Sunday, July 7, 2024

ಕೃಷ್ಣಕರ್ಣಾಮೃತ - 21 ಮೋಹಕತೆಯ ಹಿಂದಿರುವ ಕಾರಣಗಳಾರು((Krishnakarnamrta -21 Mohakateya Hindiruva Karanagalaru)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಮೋಹಿನೀ ಎಂದ ಕೂಡಲೇ ಅನೇಕ ಮಂದಿಗೆ ಜ್ಞಾಪಕ ಬರುವುದು ಅದೊಂದು ಬಗೆಯ ಪಿಶಾಚಿ ಎಂಬುದು. ಕಗ್ಗತ್ತಲಿನಲ್ಲಿ ನಿರ್ಜನವಾದ ಬಯಲಿನಲ್ಲಿ ಹೋಗುತ್ತಿರುವಾಗ ಕಾಣಿಸಿಕೊಳ್ಳುವ ಅದನ್ನು ಕಂಡರಾಯಿತು, ಮೈ ಜುಮ್ಮೆನಿಸಿ ಅದರ ಸೆಳೆತಕ್ಕೆ ಸಿಕ್ಕಿ, ಅದರ ಹಿಂದೆ ಹೋಗುವಂತೆಯೂ, ಕೊನೆಗೆ ಮೈಗೆ ನಾಲ್ಕಾರು ದಿನ ಜ್ವರ ಬಂದು ಮಲಗುವಂತೆಯೂ, ಹಳ್ಳಿಯ ಜನಗಳು ಹೇಳುವ ಕಥೆಗಳನ್ನು ಅನೇಕರು ಕೇಳಿರಬಹುದಲ್ಲವೆ?

ಮೋಹಿನಿಯೆಂದರೆ ಹೀಗೇನೋ ಕೆಟ್ಟದ್ದೇ ಎಂದೇನಿಲ್ಲ. ಯಾರು ನಮಗೆ ಮೋಹವುಂಟುಮಾಡುತ್ತಾರೋ ಅವರು ನಮ್ಮ ಪಾಲಿಗೆ ಮೋಹಕರೆನಿಸುತ್ತಾರೆ. ಮೋಹಕ-ಮೋಹನಗಳೆರಡಕ್ಕೂ ಒಂದೇ ಅರ್ಥ.

ಕೃಷ್ಣನ ರೂಪವು ಲೋಕೋತ್ತರವಾದದ್ದು. ಎಂದೇ ಅದರ ಸೆಳೆತಕ್ಕೆ ಸಿಕ್ಕದ್ದೇ ಆದರೆ ಮಿಕ್ಕಾವ ರೂಪಗಳೂ ಸೆಳೆಯ(ಲಾರ)ವು. ಅಂತಹ ಮೋಹಕಾರಿ ಆತನೇ ಸರಿ. ಎಂದೇ ಮೋಹನನೆಂದರೆ ಆತನೇ. ಎಂದೇ, ಮೋಹನನೆಂಬ ಹೆಸರು ಎಷ್ಟು ಪ್ರಚುರ, ಅಲ್ಲವೇ?

ಕೃಷ್ಣನು ಜಗನ್ಮೋಹನ: ಒಬ್ಬಿಬ್ಬರನ್ನಲ್ಲ,  ಜಗತ್ತನ್ನೆಲ್ಲಾ ಮೋಹಗೊಳಿಸುವ ಸೊಬಗು ಆತನದು. ಮೋಹವುಂಟುಮಾಡುವ ವ್ಯಕ್ತಿ ಸ್ತ್ರೀಯಾದರೆ ಅವಳು ಮೋಹಿನಿಯೆನಿಸುತ್ತಾಳೆ.

ವ್ಯಕ್ತಿಯೇ ಆಗಬೇಕಿಲ್ಲ, ಮೋಹಿನಿಯೆನ್ನಲು. ಸ್ತ್ರೀಲಿಂಗದ ಪದವಾದರೂ ಸರಿಯೇ; ಅದಕ್ಕೆ ವಿಶೇಷಣವಾಗುವುದಾದರೆ ಮೋಹಿನಿಯೆಂದೇ ಹೇಳಬೇಕು. ಇಂತಹ ನಿಯಮ ಸಂಸ್ಕೃತದಲ್ಲಿ ಮಾತ್ರವಲ್ಲ, ಹಿಂದಿಯಲ್ಲೂ ಇದೆ. ವ್ಯಾಕರಣದ ವಿಷಯವನ್ನು ಹೆಚ್ಚು ವಿಸ್ತರಿಸಿ ಇಲ್ಲಿ ಹೇಳಬೇಕಿಲ್ಲ. ಎಂದೇ ಕೃಷ್ಣನ ಮೂರ್ತಿಯನ್ನು ಇಲ್ಲಿ ಜಗನ್ಮೋಹಿನಿಯೆಂದಿರುವುದು. ಇದಕ್ಕೆ ಕಾರಣ, ಮೂರ್ತಿಯೆಂಬ ಪದವು ಸಂಸ್ಕೃತದಲ್ಲಿ ಸ್ತ್ರೀಲಿಂಗ. ಮೂರ್ತಿಯೆಂದರೆ ಮೈ. ವಿಗ್ರಹವನ್ನೂ ಮೂರ್ತಿಯೆನ್ನುವುದುಂಟು.

ಪ್ರಕೃತ-ಶ್ಲೋಕದಲ್ಲಿ, ಆರು ಕಾರಣಗಳನ್ನಿತ್ತು ವ್ರಜ-ಶಿಶುವಾದ ಕೃಷ್ಣನ ಮೂರ್ತಿಯು ಜಗನ್ಮೋಹಿನಿಯೆಂದು ಹೇಳಿದೆ. ನಂದ-ಗೋಪನ ರಾಜಧಾನಿಗೆ ವ್ರಜವೆಂದು ಹೆಸರು. ಗೋಕುಲವೆಂದರೂ ಅದೇ. ಅಲ್ಲಿಯ ಪ್ರಸಿದ್ಧ ಶಿಶುವೆಂದರೆ ಮತ್ತಾರು? ಶ್ರೀಕೃಷ್ಣನೇ.

ಯಾವುವು ಆ ಕಾರಣಗಳು? ಯಾರನ್ನಾದರೂ ಕಂಡಾಗ ಮೊಟ್ಟಮೊದಲು ಗಮನಿಸುವುದು ಅವರ ಮುಖವನ್ನು. ಮುಖದಲ್ಲೂ ವ್ಯಕ್ತಿಯ ಅಚ್ಚನ್ನು ಹೇಳತಕ್ಕವೆಂದರೆ ಹುಬ್ಬು ಹಾಗೂ ಕಣ್ಣುಗಳೇ ಸರಿ. ಎಂದೇ, ಒಬ್ಬ ವ್ಯಕ್ತಿಯ ಗುರುತನ್ನು ಮರೆಮಾಚುವುದೆಂದರೆ ಅವರ ಚಿತ್ರದಲ್ಲಿ/ಫೋಟೋವಿನಲ್ಲಿ ಹುಬ್ಬು ಹಾಗೂ ನೇತ್ರಗಳ ಮೇಲೆ ಒಂದು ಪಟ್ಟಿಯನ್ನು ಎಳೆದಂತೆ ತೋರಿಸುವುದೇ ಸರಿ.

ಎಂದೇ ಇಲ್ಲಿ ಮೊದಲು ಕೃಷ್ಣನ ಹುಬ್ಬನ್ನು ಕುರಿತೇ ಹೇಳಿದೆ. ಮೇಲೆ ಸೂಚಿಸಿದ ಆರು ಕಾರಣಗಳಲ್ಲಿ ಮೊದಲನೆಯದು ಎಂದರೆ ಆತನ ಅಸಿತವಾದ, ಎಂದರೆ ಕಪ್ಪಾದ, ಹುಬ್ಬುಗಳನ್ನುಳ್ಳದ್ದು ಆ ಮೂರ್ತಿ - ಎಂಬುದು. ಮೂರ್ತಿಯೆಂದರೆ ಮೈ. ಅಲ್ಲಿಗೆ, ಕೃಷ್ಣನ ಶರೀರದಲ್ಲಿ ಎದ್ದು ತೋರುವ ಹುಬ್ಬುಗಳು ಕಪ್ಪಗಿವೆ, ಎಂದರ್ಥ.

ಕೃಷ್ಣನು ಸ್ವತಃ ಕಪ್ಪೇ. ಆದರೂ ಆ ಹಿನ್ನೆಲೆಯಲ್ಲೂ ಇವು ಕಪ್ಪಗೆ ತೋರುತ್ತಿವೆಯೆಂದರೆ ಅವುಗಳ ಕೃಷ್ಣ-ವರ್ಣವನ್ನು, ಎಂದರೆ ಕಪ್ಪು ಬಣ್ಣವನ್ನು, ಊಹಿಸಿಕೊಳ್ಳಬಹುದು!

ಜೊತೆಗೆ, ಒಂದಿಷ್ಟು ಬಾಗಿವೆ, ಅವು. ಹುಬ್ಬು ಸರಳರೇಖೆಯಂತೆ ಇದ್ದರೆ ಅದರಲ್ಲೇನು ಸೊಗಸು? ಎಂದೇ ಅದು ಆನಮ್ರವಾಗಿರಬೇಕು, ಎಂದರೆ ಕೊಂಚ ಡೊಂಕಾಗಿರಬೇಕು.

ಸಂಸ್ಕೃತದ ಭ್ರೂ ಎಂಬುದರಿಂದಲೇ ಇಂಗ್ಲೀಷಿನ ಬ್ರೋ brow ಬಂದಿರುವುದು - ಎನ್ನುವುದನ್ನೂ ಇಲ್ಲಿ ಜ್ಞಾಪಿಸಿಕೊಳ್ಳಬಹುದು.  ಕೃಷ್ಣನ ಎರಡೂ ಹುಬ್ಬುಗಳನ್ನು ಜೋಡಿಯಾಗಿ ನೋಡಿದರೆ ಒಂದು ಬಿಲ್ಲಿನ ಆಕಾರವು ತೋರುವುದನ್ನು ವ್ಯಾಖ್ಯಾನಕಾರರು ಗುರುತಿಸಿದ್ದಾರೆ. ಡೊಂಕೆಂದರೆ ಹೀಗಿದ್ದರೇ ಚಂದ, ಹುಬ್ಬುಗಳಿಗೆ.

ಹುಬ್ಬಿನ ಸೌಂದರ್ಯವನ್ನು ಹೇಳಿದ ಮೇಲೆ ಹೇಳಬೇಕಾದದ್ದು ಕೃಷ್ಣನ ಕಣ್-ರೆಪ್ಪೆ. ಎವೆಯೆಂದರೂ ಪಕ್ಷ್ಮವೆಂದರೂ ರೆಪ್ಪೆಯೇ. ಆ ಎವೆಗೂದಲುಗಳು ಅಂಕುರಗಳಂತಿವೆ, ಎಂದರೆ ಮೊಳಕೆಗಳಂತೆ. ಅಲ್ಲದೆ, ಅವು ಅಕ್ಷೀಣವಾಗಿವೆ. ಎಂದರೆ ದಟ್ಟವಾಗಿವೆ.

ಅಷ್ಟೇ ಅಲ್ಲ. ಅವು ಉಪಚಿತವಾಗಿವೆ ಸಹ. ಅರ್ಥಾತ್ ಉದ್ದುದ್ದವಾಗಿವೆ. ಇಂತಹ ರೆಪ್ಪೆಗೂದಲುಗಳಿದ್ದರೆ ಮುಖವೇ ಮೋಹಕವಾಗಿರುವುದರಲ್ಲಿ ಸಂಶಯವಿಲ್ಲ.

ಹುಬ್ಬು-ರೆಪ್ಪೆಗಳಾದ ಮೇಲೆ ಇನ್ನು ಕಣ್ಣುಗಳ ಮೋಹಕತೆ. ಕೃಷ್ಣನ ಕಣ್ಣುಗಳು ಅನುರಾಗಿಗಳು. ಏನು ಹಾಗೆಂದರೆ? ಅನುರಾಗವುಳ್ಳವುಗಳು ಅನುರಾಗಿಗಳು. ಅನುರಾಗವೆಂದರೇನು? ಹೆಚ್ಚು ಕಡಿಮೆ ಸದಾಕಾಲವೆನ್ನುವಷ್ಟು ನೋಡುತ್ತಲೇ ಇದ್ದರೂ ಅದೇನೋ ಪ್ರಿಯತೆಯು ಮತ್ತೆ ಮತ್ತೆ ಗೋಚರವಾಗುತ್ತಿದ್ದು,  ರಾಗವು, ಎಂದರೆ ಆಕರ್ಷಣೆಯು, ನವನವವಾಗಿ ಆಗುತ್ತಲೇ ಇದ್ದರೆ - ಅದು ಅನುರಾಗವೆನಿಸುತ್ತದೆ. ಎಂದರೆ ಕುಂದದ ಆಕರ್ಷಣೆಯಿಂದ ಕೂಡಿರತಕ್ಕದ್ದು ಅನುರಾಗಿ. ಅಂತೂ ಇಂತಹ ಕಣ್ಣುಗಳು ಕೃಷ್ಣನವು.

ಅಷ್ಟು ಮಾತ್ರವಲ್ಲ. ಅವುಗಳ ಸೊಬಗನ್ನು ಇಮ್ಮಡಿಗೊಳಿಸಿರುವುದು ಅವುಗಳ ಆಲೋಲತೆ, ಎಂದರೆ ಅತ್ತಿತ್ತ ನೋಡುತ್ತಿದ್ದರೂ (ನನ್ನತ್ತಲೇ) ಮತ್ತೆ ಮತ್ತೆ ನೋಡುವ ಚಪಲತೆ - ಅದನ್ನೂ ಹೊಂದಿವೆ, ಆ ಕಣ್ಣುಗಳು.

ಹೀಗೆ ಹುಬ್ಬು-ರೆಪ್ಪೆ-ಕಣ್ಣುಗಳಿಂದಾದ ಮೋಹಕತೆ - ಎಂಬ ಮೂರು ಕಾರಣಗಳನ್ನು ಹೇಳಿದ್ದಾಯಿತು. ಇನ್ನು ಮೂರೆಂದರೆ ಆತನ ಮಾತು, ಆತನ ತುಟಿ, ಆತನ ವೇಣುಧ್ವನಿಗಳು.

ಆತನ ಮೃದು-ಜಲ್ಪಿತಗಳು ಎಂದರೆ ಮೆದುನುಡಿಗಳು ಮೋಹವನ್ನುಂಟುಮಾಡುವುವು. ಸಹಜ-ಸುಕುಮಾರವಾದ ಅಕ್ಷರಗಳಿಂದ ಕೂಡಿದ ಉಲಿ ಆತನದು. ಮಾತಿನಲ್ಲಿ ಮಾರ್ದವವು ಇದ್ದರಷ್ಟೆ ಸಾಲದು. ಅದರಲ್ಲೊಂದು ಆರ್ದ್ರತೆಯಿರಬೇಕು. ಆರ್ದ್ರತೆಯೆಂದರೆ ಸ್ನಿಗ್ಧತೆ, ಸ್ನೇಹದಿಂದ ಕೂಡಿರುವಿಕೆ. ಬಾಯಿಂದ ಬಿರುನುಡಿಗಳೇ ಬರುವಲ್ಲಿ ಅದನ್ನು ಬಯಸಲಾದೀತೇ? ಸರಸವಾದ ಮಾತು ತಾನೆ ಆಸ್ವಾದ್ಯ? ಕೃಷ್ಣನ ಬಾಯಿಂದ ಬರತಕ್ಕವು ಎಂತಹ ನುಡಿಗಳು!

ಇನ್ನು ಆತನ ಅಧರ - ಎಂದರೆ ಕೆಳತುಟಿಯಂತೂ ಆತಾಮ್ರ - ಎಂದರೆ ಒಳ್ಳೆಗೆಂಪು. ಆ ಅಧರವಾದರೂ ಅಮೃತಕ್ಕೆ ಆಗರವಾದದ್ದು.

ಕೃಷ್ಣನ ಮಾತೆಷ್ಟು ಸೊಗಸೋ ತುಟಿಯೆಂತು ಚೆಂದವೋ, ಅಷ್ಟೇ ಆಸ್ವಾದ್ಯ ಆತನ ಕೆಂದುಟಿಯ ಮೇಲಿಟ್ಟ ವಂಶೀ-ಸ್ವನ, ಎಂದರೆ ಕೊಳಲ ದನಿ. ಆ ಕೊಳಲಿನಿಂದ ಹೊಮ್ಮತಕ್ಕ ಧ್ವನಿಗಳು ಬಗೆಬಗೆಯಾದವು.

ಒಳಗೆ ಭಾವ ತುಂಬಿ ಬರದಿದ್ದಾಗ ನಾವಾಡುವ ಮಾತೋ, ನುಡಿಸಿದ ವೇಣು-ಧ್ವನಿಯೋ ಒಣಕಲಾಗಿರುವುದು. ಹಾಗೆ ಶುಷ್ಕವಾದರೆ ಕೇಳಲೇನು ಹಿತವೇ? ಒಳಗೆ ಹರ್ಷವಿದ್ದು ಅದು ವಾದ್ಯದ ದ್ವಾರಾ ಹೊಮ್ಮುವುದಾದರೆ ಅದು ಮದ-ಕಲವೆನಿಸುತ್ತದೆ, ಎಂದರೆ ಮಾಧುರ್ಯ-ಭರಿತವಾದುದಾಗಿರುತ್ತದೆ.

ಹಾಡುವಾಗಾಗಲಿ ಮಾತಾಡುವಾಗಾಗಲಿ ಅಕ್ಷರಗಳೋ ಸ್ವರಗಳೋ ಮ್ಲಿಷ್ಟವಾಗಬಾರದು, ಎಂದರೆ ಅದೇನೋ ಸಾಂಕರ್ಯವಾಗುವುದೋ, ಒಂದರ ಬದಲು ಮತ್ತೊಂದು ಬರುವುದೋ ಆಗಬಾರದು. ಗಾನದಲ್ಲಂತೂ ಸ್ವರಸ್ಥಾನಗಳನ್ನು ಸರಿಯಾಗಿ ಮುಟ್ಟಿ ಹಾಡಿರಬೇಕು. ಹೀಗೆ ಅಕ್ಷರಸ್ಪಷ್ಟತೆ-ಸ್ವರಸ್ಪಷ್ಟತೆಗಳು ವಾಕ್ಕು-ವಾದನಗಳಲ್ಲಿರಬೇಕಾದದ್ದು. ಕೃಷ್ಣನ ವೇಣುಗಾನದಲ್ಲಿ ರಸವಿದೆ, ಮಾಧುರ್ಯವಿದೆ.

ಹೀಗೆ ಆ ಆರಂಶಗಳೂ ಎಂದರೆ ಹುಬ್ಬು-ಕಣ್ಣೆವೆ-ನೇತ್ರಗಳು, ವಾಕ್ಕು-ಅಧರ-ವೇಣುಧ್ವನಿಗಳು - ಇವೆಲ್ಲವೂ ಇರುವುದು ಕೃಷ್ಣನ ಮೂರ್ತಿಯಲ್ಲಿ. ಅಂತಹ ಮೂರ್ತಿಯನ್ನು ವಿಶ್ವ-ಮೋಹಿನಿಯೆನ್ನದವರಾರು?

ಆನಮ್ರಾಂ ಅಸಿತ-ಭ್ರುವೋರ್, ಉಪಚಿತಾಂ ಅಕ್ಷೀಣ-ಪಕ್ಷ್ಮಾಂತರೇ-

-ಷ್ವಾಲೋಲಾಂ ಅನುರಾಗಿಣೋರ್ ನಯನಯೋರ್, ಆರ್ದ್ರಾಂ ಮೃದೌ ಜಲ್ಪಿತೇ |

ಆತಾಮ್ರಾಂ ಅಧರಾಮೃತೇ, ಮದ-ಕಲಾಂ ಅಮ್ಲಾನ-ವಂಶೀ-ಸ್ವನೇ-

-ಷ್ವಾಶಾಸ್ತೇ ಮಮ ಲೋಚನಂ ವ್ರಜ-ಶಿಶೋರ್ ಮೂರ್ತಿಂ ಜಗನ್ಮೋಹಿನೀಂ ||

ಸೂಚನೆ : 06/07/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.