Tuesday, December 17, 2024

ವ್ಯಾಸ ವೀಕ್ಷಿತ 114 ಧರ್ಮಪರನಾಗಿ ಯುಧಿಷ್ಠಿರನು ಆಳಿದ ಬಗೆ (Vyaasa Vikshita 114)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಪಾಂಡವರ ಈ ಎಲ್ಲ ಮಕ್ಕಳೂ ವಿಶಾಲವಾದ ಎದೆಯುಳ್ಳವರು ಹಾಗೂ ಮಹಾರಥರು. ಇಂತಹವರನ್ನು ಪಡೆದ ಪಾಂಡವರು ಪರಮ-ಸಂತೋಷವನ್ನು ಈಗ ಕಂಡರು.

ಇಂದ್ರಪ್ರಸ್ಥದಲ್ಲಿ ವಾಸ ಮಾಡುತ್ತಿದ್ದ ಪಾಂಡವರು, ರಾಜಾ ಧೃತರಾಷ್ಟ್ರನ ಆಜ್ಞೆ ಹಾಗೂ ಶಂತನುಪುತ್ರನಾದ ಭೀಷ್ಮನ ಆಜ್ಞೆ - ಇವುಗಳ ಮೇರೆಗೆ, ಇತರ ರಾಜರುಗಳ ಮೇಲೆ ಆಕ್ರಮಣ ಮಾಡಿ ತಮ್ಮ ಪರಾಕ್ರಮವನ್ನು ತೋರಿದರು. ಧರ್ಮರಾಜನನ್ನು ಆಶ್ರಯಿಸಿ ಪ್ರಜೆಗಳೆಲ್ಲರೂ ಸುಖವಾಗಿ ಜೀವನ ಮಾಡಿದರು. ಇದು ಹೇಗಿತ್ತೆಂದರೆ, ಪುಣ್ಯಕರ್ಮಗಳನ್ನೆಸಗಿ ಉತ್ತಮವಾದ ಶರೀರವನ್ನು ಹೊಂದಿದ ಜೀವಿಗಳು ಹೇಗೆ ಸುಖವಾಗಿರುವರೋ ಹಾಗೆ.

ಯುಧಿಷ್ಠಿರನೂ ಧರ್ಮ-ಅರ್ಥ-ಕಾಮಗಳನ್ನು ಸಮನಾಗಿ ಸೇವಿಸಿದನು. ನೀತಿಜ್ಞನಾದವನು ಆತ್ಮಸಮರಾದ ಮೂವರು ಬಂಧುಗಳನ್ನು ಯಾವ ರೀತಿ ಏಕರೂಪದಲ್ಲಿ ಆದರಿಸುವನೋ ಹಾಗೆ. ಸಮವಾಗಿ ವಿಭಾಗ ಹೊಂದಿರುವ ಧರ್ಮ-ಅರ್ಥ-ಕಾಮಗಳೇ ಮೈತಾಳಿ ಬಂದರೆ ಹೇಗೋ ಹಾಗಿದ್ದರು, ಯುಧಿಷ್ಠಿರನ ತಮ್ಮಂದಿರು.  ಹಾಗೂ ರಾಜನಾದ ಯುಧಿಷ್ಠಿರನು ನಾಲ್ಕನೆಯ ಪುರುಷಾರ್ಥವಾದ ಮೋಕ್ಷದ ಹಾಗಿದ್ದನು.

 ಜನರಿಗೆ ತಮ್ಮ ಜನಾಧಿಪನು - ಎಂದರೆ ರಾಜನಾದ ಯುಧಿಷ್ಠಿರನು – ಹೇಗಿದ್ದನೆಂದು ತಿಳಿಯಿತು? ವೇದಗಳನ್ನು ಚೆನ್ನಾಗಿ ಮಾಡತಕ್ಕವನು, ಮಹಾ-ಅಧ್ವರಗಳಲ್ಲಿ, ಎಂದರೆ ದೊಡ್ಡ ಯಜ್ಞಗಳಲ್ಲಿ, ಅವನ್ನು ಪ್ರಯೋಗಮಾಡತಕ್ಕವನು - ಎಂದರೆ ಬಳಸಬಲ್ಲವನು, ಹಾಗೂ ಶುಭಲೋಕಗಳನ್ನು ರಕ್ಷಿಸುವುದರಲ್ಲಿ ತತ್ಪರನಾದವನು – ಎಂಬುದಾಗಿ.

ಯುಧಿಷ್ಠಿರನ ಆಳ್ವಿಕೆಯಿಂದಾಗಿ ಉಳಿದ ರಾಜರ ಮೇಲೆ ಆದ ಪರಿಣಾಮವೇನು? ಲಕ್ಷ್ಮಿಯು ಈಗ ಒಂದು ನೆಲೆಯಲ್ಲಿ ನಿಲ್ಲತಕ್ಕವಳಾದಳು. ಅವರ ಮತಿಯು ಉತ್ತಮ-ನಿಷ್ಠೆಯನ್ನು ಹೊಂದಿತು. ದಿನೇ ದಿನೇ ಅವರಲ್ಲಿ ಧರ್ಮವೆಂಬುದು ವೃದ್ಧಿಗೊಳ್ಳಲಾರಂಭಿಸಿತು. ಒಂದು ಮಹಾ-ಅಧ್ವರ - ಎಂದರೆ ದೊಡ್ಡದಾಗ ಯಜ್ಞವು ನಾಲ್ಕೂ ವೇದಗಳ ಪ್ರಯೋಗದಿಂದಾಗಿ ಹೇಗೆ ವಿತತವಾಗುವುದೋ, ಎಂದರೆ ವಿಸ್ತಾರಗೊಳ್ಳುವುದೋ, ಅದೇ ಪ್ರಕಾರವಾಗಿ ತನ್ನ ನಾಲ್ವರು ಭ್ರಾತೃಗಳಿಂದಾಗಿ ಯುಧಿಷ್ಠಿರ-ಮಹಾರಾಜನು ಕಂಗೊಳಿಸಿದನು.

ಬೃಹಸ್ಪತಿಯೇ ಮೊದಲಾದ ಮುಖ್ಯದೇವತೆಗಳು ಯಾವರೀತಿ ಪ್ರಜಾಪತಿಯ ಸೇವೆಯಲ್ಲಿ ಉಪಸ್ಥಿತರಾಗುವರೋ, ಅದೇ ಪ್ರಕಾರವಾಗಿ ಧೌಮ್ಯ ಮೊದಲಾದ ವಿಪ್ರರೂ ಯುಧಿಷ್ಠಿರನ ಸುತ್ತಲೂ ನೆರೆದು ಸೇರಿರುತ್ತಿದ್ದರು. ನಿರ್ಮಲನಾದ ಪೂರ್ಣಚಂದ್ರನನ್ನು ಕಂಡು ಯಾವ ರೀತಿ ಪ್ರಜೆಗಳ ನೇತ್ರಗಳೂ ಹೃದಯಗಳೂ ಸಂತೋಷಿಸುವುವೋ, ಅದೇ ರೀತಿಯಲ್ಲಿ ಧರ್ಮರಾಜನ ವಿಷಯದಲ್ಲೂ ಅತಿಶಯಿತವಾದ ಪ್ರೀತಿಯಿಂದ ಪ್ರಜೆಗಳ ಕಣ್ಮನಸ್ಸುಗಳು ತಣಿದವು.

ಆತನ ಆಳ್ವಿಕೆಯಲ್ಲಿ ಪ್ರಜೆಗಳು ಸಂತೋಷಿಸಿದರು. ಆದರೆ ಅದು ಆತನು ಆಳುವವ ಎಂಬ ಕಾರಣಕ್ಕಾಗಿಯಷ್ಟೇ ಅಲ್ಲ. ಆತನಾದರೂ ಅವರ ಮನಸ್ಸಿಗೆ ಏನು ಪ್ರಿಯವಾಗಿ ಕಂಡಿತೋ ಅದನ್ನು ನೆರವೇರಿಸಿಬಿಡತಕ್ಕವನು. ಧೀಮಂತನಾದ ಆ ಯುಧಿಷ್ಠಿರನ ಬಾಯಿಂದ ಅನುಚಿತವಾದ ಮಾತಾಗಲಿ, ಅಸತ್ಯವಾದ ಮಾತಾಗಲಿ, ಅಸಹ್ಯವಾದ ಮಾತಾಗಲಿ, ಅಪ್ರಿಯವಾದ ಮಾತಾಗಲಿ - ಎಂದೂ ಹೊಮ್ಮುತ್ತಿರಲಿಲ್ಲ. ಎಲ್ಲ ಜನರ ಹಿತ ಹಾಗೂ ತನ್ನ ಆತ್ಮಕ್ಕೂ ಹಿತ - ಇವನ್ನೂ ಮಾಡಬಯಸುವ ಯುಧಿಷ್ಠಿರನು ಮಹಾತೇಜಶ್ಶಾಲಿಯಾಗಿ ಮೆರೆದನು.

ಅಂತೂ ಹೀಗೆ ಸಂತೋಷದಿಂದ ಇರುವವರಾಗಿ, ಅನ್ಯರಾಜರನ್ನು ತಮ್ಮ ತೇಜಸ್ಸಿನಿಂದ ಬೆದರಿಕೆಯಲ್ಲಿಟ್ಟು, ತಾವಂತೂ ನಿಶ್ಚಿಂತವಾಗಿ ಇದ್ದರು, ಪಾಂಡವರು.ಹೀಗೆ ಕೆಲಕಾಲ ಕಳೆಯಲು ಅರ್ಜುನನು ಕೃಷ್ಣನನ್ನು ಕೇಳಿದನು: ಕೃಷ್ಣ, ಬೇಗೆ ಬಹು ಹೆಚ್ಚಾಗಿದೆ. ಯಮುನೆಗೆ ಹೋಗೋಣವೇ?  

ಸೂಚನೆ : 16/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.