Tuesday, July 2, 2024

ಯಕ್ಷ ಪ್ರಶ್ನೆ96 (Yaksha prashne 96)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ –  95 ಋಷಿಗಳು ಹೇಳಿದ ಸ್ಥೈರ್ಯ ಯಾವುದು ?

ಉತ್ತರ - ಸ್ವಧರ್ಮದಲ್ಲಿ ಇರುವುದೇ ಸ್ಥೈರ್ಯ. 

ಈ ಪ್ರಶ್ನೆಯಲ್ಲಿ ಯಕ್ಷನು ಸ್ಥೈರ್ಯ ಅಥವಾ ಧೈರ್ಯ ಎಂದರೇನು ? ಎಂಬ ಬಗ್ಗೆ ವಿವರಣೆಯನ್ನು ಕೇಳಿದಂತಿದೆ. ಅದಕ್ಕೆ ಧರ್ಮಜ ಉತ್ತರ ಸ್ಪಷ್ಟವಾಗಿದೆ. ಸ್ವಧರ್ಮದಲ್ಲಿ ಇರುವುದೇ ಧೈರ್ಯ ಎಂಬುದು. ಹಾಗಾಗಿ ಇಲ್ಲಿ ನಾವು ಅತಿಮುಖ್ಯವಾಗಿ ಗಮನಿಸಬೇಕಾದುದು ಸ್ವಧರ್ಮದ ವಿಷಯವನ್ನು. 'ಸ್ವಧರ್ಮ' ಎಂಬ ವಿಷಯ ಅರ್ಥವಾದರೆ ಅದರಿಂದ ಧೈರ್ಯ ಹೇಗೆ ಸಾಧ್ಯವಾಗಬಹುದು ಎಂಬುದೂ ಅರಿವಿಗೆ ಬರುತ್ತದೆ. ಹಾಗಾದರೆ ಸ್ವಧರ್ಮ ಎಂದರೇನು? 

ಸ್ವಧರ್ಮ ಎಂದರೆ ಅದರದರ ಧರ್ಮ ಎಂದರ್ಥ. ಇಲ್ಲಿ ಧರ್ಮ ಎಂಬ ಶಬ್ದಕ್ಕೆ ಅದರದರ ನೈಜಸ್ವಭಾವ ಅಥವಾ ಸ್ವರೂಪ ಅಥವಾ ಕಂಡೀಶನ್. ಆದ್ದರಿಂದ ಪ್ರತಿಯೊಂದು ಪ್ರದಾರ್ಥ ಅಥವಾ ವಸ್ತುವಿನ ಸ್ವಭಾವದ ಪರಿಚಯವಾಗಬೇಕಾದುದು ಅನಿವಾರ್ಯವಷ್ಟೆ. ಪದಾರ್ಥವನ್ನು ಸೃಷ್ಟಿ ಮಾಡುವಾಗ ಪದಾರ್ಥಕ್ಕೆ ಯಾವ ಉದ್ದೇಶವಿತ್ತೋ, ಅದನ್ನು ಪೂರ್ಣ ಮಾಡುವಂತಿದ್ದರೆ ಅದು ಅದರದರ ಸಹಜತೆಯಲ್ಲಿದೆ ಎಂದರ್ಥ. ಹಾಗಿದ್ದಾಗ ಮಾತ್ರ ಆ ವಸ್ತುವಿನಿಂದ ನಮ್ಮ ಉದ್ದೇಶಿತವಾದ ಕಾಮನೆ ಈಡೇರುತ್ತದೆ. ಇದಕ್ಕೆ ಕಾರಣವಿಷ್ಟೇ ಅದು ಸ್ವಧರ್ಮದಲ್ಲಿ ಎಂಬುದು. 

ಋಷಿಗಳು ಯಾವ ಬಗೆಯ ಸ್ವಧರ್ಮವನ್ನು ಯಾವುದಕ್ಕೆ ಹೇಳಿದ್ದಾರೆ? ಎಂಬುದಕ್ಕೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಮಾತು ಪುಷ್ಟಿಯನ್ನು ಕೊಡುತ್ತದೆ. "ಶ್ರೇಯಾನ್ ಸ್ವಧರ್ಮಃ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್" - ತನ್ನ ತನ್ನ ಧರ್ಮವನ್ನು ಆಚರಿಸುವುದರಲ್ಲಿ ಉಂಟಾಗುವ ಸ್ವಲ್ಪ ದೋಷವಾದರೂ ಪರಧರ್ಮದ ಆಚರಣೆಯ ಬಹುಗುಣಕ್ಕಿಂತಲೂ ಉತ್ತಮ" ಎಂಬುದಾಗಿ. ಮಾನವನ ಮುಖ್ಯಧ್ಯೇಯವೆಂದರೆ ಮೋಕ್ಷ. ಇದಕ್ಕೆ ಸಾಧನೀಭೂತವಾದ ಯಾವೆಲ್ಲ ವಿಷಯಗಳಿವೆಯೋ ಅವೆಲ್ಲವೂ ಅದದರ ಸಹಜತೆಯಲ್ಲಿ ಇರಬೇಕಾಗುತ್ತದೆ. ಅತ್ಯಂತ ಮುಖವಾದ ಸಾಧನವೆಂದರೆ ನಮ್ಮ ಶರೀರವಾಗಿದೆ. ಮಾನವಶರೀರವನ್ನೇ ಬಳಸಿಕೊಂಡು ಇದೇ ಜನ್ಮದಲ್ಲೇ ಮೋಕ್ಷವನ್ನು ಸಾಧಿಸಬೇಕಾಗಿದೆ.  ಹಾಗಾಗಿ ಈ ಶರೀರವು ಅದರ  ಕಂಡೀಶನ್ನಲ್ಲಿ ಇರುವುದರ ಬಗ್ಗೆ ವಿವರಣೆಯನ್ನು ಕೊಟ್ಟಿದ್ದನ್ನು ಶ್ರೀರಂಗ ಮಹಾಗುರುಗಳು ಆಯುರ್ವೇದದಲ್ಲಿ ಹೇಳಿರುವ ಒಂದು ಶ್ಲೋಕವನ್ನು ಹೇಳುತ್ತಿದ್ದರು. ಅದಾವುದೆಂದರೆ " ಸಮದೋಷಃ ಸಮಾಗ್ನಿಶ್ಚ ಸಮಧಾತುಮಲಕ್ರಿಯಃ । ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ" ಎಂದು. ವಾತ ಪಿತ್ತ ಕಫಗಳೆಂಬ ಮೂರು ಬಗೆಯ ದೋಷಗಳಿಂದ ಕೂಡಿದೆ ಈ ದೇಹ. ಈ ಮೂರರ ಯಾವುದೋ ಬಗೆಯ ಕಾಂಬಿನೇಶನ್ ಇದ್ದರೆ ಮಾತ್ರ ಆ ವ್ಯಕ್ತಿ ಆರೋಗ್ಯವಾಗಿರುತ್ತಾನೆ. ಇವುಗಳಲ್ಲಿ ಯಾವುದೊಂದು ವ್ಯತ್ಯಯವಾದರೂ ಅನಾರೋಗ್ಯ ಉಂಟಾಗುತ್ತದೆ. ವಾತ ಪಿತ್ತ ಕಫದಿಂದ ಬರುವ ರೋಗಗಳು ಶರೀರದ ಆರೋಗ್ಯದ ಸ್ಥಿತಿಯನ್ನು ಹಾನಿ ಮಾಡುತ್ತದೆ. ಅಷ್ಟೇ ಅಲ್ಲ ಮಾನಸಿಕ ಆರೋಗ್ಯವನ್ನೂ ನಾಶ ಮಾಡುತ್ತದೆ. ಶರೀರರವೇ ಧರ್ಮಸಾಧನೆಗೆ ಅತಿಮುಖ್ಯವಾದ ಸಲಕರಣೆ ತಾನೆ! ಶರೀರವು ಮನಸ್ಸು ಇಂದ್ರಿಯ ಬುದ್ಧಿ ಆತ್ಮ ಇವೆಲ್ಲದರ ಸಮಷ್ಟಿರೂಪವಾದುದು. ಇವೆಲ್ಲದರ ಸ್ವಧರ್ಮಸ್ಥಿತಿಯೇ ಆರೋಗ್ಯ ಎನ್ನಲಾಗಿದೆ.  ಯಾವ ವ್ಯಕ್ತಿ ಆರೋಗ್ಯವಂತನಾಗಿರುತ್ತಾನೋ ಆತ ಯಾವ ಕಾರ್ಯವನ್ನು ಬೇಕಾದರೂ ಮಾಡಬಹುದು. ಆ ಕಾರ್ಯಕ್ಕೆ ಬೇಕಾದ ಎಲ್ಲಾ ಬಗೆಯ ಅನುಕೂಲತೆಗಳು ಒದಗಿಬರುತ್ತವೆ. ಆಗ ತಾನೆ ಧೈರ್ಯವು ಬರುತ್ತದೆ. ಧೈರ್ಯವೆಂದರೆ ಸ್ಥಿರವಾದ ಬುದ್ಧಿಯಷ್ಟೇ. ಆರೋಗ್ಯವೇ ಸ್ಥಿರತೆ. ಸ್ವಧರ್ಮವೇ ಸ್ಥಿರತೆ. 

ಸೂಚನೆ : 30/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.