Saturday, December 21, 2024

ಧರ್ಮರಾಜನಿಗೂ ನರಕದರ್ಶನವೇ ? (Dharmarajanigu Narakadarsanave ?)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)



ಕುರುಕ್ಷೇತ್ರ ಯುದ್ಧ ಮುಗಿದಿದೆ. ಪರಮ ಭಾಗವತ ಭೀಷ್ಮಾಚಾರ್ಯರ ಅವಸಾನವೂ ಆಗಿದೆ. ತನ್ನೆಲ್ಲ ಬಂಧು ಮಿತ್ರರೊಡನೆ ದುರ್ಯೋಧನನೂ ಸತ್ತಿದ್ದಾಗಿದೆ. ಒಂದು ಭೀಕರ ಅಧ್ಯಾಯ ಮುಗಿದಂತಾಗಿದೆ.

ಶ್ರೇಷ್ಠ ರಾಜ.

ಆ ಮಹಾಯುದ್ಧದ ನಂತರ ಧರ್ಮರಾಜನ ರಾಜ್ಯಭಾರ ಸುಮಾರು ೩೬ ವರ್ಷಗಳು. ಯಮಧರ್ಮನ ಮಗ. ಕೇಳಬೇಕೇ? ನ್ಯಾಯದಿಂದ ಧರ್ಮದಿಂದ ರಾಜ್ಯವಾಳುವದು ಅವನ ರಕ್ತಗತ ಸ್ವಭಾವವೇ. ಆದರೂ ದ್ರೋಣರ ಶಸ್ತ್ರತ್ಯಾಗಕ್ಕಾಗಿ ಮನಸ್ಸಿನಿಂದ ಒಂದು ಸುಳ್ಳು ಹೇಳಿದ್ದು ಅವನ ಸತ್ಯಪ್ರಜ್ಞೆಯನ್ನು ಕಾಡುತ್ತಿದೆ. ತನ್ನ ಅಧಿಕಾರಾವಧಿಯಲ್ಲಿ ಧರ್ಮಮಯವಾಗಿಯೇ ರಾಜ್ಯವಾಳಿದ್ದಾನೆ. ಪರಮಪ್ರಿಯ  ಶ್ರೀಕೃಷ್ಣನೂ ತನ್ನ ಅವತಾರ ಮಂಗಳವನ್ನು ಮಾಡಿಕೊಂಡಿದ್ದಾನೆ. ಧರ್ಮರಾಜ ಮೊಮ್ಮಗನಿಗೆ ರಾಜ್ಯಾಭಿಷೇಕ ಮಾಡಿ  ತಮ್ಮಂದಿರು, ದ್ರೌಪದಿಯ ಜೊತೆಗೇ ಹಿಮಾಲಯವೇರಿದ್ದಾನೆ. ಒಬ್ಬೊಬ್ಬರೂ ಅವರವರ ಕರ್ಮಾನುಸಾರವಾಗಿ ಬಿದ್ದು ಸತ್ತಿದ್ದಾರೆ. ಸಶರೀರನಾಗಿ ಧರ್ಮಜ ಒಬ್ಬನೇ ಸ್ವರ್ಗ ಸೇರಿದ್ದಾನೆ.

ಸ್ವರ್ಗದ ಬಾಗಿಲಲ್ಲಿ ಆಘಾತ

ಸ್ವರ್ಗದ ಆಸ್ಥಾನಕ್ಕೆ ಪ್ರವೇಶಿಸಿದಾಗ ಅವನಿಗೆ ಆಘಾತ ಕಾದಿತ್ತು. ದುಷ್ಟ ದುರ್ಯೋಧನ ಸ್ವರ್ಗಾರೂಢ. ಏನಾಶ್ಚರ್ಯ! ಅಲ್ಲಿನ ದಿವ್ಯಾಸನದಲ್ಲಿ ತನ್ನ ತಮ್ಮಂದಿರು, ದ್ರೌಪದಿ, ತನಗಾಗಿ ದುಡಿದವರನ್ನೆಲ್ಲ ನಿರೀಕ್ಷಿಸಿದ್ದ. ಅವರ್ಯಾರೂ ಅಲ್ಲಿಲ್ಲ. ದುಷ್ಟ, ವಂಚಕ, ಯಾರಿಂದ ಇಷ್ಟೆಲ್ಲಾ ಬಂಧುಗಳ ವಧೆಯಾಯಿತೋ ಅಂತಹವನು ಸ್ವರ್ಗದಲ್ಲಿ!

ಸಿಟ್ಟೇ ಬಾರದ ಧರ್ಮರಾಜನಿಗೆ ಮಿತಿಮೀರಿದ ಕೋಪ. ಜೊತೆಯಲ್ಲಿದ್ದ ದೇವ ಧೂತನಿಗೆ ಹೇಳಿದ- ಇದೆಂತಹ ನ್ಯಾಯ ದೇವತೆಗಳದ್ದು? ನನಗಾಗಿ ಜೀವಿಸಿದವರು, ಧರ್ಮಕ್ಕಾಗಿ ದುಡಿದವರು,ಮಡಿದವರು ಇಲ್ಲದ ಸ್ವರ್ಗವೇ ನನಗೆ ಬೇಡ. ಅವರೆಲ್ಲ ಎಲ್ಲಿದ್ದಾರೆ ಹೇಳು ಎಂದು ಹೊರಟೇ ಬಿಟ್ಟ. ದೇವಧೂತ ಹಾಗೇ ಮಾಡಿದ.

ನರಕದ ಕರಾಳತೆ.

ಸ್ವಲ್ಪ ಮಾರ್ಗ ಕ್ರಮಿಸಿರಬಹುದು. ದಾರಿಯಲ್ಲೆಲ್ಲ ಭಯಂಕರ ವಾತಾವರಣ. ಹೆಣದ ರಾಶಿ. ಅರೆ ಸತ್ತು ರಕ್ತದ ಮಡುವಿನಲ್ಲಿ ನರಳುತ್ತಿರುವವರು, ಸಾಯದೇ, ಬದುಕದೇ ಕೊನೆಯಿಲ್ಲದ ಯಾತನೆ ಅನುಭವಿಸುತ್ತಿರುವವರು, ಒಬ್ಬರಿಗೆ ಕೈಗಳೇ ಇಲ್ಲ ಇನ್ನೊಬ್ಬರಿಗೆ ಹೊಟ್ಟೆಯೇ ಕಾಣದು.ಮಗದೊಬ್ಬರಿಗೆ ತಲೆಯೇ ಇಲ್ಲ . ಆದರೂ ನರಳುತ್ತಿದ್ದಾರೆ. ಭಯಾನಕವಾದ ನರಕ ದರ್ಶನ. ನೋಡಲಾಗಲಿಲ್ಲ ಧರ್ಮಜನಿಗೆ. ಅಲ್ಲಿಂದ ಹೊರಟ.

ಮಹಾತ್ಮ.. ಹೋಗದಿರು...

ಆದರೆ ಆರ್ತವಾದ ಅನೇಕ ದನಿಗಳು ಕೇಳಿದವು. ಮಹಾತ್ಮ, ಹೋಗದಿರು. ನಿನ್ನ ಸಾನ್ನಿಧ್ಯದಿಂದ ಬಂದ ಗಾಳಿ ನಮ್ಮನ್ನು ತಂಪಾಗಿ ಇಟ್ಟಿದೆ. ನರಕದಲ್ಲೂ ನಿನ್ನ ಸಾನ್ನಿಧ್ಯ ನೆಮ್ಮದಿಯನ್ನು ತರುತ್ತಿದೆ. ಅದನ್ನು ಇನ್ನೂ ಕೆಲಕಾಲ ಅನುಭವಿಸುತ್ತೇವೆ. ಹೋಗಬೇಡ... ಧರ್ಮಜನ ಕರುಣೆಯ ಕಟ್ಟೆ ಒಡೆಯಿತು. ಏನೂ ಮಾಡಲಾಗದೇ ಅಲ್ಲೇ ನಿಂತ. ನೀವೆಲ್ಲ ಯಾರು ಎಂದ- ಆಕಡೆಯಿಂದ ಧ್ವನಿ ಬಂತು- ನಾನು ಅರ್ಜುನ, ನಾನು ಭೀಮ, ನಾನು ದ್ರೌಪದಿ, ನಾನು ಕರ್ಣ..ಇನ್ನೂ ಎಷ್ಟೋ ದನಿಗಳು ಏಕಕಾಲದಲ್ಲಿ ಧರ್ಮಜನಲ್ಲಿ ಮೊರೆಯಿಡುತ್ತಿವೆ. ಧರ್ಮಜನಿಗೆ ಮತ್ತೆ ಆಘಾತ. ಏನಿದು ಅನ್ಯಾಯ? ಧರ್ಮಕ್ಕಾಗಿ ಬದುಕಿದ್ದವರಿಗೆ ನರಕವೇ? ದೇವಭೂಮಿಯಲ್ಲೂ ಇಂತಹ ಅನ್ಯಾಯವೇ? ಸಿಟ್ಟಾಗಿ ಕೇಳಿದ ದೇವಧೂತನನ್ನು. ದೇವಧೂತ ದೇವತೆಗಳೆಡೆಗೆ ನಡೆದ. ಧರ್ಮಜನ ಸ್ಥಿತಿಯನ್ನು ಅರುಹಿದ. ಎಲ್ಲ ದೇವತೆಗಳೂ ಇಂದ್ರಸಮೇತರಾಗಿ ಧರ್ಮಜನೆಡೆಗೆ ಬಂದರು.

ಮೊದಲು ಸ್ವರ್ಗ-ನಂತರ ನರಕ

ಇಂದ್ರ ಮಾತನಾಡಿದ- ದಿವ್ಯ ಲೋಕಗಳು ಕಾದಿವೆ ನಿನಗೆ. ಸಿಟ್ಟಾಗಬೇಡ. ಅಧರ್ಮ ಮಾಡಿದವರಿಗೆ ಮೊದಲು ಸ್ವರ್ಗ ಆಮೇಲೆ ನರಕ. ಯುದ್ಧದಲ್ಲಿನ ದುರ್ಯೋಧನನ ವೀರಗತಿ ಅವನಿಗೆ ಕೆಲಕಾಲ ಸ್ವರ್ಗವನ್ನು ಒದಗಿಸಿದೆ. ನೀನು ದ್ರೋಣರು ಶಸ್ತ್ರತ್ಯಾಗ ಮಾಡಲು ಮನಸ್ಸಿನಿಂದ ಹೇಳಿದ ಸುಳ್ಳಿಗೆ ನಿನಗೆ ನರಕದರ್ಶನ. ನಿನ್ನ ಅನುಜರು, ಅಗ್ರಜ ಕರ್ಣ ಅವರ ಸಣ್ಣ ಸಣ್ಣ ಅಧರ್ಮದ ಕೆಲಸಗಳಿಗಾಗಿ ಅವರಿಗೆ ತತ್ಕಾಲದ ನರಕ. ಅವರೆಲ್ಲ ನರಕಭಾಗಿಗಳಾದದ್ದು ನೀನು ನೋಡಿ ಸಂಕಟಪಟ್ಟಿದ್ದೀ. ಅದೇ ನಿನ್ನ ಅತ್ಯಲ್ಪ ಪಾಪವನ್ನು ಕಳೆದಿದೆ. ಈಗ ದೇವಗಂಗೆಯಲ್ಲಿ ಸ್ನಾನ ಮಾಡು ಎಂದನು. ಅದಾದ ನಂತರ ಧರ್ಮಜನಿಗೆ ಮಾನುಷ ಭಾವ ಹೋಯಿತು. ತನ್ನ ತಮ್ಮಂದಿರನ್ನೆಲ್ಲ ದಿವ್ಯಲೋಕದಲ್ಲಿ ಕಂಡು ಸಂತೋಷಗೊಂಡ ಎಂಬುದು ಮುಂದಿನ ಕಥೆ.

ಧರ್ಮಜನಿಗೂ ನರಕ ದರ್ಶನವೇ?

ಜೀವನ ಪೂರ್ತಿ ಧರ್ಮಿಷ್ಠನಾಗಿ ನಡೆದ ಧರ್ಮಜನಿಗೂ ಒಂದು ಸಣ್ಣ ತಪ್ಪಿಗಾಗಿ ನರಕದರ್ಶನ ತಪ್ಪಲಿಲ್ಲ. ನಾವೆಲ್ಲಾ ಜೀವನದಲ್ಲಿ ಎಷ್ಟು ತಪ್ಪು ಹೆಜ್ಜೆಗಳಿಡುತ್ತೇವೋ ಲೆಕ್ಕವೇ ಇಲ್ಲ. ಈ ಕಥೆ ನಮ್ಮ ಜೀವನ ಪರಿಷ್ಕಾರವನ್ನು ಹೇಳುತ್ತಿದೆ. ಪಂಚ ಪಾಂಡವರೂ ಸಹ ತಮ್ಮ ಸಣ್ಣ ಸಣ್ಣ ದೋಷಗಳಿಗೆ ನರಕದ ಅನುಭವ ಮಾಡಿಕೊಂಡರೂ ಹೆಚ್ಚಾಗಿ ಧರ್ಮಮಾರ್ಗದಲ್ಲಿ ನಡೆದುದರಿಂದ ಶಾಶ್ವತ ಲೋಕಗಳು ಪ್ರಾಪ್ತಿಯಾದವು. ಮೊದಲು ಸುಖ ಸಿಕ್ಕಿ ಕಡೆಯಲ್ಲಿ ನರಕ ನಿಜಕ್ಕೂ ಅಸಹನೀಯ. ದುರ್ಯೋಧನನಿಗೆ ಅವನು ಮಾಡಿದ ದುಷ್ಕೃತ್ಯಗಳಿಗೆ ಅದೇ ಪ್ರಾಪ್ತಿ. ದೇವಭೂಮಿಯಲ್ಲಿ ಅನ್ಯಾಯಕ್ಕೆ ಎಡೆಯಿಲ್ಲ. " ದೇವಭೂಮಿಯಲ್ಲಿ ಇಲ್ಲಿನಂತೆ ಉಬ್ಬು-ತಗ್ಗುಗಳಿಲ್ಲಪ್ಪಾ" ಎಂಬ ಶ್ರೀರಂಗ ಮಹಾಗುರುಗಳ ಮಾತು ಸದಾ ಸ್ಮರಣೀಯ. ಅವರವರ ಕೆಟ್ಟ-ಒಳ್ಳೆಯ ಕರ್ಮಗಳು ಜೊತೆಗೇ ಫಲಕೊಡಲು ಬರುತ್ತವೆ. ಅದರಿಂದ ಯಾರೂ ಹೊರತಲ್ಲ ಎಂಬುದನ್ನು ಈ ಕಥೆ ಸಾರುತ್ತಿದೆ. ಧರ್ಮರಾಜನ ಜೀವನವಿಡೀ ಧರ್ಮಮಯವಾಗಿತ್ತು,ತಪೋಮಯವಾಗಿತ್ತು. ಎಂದೇ ಅವನು ಸಶರೀರನಾಗಿ ಮೇಲಿನ ಲೋಕಕ್ಕೆ ಹೋಗುವನ್ತಾಗಿದ್ದು. ಧರ್ಮ ಮಾರ್ಗದಿಂದ ಕಿಂಚಿತ್ತೂ ಹೆಜ್ಜೆ ಆಚೆ ಇಡುವುದನ್ನು ಅವನು ಕನಸಿನಲ್ಲೂ ಯೋಚಿಸುತ್ತಿರಲಿಲ್ಲ. ಅಂತಹ ಧರ್ಮಜನಿಗೇ ಕಡೆಯಲ್ಲಿ ಕಿಂಚಿತ್ ಧರ್ಮಲೋಪಕ್ಕಾಗಿ ನರಕ ದರ್ಶನ ಎಂದಾಗ ನಾವೆಲ್ಲಾ ನಮ್ಮ ಜೀವನಗಳನ್ನು ಎಷ್ಟು ಪರಿಷ್ಕಾರ ಮಾಡಿಕೊಳ್ಳಬೇಕಾಗಿದೆ. ಇನ್ನೊಂದು ಮುಖ್ಯವಾದ ವಿಷಯವನ್ನು ಈ ಕಥೆ ತಿಳಿಸುತ್ತಿದೆ. ಧರ್ಮರಾಜನು ನರಕದ ಸಮೀಪದಿಂದ ನಿರ್ಗಮಿಸುವಾಗ ಅಲ್ಲಿನ ಜೀವಿಗಳು ಹೋಗಬೇಡ ಎಂದು ಪ್ರಾರ್ಥಿಸಿದ್ದು. ಮಹಾತ್ಮರ ಸಾನ್ನಿಧ್ಯ ಎಂತಹ ಸನ್ನಿವೇಶದಲ್ಲೂ ಹಿತವನ್ನು, ನೆಮ್ಮದಿಯನ್ನು ತರುತ್ತದೆ ಎಂಬುದಕ್ಕೆ ಉದಾಹರಣೆ ಇದು. ಧರ್ಮರಾಜನ ತಪಸ್ಸು, ಎಂದೆಂದಿಗೂ ಧರ್ಮವನ್ನು ಬಿಡದ, ಅಸತ್ಯದ ಜೊತೆ ಎಂದೂ ರಾಜಿ ಮಾಡಿಕೊಳ್ಳದ ಅವನ ಸ್ವಭಾವ, ಎಲ್ಲವೂ ಅವನಿದ್ದ ಜಾಗವನ್ನೆಲ್ಲ ಪವಿತ್ರಗೊಳಿಸಿದ್ದವು. ಅವನ ಸಾಂಗತ್ಯವು ನೆಮ್ಮದಿಯ ತಾಣವಾಗಿತ್ತು. ಆ ತಂಪಿನ ಸತ್ಪರಿಣಾಮ ಅವನ ಹತ್ತಿರ ಇದ್ದವರಿಗೆಲ್ಲ ಸಂಕ್ರಮಣವಾಗುತ್ತಿತ್ತು. ಹೀಗೆ ಮಹಾತ್ಮರ ಜೀವನವನ್ನು ನೋಡಿ ನಮ್ಮ ಜೀವನಗಳನ್ನು ಹಸನುಗೊಳಿಸಿಕೊಳ್ಳಲು ಈ ಕಥೆ ಕೈಗನ್ನಡಿಯಾಗಿದೆಯಲ್ಲವೇ? ಅತ್ತ ನಮ್ಮೆಲ್ಲರ ಜೀವನಯಾತ್ರೆ ಸಾಗಲಿ ಎಂದು ಸರ್ವೆಶ್ವರನನ್ನು ಪ್ರಾರ್ಥಿಸೋಣ.

ಸೂಚನೆ : 21/12/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.