Saturday, July 13, 2024

ಭಗವಂತ ಕರುಣಾಮಯನೇ? ಭಾಗ-೩ (Bhagavanta Karunamayane? Bhaga-3)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)





ದ್ರೌಪದಿಯ ಮೇಲಿನ ಕರುಣೆ:

 

"ಗೋವಿನ್ದೇತಿ ಯದಾಕ್ರನ್ದತೇ ಕೃಷ್ಣಾ ಮಾಂ ದೂರತಃಸ್ಥಿತಂ ಋಣಂ ಪ್ರವೃದ್ಧಮೇವ ಮೇ ಹೃದಯಾಂ ಆಪಸರ್ಪತಿ" ..ಎನ್ನುತ್ತಾನೆ ಶ್ರೀಕೃಷ್ಣ. ದ್ರೌಪದಿ ಗೋವಿಂದಾ ಎಂದು ಆರ್ತವಾಗಿ ಕೂಗಿಕೊಂಡಳು. ಹಸ್ತಿನಾವತಿ ಎಲ್ಲಿ? ದ್ವಾರಕೆ ಎಲ್ಲಿ? ಆದರೆ ಆ ಸರ್ವ ವ್ಯಾಪಕನಿಗೆ ದೂರದ ಉಪಾಧಿ ಎಲ್ಲಿಯದು? ಕರುಣೆಯಿಂದ ಅಕ್ಷಯ ವಸ್ತ್ರವನ್ನು ಕೃಷ್ಣನು ದಯಪಾಲಿಸಿದನು. ಆದರೂ ದ್ರೌಪದಿಯ  ಆ "ಗೋವಿಂದಾ" ಎಂದಾಗಿನ ಆರ್ತತೆ , ನೀನೇ ಗತಿ ಎಂಬ ಸರ್ವ ಶರಣಾಗತಿಗೆ ತಾನು ಮಾಡಿದುದು ಏನೂ ಸಾಲದು,ಅವಳಿಂದ ಸಾಲ ತೆಗೆದುಕೊಂಡು ಹಿಂತಿರುಗಿಸಲಾರದವನಂತೆ ನಾನಾಗಿದ್ದೇನೆ ಎಂದು ಕೃಷ್ಣನು ನೋಯುತ್ತಾನಂತೆ. ಅವನ ಕರುಣೆಯ ಅಪಾರತೆಯನ್ನು ಅರಿಯುವುದಾದರೂ ಹೇಗೆ? ನಮಗೆ ಹಾಗೆ ಕರೆಯಲು ಬರಬೇಕು ಅಷ್ಟೇ.

 

ಸಂಹಾರಕಾರ್ಯ, ಮರೆವು  ಕರುಣೆ ಹೇಗಾದೀತು?


ಇದೆಲ್ಲವೂ ಸರಿ ಆದರೆ ಭಗವಂತನ ಸಂಹಾರಕಾರ್ಯ ಕರುಣೆ ಹೇಗಾದೀತು ಎಂಬ ಪ್ರಶ್ನೆ ಏಳುತ್ತದೆ. ಶ್ರೀರಂಗಪ್ರಿಯ ಸ್ವಾಮಿಗಳು ಮರಣ, ಸಂಹಾರ ಕಾರ್ಯವೂ ಅವನ ಕರುಣೆಯೇ ಎನ್ನುತ್ತಿದ್ದರು. ಶಸ್ತ್ರಚಿಕಿತ್ಸೆಯ ನೋವನ್ನು ಅನುಭವಿಸದಿರಲಿ ಎಂದು ಅನಸ್ತೇಶಿಯಾ ಕೊಡುತ್ತಾರೆ. ಎಚ್ಚರ ತಪ್ಪಿಸುತ್ತಾರೆ. ವೈದ್ಯ ಹೀಗೆ ಮಾಡುವುದು ಎಂತಹ ನಿಷ್ಕರುಣೆ ಎನ್ನಲಾದೀತೇ? ಅದು ರೋಗಿಯ ಮೇಲಿನ ಕರುಣೆಯಿಂದಲೇ ಮಾಡಿದ ಕೆಲಸ.  ಇಲ್ಲಿಯೂ ಸಹ  ಜೀವಿಗಳು ಕರ್ಮಗಳ ಭಾರದಿಂದ ಕರ್ಮಫಲವನ್ನು ಅನುಭವಿಸುವ ಶಕ್ತಿಯನ್ನೂ ಕಳೆದುಕೊಂಡು ಬಳಲಿ ಬೆಂಡಾದಾಗ ಅವುಗಳಿಗೆ ದೀರ್ಘಕಾಲದ ವಿಶ್ರಾಂತಿ ಬೇಕಾಗುತ್ತದೆ. ಜೀವಿಗಳ ಇಂತಹ ನೋವಿನ ಪರಿಸ್ಥಿತಿಯನ್ನು ನೋಡಿದ ಕರುಣೆಯಿಂದಲೇ ಅವುಗಳ ದೀರ್ಘ ವಿಶ್ರಾಂತಿಗಾಗಿ ಅವನು ಸಂಹರಿಸುತ್ತಾನೆ. ಅದರಿಂದ ಜೀವಿಗಳು ಮತ್ತೆ ಹೊಸ ಹುರುಪಿನಿಂದ ತಮ್ಮ ಕರ್ಮಫಲಗಳನ್ನು ಅನುಭವಿಸಿ ಮುಕ್ತರಾಗಲಿ ಎಂಬ ಕರುಣೆಯೇ ಅಲ್ಲಿದೆ. ಹುಟ್ಟಿದವರೆಲ್ಲ ಮರಣ ಹೊಂದದೇ ಹಾಗೇ ಇದ್ದುಬಿಟ್ಟಿದ್ದರೆ ಈ ವಿಶ್ವದ ಪರಿಸ್ಥಿತಿ ಏನಾಗುತ್ತಿತ್ತು! ಹುಟ್ಟು ಎಂದು ಇದ್ದಮೇಲೆ ಮರಣವೆಂಬುದೂ ಖಚಿತವೆ ಆಗಿದೆ. ಅಲ್ಲದೇ ಪ್ರಿಯಜನರನ್ನು ಕಳೆದುಕೊಂಡಾಗ ಆಗುವ ದುಃಖ ಎಷ್ಟು ಅಸಹನೀಯ! ಆದರೆ ಕ್ರಮೇಣ ಮರೆಯುತ್ತೇವೆ. ಮರೆವೂ ಅವನ ಅನುಗ್ರಹವೇ.,ಆ ಘಟನೆಯ ದಿನದ ದುಃಖ ಅಷ್ಟೇ ತೀವ್ರವಾಗಿ ನಮ್ಮ ಜೀವಿತಕಾಲದವರೆಗೂ ಇರುವಂತಾಗಿದ್ದರೆ ಜೀವಲೋಕದ ಪರಿಸ್ಥಿತಿ ಏನಾಗುತ್ತಿತ್ತು! ಹಾಗೆಂದೇ ಮರೆವು ಅಂತಹ ದುಃಖವನ್ನೆಲ್ಲ ಕ್ರಮೇಣ ಮರೆಮಾಡುವುದೂ ಅವನ ಕರುಣೆಯೇ.

 

ಜೀವಲೋಕದ ಮೇಲೆ ಅವನ ಕರುಣೆ ಅಪಾರ:

 

ಜೀವಲೋಕದಮೇಲೆ ಅವನ ಕರುಣೆಯೊಂದಿಲ್ಲದಿದ್ದರೆ ಜಗತ್ತು ಅರೆ ಕ್ಷಣವೂ ಉಳಿಯಲಾರದು.ಜೀವಿಗಳು ದುಷ್ಕರ್ಮಗಳನ್ನುಮಾಡಿ ಅವನಿಂದ ದೂರವಾದಾಗ ಕರ್ಮಫಲಗಳನ್ನು ಅನುಭವಿಸಿ ಮತ್ತೆ ಶುದ್ಧರಾಗಿ ಆತ್ಮಮಾರ್ಗವೆಂಬ ರಾಜಮಾರ್ಗಕ್ಕೆ ಬರುವ ವ್ಯವಸ್ಥೆಯನ್ನೂ ಅವನ ಸೃಷ್ಟಿಯಲ್ಲೇ ಇಟ್ಟಿದ್ದಾನೆ. ಹೀಗೆ ಕರ್ಮಫಲಗಳನ್ನು ಅನುಭವಿಸುವುದೂ ಸಹ ಔಷಧವನ್ನು ಸೇವಿಸಿ ಖಾಯಿಲೆ ವಾಸಿಮಾಡಿಕೊಂಡು ಆರೋಗ್ಯವಂತರಾಗುವಂತೆ ನಮ್ಮನ್ನು ಭವಸಾಗರದಿಂದ ದಾಟಿಸುವ ಅವನ ಕರುಣೆಯೇ ಆಗಿದೆ. ಧರ್ಮಗ್ಲಾನಿಯುಂಟಾಗಿ ಜೀವಿಗಳಿಗೆ ಒಳಿತು ಕೆಡಕುಗಳ ಗೊಂದಲವುಂಟಾದಾಗ ತಾನೇ ಅವತರಿಸಿ ಜೀವಲೋಕವನ್ನು ಉದ್ಧರಿಸುವುದು ಅವನ ಕರುಣೆಯ ಕಾರಣದಿಂದಲೇ. ಆಗಾಗ ಋಷಿಗಳು, ಜ್ಞಾನಿಗಳ ಮೂಲಕ ಜೀವನದ ಧ್ಯೇಯವನ್ನು ಜ್ಞಾಪಿಸಿಕೊಟ್ಟು ಜೀವಿಯು ತನ್ನ ತವರುಮನೆಯಾದ ಪರಮ ಆನಂದದ ನೆಲೆಗೆ ಪಯಣಿಸಲು ಸಹಾಯ ಮಾಡುವುದು ಅವನ ಕರುಣೆಯಲ್ಲದೆ ಮತ್ತೇನು? ಜೀವಿಯು ತನ್ನ ನೆಲೆಮನೆಗೆ ಎಂದು ಬಂದು ಸುಖಿಸುತ್ತಾನೆ ಎಂದು ಅವನು ಸದಾ ಕಾಯುತ್ತಿರುತ್ತಾನೆ ಎಂಬುದು ಅವನ ಕರುಣೆಯನ್ನು ಕಂಡವರ ಮಾತು. ಭಗವಂತನು ತನ್ನನ್ನು ಸ್ತುತಿಸುವವರನ್ನು ಕಂಡು ಸಂತೋಷಪಡುತ್ತಾನಂತೆ. ಇದೇನಿದು? ತನ್ನನ್ನು ಹೊಗಳಿದರೆ ಖುಷಿಪಡುತ್ತಾನಲ್ಲ ಎಂದು ನಾವಂದುಕೊಳ್ಳುವ ಸಂತೋಷವಲ್ಲ ಅದು. ಹಾಗೆ ಸ್ತುತಿಸುವುದರಿಂತ ತನ್ನ ಕರ್ಮಕ್ಲೇಶಗಳನ್ನೆಲ್ಲ ಕಳೆದುಕೊಂಡು ಜೀವಿಯು ಮತ್ತೆ ಮೇರೆಯರಿಯದ ಆನಂದವನ್ನು ಹೊಂದುವಂತಾಗುವುದಲ್ಲಾ ಎಂಬ ಜೀವಿಯ ಬಗೆಗಿನ ಕರುಣೆ, ಪ್ರೀತಿ ಆ ಸಂತೋಷಕ್ಕೆ ಕಾರಣ.

 

 

ದಾಸವಾಣಿಯ ಅಂತರಾರ್ಥ:

 

 "ಕರುಣಾಮಯ ನೀ ನೆಂಬುವುದ್ಯಾತಕೋ ಭರವಸವಿಲ್ಲೆನಗೆ" ಎನ್ನುವ ದಾಸರ ಪದವೂ ಸಹ ಅವನ ಕರುಣೆಯನ್ನು ಒಲಿಸಿಕೊಳ್ಳಲು ಮಾಡಿದ ಅವನ ಮೇಲಿನ ಅತ್ಯಂತ ಪ್ರೀತಿಯ, ಸಲಿಗೆಯ ಪ್ರಕಟಣೆ ಆಗಿದೆಯೇ ವಿನಃ ಭಗವಂತನ ಕರುಣೆಯ ಮೇಲಿನ ಅಪನಂಬಿಕೆಯ ಮಾತಲ್ಲ ಅದು. ತಾಯಿಯ ಮೇಲಿನ ಅತಿಶಯವಾದ ಪ್ರೀತಿಯಿಂದ ಮಗು, ತಾಯಿ ಬರಲು ತಡ ಮಾಡಿದರೆ  ಸಿಟ್ಟಾಗುವುದಿಲ್ಲವೇ? ಆಗ ಮಗುವಿನ ಸಿಟ್ಟನ್ನು ತಾಯಿ ತನ್ನ ಮೇಲಿನ ಪ್ರೀತಿ ಎಂದೇ ಅರ್ಥಮಾಡಿಕೊಳ್ಳುತ್ತಾಳೆ. ಹಾಗೆಯೇ ಭಗವಂತನೂ ಸಹ ಭಕ್ತನ ಭಗವದ್ವಿರಹದ ಸಿಟ್ಟು, ತತ್ಪರಿಣಾಮವಾದ ಬೈಗುಳವನ್ನೂ ಪ್ರೀತಿಯಿಂದಲೇ ಸ್ವೀಕರಿಸುತ್ತಾನೆ. ಆದರೆ ಅಲ್ಲಿ ತಾಯಿ ಮಗುವನ್ನು ಬಿಟ್ಟುಹೋಗಿದ್ದರೆ,ಇಲ್ಲಿ ನಾವೇ ಭಗವಂತನನ್ನು ಬಿಟ್ಟುಬಂದಿರುತ್ತೇವೆ.

 

ನಾವು ದೊಡ್ಡವರಾಗಬೇಕು:

 

ಭಗವಂತನ ಕರುಣೆ ಅರ್ಥವಾಗಬೇಕಾದರೆ ನಾವು ದೊಡ್ಡವರಾಗಬೇಕು. ಹುಡುಗನಂತೆ ಇದ್ದರೆ ಜಗದೊಡೆಯನಾದ ನಮ್ಮೆಲ್ಲರ ತಂದೆಯ ಬಗೆಗೂ ಬಾಲಿಶವಾದ ಅಭಿಪ್ರಾಯವನ್ನೇ ಇಟ್ಟುಕೊಂಡಿರುತ್ತೇವೆ. ಹಾಗೆ ದೊಡ್ಡವರಾಗಿ ಭಗವಂತನ ಪಾರವಿಲ್ಲದ ಕರುಣೆಯ ಧರ್ಮವನ್ನು ಅನುಭವಿಸಿ ಕಣ್ಣೀರಿಟ್ಟ ಭಕ್ತರು,ಜ್ಞಾನಿಗಳು ಅವನನ್ನು ಕರುಣಾಸಾಗರ ಎಂದು ಕೊಂಡಾಡಿದ್ದಾರೆ. ಅಂತಹ ಅನುಭವಿಗಳ ಮಾತೇ ನಿಜಕ್ಕೂ ಅವನ ಕರುಣೆಗೆ ಪ್ರಮಾಣ. ಅವರು ತಮ್ಮ ತಪಸ್ಯೆಯಿಂದ ಭವದ ಬೆಂಗಾಡಿನ ಆಚೆಗಿನ ಭಗವಂತನ ನೆಲೆಯನ್ನು ತಲುಪಿ ಅಲ್ಲಿಂದ ಮಾಡಿದ ಗುಣಗಾನವದು.ಹೀಗೆ ಭಗವಂತನ ಕರುಣೆ ಅಪಾರ. ಅದನ್ನು ಅರ್ಥ ಮಾಡಿಕೊಳ್ಳುವ ಹೃದಯವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ. ಅವನ ಕರುಣೆಯ ಅರಿವನ್ನು ಪಡೆದ ಜ್ಞಾನಿಶ್ರೇಷ್ಠರ, ಭಕ್ತಶ್ರೇಷ್ಠರ ಅನುಭವದ ವಚನಗಳು ನಮಗೆಲ್ಲ ದಾರಿದೀಪವಾಗಲಿ. ಅಂತಹ ಭಗವಂತನ ಕರುಣೆಯನ್ನು ಅಪನಂಬಿಕೆಯಿಂದ ನೋಡದಿರೋಣ. ಅವನ ಕೃಪಾ ದೃಷ್ಟಿ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಅನವರತವೂ ಅವನನ್ನು ಪ್ರಾರ್ಥಿಸೋಣ.


ಸೂಚನೆ : 13/07/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.