Monday, July 15, 2024

ವ್ಯಾಸ ವೀಕ್ಷಿತ 95 ಕೊನೆಗೂ ಆಯಿತು ಸುಂದೋಪಸುಂದ-ಸಂಹಾರ! (Vyasa Vikshita 95 Konegu Ayitu Sundopasunda-Samhara!)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಒಮ್ಮೆ ವಿಂಧ್ಯ-ಪರ್ವತದ ಶಿಖರದಲ್ಲಿ ಸಮತಟ್ಟಾದ ಶಿಲಾತಲದಲ್ಲಿ ಸುಂದೋಪಸುಂದರು ವಿಹರಿಸುತ್ತಿದ್ದರು. ಅಲ್ಲಿಯ ಶಾಲ-ವೃಕ್ಷಗಳೆಲ್ಲ ಹೂಗಳಿಂದ ತುಂಬಿತುಳುಕುತ್ತಿದ್ದವು. ದಿವ್ಯ-ಭೋಗಗಳೆಲ್ಲ ಅವರಲ್ಲಿಗೆ ಒದಗಿದ್ದವು. ಶ್ರೇಷ್ಠವಾದ ಆಸನಗಳಲ್ಲಿ ಅವರು ಸುಂದರ-ನಾರಿಯರೊಂದಿಗೆ ಸಂತೋಷದಿಂದ ಆಸೀನರಾಗಿದ್ದರು. ಆಮೇಲೆ ವಾದ್ಯಗಳು ನೃತ್ಯಗಳು - ಇವುಗಳೊಂದಿಗೆ ನಾರಿಯರು ಇವರನ್ನು ಸೇವಿಸಿದರು. ಪ್ರಶಂಸಾ-ಪರವಾದ ಗೀತಗಳೊಂದಿಗೆ ಇವರಿಗೆ ಚಿತ್ತ-ರಂಜನವನ್ನು ಉಂಟುಮಾಡಿದರು.

ಅಷ್ಟರಲ್ಲಿ ಕಾಣಿಸಿಕೊಂಡವಳು ತಿಲೋತ್ತಮೆ. ಅಲ್ಲೇ ಕಾಡಲ್ಲಿ ಕೆಂಪಾದ ಏಕ-ವಸ್ತ್ರವೊಂದನ್ನು ಧರಿಸಿದ್ದಳು. ಅದೂ ಆಗಾಗ ಜಾರುತ್ತಿತ್ತು. ನದೀತೀರಗಳಲ್ಲಿ ಬೆಳೆದಿದ್ದ ಕರ್ಣಿಕಾರ-ಕುಸುಮಗಳನ್ನು, ಎಂದರೆ ಕಣಿಗಲೆ-ಹೂಗಳನ್ನು, ಚಯನ ಮಾಡುತ್ತಾ, ಮಾಡುತ್ತಾ, ಆ ಇಬ್ಬರು ದೈತ್ಯರು ಕುಳಿತಿದ್ದೆಡೆಗೂ ಬಂದಳು.

ಆ ಇಬ್ಬರೋ, ಶ್ರೇಷ್ಠವಾದ ಮಾದಕ-ರಸವನ್ನು ಕುಡಿದಿದ್ದರು. ಅದರ ಮದದಿಂದಾಗಿ ಅವರ ಕಣ್ಣಂಚುಗಳು ಕೆಂಪಡರಿದ್ದವು. ಅ ಸುಂದರಾಂಗಿಯಾದ ತಿಲೋತ್ತಮೆಯನ್ನು ಕಂಡಷ್ಟರಿಂದಲೇ ಕಾಮ-ಬಾಧೆಯಿಂದ ಅವರು ಪೀಡಿತರಾದರು. ತಮ್ಮ ಆಸನವನ್ನು ಬಿಟ್ಟು ಮೇಲೆದ್ದರು. ಅವಳಿದ್ದೆಡೆಗೆ ಹೋದರು. ಇಬ್ಬರೂ ಕಾಮದಿಂದ ಉನ್ಮತ್ತರಾಗಿದ್ದರು. ಇಬ್ಬರೂ ಅವಳಲ್ಲಿ ಪ್ರೇಮ-ಯಾಚನೆಯನ್ನು ಮಾಡಿದರು.

ಸುಂದರವಾದ ಹುಬ್ಬುಳ್ಳ ಆ ತಿಲೋತ್ತಮೆಯ ಬಲಗೈಯನ್ನು ಸುಂದನು ಹಿಡಿದುಕೊಂಡನು. ಅವಳ ಎಡಗೈಯನ್ನು ಉಪಸುಂದನು ಹಿಡಿದನು. ವರ-ಪ್ರದಾನದಿಂದ ಬಂದ ಮದ, ಸ್ವಾಭಾವಿಕವಾದ ಬಲ, ಧನ-ಮದ, ರತ್ನ-ಮದ, ಸುರಾಪಾನ-ಮದ - ಈ ಎಲ್ಲ ಮದಗಳಿಂದಾಗಿ ಅವರೇ ಪರಸ್ಪರ ಹುಬ್ಬುಗಂಟಿಕ್ಕಿ ನೋಡುವಂತಾಯಿತು.

ಅವಳಂತೂ ತನ್ನ ಕಟಾಕ್ಷದಿಂದಲೇ ಆ ಇಬ್ಬರು ದೈತ್ಯರನ್ನೂ ತನ್ನತ್ತ ಆಕರ್ಷಿಸಿದಳು. ಬಲಗಣ್ಣಂಚಿನಿಂದ ಸುಂದನನ್ನೂ ಎಡಗಣ್ಣಂಚಿನಿಂದ ಉಪಸುಂದನನ್ನೂ ಸೆಳೆದಳು. ಅವಳ ದಿವ್ಯ-ಸುಗಂಧ, ಅವಳ ಆಭರಣಗಳು, ಅವಳ ರೂಪ - ಇವುಗಳಿಂದಾಗಿ ಅವರಿಬ್ಬರೂ ಅವಳ ವಿಷಯದಲ್ಲಿ ವ್ಯಾಮೋಹಗೊಂಡರು.

ಮದಾವೇಶ-ಕಾಮಾವೇಶಗಳ ಸಮಾವೇಶದಿಂದ ಕೂಡಿದವರಾಗಿ, ಅವರು ಒಬ್ಬರಿಗೊಬ್ಬರು ಹೀಗೆ ಸಂಭಾಷಿಸಿದರು: "ಇವಳು ನನಗೆ ಭಾರ್ಯೆ, (ಎಂದೇ) ನಿನಗೆ ಗುರು, ಎಂದರೆ ತಾಯಿಗೆ ಸಮಾನ", ಎಂಬುದಾಗಿ ಸುಂದನು ಹೇಳಿದನು; "ಇಲ್ಲ, ಇವಳು ನನಗೆ ಭಾರ್ಯೆ, (ಎಂದೇ) ನಿನಗೆ ಸೊಸೆಯಂತೆ" - ಎಂಬುದಾಗಿ ಉಪಸುಂದನು ಹೇಳಿದನು.

"ಇವಳು ನಿನಗಲ್ಲ, ನನಗೆ" ಎಂಬುದಾಗಿ ಹೇಳುತ್ತಿದ್ದ ಅವರಲ್ಲಿ ಪರಸ್ಪರ ಕ್ರೋಧವು ಹೊಕ್ಕಿತು. ತಮ್ಮ ಸ್ನೇಹ-ಸೌಹಾರ್ದಗಳನ್ನು ಮರೆತವರಾಗಿ ಅವಳ ಸೌಂದರ್ಯಕ್ಕೆ ಇಬ್ಬರೂ ಮದಿಸಿ ಮರುಳಾದರು. ಅವಳಿಗೋಸ್ಕರವಾಗಿ ಭಯಂಕರವಾದ ಗದೆಗಳನ್ನು ಇಬ್ಬರೂ ಕೈಗೆತ್ತಿಕೊಂಡರು. ಅವಳ ವಿಷಯದಲ್ಲಿ ಇಬ್ಬರೂ ಕಾಮ-ಮೋಹಿತರಾಗಿದ್ದರು.

ನಾ ಮೊದಲು ತಾ ಮೊದಲೆಂದು ಹೇಳುತ್ತಾ ಇಬ್ಬರೂ ಪರಸ್ಪರ ಹೊಡೆದಾಡಿದರು. ಗದೆಯ ಹೊಡೆತ ತಿಂದು ಇಬ್ಬರೂ ಭಯಂಕರರೂ ನೆಲದ ಮೇಲೆ ಬಿದ್ದರು. ಇಬ್ಬರ ಮೈಯೂ ರಕ್ತ-ಸಿಕ್ತವಾಗಿತ್ತು. ಆಕಾಶದಿಂದ ಬಿದ್ದ ಎರಡು ಸೂರ್ಯರಂತೆ ಅವರಿದ್ದರು.

ಆಗ ಅಲ್ಲಿದ್ದ ನಾರಿಯರೆಲ್ಲ ಅಲ್ಲಿಂದ ಓಡಿಹೋದರು! ದೈತ್ಯ-ಸ್ತೋಮವೂ ಪಾತಾಳವನ್ನು ಸೇರಿಕೊಂಡಿತು! ಎಲ್ಲರೂ ದುಃಖದಿಂದಲೂ ಭಯದಿಂದಲೂ ನಡುಗಿಹೋದರು.

ಶುದ್ಧಾತ್ಮನಾದ ಪಿತಾಮಹನು ಮಹರ್ಷಿಗಳೊಂದಿಗೂ ದೇವತೆಗಳೊಂದಿಗೂ ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದನು. ತಿಲೋತ್ತಮೆಯನ್ನು ಗೌರವಿಸಿದನು. ವರವನ್ನೇನಾದರೂ ಕೇಳಿಕೋ - ಎಂದು ಒಡಂಬಡಿಸಿದನು. ವರಕೊಡುವ ಬಯಕೆಯುಳ್ಳವನಾಗಿ, ಸಂತುಷ್ಟನಾದ ಪಿತಾಮಹನು ಈ ರೀತಿಯಾಗಿ ಹೇಳಿದನು.

ಸೂಚನೆ : 15/7/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.