Sunday, February 11, 2024

ಯಕ್ಷ ಪ್ರಶ್ನೆ 76 (Yaksha prashne 76)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)



ದಿಕ್ಕು ಯಾವುದು ?

ಉತ್ತರ - ಸಂತರು 

ದಾರಿತಪ್ಪಿದ ವ್ಯಕ್ತಿಯನ್ನು ಕುರುತು ಹೀಗೆ ಮಾತನಾಡುವ ಅಭ್ಯಾಸವಿದೆ 'ಅವನಿಗೆ ದಿಕ್ಕು- ದಿಶೆ ಇಲ್ಲ' ಎಂದು. ದಿಕ್ಕು ಅಥವಾ ದಿಶೆ ಇವೆರಡೂ ಒಂದೇ ಅರ್ಥವನ್ನು ಕೊಡುವ ಪದಗಳು. ನಿರ್ದಿಷ್ಟವಾದ ಗೊತ್ತು ಗುರಿ ಇರುವಂತಹ ವಿಷಯ ಎಂಬುದು ಇದರ ಅಭಿಪ್ರಾಯ. ಒಬ್ಬ ವ್ಯಕ್ತಿ ತಾನು ಹೇಗೆ ಜೀವನ ಮಾಡಬೇಕು? ಎಲ್ಲಿ ಹೋಗಬೇಕು? ಯಾರನ್ನು ಈ ಕಾರ್ಯಗಳಿಗೆ ಆದರ್ಶವಾಗಿ ಇಟ್ಟುಕೊಳ್ಳಬೇಕು? ಎಂಬ ಸಂದೇಹ ಬಂದಾಗ ಒಬ್ಬರನ್ನು ಆಯ್ದುಕೊಳ್ಳಬೇಕಾಗುತ್ತದೆ. ಆಗ ಆ ವ್ಯಕ್ತಿಗೆ ಅವನೇ ದಿಕ್ಕು ಅಥವಾ ದಿಸೆ ಎಂದರ್ಥ. ಇಲ್ಲಿ ಯಕ್ಷ ಕೇಳುವ ಪ್ರಶ್ನೆಯಲ್ಲೂ ಇದೇ ಆಶಯವಿದೆ. ಮಾನವನಾಗಿ ಹುಟ್ಟಿದ ಬಳಿಕ ತನ್ನ ಜೀವನವನ್ನು ಸಾರ್ತ್ಕಪಡಿಸಿಕೊಳ್ಳಬೇಕಾದರೆ ಯಾರನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು? ಎಂಬುದು ಯಕ್ಷನ ಪ್ರಶ್ನೆಯಾಗಿದೆ. ಅದಕ್ಕೆ ಧರ್ಮರಾಜನ ಉತ್ತರ 'ಸಂತ' ಎಂಬುದಾಗಿ. ಸಂತ- ಸಜ್ಜನ- ಜ್ಞಾನಿ ಆದ ವ್ಯಕ್ತಿಯೇ ಮಾನವತೆಗೆ ಎದುರು ಹಿಡಿದ ಕನ್ನಡಿ- ಆದರ್ಶ. ಆದ್ದರಿಂದ ಇಲ್ಲಿ ನಾವು ಸಂತನ ಲಕ್ಷಣವನ್ನು ನೋಡಿಕೊಂಡರೆ, ಅವನ ಗುಣಗಳೇ ನಮಗೆ ಕತ್ತಲಲ್ಲಿ ನಡೆಯುವವನಿಗೆ ದೀಪದಂತಾಗಬಹುದು. 

ಮಹಾಕವಿ ಕಾಳಿದಾಸ ರಘುವಂಶ ಎಂಬ ತನ್ನ ಕಾವ್ಯದಲ್ಲಿ ಸಂತರ ಲಕ್ಷಣವನ್ನು ಹೀಗೆ ಹೇಳಿದ್ದಾನೆ "ತಂ ಸಂತಃ ಶ್ರೋತುಮರ್ಹಂತಿ ಸದಸದ್ವ್ಯಕ್ತಿಹೇತವಃ। ಹೇಮ್ನಃ ಸಂಲಕ್ಷ್ಯತೇ ಹ್ಯಗ್ನೌ ವಿಶುದ್ಧಿಃ ಶ್ಯಾಮಿಕಾಪಿ ವಾ ॥" ಎಂದು. ಬಂಗಾರದ ಶುದ್ಧಿಯನ್ನು ಪರೀಕ್ಷಿಸಲು ಬೆಂಕಿಯಲ್ಲಿ ಹಾಕುತ್ತೇವೆ. ಆಗ ಬಂಗಾರದಲ್ಲಿನ ಪರಿಶುದ್ಧತೆ ತಿಳಿಯುತ್ತದೆ. ಅದರಲ್ಲಿ ಎಷ್ಟು ಪ್ರಮಾಣ ಶುದ್ಧ ಬಂದರವಿದೆ? ಎಷ್ಟು ಪ್ರಮಾಣ ಮಿಶ್ರಲೋಹದ ಯೋಗವಿದೆ? ಎಂಬುದು ಅರಿವಿಗೆ ಬರುತ್ತದೆ. ಅಂತೆಯೇ ಸಂತರು ಅಗ್ನಿಯಷ್ಟೇ ಪರಿಶುದ್ಧರು. ಪುಟವಿಟ್ಟ ಚಿನ್ನದಂತೆ ಅವರು. ಅವರ ಆಚಾರ, ವಿಚಾರ, ನಡೆ, ನುಡಿ ಪ್ರತಿಯೊಂದರಲ್ಲೂ ಪಾರಿಶುದ್ಧ್ಯವನ್ನು ಕಾಣಬಹುದು. ಯಾವುದೇ ಕಾರಣಕ್ಕೂ ಅವರು ಮಾಡಬಾರದ್ದನ್ನು ಮಾಡುವುದಿಲ್ಲ. ಮಾಡುವಂತಹದ್ದನ್ನು ಬಿಡುವುದಿಲ್ಲ. ಅವರು ವಿಚಾರ ಮಾಡಿದರೆಂದರೆ ಅದರಲ್ಲಿ ಸ್ವಲ್ಪವೂ ಲೋಪವಿರದು. ಅವರು ನಡೆದದ್ದೇ ದಾರಿಯಾಗುತ್ತದೆ. ಸಲ್ಲದ ದಾರಿಯನ್ನು ಹಿಡಿಯುವವರು ಅವರಲ್ಲ. ಶ್ರೀರಂಗಮಹಾಗುರುಗಳು ಈ ಸಂತರ ಲಕ್ಷಣವನ್ನು ಹೇಳುವ ಶ್ಲೋಕವನ್ನು ಯಾವಾಗಲೂ ಹೇಳುತ್ತಿದ್ದರು. " ರಜಸ್ತಮೋಭ್ಯಾಂ ನಿರ್ಮುಕ್ತಾಃ ತಪೋಜ್ಞಾನಬಲೇನ ಯೇ। ತೇಷಾಂ ತ್ರಿಕಾಲಮಮಲಂ ಜ್ಞಾನಂ" ಎಂಬುದಾಗಿ. ರಜಸ್ಸು ಮತ್ತು ತಮಸ್ಸು ಎಂಬ ಎರಡು ಗುಣಗಳಿಂದ ಬೇರ್ಪಟ್ಟ, ಕೇವಲ ಶುದ್ಧಸತ್ತ್ವಗುಣದಿಂದ ಕೂಡಿದವರು. ಆದ್ದರಿಂದಲೇ ಭೂತ ಭವಿಷ್ಯತ್ ವರ್ತಮಾನಗಳೆಂಬ ಮೂರೂ ಕಾಲದಲ್ಲೂ ಅವ್ಯಾಹತವಾದ ಪರಿಶುದ್ಧವಾದ ಜ್ಞಾನವನ್ನು ಪಡೆಯುವಂತವರಾಗಿದ್ದರು ಅವರು. ಇಂತಹ ವಿಶಿಷ್ಟ ಗುಣಗಳಿಂದ ಕೂಡಿರುವುದರಿಂದಲೇ ಅವರು ಎಂದೂ ಸುಳ್ಳನ್ನು ಆಡುತ್ತಿರಲಿಲ್ಲ; ಅಷ್ಟೇ ಅಲ್ಲ, ಅವರು ಹೇಗೆ ತಾನೆ ಸತ್ಯವನ್ನು ಬಿಟ್ಟು ಬೇರೆಯದನ್ನು ಹೇಳಲು ಸಾಧ್ಯ?!. ಅಂತಹ ನಿರ್ಮಲ ಅಂತಃಕರಣ ಉಳ್ಳವರೇ ಸಂತರು. ಅವರು ತಾನೆ ನಮ್ಮ ಜೀವನಕ್ಕೆ ದಿಕ್ಕು ದಿಸೆ!. ಅವರ ನಡೆ ನುಡಿ ಆಹಾರ ವಿಹಾರ ವ್ಯವಹಾರ ಎಲ್ಲವೂ ನಮಗೆ ಆದರ್ಶವೇ.   

ಸೂಚನೆ :  11/02/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.