Tuesday, July 2, 2024

ಋಷಿ-ಪ್ರಾರ್ಥನೆ: ಸ್ತ್ರೀರತ್ನ-ಸೃಷ್ಟಿ (Rshi Prarthane: Striratna-Srishti)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಅಲ್ಲಿಗೆ ಯಜ್ಞಗಳು ನಿಂತವು. ಸ್ವಾಧ್ಯಾಯವು ನಿಂತಿತು. ರಾಜರು ಕೊಲೆಯಾದರು. ಬ್ರಾಹ್ಮಣರು ಹತರಾದರು. ಭೂಮಿಯ ಮೇಲೆ ಉತ್ಸವಗಳೂ ಯಜ್ಞಗಳೂ ಉತ್ಪಾಟಿತವಾದವು, ಎಂದರೆ ಕಿತ್ತೊಗೆಯಲ್ಪಟ್ಟವು. ಎಲ್ಲ ಕಡೆಯೂ ಹಾಹಾಕಾರ, ಭಯ-ಭೀತತೆಗಳು ಉಂಟಾದವು.

ಅಂಗಡಿಗಳಲ್ಲಿ ಕೊಳ್ಳುವುದು-ಮಾರುವುದುಗಳೂ ಕುಲಗೆಟ್ಟವು. ದೇವ-ಕಾರ್ಯಗಳು ನಿಂತುಹೋದವು. ಪುಣ್ಯ-ವಿವಾಹಗಳೂ ಇಲ್ಲವಾದವು. ಕೃಷಿಯು ಕೆಟ್ಟಿತು. ಗೋರಕ್ಷೆಯು ಹಾಳಾಯಿತು. ನಗರಗಳೂ ಆಶ್ರಮಗಳೂ ಧ್ವಂಸಗೊಂಡವು. ಎಲ್ಲಿ ನೋಡಿದರಲ್ಲಿ ಮೂಳೆಗಳು, ಅಸ್ಥಿಪಂಜರಗಳು ಚೆಲ್ಲಾಡಿದ್ದು, ಭೂಮಿಯೇ ಉಗ್ರ-ದರ್ಶನವಾಯಿತು. ಇನ್ನು ಪಿತೃ-ಕಾರ್ಯವೆಂಬುದೆಲ್ಲುಳಿಯಿತು? ವಷಟ್ಕಾರ-ಮಂಗಳಗಳು ಮುಗಿದವು. ಜಗತ್ತೆಲ್ಲವೂ ಭಯಾನಕವಾಗಿಬಿಟ್ಟು ನೋಡಲೇ ಆಗದಂತಾಯಿತು.

ಸುಂದ-ಉಪಸುಂದರ ಆ ದುಷ್ಕೃತ್ಯಗಳನ್ನು ಕಂಡು ಸೂರ್ಯ-ಚಂದ್ರರೇ ಖಿನ್ನರಾದರು. ಗ್ರಹಗಳು, ತಾರೆಗಳು, ನಕ್ಷತ್ರಗಳು, ದೇವತೆಗಳು - ಇವರೂ ಖಿನ್ನರಾದರು. ಹೀಗೆ ತಮ್ಮ ಕ್ರೂರ-ಕಾರ್ಯಗಳಿಂದ ಎಲ್ಲಾ ದಿಕ್ಕುಗಳನ್ನು ಗೆದ್ದು, ಆ ದೈತ್ಯರಿಬ್ಬರು ಶತ್ರು-ರಹಿತರೇ ಆಗಿಬಿಟ್ಟು ಕುರುಕ್ಷೇತ್ರವನ್ನೇ ತಮ್ಮ ನಿವಾಸ-ಸ್ಥಾನವನ್ನಾಗಿ ಮಾಡಿಕೊಂಡುಬಿಟ್ಟರು.

ಸುಂದೋಪಸುಂದರಿಂದಾದ ಉಪಟಳ ತೀವ್ರವಾಯಿತು. ಅದನ್ನು ಕಂಡ ಎಲ್ಲ ದೇವರ್ಷಿಗಳು, ಸಿದ್ಧರು, ಪರಮರ್ಷಿಗಳು - ಇವರಿಗೆಲ್ಲಾ ಉತ್ಕಟವಾದ ಖೇದವಾಯಿತು. ಅವರುಗಳೆಲ್ಲರೂ ಜಿತ-ಕ್ರೋಧರು, ಜಿತಾತ್ಮರು, ಜಿತೇಂದ್ರಿಯರು. ಎಂದರೆ ಕೋಪವನ್ನು ಗೆದ್ದವರು, ಮನಸ್ಸನ್ನು ಗೆದ್ದವರು, ಇಂದ್ರಿಯಗಳನ್ನು ಗೆದ್ದವರು. ಆದರೂ ಜಗತ್ತಿನ ಬಗ್ಗೆ ಅವರಿಗೆ ದಯೆಯು ಉಕ್ಕಿ ಬಂದಿತು. ಎಂದೇ ಬ್ರಹ್ಮನ ಭವನಕ್ಕೆ ಅವರೆಲ್ಲರೂ ಹೋದರು. ಅಲ್ಲಿ ಪಿತಾಮಹನನ್ನು, ಎಂದರೆ ಬ್ರಹ್ಮನನ್ನು, ಕಂಡರು. ಆಸೀನನಾಗಿದ್ದ ಆತನ ಸುತ್ತಲೂ ದೇವತೆಗಳು, ಬ್ರಹ್ಮರ್ಷಿಗಳು, ಸಿದ್ಧರು ಇದ್ದರು.

ಅಲ್ಲಿಯೇ ಮಹಾದೇವನೂ, ಅಗ್ನಿ-ವಾಯುಗಳೂ, ಚಂದ್ರ-ಸೂರ್ಯರೂ, ಇಂದ್ರ-ಪರಮೇಷ್ಠಿಗಳೂ ಇದ್ದರು. ವೈಖಾನಸರು, ವಾಲಖಿಲ್ಯರು, ಮುಂತಾದ ಮಹರ್ಷಿಗಳು ದೀನರಾಗಿ ಅಲ್ಲಿಗೆ ಆಗಮಿಸಿದರು. ಸುಂದೋಪಸುಂದರ ಕೃತ್ಯಗಳನ್ನೆಲ್ಲವನ್ನೂ ಹೇಳಿದರು. ಅವರಿಬ್ಬರು ಮಾಡಿದ ಸೂರೆ, ಎಸಗಿದ ದುಷ್ಕೃತ್ಯಗಳು, ಅದನ್ನು ಮಾಡಿದ ಕ್ರಮ - ಇದೆಲ್ಲವನ್ನೂ ಪಿತಾಮಹನಿಗೆ ತಿಳಿಸಿದರು.

ಆಗ ದೇವತೆಗಳೂ ಪರಮರ್ಷಿಗಳೂ ಅದೇ ವಿಷಯವನ್ನೇ ಮುಂದಿಟ್ಟುಕೊಂಡು ಬ್ರಹ್ಮನನ್ನು ಪ್ರೇರಿಸಿದರು.ಆಗ ಬ್ರಹ್ಮನು ಅವರೆಲ್ಲರ ಮಾತನ್ನು ಕೇಳಿದನು. ಕ್ಷಣಕಾಲ ಯೋಚಿಸಿದನು. ತನ್ನ ಕರ್ತವ್ಯವನ್ನು ನಿಶ್ಚಯಿಸಿದನು. ಅವರಿಬ್ಬರ ಸಂಹಾರವನ್ನು ಕುರಿತಾಗಿ ಚಿಂತಿಸಿದನು; ವಿಶ್ವಕರ್ಮನನ್ನು ಬರಮಾಡಿಕೊಂಡನು. ವಿಶ್ವಕರ್ಮನು ಬರಲಾಗಿ, ಬ್ರಹ್ಮನು ಆತನಿಗೆ ಆದೇಶವಿತ್ತನು. "ಮನಸ್ಸನ್ನು ಸೂರೆಗೊಂಡುಬಿಡುವಂತಹ ತರುಣಿಯೊಬ್ಬಳನ್ನು ಸೃಷ್ಟಿಮಾಡು" - ಎಂದನು.

ಆಗ ಆ ವಿಶ್ವಕರ್ಮನು ಹಾಗೆಯೇ ಮಾಡಿದನು. ಮೂರೂ ಲೋಕಗಳಲ್ಲಿ ಸ್ಥಾವರವೋ ಜಂಗಮವೋ, ಎಂದರೆ ಚಲನವಿಲ್ಲದವೋ, ಚಲನವುಳ್ಳವೋ, ಅದಾವುದೇ ಜೀವಿಯಿರಲಿ, ಅವಲ್ಲಿ ಯಾವಯಾವದು ದರ್ಶನೀಯವೋ, ಅದದೆಲ್ಲವನ್ನೂ ಈ ಶರೀರದಲ್ಲಿ ಸಂಗ್ರಹ ಮಾಡಿಟ್ಟನು. ಅವಳ ಶರೀರದಲ್ಲಿ ಕೋಟಿಗಟ್ಟಲೆ ರತ್ನಗಳನ್ನು ಸಮಾವೇಶಗೊಳಿಸಿದನು. ಸರ್ವ-ರತ್ನ-ರಾಶಿಮಯಿಯಾದ ಆ ನಾರಿಯನ್ನು ದೇವ-ರೂಪಿಣಿಯಾಗಿ ಸೃಷ್ಟಿಸಿದನು. ಮಹಾ-ಪ್ರಯತ್ನದಿಂದ ವಿಶ್ವಕರ್ಮನು ಅವಳನ್ನು ಸೃಷ್ಟಿಸಿದನಲ್ಲವೇ? ಎಂದೇ, ಮೂರೂ ಲೋಕಗಳ ನಾರಿಯರಲ್ಲಿ ಅವಳು ಅಪ್ರತಿಮಳೆನಿಸಿದಳು. ಅವಳ ಶರೀರದಲ್ಲಿ ರೂಪ-ಸಂಪತ್ತಿನಿಂದ ಕೂಡಿರದ ಒಂದು ಸೂಕ್ಷ್ಮವಾದ ಎಡೆಯೂ ಇರಲಿಲ್ಲ.

ಹಾಗೂ ಅವಳತ್ತ ಎಲ್ಲಿಯೇ ದೃಷ್ಟಿಬೀರಿದರೂ ಅದು ಅಲ್ಲಿ ನೆಡದಿರುವಂತಿರಲಿಲ್ಲ. ಕಾಮರೂಪಳಾದ, ಎಂದರೆ ಇಷ್ಟಪಟ್ಟ ರೂಪವನ್ನು ಧರಿಸಬಲ್ಲ, ಲಕ್ಷ್ಮಿಯೇ ಮೈತಾಳಿಬಂದಂತಿದ್ದಳು, ಆಕೆ!

ಸೂಚನೆ : 30/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.