Sunday, July 7, 2024

ಸ ಶೋಚತಿ ಫಲಾಗಮೇ (Astaksari 62 Sa Shochati Phalagame)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)






ಆಧುನಿಕ ವಿಜ್ಞಾನದ ವಿಷಯದಲ್ಲಿ ಜನರಿಗೆ ವಿಶೇಷವಾದ ನೆಚ್ಚಿಕೆ. ಅದರಲ್ಲಿ ಆಷ್ಟು ನಂಬಿಕೆ ಹುಟ್ಟಿಕೊಳ್ಲಲು ಕಾರಣವೇನು? - ಎಂದರೆ, ಅದರಲ್ಲಿಯ ಕಾರ್ಯ-ಕಾರಣ-ಭಾವದ ಪ್ರಸಿದ್ಧಿಯೇ ಸರಿ.


ಏನು ಕಾರ್ಯ-ಕಾರಣ-ಭಾವವೆಂದರೆ? ಯಾವುದೇ ಕಾರ್ಯದ ಹಿಂದೆಯೂ ಒಂದು ಕಾರಣವಿರಬೇಕು; ಹಾಗೂ ಕಾರಣವೆಂಬುದು ಇದ್ದ ಮೇಲೆ ಕಾರ್ಯವು ಹುಟ್ಟಿಕೊಳ್ಳಲೇಬೇಕು - ಎಂಬ ಲೆಕ್ಕವೇ ಕಾರ್ಯ-ಕಾರಣ-ಭಾವ.


ಹಾಗೆ ಹೇಳಿದ ಮಾತ್ರಕ್ಕೆ ಒಂದು ಕಾರ್ಯಕ್ಕೆ ಒಂದೇ ಕಾರಣವಿರುತ್ತದೆಂದಾಗಲಿ, ಒಂದು ಕಾರಣದಿಂದ ಒಂದೇ ಕಾರ್ಯವು ಘಟಿಸುತ್ತದೆಂದಾಗಲಿ, ಅರ್ಥವಲ್ಲವಷ್ಟೆ. ಮಾವಿನ ಹಣ್ಣು ಕಾರ್ಯವೆಂದರೆ, ಅದಕ್ಕೆ ಮಾವಿನ ಬೀಜವು ಕಾರಣ - ಎನ್ನುವುದು ಸರಿಯೇ. ಆದರೆ ಬೀಜವು ತಾನೇ ಹಣ್ಣಾಗಿಬಿಡುವುದೇ? ಬೀಜದೊಂದಿಗೆ ಮಣ್ಣು, ನೀರು, ಗೊಬ್ಬರ, ಸೂರ್ಯ-ತಾಪ ಇತ್ಯಾದಿಗಳೆಲ್ಲವೂ ಸೇರಿ ತಾನೆ ಕಾರಣ-ಸಾಮಗ್ರಿಯೆನಿಸಿಕೊಳ್ಳುವುದು?


ಮತ್ತು ಈ ಸಮಗ್ರತೆಯಿಂದಾಗಿ ಹಣ್ಣೊಂದೇ ಬಿಡುವುದೆಂದೂ ಅಲ್ಲ; ಕಾಂಡವೇನು, ನೂರಾರು ಎಲೆಗಳೇನು, ಹೂಗಳೇನು - ಇವೆಲ್ಲವೂ ಕಾರ್ಯ-ಸಾಮಗ್ರಿ.


ಫಲಾಪೇಕ್ಷೆಯಿದ್ದಲ್ಲಿ ಮೊದಲು ಹುಟ್ಟಿಕೊಳ್ಳಬೇಕಾದದ್ದು ಬೀಜಾಪೇಕ್ಷೆ. ಯಾವುದೋ ಫಲಕ್ಕೆ ಯಾವುದೋ ಬೀಜವೆಂಬುದು ನಡೆಯುತ್ತದೆಯೇ? ಮಾವಿನ ಹಣ್ಣು ಯಥೇಚ್ಛವಾಗಿ ಬೇಕೆನಿಸಿ, ಬೇವಿನ ಬೀಜವನ್ನು ಬಿತ್ತಿದರಾದೀತೇ?


ಮಾವಿನ ಬೀಜ-ಹಣ್ಣುಗಳು, ಬೇವಿನ ಬೀಜ-ಎಲೆಗಳು - ಇವೆಲ್ಲವೂ ಲೋಕ-ಪ್ರಸಿದ್ಧವಾದವುಗಳು. ಪ್ರತ್ಯಕ್ಷದ ಲೆಕ್ಕಕ್ಕೇ ಸಿಕ್ಕತಕ್ಕವು. ಆದರೆ ಲೋಕ-ವ್ಯವಹಾರದಲ್ಲಿ ಸಹ ಎಲ್ಲೆಡೆ ಬರೀ ಪ್ರತ್ಯಕ್ಷವೇ ನಡೆಯುವುದೇ? ಮಾವಿನ ಬೀಜ, ಮಾವಿನ ಹಣ್ಣುಗಳನ್ನೇ ತೆಗೆದುಕೊಳ್ಳಿ. ಬೀಜವು ವೃಕ್ಷವಾಗುವುದು ಹೇಗೆ? - ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆಂದು ವಿಜ್ಞಾನಿಗಳಾದರೂ ಎದೆತಟ್ಟಿಕೊಂಡು ಹೇಳಬಲ್ಲರೇ?


ಹೀಗೆ ಪ್ರತ್ಯಕ್ಷವಾದ ವಿಷಯಗಳಲ್ಲೂ ನಿಗೂಢತೆಯೆಂಬುದು ಇದ್ದೇ ಇರುತ್ತದೆ. ಸಂಶೋಧನೆ ಮುಂದುವರೆಯುತ್ತಿದ್ದಂತೆ ಹೆಚ್ಚು ಹೆಚ್ಚು ವಿಷಯಗಳು ತಿಳಿದುಬರು(ತ್ತಿರು)ತ್ತವೆಯೆನ್ನುವುದಾದರೂ ಎಲ್ಲವನ್ನೂ ಅರಿತಾಯಿತೆಂಬ ಕಾಲ ಬಂದಿದೆಯೆನ್ನಲಾದೀತೇ? ಅದನ್ನು ವಿಜ್ಞಾನಿಗಳೂ ಇಂದೂ ಮುಂದೂ ಸುಲಭವಾಗಿ ಅಲ್ಲಗಳೆಯಲಾರರಷ್ಟೆ?


ಈ ಕಾರ್ಯ-ಕಾರಣ-ಭಾವವು ಭೌತಿಕ-ಕ್ಷೇತ್ರಕ್ಕೇ ಸೀಮಿತವಾದುದೆಂದೂ ಹೇಳಲಾಗದು. ಅಭೌತವಾದ ಎಡೆಗಳಲ್ಲೂ ಅದಿರುವುದೇ. ಅದಂತೂ ಮತ್ತೂ ಸೂಕ್ಷ್ಮವೇ ಸರಿ. ಯಾವುದು ಆ ಕ್ಷೇತ್ರ? ಧರ್ಮ-ಕರ್ಮಗಳ ಕ್ಷೇತ್ರ. ಕರ್ಮಸಿದ್ಧಾಂತದ ಸಾರಕ್ಕೆ "ಮಾಡಿದ್ದುಣ್ಣೋ ಮಹರಾಯ" ಎಂಬ ಕನ್ನಡದ ನಾಣ್ಣುಡಿಯು ಕನ್ನಡಿ ಹಿಡಿಯುತ್ತದಲ್ಲವೇ? ಸತ್ಕರ್ಮಗಳಿಂದ ಸತ್ಫಲ, ದುಷ್ಕರ್ಮಗಳಿಂದ ದುಷ್ಫಲ - ಎಂಬುದೇ ಕರ್ಮಸಿದ್ಧಾಂತ. ಸತ್ಫಲ-ದುಷ್ಫಲಗಳೆಂದರೆ ಸುಖ- ದುಃಖಗಳೇ.


ಸತ್ಕರ್ಮಗಳೂ ದುಷ್ಕರ್ಮಗಳೂ ಬೀಜದಂತೆ. ಅವುಗಳಿಗೂ ಫಲಬಿಡಲು ಬೇಕಾದ ಸಾಮಗ್ರಿಯು ಒದಗಿ ಬಂದರೆ ಫಲ ಬಿಟ್ಟೇಬಿಡುತ್ತವೆ. ನಾವೆಲ್ಲರೂ ಸುಖವೆಂಬ ಫಲವನ್ನು ಬಯಸುವವರೇ. ಅದಕ್ಕೆ ಅನುಗುಣವಾದ ಕ್ರಿಯೆಯು ನಮ್ಮಲ್ಲಿರಬೇಕಷ್ಟೆ?


ಎಳೆಯ ಮಕ್ಕಳಿಗೂ ಅರ್ಥವಾಗುವ ಈ ಉದಾಹರಣೆಯನ್ನು ಶ್ರೀರಂಗ-ಮಹಾಗುರುಗಳು ಒಮ್ಮೆ ಕೊಟ್ಟಿದ್ದರು: "ಬಾಳೆಯ ಹಣ್ಣು ಬೇಕೆಂಬ ಆಸೆ; ಅದರೆ ಅದರ ವ್ಯವಸಾಯದಲ್ಲಿ ಇಷ್ಟವಿಲ್ಲ - ಎಂಬಂತೆ, ಲೋಕದ ಜೀವ-ಕೋಟಿಗೆ ಧರ್ಮದ ಆಚರಣೆ ಬೇಡವಾಗಿದೆ, ಆದರೆ ಧರ್ಮದ ಫಲ ಬೇಕು" ಎಂದು. ಮತ್ತೊಂದು ಸಂದರ್ಭದಲ್ಲಿ, "ಮರ ಕಡಿದು ಫಲ ಕೇಳಿದರೆ ಸಿಕ್ಕುವುದಿಲ್ಲ. ಧರ್ಮವಿದ್ದರೆ ಉಳಿದದ್ದು" ಎಂದೂ ಎಚ್ಚರಿಸಿದ್ದಾರೆ.


ಕರ್ಮ-ಸಿದ್ಧಾಂತದ ತತ್ತ್ವವನ್ನು ನಿರೂಪಿಸುವಾಗ ಶಾಸ್ತ್ರಕಾರರು ಮಾತ್ರವಲ್ಲ, ಸಾಧಾರಣರ ಸಂಭಾಷಣೆಯಲ್ಲಿಯೂ ಈ ಬೀಜ-ವೃಕ್ಷ-ನ್ಯಾಯವನ್ನು ಬಳಸುವುದಿದೆ. ರಾಮಾಯಣದಲ್ಲಿ ದಶರಥನು ಶೋಕಾತಿರೇಕದಲ್ಲಿ ಮುಳುಗಿರುವಾಗಲೂ ಇದೇ ಉದಾಹರಣೆಯನ್ನೇ ಕೊಡುವುದನ್ನು ನೋಡಬಹುದು.


ದಶರಥನ ಮಾತಿದು: "ಯಾವನಾದರೂ ಮಾವಿನ ತೋಪನ್ನು ಕಡಿದು, ಮುತ್ತುಗದ ಮರಕ್ಕೆ ನೀರೆರೆದು, ಹೂಬಿಟ್ಟಿತಲ್ಲಾ, ಇನ್ನೇನು ಹಣ್ಣುಬಿಡುವುದು! - ಎಂದುಕೊಂಡರೆ ಆದೀತೇ?"


ಮಾತಿನ ಸಂದರ್ಭವಿದು: ರಾಮನು ಸೀತಾ-ಲಕ್ಷ್ಮಣರೊಂದಿಗೆ ಕಾಡಿಗೆ ಹೊರಟು ಆರು ದಿನಗಳು ಕಳೆದಿವೆ. ನಡುರಾತ್ರಿಯೆದ್ದ ದಶರಥನು ಕೌಸಲ್ಯೆಯೊಂದಿಗೆ ತನ್ನ ಹಿಂದಿನ ಕರ್ಮವನ್ನು ತೋಡಿಕೊಳ್ಳುತ್ತಾನೆ: ಹಿಂದೊಮ್ಮೆ ಋಷಿ-ಕುಮಾರನೊಬ್ಬನನ್ನು ಶಬ್ದ-ವೇಧಿ-ಬಾಣದಿಂದ ಕೊಂದು, "ನೀನೂ ಪುತ್ರ-ಶೋಕದಿಂದ ಮರಣ ಹೊಂದು" ಎಂಬ ಶಾಪವನ್ನು ಆತನ ತಂದೆ-ತಾಯಿಗಳಿಂದ ಪಡೆದೆ. ಅದಕ್ಕೇ ಈಗೀ ಶೋಕ! ರಾಮನು ಅಭಿಷಿಕ್ತನಾಗುವುದನ್ನು ಕಣ್ತುಂಬ ನೋಡಿ ಸಂತೋಷಿಸಬೇಕೆಂಬ ಫಲದಿಂದ ವಂಚಿತನಾದೆ. ನನ್ನ ದುಷ್ಕರ್ಮದ ಫಲವಿದು: ವೃಕ್ಷಕ್ಕೆ ಅಪಚಾರವೆಸಗಿದವನು ಫಲಾಗಮ-ಸಮಯದಲ್ಲಿ ಹಲುಬುತ್ತಾನೆ (ಸ ಶೋಚತಿ ಫಲಾಗಮೇ) ಎನ್ನುತ್ತಾನೆ.

ನಮಗಿಲ್ಲಿ ಪಾಠವಿಲ್ಲವೇ?


ಸೂಚನೆ: 06/07/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.