡಿಮೆಯಾಗದು ಅಥವಾ ವಿಕಾರವಾಗದು.

(೨) ಚಿನ್ನದ ಬಣ್ಣ ಯಾರನ್ನು ತಾನೇ ಆಕರ್ಷಿಸದು? ಮತ್ತೆ ಮತ್ತೆ ಬೆಂಕಿಗೆ ಒಡ್ಡಿ ಚಿನ್ನವನ್ನು ಕಾಯಿಸಿದರೆ, ಅದರ ಬಣ್ಣ ಮತ್ತೂ ಹೊಳೆಯುತ್ತದೆ; ಮಂಕಾಗುವುದಿಲ್ಲ.

(೩) ಕಬ್ಬಿನ ಜಲ್ಲೆಯಲ್ಲಿ ಸಿಹಿಯಾದ ರಸ ತುಂಬಿರುತ್ತದೆ. ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡುತ್ತಿದ್ದರೆ ಮತ್ತೂ ಸಿಹಿರಸವೇ ಚಿಮ್ಮುತ್ತದೆ; ಸ್ವಾದ ಕಡಿಮೆಯಾಗುವುದಿಲ್ಲ.
ಈ ಮೂರೂ ವಸ್ತುಗಳನ್ನೂ ತೇಯ್ದು, ಕಾಯಿಸಿ, ಕತ್ತರಿಸಿ ಕ್ಲೇಶಕ್ಕೊಡ್ಡಿದರೂ ಅವು ತಮ್ಮ ಉತ್ತಮಸ್ವಭಾವವನ್ನು ಬಿಟ್ಟು ವಿಕಾರಗೊಳ್ಳವು. ಅಂತೆಯೇ ಉತ್ತಮರೂ ಕೂಡ. ಕೊನೆಗಾಲದಲ್ಲೂ ಅವರ ಪ್ರಕೃತಿಯು (ಎಂದರೆ ಸ್ವಭಾವವು) ವಿಕೃತಿಗೊಳ್ಳದು (ಎಂದರೆ ವಿಕಾರಗೊಳ್ಳದು).

ಮೊದಲ ಮೂರು ಸಾಲುಗಳಲ್ಲಿ ಮೂರು ಉದಾಹರಣೆಗಳನ್ನೂ, ಕೊನೆಯ ಸಾಲಿನಲ್ಲಿ ಉತ್ತಮರಿಗೆ ಅದರ ಅನ್ವಯವನ್ನೂ ಸಾರುವ ಈ ಸೂಕ್ತಿ ಹೀಗಿದೆ.

ಘೃಷ್ಟಂ ಘೃಷ್ಟಂ ಪುನರಪಿ ಪುನಶ್ಚಂದನಂ ಚಾರುಗಂಧಂ
   ದಗ್ಧಂ ದಗ್ಧಂ ಪುನರಪಿ ಪುನಃ ಕಾಂಚನಂ ಕಾಂತವರ್ಣಮ್ |

ಛಿನ್ನಂ ಛಿನ್ನಂ ಪುನರಪಿ ಪುನಃ ಸ್ವಾದು ಚೈವೇಕ್ಷುದಂಡಂ
   ಪ್ರಾಣಾಂತೇಽಪಿ ಪ್ರಕೃತಿ-ವಿಕೃತಿರ್ಜಾಯತೇ ನೋತ್ತಮಾನಾಮ್ ||

ನಾವು ವಿಕೃತಿಯತ್ತ ಓಲದಂತೆ ನಮ್ಮ ಜೀವನದ ನಡೆಯಿರಬೇಕು - ಎಂಬುದು ಉತ್ತಮರಿಂದ ಕಲಿಯಬೇಕಾದ ಪಾಠ. ಈ ಹಾದಿ ಎಂತಹುದಾಗಿರಬೇಕು ಎಂಬುದನ್ನು ಕುರಿತು ಶ್ರೀರಂಗಮಹಾಗುರುಗಳು ಹೇಳಿರುವ ಈ ಮಾತುಗಳು ಮನನೀಯ: "ಆತ್ಮವು ವಿಕಾರಕ್ಕೆಡೆಯಾಗದೆ ವಿಕಾಸಕ್ಕೆ ಬರುವ ಎಡೆಯಿದ್ದರೆ ಅದೇ ಪಂಥ. ಆ ಪಂಥವನ್ನೇ ಹಿಡಿಯಬೇಕು."

ಸೂಚನೆ: 25/02/2024 ರಂದು ಈ ಲೇಖನ ವಿಜಯವಾಣಿಯ 
ಸುದಿನ ಲ್ಲಿ ಪ್ರಕಟವಾಗಿದೆ.