Monday, February 26, 2024

ಯಕ್ಷ ಪ್ರಶ್ನೆ78 (Yaksha prashne 78)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in) 

 

ಪ್ರಶ್ನೆ – 77 ಅನ್ನ ಯಾವುದು ?

ಉತ್ತರ - ಗೋವು  

ಅನ್ನವೆಂದರೆ ಶರೀರದ ಬೆಳವಣಿಗೆಗೆ ಬೇಕಾದ ಪದಾರ್ಥ. ವಿಶೇಷವಾಗಿ ಇಲ್ಲಿ ಹೇಳುತ್ತಿರುವುದು ಮಾನವನ ಆಹಾರದ ಬಗ್ಗೆ. ಮಾನವನ ಹುಟ್ಟಿನಿಂದ ಹಿಡಿದು ಅವನ ಬದುಕಿನ ಉದ್ದಕ್ಕೂ ಶರೀರದ ಪೋಷಣೆಗೆ ಅತಿಮುಖ್ಯವಾದ ಆಹಾರ ಯಾವುದು? ಎಂಬುದು ಇಲ್ಲಿನ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರ ಗೋವು. ಹಸುವೆಂಬುದು ಮಾನವನ ಶರೀರಕ್ಕೆ ಬೇಕಾದ ಆಹಾರವನ್ನು ಒದಗಿಸಿಕೊಡುವುದು. ಹಾಗಾಗಿ ಹಸುವು ಅನ್ನವಾಗಿದೆ. ಆದರೆ ಇಲ್ಲಿ ಒಂದು ಪ್ರಶ್ನೆಯು ಬಾರದಿರದು. "ಎಷ್ಟೋ ಕಡೆ ಹಸುವಿನ ಯಾವುದೇ ಉತ್ಪನ್ನವನ್ನು ಬಳಸದೇ ಜೀವನವನ್ನು ನಡೆಸುತ್ತಿರುತ್ತಾರೆ. ಅವರಿಗೆ ಅದು ಅನ್ನವಾಗುವುದಿಲ್ಲ. ಆದ್ದರಿಂದ ಈ ಉತ್ತರ ಯಾರೋ ಕೆಲವರನ್ನು ಉದ್ದೇಶವಾಗಿ ಇಟ್ಟುಕೊಂಡು ಕೇಳಿರುವ ಪ್ರಶ್ನೆಯಾಗಿದೆ. ಇದು ಮಾನವ ಜನಾಂಗವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹೇಳಿರುವ ಉತ್ತರವೂ ಅಲ್ಲ. ಎಲ್ಲರಿಗೂ ಅವಶ್ಯವೂ ಅಲ್ಲ. ಆದ್ದರಿಂದ ಹಸುವು ಅನ್ನವಾಗಲೂ ಹೇಗೆ ಸಾಧ್ಯ?" ಎಂದು. ಹೌದು; ಇದು ಕೆಲವರನ್ನೇ ಮನಸ್ಸಿನಲ್ಲಿ ಭಾವಿಸಿ ಕೇಳಿದ ಪ್ರಶ್ನೆಯಾಗಿದೆ. ಅಂದರೆ ಭೌತಿಕ ಜೀವನವನ್ನು ಮಾತ್ರ ಗುರಿಯಾಗಿಸಿಕೊಂಡು, ಒಂದು ಜನನ ಮತ್ತು ಮರಣದ ನಡುವಿನ ಬದುಕೇ ಜೀವನ ಎಂದು ತಿಳಿದ ಮಂದಿಗೆ ಈ ಉತ್ತರ ಹಾಸ್ಯಾಸ್ಪದವಾಗಿ ತೋರಬಹುದು. ಯಾರ ಜೀವನ ಭೌತಿಕದಿಂದ ಹಿಡಿದು, ದೈವಿಕ ಮತ್ತು ಅಧ್ಯಾತ್ಮಪ್ರಪಂಚದವರೆಗೆ ವಿಸ್ತಾರವಾಗಿದೆಯೋ ಅಂತಹ ಮನುಜರ ಜೀವನಕ್ಕೆ ಯಾವುದು ಆಹಾರ ಎಂಬುದು ಇಲ್ಲಿನ ಪ್ರಶ್ನೆಯಾಗಿದೆ. ಆಗ ಹಸುವೆಂಬ ಉತ್ತರ ಸಮಂಜಸವಾಗಿದೆ. 

ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕವೆಂಬ ಮೂರು ಹಂತದಲ್ಲಿ ಪೂರ್ಣತೆಯನ್ನು ಸಂಪಾದಿಸಲು ಸಾತ್ತ್ವಿಕವಾದ ಆಹಾರದ ವಿಧಾನವೇ ಬೇಕು. ಹಸುವಿನಿಂದ ಸಿಗುವ ದ್ರವ್ಯಗಳು ಇಂತಹ ಸಾತ್ತ್ವಿಕವಾದ ಆಹಾರ ಎಂದು ಪರಿಗಣಿಸಲ್ಪಟ್ಟಿದೆ. ಹಾಲು, ಮೊಸರು, ತುಪ್ಪ ಇವು ಶರೀರದ ಬೆಳವಣಿಗೆಗೆ ಸಹಕಾರ ಮಾಡಿಕೊಡುತ್ತವೆ. ಗೋಮಯ ಮತ್ತು ಗೋಮೂತ್ರ ನಮಗೆ ಬೇಕಾದ ಸಾತ್ತ್ವಿಕವಾದ ಆಹಾರವನ್ನು ಬೆಳೆಯಲು ಗೊಬ್ಬರವಾಗಿ ಉಪಯೋಗವಾಗುತ್ತದೆ. ಇಂದು ಸಿಗುವ ಗೋವು ಎಂದು ಕರೆಸಿಕೊಳ್ಳುವ, ದಿನಕ್ಕೆ ಬೇಕಾದಷ್ಟು ಹಾಲನ್ನು ಕೊಡುವ ಯಂತ್ರದಂತಿರುವ ಮಿಶ್ರತಳಿಯ ಗವ್ಯೋತ್ಪನ್ನಗಳು ಸಾತ್ತ್ವಿಕ ಆಹಾರ ಎಂದು ಪರಿಗಣಿತವಾಗಿಲ್ಲ. ಶುದ್ಧವಾದ ಭಾರತೀಯ ಗೋ ತಳಿಯ ಉತ್ಪನ್ನಗಳು ಮಾತ್ರವೇ ಇಂತಹ ಸಾತ್ತ್ವಿಕ ಆಹಾರ ಎಂದು ಪರಿಗಣಿಸಲ್ಪಟ್ಟಿವೆ. ಯಾವುದು ನಿಜವಾದ ಭಾರತೀಯ ಗೋವು ಎಂಬುದಕ್ಕೆ ಶಾಸ್ತ್ರದಲ್ಲಿ ಚರ್ಚೆಯಾಗಿದೆ. ಯಾವ ಗೋವಿಗೆ ಗಂಗೆತೊಗಲು ಅಂದರೆ ಗೋವಿನ ಕುತ್ತಿಗೆಯ ಕೆಳಗೆ ಇಳಿಬಿಟ್ಟ, ಜೋಲುವ ಚರ್ಮ ಕಾಣಸಿಗುವುದೋ ಅದು. ಅಂತಹ ಗೋವನ್ನು ನಿಜವಾದ ಗೋವು ಎನ್ನಲಾಗಿದೆ. ಅವುಗಳಲ್ಲೂ ನೂರಾರು ಜಾತಿಗಳಿವೆ. ಇಂದು ಉಳಿದಿರುವ ಗೋಜಾತಿಗಳು ಕೆಲವಾರು. ಅಂತಹ ಜಾತಿಗಳಲ್ಲೂ ಪರಸ್ಪರ ಮಿಶ್ರವಾಗದ ಅದದೇ ಜಾತಿಯ ಗೋವಿನ ಸಂತತಿಯಾದ ಗೋವುಗಳೇ ಶುದ್ಧ ಗೋವುಗಳು. ಅಂತಹ ಹಸುಗಳಿಂದ ಉತ್ಪನ್ನವಾದ ಎಲ್ಲಾ ಪದಾರ್ಥಗಳೂ ಮಾನವನ ಇಹ-ಪರ ಜೀವನಕ್ಕೆ ಸಾಧಕಗಳು. ಇವುಗಳನ್ನೇ 'ಅನ್ನ' ಎಂಬುದಾಗಿ ಯಕ್ಷನ ಪ್ರಶ್ನೆಗೆ ಧರ್ಮರಾಜನು ಉತ್ತರವಾಗಿ ನೀಡಿದ್ದಾನೆ ಎಂದು ಭಾವಿಸಬೇಕು. 

ಸೂಚನೆ : 25/2/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.