Monday, July 29, 2024

ವ್ಯಾಸ ವೀಕ್ಷಿತ 99 ಗೋ-ಬ್ರಾಹ್ಮಣ ರಕ್ಷಣೆಗಾಗಿ ಅರ್ಜುನನ ಯತ್ನ (Vyasa Vikshita99 Go-Brahmana Rakshanegagi Arjunana Yatna)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




"ನಮ್ಮ ನೆಲೆಯಿಂದ ಗೋವುಗಳನ್ನು ಕದ್ದೊಯ್ಯುತ್ತಿದ್ದಾರೆ! ಓಡಿ ಕಾಪಾಡಿ! ಶಾಂತ-ಸ್ವಭಾವದ ಬ್ರಾಹ್ಮಣನ ಹವಿಸ್ಸನ್ನು ಕಾಗೆಗಳು ಲಪಟಾಯಿಸುತ್ತಿವೆ! ಸಿಂಹದ ಶೂನ್ಯ-ಗುಹೆಯನ್ನು ನೀಚನರಿಯು ಹಾಳುಗೆಡವುತ್ತಿದೆ! ರಾಜನು ಬಲಿ-ಷಡ್ಭಾಗ-ಹಾರಿ - ಎಂದರೆ ತಮ್ಮ ಸಂಪಾದನೆಯ ಆರನೆಯ ಒಂದರಷ್ಟು ಭಾಗವನ್ನು ಕರವಾಗಿ ವಸೂಲಿಮಾಡತಕ್ಕವನು; ಹಾಗಿದ್ದೂ ಜನರನ್ನು ರಕ್ಷಿಸನೆಂದರೆ ಆತನು ಸರ್ವ-ಲೋಕಕ್ಕೂ ಪಾಪವನ್ನಾಚರಿಸುತ್ತಿದ್ದಾನೆಂದೇ! ಇಲ್ಲಿ ಚೋರರು ಕದಿಯುತ್ತಿರುವುದು ಬ್ರಹ್ಮ-ಸ್ವವನ್ನು, ಎಂದರೆ ಬ್ರಾಹ್ಮಣನ ಸೊತ್ತನ್ನು. ಇದರಿಂದಾಗಿ ಧರ್ಮ-ಕಾರ್ಯಕ್ಕೆ ಲೋಪವಾಗುತ್ತಿದೆ. ಎಂದೇ ನಾನು ಗೋಳಾಡುತ್ತಿದ್ದೇನೆ. ತನ್ನಿಮಿತ್ತ ಅಸ್ತ್ರ-ಧಾರಣೆಯನ್ನು ಮಾಡಿರಿ!" - ಈ ರೀತಿಯಾಗಿ ಹತ್ತಿರದಲ್ಲಿಯೇ ಬ್ರಾಹ್ಮಣನೊಬ್ಬನು ಅರಚಿಕೊಳ್ಳುತ್ತಿದ್ದನು.

ಅರ್ಜುನನಿಗೆ ಇದು ಕೇಳಿಸಿತು. "ಹೆದರಬೇಡ" ಎಂದು ಬ್ರಾಹ್ಮಣನಿಗೆ ಒಡನೆಯೇ ಹೇಳಿದನು. ಆದರೇನು? ಪಾಂಡವರ ಆಯುಧಗಳು ಎಲ್ಲಿದ್ದವೋ ಅಲ್ಲಿಯೇ ಇದ್ದಾನೆ ಯುಧಿಷ್ಠಿರ, ಕೃಷ್ಣೆಯೊಂದಿಗೆ!

ಹೀಗಾಗಿ ಅಲ್ಲಿಗೆ ಪ್ರವೇಶ ಮಾಡಲೂ ಶಕ್ತನಾಗಲಿಲ್ಲ, ಅರ್ಜುನ; ಹಾಗೆಂದು, ಅಲ್ಲಿಂದ ಹೊರಟು ಹೋಗಲೂ ಆರದಾದ! ಆದರೆ ಇತ್ತ ಆ ಆರ್ತನಾಗಿರುವ, ಎಂದರೆ ಕಷ್ಟದಲ್ಲಿ ಸಿಲುಕಿರುವ, ಬ್ರಾಹ್ಮಣನು ಮತ್ತೆ ಮತ್ತೆ ಕೇಳುತ್ತಲೇ ಇದ್ದಾನೆ!

ಆತನು ಯಾವಾಗ ಆ ರೀತಿಯಲ್ಲಿ ಆಕ್ರಂದನ ಮಾಡಿದನೋ ಆಗ ದುಃಖಿತನಾದ ಅರ್ಜುನನು ಈ ರೀತಿಯಾಗಿ ಆಲೋಚಿಸಿದನು:

"ಈ ಬ್ರಾಹ್ಮಣನು ತಪಸ್ವಿ, ಬಡಪಾಯಿ. ಆತನ (ಏಕೈಕ)ಧನವಾದ ಗೋವಿನ ಅಪಹರಣವಾಗುತ್ತಿದೆ. ಹೀಗಿರಲು ಆತನ ಕಣ್ಣೀರನ್ನು ಒರೆಸುವುದು ನಿಶ್ಚಯವಾಗಿಯೂ ನನ್ನ ಕರ್ತವ್ಯವೇ ಸರಿ. ರಾಜ-ದ್ವಾರದಲ್ಲಿ ಅಳುತ್ತಿರುವ ಈತನ ರಕ್ಷಣವನ್ನು ನಾನೀಗ ಮಾಡದಿದ್ದಲ್ಲಿ, ಅತನನ್ನು ಉಪೇಕ್ಷೆ ಮಾಡಿದ ಅಧರ್ಮವು ಯುಧಿಷ್ಠಿರ ಮಹಾರಾಜನನ್ನೇ ಸುತ್ತಿಕೊಳ್ಳುವುದು! ಆರ್ತನಾಗಿರುವವನ ರಕ್ಷಣೆಯನ್ನು ನಾವು ಮಾಡಲಿಲ್ಲವೆಂಬ ಮಾತೂ ಬಂದು, ನಾವು ಮಾಡಬೇಕಾದ ರಕ್ಷಣೆಯ ವಿಷಯದಲ್ಲಿ ಜನಕ್ಕೆ ಆಸ್ಥೆಯೂ ಕಳೆದುಹೋಗುವುದು; ಜೊತೆಗೆ ನಮಗೂ ಅಧರ್ಮವು ಅಂಟಿಕೊಳ್ಳುವುದು.

ಆದರೆ ರಾಜನಿರುವುದನ್ನು ಗಣನೆಗೆ ತೆಗೆದುಕೊಳ್ಳದೆ ನಾನು ಅಲ್ಲಿಗೆ ಪ್ರವೇಶ ಮಾಡಿದೆನಾದರೆ, ಅಜಾತ-ಶತ್ರುವೆನಿಸುವ ಯುಧಿಷ್ಠಿರನ ವಿಷಯದಲ್ಲಿ ನಾನು ನಡೆದುಕೊಂಡದ್ದು ಕೊಟ್ಟಮಾತಿಗೆ ತಪ್ಪುವಂತಾಗುವುದು. ಆದರೆ ನಾನು ಒಳಹೊಕ್ಕೆನಾದರೆ ವನವಾಸವನ್ನು ನಾನು ಮಾಡಬೇಕಾಗುವುದು. ಹೀಗಾಗಿ ಮಹಾರಾಜನಿಗೆ ತಿರಸ್ಕಾರವೆಂಬಂಶವನ್ನುಳಿದು ಮಿಕ್ಕ ಅಂಶಗಳು ಉಪೇಕ್ಷಣೀಯ. ಆಯಿತು, ಈಗ ನನ್ನಿಂದ ನಿಯಮ-ಭಂಗರೂಪವಾದ ತಪ್ಪೇ ಆಗುವುದಾದಲ್ಲಿ ಆಗಲಿ. ಕೊನೆಗೆ ನಾನು ಕಾಡಿಗೆ ಹೋಗಿ ಅಲ್ಲೇ ಸಾಯುವಂತಾದರೂ ಆಗಲಿ. ಈ ಶರೀರದ ವಿನಾಶವಾಗಿಯೂ, ಅದರಿಂದ ಧರ್ಮವು ಉಳಿಯುವುದಾದರೆ ಅದುವೇ ಹೆಚ್ಚೆನಿಸುವುದು".

ಹೀಗೆ ವಿನಿಶ್ಚಯವನ್ನು ಮಾಡಿಕೊಂಡ ಅರ್ಜುನನು ದ್ರೌಪದಿ-ಯುಧಿಷ್ಠಿರರಿದ್ದೆಡೆಗೇ ಹೋದವನಾಗಿ, ರಾಜನನ್ನು ಕೇಳಿ ಧನುಸ್ಸನ್ನು ಪಡೆದು, ಹೊರಬಂದವನೇ ಬ್ರಾಹ್ಮಣನನ್ನು ಕುರಿತು ಈ ಮಾತನ್ನು ಹೇಳಿದನು.

"ಬ್ರಾಹ್ಮಣನೇ, ಬೇಗನೆ ಬರಬೇಕು. ಮತ್ತೊಬ್ಬರ ಸೊತ್ತನ್ನು ಬಯಸುವ ಆ ಕ್ಷುದ್ರರು ದೂರ ಹೋಗಿಬಿಡುವಷ್ಟರಲ್ಲಿ, ಇಬ್ಬರೂ ಒಟ್ಟಿಗೆ ಅವರಲ್ಲಿಗೆ ಹೋಗೋಣ. ಅಪಹೃತವಾದ ನಿನ್ನ ಸೊತ್ತನ್ನು ಕಳ್ಳರ ಕೈಯಿಂದ ಬಿಡಿಸಿಕೊಡುತ್ತೇನೆ" ಎಂದು.

ಆಮೇಲೆ ಆ ಮಹಾ-ಬಾಹುವು ಕವಚವನ್ನು ಧರಿಸಿ, ಧನುರ್ಧಾರಿಯಾಗಿ ಧ್ವಜ-ಯುತವಾದ ರಥದಲ್ಲಿ ಕುಳಿತು ಹೊರಟನು.

ಆ ಕಳ್ಳರನ್ನು ಬಾಣಗಳಿಂದ ಘಾಸಿಗೊಳಿಸಿದನು; ಆ ಗೋ-ಧನವನ್ನು ಗೆದ್ದುತಂದನು. ಆ ಬ್ರಾಹ್ಮಣನಿಗೆ ಅದನ್ನಿತ್ತು ಆತನನ್ನು ಸಂತೋಷಪಡಿಸಿದನು.

ಸೂಚನೆ : 28/7/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.