Monday, July 22, 2024

ಯಕ್ಷ ಪ್ರಶ್ನೆ 99(Yaksha prashne 99)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ –  98 ಯಾವುದು ದಾನ ?

ಉತ್ತರ - ಭೂತರಕ್ಷಣವೇ ದಾನ 

ದಾನವೆಂದರೆ ಕೊಡುವುದು. ತನ್ನ ಸ್ವಾಮಿತ್ವಕ್ಕೆ ಸಂಬಂಧಿಸಿದ ವಸ್ತು ಅಥವಾ ಪದಾರ್ಥವನ್ನು ಭಾವಸಮೇತ ಸರಿಯಾದ ವ್ಯಕ್ತಿಗೆ ಕೊಟ್ಟು ತನ್ನ ಸ್ವಾಮಿತ್ವವನ್ನು ಕಳೆದುಕೊಳ್ಳಲು ಇರುವ ಒಂದು ಬಗೆಯ ವಿಧಾನ. 'ಕೊಡುತ್ತಿರುವ ವಸ್ತು ನನ್ನದಲ್ಲ- ಇದಂ ನ ಮಮ' ಎಂದು ಕಾಯೇನ ವಾಚಾ ಮನಸಾ ತ್ರಿಕರಣಪೂರ್ವಕವಾಗಿ ಬಿಡುವುದನ್ನು ದಾನ ಎಂದು ಕರೆಯುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಇಲ್ಲಿ ಯಕ್ಷನ ಪ್ರಶ್ನೆಗೆ ದಾನದ ವಿವರಣೆಯನ್ನು ವಿಭಿನ್ನವಾಗಿ ಧರ್ಮರಾಜನು ಕೊಟ್ಟಿದ್ದನ್ನು ಕಾಣಬಹುದು. 'ಭೂತಗಳ ರಕ್ಷಣೆ ಮಾಡುವುದನ್ನೇ ದಾನ' ಎಂದು ಕರೆಸಿಕೊಳ್ಳುತ್ತದೆ ಎಂಬ ಉತ್ತರ ಇಲ್ಲಿದೆ. ನಮಗೆ ಬರುವ ಸಂಶಯವಿಷ್ಟೆ - ರಕ್ಷಣೆ ಹೇಗೆ ದಾನವಾಗುತ್ತದೆ? ಎಂಬುದಾಗಿ. ಹಾಗಾಗಿ ನಾವು ಇಲ್ಲಿ ರಕ್ಷಣೆ ಎಂದರೇನು? ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. 

ಭೂತ ಎಂದ ಕಣ್ಣಿಗೆ ಕಾಣುವ ವಿಷಯ. ಪೃಥಿವೀ ಅಪ್ ತೇಜಸ್ಸು ವಾಯು ಮತ್ತು ಆಕಾಶ ಎಂಬುದಾಗಿ ಪಂಚಭೂತಗಳು. ಈ ಸಮಗ್ರವಾದ ಸೃಷ್ಟಿಯು ಇವೇ ಪಂಚಭೂತಗಳಿಂದಲೇ ನಿರ್ಮಿತವಾದದ್ದು. ಈ ಐದರ ಸಮಾಯೋಗ ಬೇಕೇಬೇಕು. ಅವುಗಳ ಸಹಯೋಗದಲ್ಲಿ ತಾರತಮ್ಯ ತೋರಬಹುದು. ಆದರೆ ಇವು ಇರಲೇಬೇಕು. ಪೃಥಿವಿಯ ಭಾಗ ಹೆಚ್ಚಾಗಿ ಇದ್ದರೆ ಅಂದು 'ಪಾರ್ಥಿವ' ಸೃಷ್ಟಿಯಾಗುತ್ತದೆ. ಕೆಲವು ಜೀವಿಗಳು ಭೂಮಿಯಲ್ಲೇ ಜೀವಿಸುತ್ತವೆ. ಜಲದ ಭಾಗ ಅತಿಶಯವಾಗಿ ತೋರಿದರೆ, ಅದನ್ನು 'ವರುಣಲೋಕ' ಎನ್ನುತ್ತಾರೆ. ಅಲ್ಲಿ ಜಲೀಯ ಜೀವಿಗಳು ಇರುತ್ತವೆ. ಅಂತೆಯೇ ತೇಜಸ್ಸು ಅಧಿಕವಾಗಿ ತೋರಿದರೆ ಅದು 'ತೈಜಸ'ಲೋಕವಾಗಿರುತ್ತದೆ. ವಾಯುವಿನ ಅಂಶ ವಿಶೇಷವಾಗಿದ್ದರೆ 'ವಾಯುಲೋಕ' ಎಂದೂ, ಉಳಿದ ಭೂತಗಳ ಭಾಗ ಅತ್ಯಲ್ಪವಾಗಿ ತೋರಿ ಆಕಾಶ ಅಥವಾ ಅವಕಾಶ ಮಾತ್ರವೇ ಇದ್ದರೆ ಅದು 'ಅಂತರಿಕ್ಷ'ಲೋಕವಾಗಿ ತೋರುತ್ತದೆ. ಈ ಎಲ್ಲಾ ಲೋಕಗಳಲ್ಲೂ ಜೀವದ ವಾಸ ಇದ್ದೇ ಇರುತ್ತದೆ. ಅಲ್ಲಲ್ಲಿಯ ಜೀವಿಗೆ ಜೀವಿಕೆಗೆ ಅಗತ್ಯವಾದ ಪದಾರ್ಥವೂ ಅಲ್ಲಲ್ಲೇ ಲಭ್ಯವಾಗಿರುತ್ತದೆ. ಇದು ಜಗದ ನಿಯಮ. ಅಲ್ಲಿಲ್ಲದ ಜೀವಿಕೆಗೆ ಪದಾರ್ಥವನ್ನು ಬೇರೆಲೋಕದಿಂದ ಸರಬರಾಜು ಮಾಡಬೇಕಾಗುತ್ತದೆ. ಇಂತಹ ವಿಶಿಷ್ಟ ಸೃಷ್ಟಿಯಲ್ಲಿ ಮಾನವನ ಸೃಷ್ಟಿ ಉಳಿದೆಲ್ಲಾ ಜೀವಿಗಿಂತಲೂ ವಿಭಿನ್ನ. ಏಕೆಂದರೆ ಉಳಿದ ಜೀವಿಗಳಿಗೆ ಬೇರೆ ಜೀವಿಗಳನ್ನು ನಿಯಂತ್ರಿಸುವ ಅಥವಾ ಸಂರಕ್ಷಿಸುವ ಸಾಮರ್ಥ್ಯವಿರುವುದಿಲ್ಲ. ಅದೇನಾದರೂ ಇದ್ದರೆ ಮಾನವನಿಗೆ ಮಾತ್ರವೇ. ಇಂತಹ ವಿಶೇಷ ಸಾಮರ್ಥ್ಯವನ್ನು ಬಳಸಿಕೊಂಡು ಮಾನವನು ಜೀವಿಗಳಿಗೆ ಬಂದೊದಗಿದ ಆತಂಕವನ್ನು ನಿವಾರಿಸಬಹುದು. ಜೀವಿಕೆಗೆ ಬೇಕಾದ ಸವಲತ್ತುಗಳನ್ನೂ ಒದಗಿಸಬಹುದು. ಇದನ್ನೇ ಭೂತರಕ್ಷಣೆ ಎನ್ನಬಹುದು. 

ಮಾನವ, ಕೇವಲ ತಾನಿರುವ ಲೋಕ ಅಥವಾ ಪ್ರದೇಶದ ರಕ್ಷಣೆಯನ್ನು ನೋಡಿಕೊಳ್ಳುವುದರ ಜೊತೆ ಇನ್ನುಳಿದ ಲೋಕಗಳ ರಕ್ಷಣೆಯನ್ನೂ ಮಾಡುವ ಸಾಮರ್ಥ್ಯ ಮತ್ತು ಅವಕಾಶವನ್ನು ಪಡೆದಿರುತ್ತಾನೆ. ಇದನ್ನೇ ಭೂತರಕ್ಷಣೆ ಎನ್ನುತ್ತಾರೆ. ಆದರೆ ಲೋಕವು ಭಿನ್ನ ಭಿನ್ನವಾದಂತೆ ರಕ್ಷಣೆಯ ವಿಧಾನವೂ ಭಿನ್ನವಾಗಬಹುದು. ಆದರೆ ಅಲ್ಲಿನ ರಕ್ಷಣೆಗೆ ಬೇಕಾದ ಸಾಮಗ್ರಿಯನ್ನು ಒದಗಿಸಿ 'ಕೊಡುವುದು' ದಾನವಲ್ಲದೆ ಮತ್ತೇನು! ಇಲ್ಲಿನ ಕೊಡುವಿಕೆಯಲ್ಲೂ ಉಳಿದ ದಾನದಂತೆ ನ ಮಮ ಬುದ್ಧಿಯೇ ಇರಬೇಕಾಗುತ್ತದೆ. ಅಲ್ಲಿ ಭೂತರಕ್ಷಣೆಯನ್ನು ಮಾಡಬೇಕಾದರೆ ಅವುಗಳಿಗೆ ಬೇಕಾದುದನ್ನು ನಮ್ಮಲ್ಲಿರುವ ಪದಾರ್ಥದಿಂದ ಮಾಡುವಂತಹದ್ದು. ಆಗ ಅದು ಒಂದು ಬಗೆಯ ದಾನವೇ ಆಗುತ್ತದೆ.     

ಸೂಚನೆ : 21/7/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.