ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 118 ಪುರುಷನೆಂದರೆ ಯಾರು?
ಉತ್ತರ - ಪುಣ್ಯಕರ್ಮದ ಕಾರಣದಿಂದ ಬರುವ ಯಾವ ಯಶಸ್ಸು ಎಂಬ ಶಬ್ದವು ಆಕಾಶ ಮತ್ತು ಭೂಮಿ ಎರಡನ್ನು ತಲುಪುತ್ತದೆಯೋ, ಆ ಯಶಸ್ಸು ಎಂಬ ಶಬ್ದ ಎಲ್ಲಿಯತನಕ ಇರುತ್ತದೆಯೋ, ಅಂತಹ ಆಕಾಶ ಮತ್ತು ಭೂಮಿಯನ್ನು ವ್ಯಾಪಿಸಿದ, ಆ ಶಬ್ದದ ಉತ್ಪತ್ತಿಯಿಂದ ಆರಂಭಿಸಿ ಲಯದವರೆಗಿನ ವ್ಯಾಪ್ತಿಯಿಂದ ಕೂಡಿದ ಕಾಲಕ್ಕೆ ವ್ಯಾಪಿಸಿದ ಮನುಷ್ಯನನ್ನೇ 'ಪುರುಷ' ಎಂದು ಕರೆಯುತ್ತಾರೆ.
ಪುರುಷನು ಯಾರು? ಎಂಬ ಪ್ರಶ್ನೆಗೆ ಧರ್ಮರಾಜನು ದೀರ್ಘವಾದ ಉತ್ತರವನ್ನು ಕೊಟ್ಟಿದ್ದಾನೆ. ಯಶಸ್ಸಿಗೆ ಬೇಕಾದ ಕರ್ಮವನ್ನು ಯಾರು ಮಾಡಿರುತ್ತಾನೋ ಅವನನ್ನು ಜನರು ಕೊಂಡಾಡುತ್ತಾರೆ. ಜನರ ಮಾತು ಮತ್ತು ಮನಸ್ಸುಗಳಲ್ಲಿ ಆ ವ್ಯಕ್ತಿ ಮನೆಮಾಡಿರುತ್ತಾನೆ. ಒಬ್ಬನಿಂದ ಮತ್ತೊಬ್ಬನಿಗೆ ಹೀಗೆ ಯಶೋಗಾಥೆಯು ಮುಂದಿನ ಪೀಳಿಗೆಯ ಜನರಿಗೆ ಪಸರಿಸುತ್ತಾ ಸಾಗುತ್ತದೆ. ಇಂತಿಹ ಅತಿವಿಶಿಷ್ಟವ್ಯಕ್ತಿಯನ್ನು ಈ ಭೂಮಿಯಲ್ಲಿರುವ ಜನಸಮೂಹವು ಗುರುತಿಸುತ್ತಾ, ಸ್ತುತಿಸುತ್ತಾ ಇರುತ್ತದೆ. ಈ ಯಶೋಗಾಥೆಯು ಪಸರಿಸಿ ಪಸರಿಸಿ ಕೇವಲ ಭೂಮಿಯನ್ನು ಮಾತ್ರ ವ್ಯಾಪಿಸದು; ಅದು ಅಂತರಿಂಕ್ಷ ಅಲ್ಲ, ಸಪ್ತ ಊರ್ಧ್ವಲೋಕಗಳನ್ನು ವ್ಯಾಪಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಅಂದರೆ ಯಶೋಗಾಥೆಯ ಶಬ್ದವು ಭೂಮಿ ಅಂತರಿಕ್ಷ ಎಲ್ಲವನ್ನೂ ವ್ಯಾಪಿಸುತ್ತದೆ ಎಂದರ್ಥ.
ಈ ಉತ್ತರದಲ್ಲಿ ಅನೇಕ ಮಾರ್ಮಿಕವಾದ ವಿಷಯ ಅಡಗಿದೆ; ಜೊತೆಯಲ್ಲಿ ಶಾಸ್ತ್ರೀಯವಾದ ಅಂಶವೂ ಸೇರಿದೆ. ಶಬ್ದವು ಆಕಾಶದಲ್ಲಿ ಹುಟ್ಟುತ್ತದೆ, ಏಕೆಂದರೆ ಅದು ಆಕಾಶದ ಗುಣವಾಗಿದೆ. ಎಲ್ಲೆಲ್ಲಿ ಆಕಾಶವೆಂಬ ಅವಕಾಶವಿರುತ್ತದೆಯೋ ಅಲ್ಲೆಲ್ಲಾ ಶಬ್ದವು ಉಂಟಾಗುತ್ತದೆ. ಹಾಗಾಗಿ ಶಬ್ದವನ್ನು ಆಕಾಶಗುಣ ಎಂದು ಶಾಸ್ತ್ರದಲ್ಲಿ ಗುರುತಿಸಲಾಗಿದೆ. ಮತ್ತು ಆಕಾಶ ಎಲ್ಲೆಲ್ಲಿ ಇರುತ್ತದೆಯೋ ಅಲ್ಲೆಲ್ಲ ಶಬ್ದವು ಇರುತ್ತದೆ ಎಂಬುದು ತಾತ್ಪರ್ಯವಾಗಿದೆ. ಆಕಾಶವು ಭೂಮಿಯಲ್ಲಿ ಮಾತ್ರವಿಲ್ಲೆದೇ ಅವಕಾಶವೆಂಬ ಶಬ್ದ ವ್ಯಾಪಿಸಲು ಬೇಕಾದ ಅನುಕೂಲತೆ ಇರುವಡೆಯೆಲ್ಲಾ ಅಂದರೆ ಚತುರ್ದಶ ಲೋಕಗಳನ್ನು ವ್ಯಾಪಿಸಿದ್ದರಿಂದ ಆ ಸ್ಥಳಗಳೆಲ್ಲೆಲ್ಲ ವ್ಯಾಪಿಸುವ ಅವಕಾಶ ಈ ಶಬ್ದಕ್ಕಿದೆ. ಒಬ್ಬ ವ್ಯಕ್ತಿಗೆ ಸಂಬಂಧಪಟ್ಟ ಯಶಸ್ಸಿನ ಕಥನವು ಶಬ್ದರೂಪವನ್ನು ತಾಳುತ್ತದೆ. ಅದರ ಪರಿಣಾಮವಾಗಿ ಆ ಶಬ್ದವು ಭೂಮಿ ಅಂತರಿಕ್ಷ ದ್ಯುಲೋಕಗಳನ್ನೆಲ್ಲಾ ವ್ಯಾಪಿಸುತ್ತದೆ. ಆದ್ದರಿಂದ ಅಂತಹ ವ್ಯಕ್ತಿಯನ್ನು ಭೂಮಿಯಲ್ಲಿ ಮಾತ್ರ ಕೊಂಡಾಡದೆ ದೇವತೆಗಳು ಸ್ತುತಿಸುತ್ತಾರೆ. ಇದು ಆ ಪುರುಷನ ವ್ಯಕ್ತಿತ್ವಕ್ಕೆ ಕೊಡುವ ಗೌರವ - ಆದರವಷ್ಟೇ.
ಶಬ್ದದ ಉತ್ಪತ್ತಿಯಿಂದ ಹಿಡಿದು ಲಯದವರೆಗಿನ ಎಷ್ಟು ಕಾಲ ಘಟಿಸುತ್ತದೆಯೋ ಆ ಕಾಲಮಾನಕ್ಕೆ ಯಾವ ವ್ಯಕ್ತಿ ಅಥವಾ ಪುರುಷನ ಸಂಬಂಧವು ಉಂಟಾಗುತ್ತದೆಯೋ ಅವನನ್ನೇ ನಿಜವಾಗಲೂ ಪುರುಷ ಎನ್ನಬೇಕು ಎಂದು ಧರ್ಮರಾಜನು ಉತ್ತರವನ್ನು ಕೊಡುತ್ತಾನೆ. ಅಂದರೆ ಶಬ್ದದ ಉತ್ಪತಿ ವಿನಾಶದ ಕಾಲವು ಅಷ್ಟು ಕ್ಷಣಿಕವಲ್ಲ; ಅದು ಅಗಣಿತಕಾಲವನ್ನು ವ್ಯಾಪಿಸಿದ ಕುರುಹು ಎಂಬ ಅರ್ಥ ಇದರಿಂದ ಲಭಿಸುತ್ತದೆ. ಶಬ್ದವು ಕ್ಷಣಿಕವಾದುದು. ಅದು ಮೂರು ಕ್ಷಣಮಾತ್ರ ಇರುವ ಸ್ವಭಾವ ಉಳ್ಳದ್ದು ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಶಬ್ದವು ನಿತ್ಯವಾದುದು ಎನ್ನುತ್ತಾರೆ. ಆದರೂ ಉತ್ಪನ್ನವಾದ ಯಾವ ಶಬ್ದವಿರುತ್ತದೆಯೋ ಅದಕ್ಕೆ ನಾಶ ಎಂಬುದೂ ಅಷ್ಟೇ ನಿಶ್ಚಿತ. ಅಂದರೆ ಇಲ್ಲಿ ಹೇಳಿದ ಶಬ್ದವು ಶಬ್ದದಿಂದ ಶಬ್ದವು ಉಂಟಾಗಿ ಸಮುದ್ರದ ತೆರೆಯಂತೆ ಇರುವ ಶಬ್ದವನ್ನು ಹೇಳುವಂತಹದ್ದು. ಅಂದರೆ ಇಲ್ಲಿನ ಯಶಸ್ಸು ಎಂಬ ಶಬ್ದತರಂಗವು ಪುರುಷನ ಕಾಲಮಾನವನ್ನು ವ್ಯಾಪಿಸಿದೆ ಎಂದು ಹೇಳಬಹುದು. ಆದರೆ ಪುರುಷನ ಮಾನ ಎಷ್ಟು ಎಂಬುದಕ್ಕೆ ಯಾವುದು ಮಾನ? ಎಂಬ ಬಗ್ಗೆ ತಿಳಿಯಬೇಕಾಗಿದೆ. ಶ್ರೀರಂಗ ಮಹಾಗುರುವು ಹೇಳುವಂತೆ ಒಂದು ವ್ಯಕ್ತಿಯ ಜೀವಮಾನವೆಂದರೆ ಆತ್ಮವು ಜೀವಭಾವವನ್ನು ತಳೆದು ಜೀವನವ್ಯಾಪಾರವನ್ನು ಮಾಡಿ ಜೀವಭಾವವನ್ನು ಕಳೆಯುವ ಕಾಲವೇ ಜೀವನ, ಅಷ್ಟು ಕಾಲವನ್ನು ವ್ಯಾಪಿಸಿದ ಜೀವಿಯನ್ನೇ ಪುರುಷ ಎಂದು ಕರೆಯುವುದು.
ಸೂಚನೆ : 29/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.