Monday, February 19, 2024

ಫಲಪ್ರಾಪ್ತಿಗೆ ಬೇಕು ಪ್ರಯತ್ನಶೀಲತೆ (Phalapraptige Beku prayatnasilate)

ವಿದುಷಿ ; ಸೌಮ್ಯಾ ಪ್ರದೀಪ್  ಎ. ಜೆ.

ಪ್ರತಿಕ್ರಿಯಿಸಿರಿ (lekhana@ayvm.in)




 

ಪರಮೇಶ್ವರನ ಪತ್ನಿಯಾದಂತಹ ಸತೀದೇವಿಯು ದಕ್ಷಪ್ರಜಾಪತಿಯ ಮಗಳು. ಪರಶಿವನ ಮಹಿಮೆಯನ್ನು ಅರಿಯದ, ದರ್ಪದಿಂದ ಅಂಧನಾದ ದಕ್ಷ ಪ್ರಜಾಪತಿಯು ಅಳಿಯನಾದ ಪರಶಿವನನ್ನು ಅಗೌರವದಿಂದ ಕಾಣುತ್ತಿರುತ್ತಾನೆ. ಒಮ್ಮೆ ದಕ್ಷಪ್ರಜಾಪತಿಯು ಒಂದು ದೊಡ್ಡ ಯಾಗವನ್ನು ಮಾಡುತ್ತಿರುತ್ತಾನೆ. ತಂದೆಯ ಮನೆಯಿಂದ ಆಹ್ವಾನ ಬಾರದಿದ್ದರೂ ತವರುಮನೆಯ ಮೇಲಿನ ಪ್ರೀತಿಯಿಂದ ಸತೀದೇವಿಯು ಆ ಯಾಗಕ್ಕೆ ಆಗಮಿಸುತ್ತಾಳೆ. ಆಗ ದಕ್ಷಪ್ರಜಾಪತಿಯು ಅವಳ ಮುಂದೆ ಪರಶಿವನನ್ನು ನಿಂದಿಸುವಂತಹ  ಮಾತುಗಳನ್ನು ಆಡುತ್ತಾನೆ. ಪತಿನಿಂದೆಯನ್ನು ಕೇಳಿ ಅತ್ಯಂತವಾಗಿ ದುಃಖಿತಳಾದ ಸತೀದೇವಿಯು ಯೋಗಾಗ್ನಿಯಿಂದ ತನ್ನ ದೇಹವನ್ನು ಭಸ್ಮಗೊಳಿಸಿ ಪ್ರಾಣತ್ಯಾಗ ಮಾಡುತ್ತಾಳೆ.


ಆ ಸತೀದೇವಿಯೇ ಮುಂದಿನ ಜನ್ಮದಲ್ಲಿ ಪರ್ವತರಾಜನ ಮಗಳಾಗಿ ಜನಿಸಿ ಪಾರ್ವತೀ ಎಂಬುದಾಗಿ ಕರೆಯಲ್ಪಡುತ್ತಾಳೆ. ಪಾರ್ವತಿಯು ಬಾಲ್ಯಾವಸ್ಥೆಯಲ್ಲಿರುವಾಗ ಒಮ್ಮೆ ದೇವರ್ಷಿ ನಾರಾದರು ಪರ್ವತರಾಜನ ಮನೆಗೆ  ಆಗಮಿಸುತ್ತಾರೆ. ತ್ರಿಕಾಲ ಜ್ಞಾನಿಗಳಾದ ಅವರು ಪಾರ್ವತಿಯನ್ನು ನೋಡಿ ಇವಳು ಪರಶಿವನ ಪತ್ನಿಯಾಗುತ್ತಾಳೆ ಎಂಬ ಮಾತನ್ನು  ಹೇಳುತ್ತಾರೆ. ಪಾರ್ವತಿಯನ್ನು ವರಿಸುವುದು ಪರಶಿವನೇ ಎಂಬುದು ಸ್ವತಃ ಸಿದ್ಧ, ವಿಧಿಲಿಖಿತ. ಏಕೆಂದರೆ ಅವರಿಬ್ಬರೂ ಜಗದಾದಿ ದಂಪತಿಗಳು, ವಿವಾಹವೆಂಬುದು ಜನ್ಮ ಜನ್ಮದ ಅನುಭಂದ.   ತಾನು ಪರಮೇಶ್ವರನನ್ನು ವಿವಾಹವಾಗುವುದು ನಿಶ್ಚಿತ ಎಂಬುದನ್ನು ಪಾರ್ವತಿಯು ತಿಳಿದಿದ್ದರೂ, ಆ ಫಲ ಕೈಗೂಡಲು ಪರಮೇಶ್ವರನಿಗೆ ಪ್ರಿಯವಾದ ತಪಸ್ಸನ್ನು ಆಚರಿಸಲು ಮುಂದಾಗುತ್ತಾಳೆ, ಆ ನಿಟ್ಟಿನಲ್ಲಿ ಪ್ರಯತ್ನಶೀಲಳಾಗುತ್ತಾಳೆ. ಜಗನ್ಮಾತೆಯ ಈ ನಡೆ ಲೋಕಕ್ಕೆ ಪರಮಾದರ್ಶವಾಗಿದೆ, ಫಲವನ್ನು ಪಡೆಯಲು ಅವಶ್ಯಕವಾಗಿ ಇರಲೇಬೇಕಾದ ಪ್ರಯತ್ನಶೀಲತೆಯನ್ನು ಎತ್ತಿ ಸಾರುತ್ತಿದೆ. ಪ್ರತಿಯೊಂದು ಜೀವಿಯೂ ಜನ್ಮತಾಳುವಾಗಲೇ ಇಂತಿಂತಹ ಫಲಗಳನ್ನು ಹೊಂದಲೇಬೇಕು ಎಂಬುದು ವಿಧಿಲಿಖಿತ, ಹಾಗೆಂದು ಆ ನಿಟ್ಟಿನಲ್ಲಿ ಪ್ರಯತ್ನ ಮಾಡದೇ ಸುಮ್ಮನೆ ಕಾಲಹರಣ ಮಾಡಿದರೆ ಫಲದ ಪ್ರಾಪ್ತಿಯಗುವುದಿಲ್ಲ.


ಮಲಗಿ ನಿದ್ರಿಸುತ್ತಿರುವ ಸಿಂಹದ ಬಾಯಿಯೊಳಗೆ ಮೃಗಗಳು ತಾವಾಗಿಯೇ ಬಂದು ಬೀಳುವುದಿಲ್ಲ ಎಂಬ ಸುಭಾಷಿತ ಪ್ರಸಿದ್ಧವಾಗಿದೆ. ನಮ್ಮ ಸಂಸ್ಕೃತಿಯಲ್ಲಿ ದೈವಬಲ ಹಾಗೂ ಪುರುಷಪ್ರಯತ್ನ ಎರಡಕ್ಕೂ ಅತ್ಯಂತ ಮಹತ್ವವನ್ನು ನೀಡಿದ್ದಾರೆ." ದೈವಾನುಗ್ರಹ ಪುರುಷಪ್ರಯತ್ನಗಳು ರಥದ ಚಕ್ರಗಳಂತೆ. ಹೇಗೆ ಎರಡು ಚಕ್ರಗಳೂ ಒಟ್ಟಿಗೆ ಉರುಳಿದಾಗ ಮಾತ್ರ ರಥವು ಮುನ್ನಡೆಯುವುದೋ ಅಂತಯೇ ದೈವಾನುಗ್ರಹದ ಜೊತೆಯಾಗಿ ಪುರುಷ ಪ್ರಯತ್ನವೂ ಇದ್ದಾಗ ಮಾತ್ರ ಜೀವನರಥವು ಸುಗಮವಾಗಿ ಸಾಗುವುದು, ಕಾರ್ಯಸಿದ್ಧಿಯಾಗುವುದು" ಎಂಬ ಶ್ರೀರಂಗ ಮಹಾಗುರುಗಳ ವಾಣಿಯು ಸ್ಮರಣೀಯವಾಗಿದೆ.


ಪ್ರತಿಯೊಂದು ಜೀವಿಯೂ ಭಗವಂತನಿಂದ ಹೊರಟು ಪ್ರಕೃತಿಗೆ ಇಳಿದು ತಮ್ಮ ತಮ್ಮ ಕರ್ಮಕ್ಕನುಗುಣವಾದ ಐಹಿಕ ಫಲಗಳನ್ನು ಪಡೆದಾಗ ಮಾತ್ರ ಜೀವನ ಪೂರ್ಣವಾಗುವುದಿಲ್ಲ. ತನ್ನ ಮೂಲಸ್ಥಾನವಾದ ಭಗವಂತನನ್ನು ಮತ್ತೆ ಹೋಗಿ ಸೇರುವುದು ಜೀವಿಯ ಪರಮಫಲ. ಆ ಫಲವನ್ನು ಹೊಂದಲು ಭಗವಂತನ ಕೃಪೆ, ಸದ್ಗುರುವಿನ ಅನುಗ್ರಹ ಇವುಗಳನ್ನೆಲ್ಲ ಸಂಪಾಡಿಸಿಕೊಂಡು, ಅದಕ್ಕನುಗುಣವಾಗಿ ಸಾಧನೆ ಮಾಡುವುದು ಪುರುಷಪ್ರಯತ್ನವಾಗಿದೆ. ಹಾಗಾಗಿ ದೈವಬಲದ ಜೊತೆಗೆ ಪುರುಷಪ್ರಯತ್ನವನ್ನೂ ಇಟ್ಟುಕೊಂಡು ಜೀವನದಲ್ಲಿ ಐಹಿಕ ಸುಖ ಹಾಗೂ ಪಾರಮಾರ್ಥಿಕ ಸುಖ ಎರಡನ್ನೂ ಅನುಭವಿಸಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕಾಗಿದೆ.


ಸೂಚನೆ: 19/2/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.