Monday, July 29, 2024

ಕೃಷ್ಣಕರ್ಣಾಮೃತ - 24 ಕಣ್ಣಿಗೆ ಹಬ್ಬ, ವಿಸ್ಮಯಗಳ ಆಗರ - ಶ್ರೀಕೃಷ್ಣ (Krishnakarnamrta -23 Kannige Habba, Vismayagala Agara - SriKrishna)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಸುಂದರವಾದ ದೃಶ್ಯವೊಂದನ್ನು ಕಂಡಾಗ ನಮ್ಮ ಕಣ್ಣುಗಳು ಸಂತೋಷಿಸುವುವು. ಪುಟ್ಟಮಕ್ಕಳಿಗೆ ಪ್ರಾಣಿಗಳ ಚಿತ್ರವು ಇಷ್ಟವಾಗಬಹುದು. ಯುವಕರಿಗೆ ಸುಂದರ-ಯುವತಿಯರ ರೂಪ; ಯುವತಿಯರಿಗೆ ಸು-ಪುರುಷನ ರೂಪ; ವೃದ್ಧರಿಗೆ ಎಳೆಯರ ಆಟಗಳೇ ಆಕರ್ಷಕವಾಗಬಹುದು.

ಇವೆಲ್ಲಾ ಸರ್ವಜನ-ಸಾಧಾರಣ-ರುಚಿಗಳಾದುವು; ಆಯಾ ವಯಃಪ್ರವೃತ್ತಿಗಳಿಗನುಗುಣವಾದವು. ಆದರೆ ಸಂಸ್ಕಾರ-ವಿಶೇಷವಂತರ ನಡೆಗಳು ಭಿನ್ನವಾಗಿರುವುದೂ ಉಂಟು. ಲೀಲಾಶುಕ ಮಹಾಭಕ್ತ; ಆತನ ಹಂಬಲಗಳೇ ಬೇರೆ.

ಆತನ ಕಣ್ಣುಗಳು ಹಾತೊರೆಯುತ್ತಿರುವುದು ಬಾಲಕೃಷ್ಣನನ್ನು ಕಾಣಲು. ಅದೊಂದು ಉತ್ಸವ ಆತನ ಕಣ್ಗಳಿಗೆ; ಅದಕ್ಕಾಗಿ ನನ್ನ ಲೋಚನಗಳು ಉತ್ಸುಕವಾಗಿವೆ - ಎನ್ನುತ್ತಾನೆ. ಉತ್ಸವವೆಂದರೆ ಹಬ್ಬ: ಕಣ್ಣಿಗೆ ಹಬ್ಬ, ಈ ಪುಟ್ಟಕೃಷ್ಣನ ದರ್ಶನ.

ಕೃಷ್ಣನೆಂತು ಇರುವನು? ಶ್ರೀವತ್ಸವೆಂಬ ಲಾಂಛನವನ್ನು ಹೊಂದಿರುವನು. ಶ್ರೀವತ್ಸವೆಂಬುದು ವಿಷ್ಣುವಿನ ಎದೆಯ ಮೇಲಿರುವ ಒಂದು ಮಚ್ಚೆ. ವಿಷ್ಣುವಿನ ವಿಲಕ್ಷಣ-ಚಿಹ್ನೆಯೂ ಹೌದದು. ವಿಲಕ್ಷಣವೆಂದರೆ ಆತನಿಗೇ ವಿಶಿಷ್ಟವೆನಿಸುವಂತಹ ಲಕ್ಷಣ: ಅರ್ಥಾತ್, ಮತ್ತಾರಲ್ಲೂ ಇಲ್ಲದಾದ ಲಾಂಛನವದು. ಲಕ್ಷ್ಮ-ಲಕ್ಷಣ-ಲಾಂಛನಗಳು ಸಮಾನಾರ್ಥಕಗಳು.

ಪುಟ್ಟಕೃಷ್ಣನಂತೂ ವತ್ಸ-ಪಾಲರ, ಎಂದರೆ ಗೋ-ರಕ್ಷಕರಾದ ಗೊಲ್ಲರ, ನಡುವೆಯೇ ಓಡಾಡುವವ. ವತ್ಸ ಎಂಬ ಪದಕ್ಕೆ ಮೂಲಾರ್ಥವು ಕರು ಎಂದೇ. ಅದೇ ಅದರ ಪ್ರಥಮಾರ್ಥ. ಎಳೆಯ ಮಗುವಿಗೂ ಅದೇ ಪದವನ್ನೇ ಬಳಸುವುದುಂಟು. ಹಸುಳೆ-ಎಳೆಗರುಗಳ ಮುದ್ದೇ ಮುದ್ದು, ಸಾಟಿಯಿಲ್ಲದ ಮುದ್ದು. ಪ್ರೀತಿಯಿಂದ ಕರೆಯುವಾಗ ಮಗುವನ್ನೇ "ವತ್ಸಾ" ಎಂದು ಕರೆಯುವುದೇ ಸಾಮಾನ್ಯ. 'ಪುತ್ರ' ಎಂಬುದರಿಂದ 'ಪುಟ್ಟ' ಬಂದಿರುವಂತೆ, "ವತ್ಸ" ಎಂಬುದರಿಂದ "ಬಚ್ಚಾ" ಬಂದಿದೆ.

ಭಗವಂತನನ್ನು ಯಾವ ಬಗೆಯಲ್ಲಿ ದರ್ಶಿಸುವುದಾದರೂ ಅದು ಭಾಗ್ಯವೇ. ಮುಖ್ಯವಾಗಿ, ಭಗವದ್-ದರ್ಶನಕ್ಕಾಗಿ ಹಾತೊರೆಯುವ ಚಿತ್ತವಿರಬೇಕು. ಶ್ರೀರಂಗ-ಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ "ಸದಾ ಕದಾ? ಕದಾ? - ಎನ್ನುವಂತಿರಬೇಕು". ಕದಾ ಎಂದರೆ ಎಂದಿಗೆ? "ಎಂದಿಗಾವುದೋ ನಿನ್ನ ದರುಶನ?" – ಎನ್ನಲಿಲ್ಲವೇ ದಾಸರೂ (ವಿಜಯದಾಸರು)?

ಈ ಶ್ಲೋಕ ಅಕ್ಲಿಷ್ಟ-ಪ್ರಾಸದಿಂದ ಕೂಡಿದೆಯಲ್ಲವೇ? ಅ-ಕ್ಲಿಷ್ಟವೆಂದರೆ ಕ್ಲೇಶಪಡದೆ ಬಂದದ್ದು, ಅನಾಯಾಸವಾಗಿ ಸ್ಫುರಿಸಿರುವುದು. ಐದು ಬಾರಿ "ತ್ಸ" ಬಂದಿದೆ: ವತ್ಸ-ವತ್ಸಪಾಲ-ಶ್ರೀವತ್ಸಗಳಲ್ಲಲ್ಲದೆ, ಉತ್ಸವ-ಉತ್ಸುಕಗಳಲ್ಲೂ ಅದಿದೆ. ಭಾವ-ವ್ಯಂಜಕವಾದ ಸೌಶಬ್ದ್ಯ, ಲೀಲಾಶುಕನದು. ಸು-ಶಬ್ದಗಳ ಇರುವಿಕೆಯೇ ಸೌಶಬ್ದ್ಯ.

ವತ್ಸಪಾಲ-ಚರಃ ಕೋಽಪಿ

ವತ್ಸಃ ಶ್ರೀವತ್ಸ-ಲಾಂಛನಃ |

ಉತ್ಸವಾಯ ಕದಾ ಭಾವೀ-

-ತ್ಯುತ್ಸುಕೇ ಮಮ ಲೋಚನೇ ||

ಕೃಷ್ಣನೆಂದರೆ ಅದೊಂದು ವಿಸ್ಮಯ. ಮನಸ್ಸಿನಲ್ಲಿ ಅದೇನೋ ಮಾದಕತೆಯನ್ನು ಉಂಟುಮಾಡುವ ವಿಸ್ಮಯವದು. ಕೃಷ್ಣನೆಂದರೆ ಆದ್ಯ-ಮಹಸ್ಸು. ಮಹಸ್ಸೆಂದರೆ ತೇಜಸ್ಸೇ. ವಿಶ್ವದ ಮೊಟ್ಟಮೊದಲ ಪ್ರಕಾಶ, ಅರ್ಥಾತ್ ಮೂಲ-ತೇಜಸ್ಸು, ಶ್ರೀಕೃಷ್ಣ. ಜಗನ್ಮೂಲವಾದ ಜ್ಯೋತಿಸ್ಸದು. ಜಗತ್ತು ಬರುವ ಮೊದಲೇ ಇದ್ದ ಬೆಳಕದು. ಅದುವೇ ಮೈತಾಳಿ ಕೃಷ್ಣಾಕಾರವಾಗಿ ಬಂದಿದೆ.

ನಮ್ಮೆಲ್ಲರ ಮೂಲವೇ ಅದಾದ್ದರಿಂದಲೇ ಅದರಲ್ಲೊಂದು ಅನನ್ಯಲಭ್ಯ-ಮೋಹಕತೆ ಇದೆ, ಮಾದಕತೆಯಿದೆ. ಎಲ್ಲ ತೇಜಸ್ಸುಗಳನ್ನು ಮೀರಿಸುವುದಾದರೂ ಆಪ್ಯಾಯಕವಾದದ್ದು ಅದು. ಇದುವೇ ಒಂದು ವಿಸ್ಮಯವಲ್ಲವೇ?

ಮತ್ತೊಂದು ವಿಸ್ಮಯವೂ ಉಂಟು. ಅದು ಮನುಷ್ಯನೋ ದೈವವೋ ಹೇಳಲಾರೆವು. ಏಕೆ? ಮಾನುಷಭಾವವನ್ನು ಒಂದಿಷ್ಟು ತೊರೆದಿದೆ, ಅದು. ಆದರೆ ಸ್ವಮಹಿಮೆಯನ್ನು ಇನಿತೂ ತೊರೆದಿಲ್ಲ. ಹಾಗೆ ಹೇಳುವುದು ಹೇಗೆಂದು ಪ್ರಶ್ನೆಯೋ? ಕೃಷ್ಣನ ಬಾಲಲೀಲೆಯನ್ನೇ ಒಮ್ಮೆ ನೋಡಿ. ಯಾವ ಮಗು ತನ್ನೆಳಸಿನಲ್ಲಿಯೇ ಪೂತನಾಸಂಹಾರದಂತಹ ಕಾರ್ಯವನ್ನು ಮಾಡಿದೆ? ಎದೆ ಹಾಲು ಕುಡಿಯುವ ಮಗುವಿಗೆ ಬಂದಾಕೆ ರಾಕ್ಷಸಿಯೆಂಬ ಜ್ಞಾನವು ಬಂದೀತೇ? ಬರಲಾದೀತೇ? ಬಾಲ್ಯದಲ್ಲಿಯೇ ಕೃಷ್ಣನ ನಾನಾಲೀಲೆಗಳನ್ನು ಒಮ್ಮೆ ಅವಲೋಕಿಸಿದರೆ ಸಾಕು, ಅದು ಮನುಷ್ಯನಲ್ಲವೆಂಬುದು ಗೊತ್ತಾಗುತ್ತದೆ.

ಆದರೆ ಮನುಷ್ಯರ ಆಕಾರವನ್ನೇ ಮನುಷ್ಯರ ನಡೆಯನ್ನು ಸಹ ಹೊಂದಿಯೇ ಇದೆಯಲ್ಲವೇ ಅದು? ಅದನ್ನೇ ಕವಿಯು ಆಮುಕ್ತ-ಅಮುಕ್ತ ಎಂಬ ಎರಡು ಪದಗಳಿಂದ ಹೇಳಿರುವುದು. ಆಮುಕ್ತವೆಂದರೆ ಕಿಂಚಿತ್-ತ್ಯಕ್ತ ಎಂದರ್ಥ. ಎಂದರೆ, ಸ್ವಲ್ಪ ಮಟ್ಟಿಗೆ ಬಿಟ್ಟಿರುವುದು. ಅಮುಕ್ತ ಎಂದರೆ ತದ್ವಿರುದ್ಧ. ಅದಕ್ಕೆ ಬಿಡದಿರುವುದು ಎಂದರ್ಥ. ಯಾವುದನ್ನು ಸ್ವಲ್ಪ ಬಿಟ್ಟಿದೆ, ಯಾವುದನ್ನು ಬಿಟ್ಟೇ ಇಲ್ಲ? ಮನುಷ್ಯಭಾವವನ್ನು ಸ್ವಲ್ಪ ಬಿಟ್ಟಿದೆ, ತನ್ನ ದೈವಿಕವಾದ ಅನುಭಾವವನ್ನು ಮಾತ್ರ ಬಿಟ್ಟೇ ಇಲ್ಲ. ಇದೊಂದು ವಿಸ್ಮಯವಲ್ಲವೇ?

ಎರಡನೆಯ ವಿಸ್ಮಯವಿದು. ಶರೀರವನ್ನು ಧರಿಸಿದೆ, ಆ ಕೃಷ್ಣನೆಂಬ ತೇಜಸ್ಸು; ಆದರಿದೋ ಚತುರರ ಲೀಲೆಯನ್ನು ಬಿಟ್ಟಿಲ್ಲ. ಅಷ್ಟೇ ಅಲ್ಲ, ಆ ವಿದಗ್ಧ-ಲೀಲೆಯನ್ನು ಗುಟ್ಟಾಗಿಯೇನೂ ಇಟ್ಟಿಲ್ಲ. ಎಂದರೆ, ವಿಗ್ರಹ(ಎಂದರೆ ಶರೀರ)ವನ್ನು ಇತ್ತ ಧರಿಸುತ್ತಲೇ ಅತ್ತ ಗೋಪಿಕೆಯರನ್ನು ರಂಜಿಸುವ ವೈದಗ್ಧ್ಯವು ಆಗಲೇ ಅದರಲ್ಲಿ ಎದ್ದು ಕಾಣುವಂತಿದೆ. ವಿದಗ್ಧತೆ-ವೈದಗ್ಧ್ಯಗಳೆರಡಕ್ಕೂ ಒಂದೇ ಅರ್ಥ: ಚತುರತೆ ಅಥವಾ ಚಾತುರ್ಯವೆಂಬುದರ ಅರ್ಥವೇ ಅವಕ್ಕೂ.

ಗೋಪಿಕೆಯರು ಮುಗ್ಧರಾದರೂ ಪೆದ್ದರಲ್ಲ. ಯೌವನವು ಕಾಲಿಡುತ್ತಲೇ ಯಾರಿಗಾದರೂ ಒಂದಿಷ್ಟು ಚುರುಕುತನವು ಬಂದೇ ಬರುವುದು. ಮಾತು-ಮನಸ್ಸುಗಳಲ್ಲಿ ಚುರುಕಿರುವವರನ್ನು ರಂಜಿಸುವುದು ಸುಲಭವಲ್ಲ. ಹೀಗಾಗಿ ಕೃಷ್ಣನು ವಿಗ್ರಹ-ಧಾರಣೆಯನ್ನು ಮಾಡಿರುವನೆಂಬುದು ಒಂದಂಶವಾದರೆ, ತನ್ನ ವೈದಗ್ಧ್ಯವು ಪ್ರಕಟವೇ ಆಗಿರುವಂತೆ ವರ್ತಿಸಿದವ ಆತ. ಆರೂಢ-ಅಗೂಢಗಳೆಂಬ ಪದಗಳು ಈ ವಿಸ್ಮಯವನ್ನು ತೋರಿಸುತ್ತವೆ.

ಮತ್ತೊಂದು ವಿಸ್ಮಯವೆಂದರೆ ಇದು: ಆತನಲ್ಲಿ ಯೌವನವು ಸ್ಪಷ್ಟವಾಗಿಯೇ ತೋರಿದೆಯೆಂದರೂ ಕಿಶೋರ-ಭಾವವೆಂಬುದು ಇನ್ನೂ ತೊಡೆದು ಹೋಗಿಲ್ಲ. ಆಮೃಷ್ಟ-ಅಮೃಷ್ಟವೆಂಬ ಪದಗಳು ಇದನ್ನು ಹೇಳುತ್ತವೆ. ಆಮೃಷ್ಟವೆಂದರೆ ಆವರಿಸಿಕೊಂಡಿರುವುದು. ಅಮೃಷ್ಟವೆಂದರೆ ಸ್ವಲ್ಪವೇ ಸ್ವಲ್ಪ ಕಡಿಮೆಯಾಗಿರುವುದು - ಎಂದರ್ಥ. ಯುವಕನಾಗಿ ಕಂಡರೂ ಬಾಲಕನಾಗಿ ಕಾಣುತ್ತಲಿದ್ದಾನೆ, ಈತ.

ಇಷ್ಟೆಲ್ಲ ವಿಸ್ಮಯಗಳಿಗೆ ಆಗರವಾಗಿರುವ ಶ್ರೀಕೃಷ್ಣನು ಯಾವ ತೇಜಸ್ಸೆಂದೇ ಹೇಳಲಾರೆವು. ಆದರೆ ನನ್ನ ಮನಸ್ಸನ್ನು ಅದು ಸೂರೆಗೊಂಡಿದೆಯೆಂಬುದಂತೂ ನಿಜವೇ- ಎನ್ನುತ್ತಾನೆ, ಲೀಲಾಶುಕ.

ಕೃಷ್ಣಕರ್ಣಾಮೃತದ ಶ್ಲೋಕಗಳಲ್ಲಿ ಭಾವಗಳು ಉದಾತ್ತವೆನಿಸಿದರೂ ಅನುಪ್ರಾಸಗಳಿಗೆ ಏನೂ ಕೊರತೆಯಿಲ್ಲ! ನಾಲ್ಕು ಪಾದಗಳೂ 'ಆ' ಎಂದೇ ಆರಂಭಗೊಳ್ಳುತ್ತವೆ. ಪ್ರತಿಯೊಂದು ಪಾದದಲ್ಲೂ ಆಪಾತತಃ ವಿರೋಧವಿದೆ. ಆಪಾತತಃ ಎಂದರೆ ಮೇಲ್ನೋಟಕ್ಕೆ ತೋರುವಂತಹುದು: ಆಮುಕ್ತ-ಅಮುಕ್ತ, ಆರೂಢ-ಅಗೂಢ, ಆಮೃಷ್ಟ-ಅಮೃಷ್ಟ - ಎಂಬ ಜೋಡು-ನುಡಿಗಳಲ್ಲಿ ಅದು ವ್ಯಕ್ತವಾಗಿದೆ.

ಅರ್ಥಾತ್, ನಿಜವಾದ ವಿರೋಧವೆಂಬುದು ಏನೂ ಇದ್ದಂತಿಲ್ಲ. ಎಲ್ಲಿ ವಿರೋಧವು ತೋರಿಕೆಗಾಗಿ ಮಾತ್ರ ಬಂದಿದೆಯೋ, ಆದರೆ ವಾಸ್ತವವಾಗಿ ಏನೂ ವಿರೋಧವು ಇಲ್ಲವೋ ಅದನ್ನು ವಿರೋಧಾಭಾಸವೆನ್ನುತ್ತಾರೆ.

ಹೀಗೆ ಮೇಲ್ನೋಟಕ್ಕೆ ಮಾತ್ರ ವಿರೋಧಗಳನ್ನು ಹೊಂದಿರುವಂತೆ ಕಂಡರೂ, ದೈವ-ಮಾನುಷಗಳ, ಬಾಲ್ಯ-ಯೌವನಗಳ ಸಂಧಿಸ್ಥಾನದಲ್ಲಿರುವ ಶಕ್ತಿಯೇ ಶ್ರೀಕೃಷ್ಣ! ಹಾಗೆ ವಿರುದ್ಧಾಂಶಗಳ ಮೇಳನವು ಕಾಣದಿರುವುದೇ ವಿಸ್ಮಯಕ್ಕೆ ಕಾರಣವಾಗಿದೆ.

ಅರ್ಥವಾಗದಿರುವುದರಿಂದಾದ ಅಚ್ಚರಿಯನ್ನು  ಸೂಚಿಸಲೇ "ಕಿಮಪಿ ಮಹಃ" "ಯಾವುದೋ ತೇಜಸ್ಸು" ಎಂದು ಕರೆದಿದೆ.

ಆದ್ಯ-ಮಾದ್ಯಗಳಲ್ಲಿಯ ಅನುಪ್ರಾಸವೂ ಆಸ್ವಾದ್ಯವೇ ಸರಿ.


ಈ ಶ್ಲೋಕವನ್ನು ಆಸ್ವಾದಿಸಿ :

ಆಮುಕ್ತ-ಮಾನುಷಂ ಅಮುಕ್ತ-ನಿಜಾನುಭಾವಂ

ಆರೂಢ-ವಿಗ್ರಹಂ ಅಗೂಢ-ವಿದಗ್ಧ-ಲೀಲಂ |

ಆಮೃಷ್ಟ-ಯೌವನಂ ಅಮೃಷ್ಟ-ಕಿಶೋರ-ಭಾವಂ

ಆದ್ಯಂ ಮಹಃ ಕಿಮಪಿ ಮಾದ್ಯತಿ ಮಾನಸೇ ಮೇ ||

ಸೂಚನೆ : 27/07/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.