ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 99 ಯಾರು ನಿಜವಾದ ಪಂಡಿತ ?
ಉತ್ತರ - ಧರ್ಮಜ್ಞನೇ ನಿಜವಾದ ಪಂಡಿತ
ಪಂಡಿತ ಎಂದರೆ ವಿದ್ಯಾವಂತ, ಜ್ಞಾನಿ, ಬುದ್ಧಿಮಂತ, ತಿಳಿದವನು ಇತ್ಯಾದಿಯಾಗಿ ಅರ್ಥೈಸುವ ರೂಢಿ ತಪ್ಪಲ್ಲ. ಆದರೆ ಯಾವ ಮೌಲ್ಯ ಇದ್ದರೆ ಮಾತ್ರ ಆತ ನಿಜವಾಗಿ 'ಪಂಡಿತ' ಎನಿಸಿಕೊಳ್ಳುತ್ತಾನೆ ಎಂಬ ವಿಷಯ ಇಲ್ಲಿನ ಯಕ್ಷಪ್ರಶ್ನೋತ್ತರದಲ್ಲಿದೆ. ಧರ್ಮಜ್ಞನಾದರೆ ಮಾತ್ರ ಆತ ನಿಜವಾಗಿಯೂ ಪಂಡಿತನೆನಿಸಿಕೊಳ್ಳುತ್ತಾನೆ. ಆತನ ಪಾಂಡಿತ್ಯಕ್ಕೂ ಬೆಲೆ ಬರುತ್ತದೆ. ಧರ್ಮಜ್ಞತೆ ಇಲ್ಲದಿದ್ದರೆ ಎಂತಹ ವಿದ್ವತ್ತು ಇದ್ದರೂ ಅದು ಸ್ವತಃ ಅವನಿಗೂ, ಅವನನ್ನು ಆಶ್ರಯಿಸಿದ ಮಂದಿಗೂ ಸಹಾಯವಾಗಲಾರದು. ಆದ್ದರಿಂದ ನಾವಿಲ್ಲಿ ಧರ್ಮ ಮತ್ತು ಧರ್ಮಜ್ಞತೆ ಎಂಬ ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಈ ಹಿಂದಿನ ಲೇಖನದಲ್ಲಿ ಧರ್ಮ ಎಂಬುದರ ಬಗ್ಗೆ ವಿವರಣೆಯನ್ನು ಕೊಟ್ಟಿತ್ತು. ಆ ವಿಚಾರವನ್ನು ಅನುಸಂಧಾನ ಮಾಡಿಕೊಂಡಾಗ ಇಲ್ಲಿನ ವಿಷಯ ಇನ್ನೂ ಹೆಚ್ಚು ಅರ್ಥವಾಗುತ್ತದೆ.
ಧರ್ಮ ಎಂಬ ಪದವನ್ನು ಎಷ್ಟು ಬಾರಿ ಕೇಳಿದರೂ ನಮಗೆ ಅರ್ಥವಾಗದಿರುವ ವಿಷಯ. ಧರ್ಮ ಎಂಬ ಪದವನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಅದಕ್ಕೆ ಸರಿಯಾದ ವಿವರಣೆ ಕಷ್ಟ ಸಾಧ್ಯ. ಏಕೆಂದರೆ ಧರ್ಮ ಎಂಬುದು ಕಣ್ಣಿಗೆ ಕಾಣುವ ವಸ್ತುವಲ್ಲ; ವಿಷಯವಲ್ಲ. ಕಾಣದಿರುವ ವಿಷಯವೊಂದನ್ನು ಪದದಿಂದ ಗುರುತಿಸುವುದು ಅತ್ಯಂತ ಕಷ್ಟ. ಹಾಗಾದರೆ ಧರ್ಮವನ್ನು ಗುರುತಿಸಲು ಸಾಧನ ಏನು? ಮಾನ ಏನು? ಎಂಬುದು ಜಿಜ್ಞಾಸೆಯ ವಿಷಯ. ಇದಕ್ಕೆ ನಮ್ಮ ಸಾಹಿತ್ಯಗಳು, ಪರಂಪರೆ ಹೀಗೆ ಹೇಳುತ್ತದೆ - "ಧರ್ಮಸ್ಯ ತತ್ತ್ವಂ ನಿಹಿತಂ ಗುಹಾಯಾಂ ಮಹಾಜನೋ ಯೇನ ಗತಃ ಸಃ ಪಂಥಾಃ" ಅಂದರೆ ಧರ್ಮದ ತತ್ತ್ವವು - ಧರ್ಮದ ಅರಿವು ಎಂಬುದು ಬಹಳ ಆಳದಲ್ಲಿ ಇರುವ ವಿಷಯವಾಗಿದೆ. ಅದನ್ನು ತಿಳಿಯುವ ಮಾಧ್ಯಮವೆಂದರೆ ಅದು ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗ ಅಷ್ಟೇ. ನಮ್ಮ ಹಿರಿಯರು ಯಾವ ರೀತಿಯಾಗಿ ನಡೆದುಕೊಂಡರೋ, ಯಾವ ರೀತಿಯಾಗಿ ನುಡಿದಂತೆ ನಡೆದರೋ, ನಡೆಯುವುದನ್ನೇ ನುಡಿದರೋ ಅದು ತಾನೇ ಧರ್ಮ. ಹಾಗಾಗಿ ಅಂತಹ ಧರ್ಮವನ್ನು ತಿಳಿದವನನ್ನು 'ಧರ್ಮಜ್ಞ' ಎಂಬುದಾಗಿ ಕರೆಯುತ್ತಾರೆ. ಅವನೇ ನಿಜವಾದ ಪಂಡಿತ.
ಶ್ರೀರಂಗ ಮಹಾಗುರುಗಳು ಹೇಳುವಂತೆ ಧರ್ಮ ಎಂಬುದು ಅದೊಂದು ಕಂಡಿಶನ್ - ಸ್ಥಿತಿ, ಸೃಷ್ಟಿಯನ್ನು ಅಥವಾ ಈ ಬ್ರಹ್ಮಾಂಡವನ್ನು ಹಿಡಿದುಕೊಂಡಿರುವ ಯಾವ ಶಕ್ತಿಯುಂಟೋ, ಅದನ್ನು ಧರ್ಮ ಎಂಬುದಾಗಿ ಕರೆಯಬೇಕು ಎಂದು. ಅಂದರೆ ಯಾವ ಪರಬ್ರಹ್ಮ ಎಂದು ಕರೆಯುವ ಶಕ್ತಿಯುಂಟೋ, ಅದನ್ನೇ 'ಧರ್ಮ' ಎಂಬುದಾಗಿ ಕರೆದು, ಆ ಶಕ್ತಿರೂಪವಾದ ಭಗವಂತನನ್ನು ಯಾರು ತನ್ನ ಅನುಭವದಲ್ಲಿ ಕಂಡುಕೊಂಡರೋ ಅದನ್ನೇ ಧರ್ಮ ಎಂದು ಕರೆದು, ಇಂತಹ ಧರ್ಮವನ್ನು ತಿಳಿದವರನ್ನೇ 'ಧರ್ಮಜ್ಞ' ಎಂಬುದಾಗಿ ಕರೆಯಬೇಕು. ಇವನೇ ನಿಜವಾದ ಪಂಡಿತ.
ಮೋಡ ಇದ್ದಲ್ಲೆಲ್ಲಾ ಮಳೆ ಬರುವುದಿಲ್ಲ. ಅಲ್ಲಿ ಯಾವುದೋ ಬಗೆಯ ಕಂಡೀಶನ್ ಏರ್ಪಟ್ಟಾಗ ಮಾತ್ರ ಮಳೆ ಬರುವುದು. ಅಂತೆಯೇ ಯಾವುದೋ ಬಗೆಯ ಕಂಡಿಶನ್ ನಮ್ಮ ದೇಹದಲ್ಲಿ ಏರ್ಪಡುವಂತೆ ಮಾಡಿಕೊಂಡಾಗ ಭಗವಂತನ ಸಾಕ್ಷಾತ್ಕಾರ ಉಂಟಾಗುತ್ತದೆ ಎಂಬುದು ಹಿರಿಯರ ಅನುಭವ. ಇಂತಹ ಅನುಭವವಿದರನ್ನೇ ನಿಜಾರ್ಥದಲ್ಲಿ 'ಪಂಡಿತ' ಎಂದು ಕರೆಯುವುದು.
ಸೂಚನೆ : 28/7/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.