Monday, July 22, 2024

ಕೃಷ್ಣಕರ್ಣಾಮೃತ - 23 ವೇಣು-ಗಾನ-ಲೋಲನ ಪಾಣಿ-ಪಾದಗಳ ಸೊಬಗು (Krishnakarnamrta -23 Venu-gaana-lolana Paani-paadagala Sobagu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಕೊಳಲನ್ನು ನುಡಿಸುತ್ತಿರುವ ಕೃಷ್ಣನು ಹೇಗಿರುವನು? - ಎಂಬುದರ ಚಿತ್ರವೊಂದನ್ನು ಕವಿ ಲೀಲಾಶುಕನು ಈ ಶ್ಲೋಕದಲ್ಲಿ ಮೂಡಿಸಿದ್ದಾನೆ. ಈ ಶ್ಲೋಕದಲ್ಲಿಯ ಲಯವೇ ವಿಶಿಷ್ಟವಾದದ್ದು. ತಾಳ-ಬದ್ಧವಾಗಿ ಹಾಡಲು ಅತ್ಯಂತ ಅನುಕೂಲವಾದ ವೃತ್ತದಲ್ಲಿ ಈ ಶ್ಲೋಕವು ರಚಿತವಾಗಿದೆ. ಅವನ ಪಾಣಿ-ಪಾದಗಳನ್ನೂ ಮುಖ-ವಕ್ಷಸ್ಸುಗಳನ್ನೂ ಚಿತ್ರಿಸಿ ಕೃಷ್ಣನ ರೂಪವನ್ನೇ ನಮ್ಮ ಕಣ್ಣ ಮುಂದೆ ತಂದಿದೆ, ಈ ಶ್ಲೋಕ.

ಕೃಷ್ಣನು ವೇಣು-ವಾದನವನ್ನು ಮಾಡುತ್ತಾ ಅದರ ರವದಲ್ಲೇ ಆಕುಲನಾಗಿದ್ದಾನೆ, ಎಂದರೆ ಅದರ ಧ್ವನಿಯಲ್ಲೇ ಮುಳುಗಿಹೋಗಿದ್ದಾನೆ, ಕಳೆದುಹೋಗಿದ್ದಾನೆ. ಭಾವಾವಿಷ್ಟನಾಗಿ ನುಡಿಸುವುದೆಂದರೆ ಹೀಗೆ ತಾನೆ?

ರವವೆಂದರೆ ದನಿ, ಗಾನವಾಗಿ ಮೂಡುವ ಸ್ವರೋಲ್ಲಾಸ. ವಾದ್ಯ ನುಡಿಸುವಾಗಲೂ ಗಾನ ಮಾಡುವಾಗಲೂ ಧ್ಯಾನ ಮಾಡುವಾಗಲೂ ತನ್ಮಯತೆಯು ಇರಬೇಕಲ್ಲವೇ?

ವೇಣು-ರವದಲ್ಲಿ ಮಗ್ನನಾಗಿರುವ ಕೃಷ್ಣನನ್ನು ಕಾಣುತ್ತಲೇ ವೇಣುವನ್ನು ಹಿಡಿದಿರುವ ಕೈಯತ್ತ ಗಮನ ಹೋಗುವುದಲ್ಲವೇ? ಕೃಷ್ಣನ ಹಸ್ತವು ಕಮಲದಂತಿದೆ. ಇಂತಹ ಪಾಣಿ-ಪಂಕಜದ ಸಂಗ ಆ ವೇಣುವಿಗೆ ದೊರೆತಿದೆ. ಕಮಲವೆಂದರೆ ಕೆಂಬಣ್ಣ, ಸುಗಂಧಗಳು ಇರುವುವಲ್ಲವೇ? ಹೌದು ಈತನ ಕರವೂ ಪಲ್ಲವಾರುಣವಾಗಿದೆ. ಎಂದರೆ ಪಲ್ಲವಗಳಂತೆ ಅರುಣವಾಗಿದೆ. ಅರ್ಥಾತ್ ಚಿಗುರುಗಳಂತೆ ಅರುಣ-ವರ್ಣದಿಂದ ಕೂಡಿದೆ. ಚಿಗುರುಗಳ ಹೊಳಪಿನ ಕೆಂಪೇ ಸೊಗಸು.

ಅರುಣ-ವರ್ಣವೆಂದರೆ ಅರುಣೋದಯ-ಸಮಯದ ಬಣ್ಣ. ಅರುಣೋದಯವೆಂದರೆ ಸೂರ್ಯೋದಯಕ್ಕೆ ಸ್ವಲ್ಪ ಮುಂಚಿನದು. ಸೂರ್ಯನ ಸಾರಥಿ ಅರುಣ. ಮೊದಲು ಸಾರಥಿಯ ದರ್ಶನ, ಆಮೇಲೆ ರಥಿಯ ದರ್ಶನ. ಪೂರ್ವದಲ್ಲಿ ಸೂರ್ಯೋದಯಕ್ಕೆ ಪೂರ್ವವಾಗಿ ಮೊದಲು ಕಾಣುವುದು ಕೆಂಬಣ್ಣ. ಆಪ್ಯಾಯಕವಾದ ಬಣ್ಣವದು.

ಹೀಗೆ ಚಿಗುರುಗಳಲ್ಲಿ ತೋರುವ ಅರುಣ-ವರ್ಣವೇನುಂಟೋ ಅದುವೇ ಪಲ್ಲವಾರುಣ. ಆ ಬಣ್ಣವಿದೆ, ಶ್ರೀಕೃಷ್ಣನ ಹಸ್ತಕ್ಕೆ.

ಆರೋಗ್ಯವಾಗಿರುವವರ ಮೈಯಲ್ಲಿ ರಕ್ತವು ಚೆನ್ನಾಗಿರುತ್ತದೆ. ರಕ್ತವು ಚೆನ್ನಾಗಿರುವವರ ಹಸ್ತದಲ್ಲಿ ಕೆಂಪು ಎದ್ದು ಕಾಣುತ್ತದೆ. ಕೃಷ್ಣನ ಮೈಬಣ್ಣವು ಕಪ್ಪಾದರೂ, ಅದರ ನಡುವಿನಲ್ಲೂ ಹಸ್ತದ ಕೆಂಪು ಎದ್ದು ಕಾಣುವಂತಿದೆ.

ಎಂದೇ ಪಲ್ಲವಾರುಣವೆಂದರೆ ಪಲ್ಲವದಂತೆ ಅರುಣವೆಂದು ತಿಳಿಯಬೇಡಿ, ಪಲ್ಲವಗಳಿಗಿಂತಲೂ ಅರುಣವೆಂದು ಅರಿಯಿರಿ! "ಪಲ್ಲವವತ್ ಅರುಣಃ" ಎಂದೂ ವಿಗ್ರಹವಾಕ್ಯವನ್ನು ಮಾಡಬಹುದು; "ಪಲ್ಲವಾದ್ ಅಪಿ ಅರುಣಃ" ಎಂದೂ ಮಾಡಬಹುದು. ವ್ಯಾಕರಣದಲ್ಲಿ ಎರಡು ಬಗೆಯಲ್ಲೂ ಸಮಾಸವನ್ನು ಬಿಡಿಸುವುದು ಶಕ್ಯವಿದೆ. ಅಂತೂ ಕೊಳಲಿಗೆ ಕೃಷ್ಣನ ಅಂಗೈ-ಸಂಗವಿದೆಯೆನ್ನುವುದಾದರೂ ಕೆಂಗೈ-ಸಂಗವನ್ನು ಇಲ್ಲಿ ಹೇಳಿದೆಯೆಂದುಕೊಳ್ಳಬಹುದು.

ಪಾಣಿ-ಪಂಕಜವಾಯಿತು, ಇನ್ನು ಪಾದ-ಪಂಕಜದತ್ತ ಗಮನ ಸಹಜವಲ್ಲವೇ? ಹೇಗಿದೆ ಆತನ ಪಾದ-ಸರೋಜ? ಆ ಚರಣ-ಸರೋರುಹವು ಪರಿವದಿಸುವುದಂತೆ. ಪರಿವದಿಸುವುದೆಂದರೆ ನಿಂದಿಸುವುದು. ಎಂದರೆ, "ನೀವೇನು ಮಹಾ?" ಎನ್ನುವುದು.

ನಮ್ಮೊಂದಿಗೆ ಯಾರಾದರೂ ಪೈಪೋಟಿಗೆ ನಿಂತರೆ, ಅವರು ನಮಗೆ ಸರಿಸಾಟಿಯಾಗುವಂತಿದ್ದರೆ, ಆಗ ನಾವು ಹೇಳುವುದು, ಅಥವಾ ಕೇಳುವುದು, "ನೀನೇನು ಮಹಾ?" ಎಂದು. ಹಾಗಿದ್ದರೆ ಈ ಪಾದ-ಪದ್ಮಗಳಿಗೆ ಪ್ರತಿದ್ವಂದ್ವಿ (ಎಂದರೆ ಪೈಪೋಟಿಗೆ ನಿಂತವರು) ಯಾರು? - ಎಂದರೆ, ಫುಲ್ಲ-ಪಾಟಲ-ಪಾಟಲಿಯೇ ಪ್ರತಿಸ್ಪರ್ಧಿ.

ಏನು ಹಾಗೆಂದರೆ? ಫುಲ್ಲ/ಪ್ರಫುಲ್ಲವೆಂದರೆ ಅರಳಿರುವುದಲ್ಲವೇ? ಪಾಟಲವೆಂಬುದೊಂದು ಕುಸುಮ. ಪಾಟಲಿಯೆಂದರೆ ಸಮೂಹ. ಹೀಗೆ ವಿಕಸಿತವಾದ ಪಾಟಲಗಳ ರಾಶಿಯು ಏನುಂಟೋ ಅದನ್ನು ಮೀರಿಸುವಂತಹ ಚರಣ-ಪದ್ಮ ಕೃಷ್ಣನದು.

ಪಾಟಲವೆಂಬ ಕುಸುಮವು ಒಳ್ಳೆಯ ಕೆಂಪು-ಬಣ್ಣಕ್ಕೇ ಎಷ್ಟು ಪ್ರಸಿದ್ಧವೆಂದರೆ, "ಪಾಟಲವೆಂದರೆ ಕೆಂಪು" ಎಂದೇ ಅರ್ಥಹೇಳುವುದೂ ಉಂಟು! ಪಾಟಲ-ಪುಷ್ಪವೆನ್ನುವುದಕ್ಕೆ ಕನ್ನಡದಲ್ಲಿ ಪಾದರಿಗಿಡ ಪಾದರಿಹೂವು ಎನ್ನುತ್ತಾರೆ. ಮತ್ತು ಅದರಲ್ಲಿನ ಕೆಂಬಣ್ಣವನ್ನು ಶ್ವೇತ-ರಕ್ತವೆನ್ನುವರು. ಎಂದರೆ ಕಿಂಚಿತ್ ಶ್ವೇತ, ಕಿಂಚಿತ್ ರಕ್ತ: ಅದರಲ್ಲಿ ಕೊಂಚ ಬಿಳಿಯೂ ಇದೆ, ಕೊಂಚಕೆಂಪೂ ಇದೆ. ಅಚ್ಚಗೆಂಪಲ್ಲ, ಬಿಳಿಸೇರಿದ ಕೆಂಪದು. ಎಂದೇ ಕಣ್ಣಿಗೆ ಹಿತವಾದದ್ದು.

ಅದನ್ನೇ ಹೀಗಳಿಯುವಷ್ಟು ಸೊಗಸಿನ ಬಣ್ಣವಿದೆ, ಈ ಶ್ರೀಕೃಷ್ಣ-ಪಾದಾಂಬುಜಕ್ಕೆ. ಅಂತೂ ಕಣ್ಣಿಗೆ ಇಂಪೆನಿಪ ಬಣ್ಣವಿದೆ,  ಕೃಷ್ಣ-ಪಾದ-ಸರೋರುಹಕ್ಕೆ.

ಭಗವಂತನೇ ರಸ. "ರಸೋ ವೈ ಸಃ" ಎನ್ನುತ್ತದಲ್ಲವೇ ಉಪನಿಷತ್ತು? ರಸಮಯನಾದ ಭಗವಂತನ ಮೈ-ಮನಸ್ಸುಗಳೂ ರಸ-ಭರಿತವೇ. ಹಾಗಿರಲು ಆತನ ಆನನವೂ, ಎಂದರೆ ಮುಖವೂ, ಸರಸವೆಂದು ಬೇರೆಯಾಗಿ ಹೇಳಬೇಕಿಲ್ಲವಷ್ಟೆ?

ವದನಕ್ಕೆ ಈ ಸರಸತೆ ಬಂದುದು ಹೇಗೆ? ಅದಕ್ಕೆ ಕಾರಣವಿಲ್ಲದಿಲ್ಲ. ಕೃಷ್ಣನ ಕೆಳದುಟಿಯಿದೆಯಲ್ಲಾ, ಅದುವೇ ಕಾರಣ, ಅದಕ್ಕೆ – ಎನ್ನುತ್ತಾನೆ, ನಮ್ಮ ಕವಿ. ಏಕೆ? ಅಲ್ಲಿಂದ ಹೊಮ್ಮುವುವು ಮಧುರವಾದ ದ್ಯುತಿಗಳು, ಎಂದರೆ ನಯನಗಳಿಗೆ ರುಚಿಸುವ ಕಿರಣಗಳು!

ಬರೀ ಕಿರಣಗಳೆಂದರೆ ಸಾಲದು, ಅದನ್ನು. ಕಿರಣಗಳ ಮಂಜರಿಯದು. ಮಂಜರಿಯೆಂದರೆ ಗುಚ್ಛ. ಕೆಳದುಟಿಯಿಂದ ಮೇಲ್ಚಿಮ್ಮುವ ಕಿರಣ-ಸ್ತೋಮವದು. ಹೂ-ಗುಚ್ಛಗಳು ಸ-ರಸವಾಗಿರುತ್ತವಲ್ಲವೇ? ಈ ಗುಚ್ಛವೂ ಹಾಗೆಯೇ. ಎಂದೇ ಆತನ ಆನನವೂ ಸರಸವೇ. ಅಂತೂ ಕೆಳದುಟಿಯ ಕಾಂತಿಗಳು ಮುಖವನ್ನು ಮುದ್ದಾಗಿಸಿವೆ.

ನಾನೇ ಗೋಪಿಯೆಂದುಕೊಂಡರೆ ಆತನ ಸುಂದರವಾದ ಎದೆಯತ್ತ ದೃಷ್ಟಿ ಹೋಗದಿರುವೇ? ಓ! ಆತನೆದೆಯ ಮೇಲೂ ಕೆಂಬಣ್ಣದ ಕುರುಹುಗಳಿವೆ! ಹಾಗಾಗಿ, ಕುಂಕುಮ-ಪಂಕಿಲವಾಗಿದೆ, ಆತನೆದೆ. ಪಂಕಿಲವೆಂದರೆ ಸ್ವಲ್ಪ ಒದ್ದೆಯಾಗಿದ್ದಾಗಿನ ಗುರುತು, ಕುಂಕುಮದ ಗುರುತು. ಕುಂಕುಮವು ಹಣೆಯನ್ನಲ್ಲವೆ ಅಲಂಕರಿಸುವುದು? ಅದು ಕೃಷ್ಣನು ತಾನೇ ಇಟ್ಟುಕೊಂಡದ್ದಲ್ಲ. ಗೋಪಿಯರ ಕುಚ-ಕುಂಭದ ಮೇಲಿನ ಕುಂಕುಮ-ಕೇಸರಿಯ ಗುರುತದು.

ನಮ್ಮ ಪೂರ್ವಿಕರು ಅದೆಷ್ಟು ರಸಮಯವಾದ ಬಾಳಾಟವನ್ನು ಕಂಡಿದ್ದರು! ಮೈಗೆ ಲೇಪಿಸಿಕೊಳ್ಳುವುದು ಅದೊಂದನ್ನೇ ಅಲ್ಲ. ಕರ್ಪೂರ, ಅಗುರು, ಕಸ್ತೂರೀ ಇವುಗಳ ರಸವೂ ಸೇರಿರುವ ಕುಂಕುಮ-ಕೇಸರಿಯೆಂದರೆ ಅದರ ವರ್ಣವಿಶೇಷ-ಗಂಧವಿಶೇಷ-ಸ್ಪರ್ಶವಿಶೇಷಗಳನ್ನು ಕೇಳಬೇಕೇ? ಗೋಪಿಯರು ಅದನ್ನು ತಮ್ಮ ಮೈಗೂ, ವಿಶೇಷವಾಗಿ ತಮ್ಮ ಕೊಡಮೊಲೆಗಳಿಗೂ, ಲೇಪಿಸಿಕೊಂಡಿರುವರು. ಅಂತಹ ವಲ್ಲವಿಯರನ್ನು ಆಲಿಂಗಿಸಿಕೊಂಡಿದ್ದ ಕೃಷ್ಣನ ಮೈಗೂ ಅದು ಒಂದಿಷ್ಟು ಅಂಟಿದೆ.

ಎದೆಗೆಂದು ಹೇಳಿದುದು ಸುಮ್ಮನೆ ಉಪಲಕ್ಷಣವಾಗಿ. ಅಂಗನೆಯರ ಅಂಗಸಂಗದಿಂದ ಅಲ್ಲಲ್ಲಿ ಆ ಚಿಹ್ನಗಳಿವೆ, ಶ್ರೀಕೃಷ್ಣನ ಮೈಯಲ್ಲಿ. ಗೋಪಿಕೆಯರ ಆ ಭಾಗ್ಯದ ಬಗ್ಗೆ ಕಿಂಚಿತ್ತಾದ ಅಸೂಯೆಯೇ ಬಂದಿತೋ ಏನೋ ಲೀಲಾಶುಕನಿಗೆ!

ನಾನಾಶ್ರಯಿಸುವುದು ನನ್ನ ಪ್ರಭು-ಕೃಷ್ಣನನ್ನು. ಪ್ರಭು-ಚಿತ್ತದಂತೆ ನನಗೂ ಆತನ ಸನಿಹದ ಭಾಗ್ಯವು ಬಂದೇ ಬರುವುದು. ಕೃಷ್ಣಾನುಗ್ರಹದ ಭಾಗ್ಯ ಎಳೆಯರಿಗೂ ಉಂಟು, ಗೆಳೆಯರಿರೂ ಉಂಟು. ಅತನನ್ನು ಆಶ್ರಯಿಸಿದವರಿಗೆ ಅನುಗ್ರಹವಿಲ್ಲವೆನ್ನುವನೇನು? ಆತನನ್ನೇ ಆಶ್ರಯಿಸುವೆ - ಪ್ರಭುಂ ಆಶ್ರಯೇ - ಎನ್ನುತ್ತಾನೆ ಲೀಲಾಶುಕ.

ಸರ್ವಲೋಕಾಶ್ರಯನೂ ಸರ್ವಜೀವಾಶ್ರಯನೂ ಆದ ಶ್ರೀಕೃಷ್ಣ-ಪ್ರಭುವನ್ನು ನಾವೂ ಆಶ್ರಯಿಸೋಣವಲ್ಲವೇ?

ಕಿವಿಗಳಿಗೆ ಹಿತವಾದ ಲಯಮಯವಾದ ಈ ಚಚ್ಚರೀ-ವೃತ್ತದ ಪದ್ಯವನ್ನು ಆಸ್ವಾದಿಸೋಣವೇ?

ಪ್ರತಿಪಾದದಲ್ಲೂ ೨೬ ಮಾತ್ರೆಗಳುಳ್ಳ ೧೮ ಅಕ್ಷರಗಳ ಪದ್ಯವಿದು. ೭, ೭, ೬, ೬ – ಮಾತ್ರೆಗಳು ಇಲ್ಲಿಯ ಯತಿ-ಸ್ಥಾನಗಳು. ದ್ವಿತೀಯಾಕ್ಷರ-ಪ್ರಾಸವಿರುವುದನ್ನೂ ಗಮನಿಸಿಕೊಳ್ಳಿರಿ.

ಪಲ್ಲವಾರುಣ-ಪಾಣಿ-ಪಂಕಜ-ಸಂಗಿ-ವೇಣು-ರವಾಕುಲಂ

ಫುಲ್ಲ-ಪಾಟಲ-ಪಾಟಲೀ-ಪರಿವಾದಿ-ಪಾದ-ಸರೋರುಹಂ |

ಉಲ್ಲಸನ್-ಮಧುರಾಧರ-ದ್ಯುತಿ-ಮಂಜರೀ-ಸರಸಾನನಂ

ವಲ್ಲವೀ-ಕುಚ-ಕುಂಭ-ಕುಂಕುಮ-ಪಂಕಿಲಂ ಪ್ರಭುಂ ಆಶ್ರಯೇ ||

ಸೂಚನೆ : 22/07/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.