Monday, February 5, 2024

ಯಕ್ಷ ಪ್ರಶ್ನೆ 75 (Yaksha prashne 75)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 74 ಯಜ್ಞವು ನಷ್ಟವಾಗುವುದು ಯಾವಾಗ ?

ಉತ್ತರ - ದಕ್ಷಿಣೆ ಇಲ್ಲದಿರುವಾಗ

ಯಜ್ಞವು ಅತ್ಯಂತ ಶ್ರೇಷ್ಠವಾದ ಕರ್ಮ. ಯಜ್ಞದಿಂದಲೇ ಮಳೆ, ಬೆಳೆ ಎಲ್ಲವೂ. ವೇದಗಳ ಆವಿರ್ಭಾವವಾದದ್ದೇ ಯಜ್ಞಕ್ಕೋಸ್ಕರ. ಯಜ್ಞವಿಲ್ಲದಿದ್ದರೆ ಜೀವನವೇ ಇಲ್ಲ. ಒಂದು ದೃಷ್ಟಿಯಿಂದ ನೋಡಿದರೆ ಜೀವನವೇ ಒಂದು ಯಜ್ಞ. ಜೀವನಯಜ್ಞಕ್ಕೆ ಸಾಧನವಾಗುವಂತಹ ದ್ರವ್ಯಯಜ್ಞ ತಪೋಯಜ್ಞ, ಯೋಗಯಜ್ಞ, ಸ್ವಾಧ್ಯಾಯಯಜ್ಞ, ಜ್ಞಾನಯಜ್ಞ ಎಂದು ಅನೇಕ ಬಗೆಯ ಯಜ್ಞಗಳನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಹಾಗಾಗಿ ಯಜ್ಞಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಾಶಸ್ತ್ಯವನ್ನು ಕೊಡಲಾಗಿದೆ. ಇಂತಹ ಯಜ್ಞ ಪೂರ್ತಿಯಾಗಲು ಯಾವುದು ಅತ್ಯಂತ ಅವಶ್ಯ? ಎಂಬ ವಿಷಯವನ್ನು ಯಕ್ಷನು ಈ ರೀತಿ ಪ್ರಶ್ನೆಯನ್ನು ಕೇಳುತ್ತಾನೆ. ಯಾವುದು ಇಲ್ಲದಿದ್ದರೆ ಆ ಕಾರ್ಯವು ಅಪರಿಪೂರ್ಣವಾಗುವುದೋ ಅಂತಹ ವಿಷಯವೇ ಆ ಕಾರ್ಯಕ್ಕೆ ಅನಿವಾರ್ಯ ಅಥವಾ ಅತ್ಯವಶ್ಯ ಎಂಬುದಾಗಿ ತಿಳಿಯಬೇಕು. ಅದನ್ನೇ ಶಾಸ್ತ್ರದಲ್ಲಿ 'ಅಸಾಧಾರಣಕಾರಣ' ಎಂಬುದಾಗಿ ಹೇಳಲಾಗಿದೆ. ಒಂದು ಕಾರ್ಯ ಸಂಪನ್ನವಾಗಲು ಅನೇಕ ಕಾರಣಗಳು ಬೇಕು. ಅವುಗಳೆಲ್ಲವನ್ನೂ ಅಸಾಧಾರಣ ಕಾರಣ ಎನ್ನಲಾಗದು. ಕಾರಣಸಮೂಹದಲ್ಲಿ ಯಾವುದು ಇದ್ದರೆ ಮಾತ್ರ ಕಾರ್ಯ ಸಂಪನ್ನವಾಗುತ್ತದೆಯೋ, ಅದು ಇಲ್ಲದಿದ್ದರೆ ನಡೆಯುವುದೇ ಇಲ್ಲವೋ ಅದನ್ನು ಅಸಾಧಾರಣಕಾರಣ ಎನ್ನುತ್ತಾರೆ. ಈ ದೃಷ್ಟಿಯಿಂದ ಯಜ್ಞವೆಂಬ ಕಾರ್ಯಕ್ಕೆ ಕಾರಣ ಸಾಮಗ್ರಿ ಬಹಳ ಇವೆ. ಯಜ್ಞಕ್ಕೆ ಕಾಲ, ದೇಶ, ದ್ರವ್ಯ, ಯಜಮಾನ, ಋತ್ವಿಜ ಇಂತಹ ಅನೇಕ ಸಾಧನಗಳು ಬೇಕಾಗುತ್ತವೆ. ಇವುಗಳು ಇಲ್ಲದಿದ್ದರೂ ಯಜ್ಞ ಪೂರ್ಣವಾಗದು. ಆದರೂ ಇವುಗಳನ್ನು ಅತ್ಯವಶ್ಯವಾದ ಸಾಧನ ಎಂದು ಪರಿಗಣಿಸಲಿಲ್ಲ. ಆದರೆ ದಕ್ಷಿಣೆಯನ್ನು ಮಾತ್ರ ಅತ್ಯವಶ್ಯವಾದ ಸಾಧನ ಎಂದು ಪರಿಗಣಿಸಿದ್ದಾರೆ. ಹಾಗಾದರೆ ದಕ್ಷಿಣೆಯನ್ನು ಕೊಡದಿದ್ದರೆ ಯಜ್ಞವನ್ನು ಮಾಡಲು ಸಾಧ್ಯವಿಲ್ಲವೇ? ಎಂದರೆ ಅದಿಲ್ಲದಿದ್ದರೆ ಯಜ್ಞವೆಂಬ ಕ್ರಿಯಾಕಲಾಪವನ್ನು ಮಾಡಿ ಮುಗಿಸಿದಂತಾಗುವುದು. ಆದರೆ ಯಜ್ಞಕ್ಕೆ ಅದಷ್ಟೇ ಸಾಲದು; ದಕ್ಷಿಣೆ ಅಥವಾ ಸಂಭಾವನೆಯು ಅತಿಮುಖ್ಯವಾದ ಅಂಗ ಎಂಬುದಾಗಿ ಈ ಪ್ರಶ್ನೋತ್ತರದಲ್ಲಿ ನಿರ್ಣಯಿಸಲಾಗಿದೆ. 

ಯಜ್ಞ ಸಮಾಪ್ತಿಯಾದ ಸಮನಂತರದಲ್ಲಿ ಅಲ್ಲಿ ಭಾಗವಹಿಸಿದ ವೈದಿಕರಿಗೆ ಕೊಡುವ ವ್ಯಾವಹಾರಿಕ ದ್ರವ್ಯವನ್ನು ದಕ್ಷಿಣೆ ಎಂದು ಕರೆಯುತ್ತಾರೆ. ಯಜ್ಞದಲ್ಲಿ ಕೊಡುವ ಪ್ರತಿಯೊಂದು ದಾನದ ಜೊತೆಯಲ್ಲೂ ದಕ್ಷಿಣೆಯನ್ನು ಸೇರಿಸಿಯೇ ಕೊಡಬೇಕು. ಹಾಗಿಲ್ಲದಿದ್ದರೆ ಕೊಟ್ಟ ದಾನಕ್ಕೂ ಬೆಲೆಯಿಲ್ಲ ಎಂಬಷ್ಟರ ಮಟ್ಟಿಗೆ ಈ ದಕ್ಷಿಣೆಯ ಮಹತ್ತ್ವವನ್ನು ಹೇಳಲಾಗಿದೆ. ಹಾಗಾಗಿ ಭಾಗವಹಿಸಿದ ವಿಪ್ರೋತ್ತಮರಿಗೆ ತೃಪ್ತಿಯಾಗುವಷ್ಟು ಸಂಭಾವನೆಯನ್ನು ಕೊಡಬೇಕು. ದಕ್ಷಿಣೆ ಎಂಬ ಶಬ್ದವೇ ಯಾವುದು ದಕ್ಷತೆ, ಯೋಗ್ಯತೆ, ಅರ್ಹತೆಯನ್ನು ಉಂಟುಮಾಡುವುದು ಎಂಬ ಅರ್ಥವನ್ನು ಕೊಡುತ್ತದೆ. ಆದ್ದರಿಂದ ಕೊಟ್ಟ ದಕ್ಷಿಣೆಯಿಂದ ಮಾತ್ರವೇ ಮಾಡಿದ ಯಜ್ಞಕ್ಕೆ ಯೋಗ್ಯತೆ ಅಥವಾ ಫಲಸ್ವೀಕಾರಕ್ಕೆ ಅರ್ಹತೆ ಬರುತ್ತದೆ ಎಂದರ್ಥ. ಇದನ್ನು ಪುಷ್ಟೀಕರಿಸಲು 'ಯಜ್ಞಾನಾಂ ವರೂಥಂ ದಕ್ಷಿಣಾ'  'ಕಸ್ಮಿನ್ನು ಯಜ್ಞಃ ಪ್ರತಿಷ್ಠಿತಃ ? ದಕ್ಷಿಣಾಯಾಮ್ ಇತಿ' ಮೊದಲಾದ ಅನೇಕ ಮಂತ್ರಗಳು ವೇದಗಳಲ್ಲಿ ಹೇರಳವಾಗಿ ಇವೆ. ಆದ್ದರಿಂದ ಯಜ್ಞದಲ್ಲಿ ಭಾಗವಹಿಸಿದ ವೈದಿಕೋತ್ತಮರಿಗೆ ವ್ಯಾವಹಾರಿಕ ದ್ರವ್ಯವನ್ನು ದಕ್ಷಿಣೆಯ ರೂಪದಲ್ಲಿ 'ನ ಮಮ' ಎಂಬ ಬುದ್ಧಿಯಿಂದ ದಾನಮಾಡಬೇಕು. ಇಂತಹ ದಾನವೇ ಯಜ್ಞವನ್ನು ಪರಿಪೂರ್ಣವನ್ನಾಗಿ ಮಾಡುತ್ತದೆ ಎಂಬುದು ಈ ಪ್ರಶ್ನೋತ್ತರ ಆಶಯವಾಗಿದೆ. 

ಸೂಚನೆ : 4/2/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.