Saturday, July 13, 2024

ಕೃಷ್ಣಕರ್ಣಾಮೃತ - 22 ಕಿಶೋರ-ಕೃಷ್ಣನ ಚೇತೋಹರ-ಚರಣಗಳೂ ಮೋಹಕ-ಲೋಚನಗಳೂ (Krishnakarnamrta -22 Kishora-Krishnana Chetohara-Charanagalu Mohaka-lochanagalu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಭಗವಂತನ ಮೂರ್ತಿಯನ್ನು ಆಪಾದಮಸ್ತಕ ನೋಡುವ ಕ್ರಮವನ್ನು ಶಾಸ್ತ್ರಗಳು ವಿಹಿತಮಾಡುತ್ತವೆ. ಏನು ಆ-ಪಾದ-ಮಸ್ತಕವೆಂದರೆ? ಪಾದವೆಂದರೆ ಚರಣ. ಮಸ್ತಕವೆಂದರೆ ಶಿರಸ್ಸು.'ಆ' ಎಂಬುದು ಎಲ್ಲಿಂದ ಆರಂಭವೆಂಬುದನ್ನು ಹೇಳುತ್ತದೆ. ಹೀಗೆ, "ಪಾದದಿಂದ ಆರಂಭಿಸಿ," ಎಂಬ ಅರ್ಥ, 'ಆ-ಪಾದ' ಎಂಬ ಪದಕ್ಕೆ.

ಚರಣದಿಂದ ಶೀರ್ಷದವರೆಗೆ ಭಾವಿಸುವುದನ್ನೇ ಆ-ಪಾದ-ಮಸ್ತಕವೆನ್ನುವುದು. ಅಷ್ಟೇ ಅಲ್ಲದೆ, ದೇವತೆಗಳ ವರ್ಣನೆಯನ್ನು ಮಾಡುವುದಕ್ಕೂ ಮನುಷ್ಯರ ವರ್ಣನೆಯನ್ನು ಮಾಡುವುದಕ್ಕೂ ಕ್ರಮ-ಭೇದವನ್ನು ಹೇಳುವುದುಂಟು: ದೇವರ ವರ್ಣನೆಯನ್ನು ಮಾಡುವಾಗ ಸಾಮಾನ್ಯವಾಗಿ ಪಾದದಿಂದ ಮಸ್ತಕದವರೆಗೆ; ಮನುಷ್ಯರದ್ದು ಮಸ್ತಕದಿಂದ ಪಾದದವರೆಗೆ.

ಕೃಷ್ಣಕರ್ಣಾಮೃತದಲ್ಲಿ ಪಕ್ಕಪಕ್ಕದಲ್ಲೇ ಬರುವ ಎರಡು ಶ್ಲೋಕಗಳಿವೆ. ಎರಡೂ ಒಂದೇ ವೃತ್ತದಲ್ಲಿವೆ. ಒಂದರಲ್ಲಿ ಕೃಷ್ಣನ ಪಾದಗಳನ್ನು ವರ್ಣಿಸಿದೆ. ಮತ್ತೊಂದರಲ್ಲಿ ಕಣ್ಣುಗಳನ್ನು.

ಹೇಗಿವೆ ಆತನ ಪಾದಗಳು? ಕಮಲದಂತಿವೆಯೆಂಬುದು ಸುವಿದಿತವೇ ಸರಿ. "ಅವುಗಳಿಂದಾಗುವ ಸುಖವನ್ನು ನನ್ನ ಮನಸ್ಸು ಧರಿಸಲಿ; ಆ ಸುಖವು ಅನಿರ್ವಚನೀಯವಾದದ್ದು" - ಎನ್ನುತ್ತಾನೆ, ಲೀಲಾಶುಕ.

ಆ ಚರಣ-ಕಮಲಗಳ ವಿಶೇಷವೇನು? ಇಡೀ ಜಗತ್ತಿನಲ್ಲಿರುವ ಶೋಭೆಯೆಂಬುದು ಯಾವುದುಂಟೋ ಅದಕ್ಕೆ ಸದನವಾಗಿವೆ ಅವು. ಜಗತ್ತು ಎರಡು ಬಗೆ - ಪ್ರಾಕೃತ ಹಾಗೂ ಅ-ಪ್ರಾಕೃತ ಎಂದು. ಪ್ರಕೃತಿಯಿಂದ ಆದದ್ದು ಪ್ರಾಕೃತ. ಹಾಗಲ್ಲದ್ದು ಅ-ಪ್ರಾಕೃತ. ಪಂಚ-ಭೂತಗಳೂ ಪ್ರಕೃತಿಯಲ್ಲೇ ಇರತಕ್ಕವು. ಆದ್ದರಿಂದ ಪಾಂಚಭೌತಿಕವಾದದ್ದು ಪ್ರಾಕೃತ. ನಮ್ಮ ಲೋಕ ಪ್ರಾಕೃತ. ವೈಕುಂಠವು ಹಾಗಲ್ಲ; ಅದು ಅ-ಪ್ರಾಕೃತ.

ನಿಖಿಲ-ಭುವನವೆಂದರೆ ಈ ಲೋಕ ಆ ಲೋಕಗಳೆರಡೂ ಸೇರುವ ಲೆಕ್ಕ. ಹೀಗೆ ಇವೆರಡರಲ್ಲಿ ಅದೇನೇನು ಶೋಭೆಯುಂಟೋ ಆ ಶೋಭೆಗೆ ಇವೆರಡು, ಎಂದರೆ ಈ ಚರಣಗಳು, ಲೀಲಾ-ಗೃಹ - ಎಂದರೆ ಆಟದ ಮನೆ. ಅಷ್ಟೇ ಅಲ್ಲ, ನಿತ್ಯ-ಲೀಲಾ-ಗೃಹ - ಎಂದರೆ ಸರ್ವದಾ ಕ್ರೀಡಿಸುವ ಎಡೆ. ಅರ್ಥಾತ್, ಸಮಸ್ತ-ಜಗತ್ತಿನಲ್ಲಿರುವ ಲಕ್ಷ್ಮಿಗೆ, ಎಂದರೆ ಕಾಂತಿಗೆ, ಏಕಾಶ್ರಯವೆಂದರೆ ಈ ಚರಣಗಳು. ಲಕ್ಷ್ಮಿಯೆಂದರೆ ವಿಷ್ಣು-ಪತ್ನಿಯೆಂಬುದು ಪ್ರಸಿದ್ಧಾರ್ಥ. ಲಕ್ಷ್ಮಿಯೆಂಬುದಕ್ಕೆ ಕಾಂತಿ, ಶೋಭೆ - ಎಂಬರ್ಥಗಳೂ ಉಂಟು. ಮತ್ತು ಆ ಶೋಭೆಯಾದರೂ ಸದಾ ಇರುವಂತಹುದು: ಅಂತಹ ನಿತ್ಯ-ಲೀಲೆಯಿಲ್ಲಿದೆ! ಇದು ಶ್ರೀಕೃಷ್ಣ-ಪಾದಾಂಬುಜಗಳ ಮೊದಲ ಲಕ್ಷಣ.

ದೊಡ್ಡ ಸರೋವರವೊಂದರಲ್ಲಿ ಸಾವಿರಾರು ಕಮಲಗಳಿರುವ ಎಡೆಯನ್ನು ಕಮಲ-ವನವೆನ್ನುವುದುಂಟು. ಅಂತಹ ಕಮಲ-ವಿಪಿನದ ವೀಥಿ(ಎಂದರೆ ಬೀದಿ)ಗೆ ಗರ್ವವಿರುತ್ತದಂತೆ. ಏಕೆ ಗರ್ವ? ಒಂದೆರಡು ಕಾರಣಗಳು: ಆಹಾ ನಮ್ಮಲ್ಲಿ ಅದೆಷ್ಟು ಸುಗಂಧವಿದೆ! - ಎಂಬುದೊಂದು.  ಸಾಕ್ಷಾಲ್ಲಕ್ಷ್ಮಿಗೆ ನಾವು ವಾಸಸ್ಥಾನವಲ್ಲವೇ! - ಎಂಬುದು ಮತ್ತೊಂದು.

ಆದರೆ ಆ ಗರ್ವವನ್ನು ಸಂಪೂರ್ಣವಾಗಿ ಕೆಡವತಕ್ಕವು ಈ ಕೃಷ್ಣ-ಚರಣ-ಕಮಲಗಳು. ಹೇಗೆ? ನಾಲ್ಕು ಕಾರಣಗಳು: ಇವುಗಳ ಸುಗಂಧ ಅವುಗಳ ಸುಗಂಧವನ್ನು ಮೀರಿಸುತ್ತದೆ. ಹಾಗೆಯೇ ಇವುಗಳ ಕೆಂಬಣ್ಣ, ಮಾರ್ದವ, ಶೈತ್ಯ - ಇವೆಲ್ಲದರಲ್ಲೂ ಆ ಕಮಲಗಳ ಶ್ರೇಣಿಯ (ಸಾಲಿನ) ಗರ್ವಕ್ಕೆ ಸರ್ವಂಕಷವಾದವು ಇವು; ಸರ್ವಂಕಷವೆಂದರೆ ಸಂಪೂರ್ಣವಾಗಿ ಮರ್ದಿಸತಕ್ಕವು. ಇದು ಎರಡನೆಯ ಲಕ್ಷಣ.

ಮೂರನೆಯದಿದು: ಯಾರಾದರೂ ಈ ಶ್ರೀಕೃಷ್ಣ-ಪಾದಾಂಬುಜಗಳಿಗೆ ವಂದಿಸಿದರೆ ಸಾಕು. ಅವರಿಗೆ ಅಭಯ-ದಾನವನ್ನವು ಮಾಡಬಲ್ಲವು, ಇವು. ಅಭಯವೀಯುವುದರಲ್ಲಿ ಇವಕ್ಕೆ ಒಂದು ಪ್ರೌಢಿಯೇ ಬಂದುಬಿಟ್ಟಿದೆ. ಎಂದೇ ಇವನ್ನು ಎಲ್ಲರೂ ನೆಚ್ಚುವರು, ಗಾಢವಾಗಿ ಆದರಿಸುವರು.

ಮತ್ತಿನ್ನಾವ ಕಮಲಗಳಲ್ಲಿ ಇವಿಷ್ಟೂ ಹಿರಿಮೆಗಳಿವೆ? ಇಂತಹ ಅತಿವಿಶಿಷ್ಟವಾದ ಕೃಷ್ಣ-ಪಾದಾಂಬುಜಗಳನ್ನು ನನ್ನ ಮನಸ್ಸು ಧರಿಸಿರಲಿ - ಎನ್ನುತ್ತಾನೆ, ಲೀಲಾಶುಕ.

ಶ್ಲೋಕವಿದು:

ನಿಖಿಲ-ಭುವನ-ಲಕ್ಷ್ಮೀ-ನಿತ್ಯ-ಲೀಲಾಸ್ಪದಾಭ್ಯಾಂ/ಕಮಲ-ವಿಪಿನ-ವೀಥೀ-ಗರ್ವ-ಸರ್ವಂಕಷಾಭ್ಯಾಮ್| ಪ್ರಣಮದ್-ಅಭಯ-ದಾನ-ಪ್ರೌಢಿ-ಗಾಢಾದೃತಾಭ್ಯಾಂ/ಕಿಮಪಿ ವಹತು ಚೇತಃ ಕೃಷ್ಣ-ಪಾದಾಂಬುಜಾಭ್ಯಾಂ||

ಈ ಶ್ಲೋಕದಲ್ಲಿ ನಾಲ್ಕು ಬಾರಿ "-ಭ್ಯಾಂ" ಬಂದಿದೆ; ಮುಂದಿನ ಶ್ಲೋಕದಲ್ಲಿ ಆರು ಬಾರಿ. ಒಟ್ಟು ಹತ್ತು ಬಾರಿ!

ಕಂಗೊಳಿಸುವ ಕಂಗಳುಳ್ಳ ಕೃಷ್ಣನು ನಮ್ಮ ಹೃದಯದೊಳಗೆ ಗೋಚರಿಸಲಿ - ಎಂಬುದು ಮತ್ತೊಂದು ಶ್ಲೋಕ. ಕೃಷ್ಣನನ್ನು ಈ ಶ್ಲೋಕದಲ್ಲಿ ಕರೆದಿರುವುದು "ನಮ್ಮ ಪ್ರಾಣ-ನಾಥನಾದ ಕಿಶೋರ" ಎಂದು! ಕನಕದಾಸರು ಹೇಳುವರಲ್ಲವೇ "ಪ್ರಾಣ-ನಾಯಕ ನಮ್ಮ ಆದಿಕೇಶವರಾಯ!" ಎಂದು? ಎಂದರೆ ನಮ್ಮ ಪ್ರಾಣಗಳಿಗೆ ಆತನೇ ಒಡೆಯನೆಂಬ ಭಾವ. ಎಂದರೆ, ಆತನು ನಮ್ಮ ಪಾಲಿಗಿಲ್ಲವೆಂದೇನಾದರೂ ಆದರೆ ನಾವೇ ಉಳಿಯಲಾರೆವು! - ಎಂಬಷ್ಟು ಗಾಢವಾದ ಪ್ರೀತಿ ಆತನಲ್ಲಿ, ಎಂದರ್ಥ. ಉಪನಿಷತ್ತು ಸಹ ಪರಬ್ರಹ್ಮವನ್ನು "ಪ್ರಾಣಸ್ಯ ಪ್ರಾಣಃ" ಎನ್ನುತ್ತದೆ. "ಉಸಿರಿಗುಸಿರಾಗಿರುವನು" - ಎನ್ನುವ ಪರಿಯಿದು.

ಯಾರ ಬಗ್ಗೆಯಾದರೂ ಉತ್ಕಟವಾದ ಆಕರ್ಷಣೆಯುಂಟಾಗುವುದೆಂದರೆ, ಮುಖ್ಯವಾಗಿ ಅವರ ಕಣ್ಣುಗಳ ಸೆಳೆತವೇ ಮುಖ್ಯವಾಗಿ ಆಗಿರುವುದು. ಪ್ರಣಯಿಗಳ ಪ್ರಣಯವು ಬೆಳೆಯುವುದರಲ್ಲೂ ಮೊಟ್ಟಮೊದಲ ಹೆಜ್ಜೆಯೆಂದರೆ ಈ ಚಕ್ಷುಃ-ಪ್ರೀತಿ. ಎಂದರೆ ಪರಸ್ಪರ ಕಣ್ಣೋಟವೇ ಮುದ-ಪ್ರದವಾಗಿ ತೋರುತ್ತಿರುವುದು; ಮತ್ತೆ ಮತ್ತೆ ನೋಡಬೇಕೆನಿಸುತ್ತಿರುವುದು. ಈ ಬಾಲ-ತರುಣ-ಕೃಷ್ಣನ ಕಣ್ಣುಗಳಲ್ಲಿ ಅದೆಂತಹ ಅಲೌಕಿಕ-ಶಕ್ತಿ ಅಡಗಿದೆ! "ಕಣ್ಗಳಿದ್ಯಾತಕೋ ಕಾವೇರಿ-ರಂಗನ ನೋಡದಾ..." ಎಂದು ದಾಸರು ಕೇಳಿದರಲ್ಲವೇ?

ಹಾಗಾದರೆ ಆ ಕಣ್ಣುಗಳಲ್ಲಿ ಏನಿದೆ ವಿಶೇಷ? ಐದಾರು ವಿಶೇಷಗಳಿವೆ. ಅವು ಪ್ರಣಯ-ಪರಿಣತಗಳು. ಎಂದರೆ ಪ್ರಣಯದಲ್ಲಿ ಪಳಗಿದವುಗಳು. ಏನು ಹಾಗೆಂದರೆ? ಶ್ರೀಕೃಷ್ಣನು ಯಾರತ್ತ ದೃಷ್ಟಿಬೀರಿದರೂ, ಆ ಚೈತನ್ಯಕ್ಕೆ ಒಂದು ಉತ್ಕರ್ಷದ ಆಕರ್ಷಣೆಯುಂಟಾಗುವುದು! ಗೋಪಿಕೆಯರ ವಿಷಯದಲ್ಲಂತೂ ಇದು ಸುಸ್ಪಷ್ಟವೇ: ಅವರು ಆತನ ಬಗ್ಗೆ ಪ್ರೇಮ-ವಿಹ್ವಲರಾಗುವರು! ಜೀವ-ಜೀವಗಳ ಸೆಳೆತಕ್ಕೆ ದೃಷ್ಟಿ-ಪ್ರೀತಿಯು ಕಾರಣವು ಹೇಗೋ, ಜೀವ-ದೇವರ ಸೆಳೆತದ ಆರಂಭವೂ ಈ ನೇತ್ರಾಕರ್ಷಣದಿಂದಲೇ. ಕೃಷ್ಣನ ಕಮಲ-ಕಮ್ರವಾದ ಕಣ್ಗಳನ್ನು ಕಂಡರಷ್ಟೇ ಕರಣ-ಸಾಫಲ್ಯವೆಂಬ ಭಾವವು ಉಕ್ಕುವಂತಾಗುವುದು.

ಎರಡನೆಯದಾಗಿ, ಪ್ರಾಭವಕ್ಕೆ, ಎಂದರೆ ಒಡೆತನಕ್ಕೆ, ಆ ಎರಡು ಕಣ್ಣುಗಳೇ ಆಲಂಬನ. ಆಲಂಬನವೆಂದರೆ ಆಸರೆ. ಆ ಕಣ್ಕಾಂತಿಯತ್ತ ನಮ್ಮ ದೃಷ್ಟಿ ಒಮ್ಮೆ ಹೋದರೆ ಅದಕ್ಕೆ ನಮ್ಮ ದೃಷ್ಟಿ ವಶವಾದಂತೆಯೇ. ನಮ್ಮ ಕಣ್ಣುಗಳನ್ನುಅಲ್ಲಿಂದ ಕೀಳಲೇ ಆಗದು! ಅಲ್ಲಿಗೆ, ಸಾಟಿಯಿಲ್ಲದ ಸೊಬಗಿನ ಸೆಲೆಗಳು ಆ ಮೋಹಕ-ಲೋಚನಗಳು.

ಮೂರನೆಯದಾಗಿ, ಹೆಜ್ಜೆಹೆಜ್ಜೆಗೂ ಆ ಕಣ್ಗಳಲ್ಲಿ ಒಂದು ಲಾಲಿತ್ಯವು ಗೋಚರವಾಗುತ್ತದೆ. ನಾಲ್ಕನೆಯದಾಗಿ ಅವುಗಳಲ್ಲಿ ಒಂದು ನೂತನತೆಯು ಪ್ರತಿದಿನವೂ ಕಾಣುತ್ತದೆ. ಇಂತಹ ನವ-ನವ-ನಾವೀನ್ಯವು ಯಾರ ಕಣ್ಣುಗಳಲ್ಲಿದ್ದೀತು? ಪ್ರತಿದಿನವೇನು, ಪ್ರತಿಕ್ಷಣವೂ ಅವು ಅಧಿಕವಾಗಿ, ಎಂದರೆ ಅಧಿಕ-ಸುಖಕರವಾಗಿ, ತೋರತಕ್ಕವು. ಕೊನೆಯದಾಗಿ ಅವು ಪ್ರಸ್ಫುರಿಸತಕ್ಕವು. ಎಂದರೆ ಕಂಗೊಳಿಸತಕ್ಕವು.

ಹೀಗೆ ನಾನಾ-ಕಾರಣಗಳಿಂದ ಕೃಷ್ಣನೆಂದರೆ ನಮ್ಮ ಚಿತ್ತಕ್ಕೆ ಮೊಟ್ಟಮೊದಲು ತಟ್ಟುವುದೇ, ಎದ್ದು ಕಾಣುವುದೇ, ಆತನ ಕಮನೀಯ-ನಯನಗಳು.

ಹೀಗೆ ಪ್ರೀತಿ-ಪ್ರಭುತ್ವ-ಲಾಲಿತ್ಯ-ನಾವೀನ್ಯ-ಆಧಿಕ್ಯ-ಸ್ಫುರಣಗಳೆಂಬ ಸದ್ಗುಣ-ವಿಶೇಷಗಳ ಸಂಗಮದಿಂದ ಕಂಗೊಳಿಸುವ ನೇತ್ರಗಳಿಂದಲೇ ನಮ್ಮನ್ನು ಪರವಶಗೊಳಿಸಿರುವ, ನಮ್ಮ ಪ್ರಾಣೇಶನಾದ ಈ ಕೃಷ್ಣ-ಕಿಶೋರನು ನಮ್ಮಗಳ ಹೃದಯದಲ್ಲಿ ಸದಾ ಪ್ರಕಟನಾಗಿರಲಿ - ಎನ್ನುತ್ತಾನೆ, ನಮ್ಮ ಮಧುರ-ಕವಿ, ಲೀಲಾಶುಕ!

ಆದಿಯಲ್ಲಿ "ಪ್ರ"ಕಾರ-ಪ್ರಾಸವನ್ನೂ ಉಳ್ಳ ಈ ಶ್ಲೋಕವನ್ನೀಗ ಓದಿ:

ಪ್ರಣಯ-ಪರಿಣಾತಾಭ್ಯಾಂ ಪ್ರಾಭವಾಲಂಬನಾಭ್ಯಾಂ/ ಪ್ರತಿಪದ-ಲಲಿತಾಭ್ಯಾಂ ಪ್ರತ್ಯಹಂ ನೂತನಾಭ್ಯಾಂ| ಪ್ರತಿಮುಹುರ್ ಅಧಿಕಾಭ್ಯಾಂ ಪ್ರಸ್ಫುರಲ್ಲೋಚನಾಭ್ಯಾಂ / ಪ್ರಭವತು ಹೃದಯೇ ನಃ ಪ್ರಾಣ-ನಾಥಃ ಕಿಶೋರಃ ||

ಸೂಚನೆ : 13/07/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.