Monday, July 15, 2024

ಯಕ್ಷ ಪ್ರಶ್ನೆ 98(Yaksha prashne 98)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ –  97 ಶ್ರೇಷ್ಠವಾದ ಸ್ನಾನ ಯಾವುದು ?

ಉತ್ತರ - ಮನಸ್ಸಿನ ಕೊಳೆ ತೊಳೆಯುವುದು. 

ಮಾನವನ ಮನಸ್ಸಿಗೆ ಬಹಳ ಸಾಮರ್ಥ್ಯವಿದೆ. ಮನಸ್ಸಿನ ಕಾರಣದಿಂದಲೇ ಮಾನವ ಎಂಬ ಹೆಸರನ್ನು ಪಡೆದದ್ದು.  ಆದರೆ ಅದು ಶುದ್ಧವಾಗಿರಬೇಕು. ಮನಸ್ಸು ಶುದ್ಧವಾಗಿರುವುದು ಎಂದರೇನು? ಯಾವುದೇ ಪದಾರ್ಥದಿಂದಲೂ ಪೂರ್ಣಪ್ರಯೋಜನವಾಗಬೇಕಾದರೆ ಅದು ಶುದ್ಧವಾಗಿಯೇ ಇರಬೇಕಷ್ಟೆ. ಮನಸ್ಸು ಶುದ್ಧವಾಗಿರುವುದು ಎಂದರೇನು? ಇಂತಹ ಶುದ್ಧತೆ ಯಾವುದರಿಂದ ಬರುತ್ತದೆ ಎಂಬುದು ಯಕ್ಷನ ಪ್ರಶ್ನೆಯಾಗಿದೆ. ಸ್ನಾನದಿಂದ ಮನಸ್ಸಿನ ಕೊಳೆಯನ್ನು ತೊಳೆಯಬಹುದು ಎಂಬ ಉತ್ತರ ಧರ್ಮರಾಜನದ್ದು.  

ಸ್ನಾನ ಮಾಡುವುದರಿಂದ ಹೇಗೆ ಮನಸ್ಸು ಶುದ್ಧವಾಗುತ್ತದೆ? ಬಾಹ್ಯಸ್ನಾನ ಮತ್ತು  ಬಗೆಯ ಆಂತರಸ್ನಾನ ಎಂಬುದಾಗಿ  ಎರಡು ಬಗೆಯ ಸ್ನಾನಗಳಿವೆ. ಅಷೇ ಅಲ್ಲದೆ ಸಪ್ತವಿಧವಾದ ಸ್ನಾನವನ್ನೂ ಸ್ನಾನವಿಧಿಯಲ್ಲಿ ಹೇಳಲಾಗಿದೆ.  ಎಲ್ಲಾ ಬಗೆಯ ಸ್ನಾನಗಳ ಉದ್ದೇಶ ಮಾನಸಿಕ ಶುದ್ಧಿ. ಇಂದ್ರಿಯಗಳಲ್ಲಿ ಮನಸ್ಸು ಮುಖ್ಯವಾದುದು. ಅದಕ್ಕೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಇಂದ್ರಿಯಾಣಾಂ ಮನಶ್ಚಾಸ್ಮಿ' ಎಂದು ಹೇಳುವಷ್ಟು ಉತ್ಕೃಷ್ಟ. ಹಾಗಾಗಿ ಈ ಎಲ್ಲಾ ಬಗೆಯ ಸ್ನಾನಗಳಿಂದಲೂ ಮಾನಸಿಕವಾದ ಶುದ್ಧಿಯೇ ಅಗತ್ಯವಾಗಿ ಆಗಬೇಕಾದುದು. ಸ್ನಾನಕ್ಕೂ ಮನಸ್ಸಿನ ಶುದ್ಧಿಗೂ ಏನು ಸಂಬಂಧವಿದೆ? ಎಂದರೆ ಮನಸ್ಸನ್ನು ಶುದ್ಧಿಗೊಳಿಸುವ ಸ್ನಾನವೂ ಇದೆ ಮತ್ತು  ಶರೀರದ ಬೇರೆ ಬೇರೆ ಅಂಗಗಳನ್ನು ಶುದ್ಧಿಗೊಳಿಸುವುದರಿಂದಲೂ ಮನಸ್ಸು ಶುದ್ಧಿಗೊಳ್ಳುತ್ತದೆ. ಆದ್ದರಿಂದ ಮಾನಸಿಕವಾದ ಶುದ್ಧಿಯು, ಬಾಹ್ಯ ಮತ್ತು ಅಂತರಂಗದ ಸ್ನಾನದಿಂದಲೂ ಶುದ್ಧವಾಗುತ್ತದೆ ಎಂಬುದರಲ್ಲಿ ವಿವಾದವಿಲ್ಲ. 

ಮಾಂತ್ರ, ಭೌಮ, ಆಗ್ನೇಯ, ವಾಯವ್ಯ, ದಿವ್ಯ, ವಾರುಣ, ಮಾನಸ ಎಂಬುದಾಗಿ ಏಳು ಬಗೆಯ ಸ್ನಾನಗಳಿವೆ. ಶುದ್ಧಿಗೆ ಸಂಬಂಧಿಸಿದ  ಮಂತ್ರಗಳನ್ನು ಉಚ್ಚರಿಸುವುದರಿಂದ ಉಂಟಾಗುವ ಶುದ್ಧಿಗೆ ಮಾಂತ್ರಸ್ನಾನವೆಂದು ಕರೆಯುತ್ತಾರೆ. ಮಣ್ಣು ಮೊದಲಾದ ಭೂಮಿಗೆ ಸಂಬಂಧಪಟ್ಟ ಪದಾರ್ಥಗಳನ್ನು ಬಳಸಿ ಮಾಡುವ ಶುದ್ಧಿಗೆ ಭೌಮಸ್ನಾನ ಎಂದು ಕರೆಯುತ್ತಾರೆ.  ಭಸ್ಮ ಅಥವಾ ಬೆಂಕಿಯ ಶಾಖವನ್ನು ಬಳಸುವ ವಿಧಾನಕ್ಕೆ ಆಗ್ನೇಯಸ್ನಾನವೆಂದು ಕರೆಯುತ್ತಾರೆ. ಗೋವಿನ ಧೂಳಿನ ಕಣಗಳು ಮೈಯ ಬೀಳುವ  ಸ್ನಾನವೇ ವಾಯವ್ಯಸ್ನಾನ. ಗೋವು ಸಂಚರಿಸುವಾಗ ಧೂಳನ್ನು ಎಬ್ಬಿಸುತ್ತದೆ. ಆಗ ಆ ಧೂಳು ಮೈಗೆ ಸೋಕಿದರೆ ಅದೇ ವಾಯವ್ಯಸ್ನಾನವಾಗುತ್ತದೆ. ಸೂರ್ಯನ ಕಿರಣಗಳು ಮೈಗೆ ತಾಕುವಂತೆ ಮಾಡಿಕೊಳ್ಳುವುದು ದಿವ್ಯಸ್ನಾನ ಎನ್ನಬಹುದು. ನೀರಿನಲ್ಲಿ ಮುಳುಗಿ ಮಾಡುವ ಸ್ನಾನಕ್ಕೆ ವಾರುಣಸ್ನಾನ ಎನ್ನುತ್ತಾರೆ. ವಿಷ್ಣು ಅಥವಾ ಅವರವರ ಇಷ್ಟದ ದೇವತೆಗಳನ್ನು ಚಿಂತಿಸುವುದು ಅಥವಾ ಧ್ಯಾನಿಸುವುದು, ಪೂಜಿಸುವುದನ್ನೇ ಮಾನಸಸ್ನಾನ ಎಂದು ಕರೆಯಲಾಗುತ್ತದೆ.  ಈ ಏಳು ವಿಧವಾದ ಸ್ನಾನಗಳಲ್ಲಿ ನೇರವಾಗಿ ಮನಸ್ಸನ್ನು ಶುದ್ಧಿಗೊಳಿಸುವುದು ಧ್ಯಾನ ಪೂಜೆ ಮೊದಲಾದ ಮಾನಸಸ್ನಾನದಿಂದ. ಹಾಗಾಗಿ ಎಲ್ಲಾ ಸ್ನಾನಕ್ಕಿಂತಲೂ ಮಾನಸಸ್ನಾನ ಅತ್ಯಂತ ಶ್ರೇಷ್ಠವಾಗಿದೆ. ಆದರೆ ಉಳಿದ ಸ್ನಾನಗಳು ಶರೀರದ ಬೇರೆ ಬೇರೆ ಅಂಗಗಳನ್ನು ಶುದ್ಧಿಗೊಳಿಸುವ ಮೂಲಕ ಮನಸ್ಸಿನ ಕೊಳೆಯನ್ನು ತೊಳೆಯುತ್ತವೆ. ಬಾಹ್ಯಶುದ್ಧಿಯಿದ್ದವನಿಗೆ ಅಂತಃಶುದ್ಧಿ ತುಂಬಾ ಸುಲಭ. ಬಾಹ್ಯಶುದ್ಧಿ  ಇಲ್ಲದಿದ್ದರೆ ಮನಸ್ಸು ಬೇಗ ಮಲಿನಗೊಳ್ಳುತ್ತದೆ. ಏಕೆಂದರೆ ಬಾಹ್ಯ ಇಂದ್ರಿಯಗಳಿಂದಲೇ ಮನಸ್ಸು ಶುದ್ಧ ಅಥವಾ ಅಶುದ್ಧ ಅರಿವನ್ನು ಪಡೆಯುತ್ತದೆ. ಕೆಟ್ಟದ್ದನ್ನು ನೋಡಿದರೆ ಅದರ ಜ್ಞಾನಕ್ಕೆ ಕೇವಲ ಕಣ್ಣುಮಾತ್ರ ಕಾರಣವಲ್ಲ. ಅಲ್ಲಿ ಮನಸ್ಸೂ ಬೇಕೇಬೇಕು. ನೋಡಿದ್ದರ ಪರಿಣಾಮ ಮನಸ್ಸಿನ ಮೇಲೂ ಬೀಳಲೇಬೇಕು. ಹಾಗಾಗಿ ಈ ಎಲ್ಲಾ ಬಗೆಯ ಸ್ನಾನಗಳೂ ಮಾನಸ್ಸಿನ ಕೊಳೆಯನ್ನು ತೊಳೆಯಲು ಸಾಧ್ಯ. ಇಲ್ಲಿ ಕೊಳೆ ಎಂದರೆ ಸಲ್ಲದ  ಚಿಂತನೆ. ಶುದ್ಧಿ ಎಂದರೆ ಸದ್ವಿಚಾರ ಚಿಂತನೆ. ಯಾವುದರಿಂದ ಸದ್ವಿಚಾರಚಿಂತನೆಯಾಗುತ್ತದೆಯೋ ಅದನ್ನು ಮಾನಸಸ್ನಾನ ಎಂದು ಕರೆಯಬಹುದು. ಅಂತಹ ಚಿಂತನೆಯಿಂದ ಮಾತ್ರವೇ ಮನಸ್ಸಿನ ಮಾಲಿನ್ಯ ದೂರವಾಗುತ್ತದೆ. 

ಸೂಚನೆ : 15
/7/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.