ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಅಭಿಮನ್ಯುವನ್ನು ನೋಡಿದಷ್ಟೂ ನೋಡಿದಷ್ಟೂ ಅರ್ಜುನನಿಗೆ ಸಂತೋಷವೇ. ಬರಬರುತ್ತಾ ಹೇಗಾದ ಅಭಿಮನ್ಯು! ಸರ್ವ-ಲಕ್ಷಣಗಳಿಂದಲೂ ಕೂಡಿದವನಾದ. ಆತನನ್ನು ಯಾರೂ ಕೆಣಕಲಾಗದು. ಆತನ ಭುಜಗಳು ಗೂಳಿಯ ಸ್ಕಂಧಗಳಂತಿದ್ದವು. ಬಾಯಿ ತೆರೆದಿದ್ದ ಸರ್ಪವು ಹೇಗೋ ಹಾಗೆ ಆತ ಶತ್ರುಗಳಿಗೆ ತೋರುತ್ತಿದ್ದ. ಸಿಂಹದ ದರ್ಪ ಅವನಲ್ಲಿತ್ತು. ಮಹಾಧನುಸ್ಸು ಆತನದು. ಮದಗಜದ ತೆರನ ವಿಕ್ರಮ. ಆತನ ಕಂಠವು ಮೇಘದಂತೆ, ದುಂದುಭಿಯಂತೆ! ಆತನ ಮುಖವೋ ಪೂರ್ಣಚಂದ್ರನ ಹಾಗೆ ಇರುವುದು. ಶೌರ್ಯ-ವೀರ್ಯಗಳಲ್ಲಿ, ರೂಪ-ಆಕೃತಿಗಳಲ್ಲಿ, ಕೃಷ್ಣನಿಗೆ ಆತ ಸದೃಶ. ಇಂದ್ರನು ತನ್ನನ್ನು, ಎಂದರೆ ಅರ್ಜುನನನ್ನು, ಹೇಗೆ ನೋಡುವನೋ ಹಾಗೆ ನೋಡಿದ ಅಭಿಮನ್ಯುವನ್ನು, ತಂದೆ ಅರ್ಜುನ.
ಶುಭಲಕ್ಷಣಗಳಿಂದ ಶೋಭಿಸುತಿದ್ದ ಪಾಂಚಾಲಿಯೂ ತನ್ನ ಐವರು ಪತಿಗಳಿಂದ ವೀರರೂ ಶ್ರೇಷ್ಠರೂ ಆದ ಐವರು ಮಕ್ಕಳನ್ನು ಪಡೆದಳು. ಪಂಚ ಅಚಲಗಳ ಹಾಗೆ, ಎಂದರೆ ಐದು ಪರ್ವತಗಳ ಹಾಗೆ, ಇದ್ದರು ಅವರು. ಯುಧಿಷ್ಠಿರನಿಂದ ಜನಿಸಿದ ಮಗನ ಹೆಸರು ಪ್ರತಿವಿಂಧ್ಯ. ವೃಕೋದರನಿಂದ, ಅರ್ಥಾತ್ ಭೀಮನಿಂದ, ಜನಿಸಿದ ಮಗನ ಹೆಸರು ಸುತಸೋಮ. ಅರ್ಜುನನಿಂದ ಜನಿಸಿದವನ ಹೆಸರು ಶ್ರುತಕರ್ಮ. ನಕುಲನಿಂದ ಜನಿಸಿದವನು ಶತಾನೀಕ. ಹಾಗೆಯೇ ಸಹದೇವನಿಂದಾಗಿ ಜನಿಸಿದವನು ಶ್ರುತಸೇನ.
ಅದಿತಿಯು ಆದಿತ್ಯರನ್ನು ಹೇಗೆ ಹಡೆದಳೋ ಹಾಗೆ ಪಾಂಚಾಲಿಯು ಐದು ಮಹಾರಥಿಗಳಿಗೆ ಜನ್ಮವಿತ್ತಳು. ಶಾಸ್ತ್ರಾನುಸಾರವಾಗಿ ವಿಪ್ರರು ಪ್ರತಿವಿಂಧ್ಯ - ಎಂಬ ಹೆಸರನ್ನು ಯುಧಿಷ್ಠಿರನಿಗೆ ಸೂಚಿಸಿದರು. ಶತ್ರುಗಳು ಪ್ರಹಾರ ಮಾಡಿದಾಗ ವಿಂಧ್ಯಪರ್ವತದಂತೆ ಅವಕ್ಕೆ ಪ್ರತಿಯಾಗಿ ನಿಲ್ಲಬಲ್ಲವನು - ಅರ್ಥಾತ್ ಏಟು ಬಿದ್ದರೂ ನೋವು ಪಡದವನು - ಎಂಬ ಅಭಿಪ್ರಾಯದಿಂದ ಹಾಗೆ ಸೂಚಿಸಿದರು. ಸಾವಿರ ಸೋಮಯಾಗಗಳನ್ನು ಮಾಡಿದವನಿಗೇ ಸೋಮನಿಗೂ ಸೂರ್ಯನಿಗೂ ಸಮವೆನಿಸುವ ತೇಜಸ್ಸುಳ್ಳಂತಹವನು ಜನಿಸುವುದು. ಹಾಗಿದ್ದವನು ಭೀಮಸೇನನಿಗೆ ಜನಿಸಲು, ಆ ಧನುರ್ಧರಪುತ್ರನಿಗೆ ಸುತಸೋಮನೆಂಬ ಹೆಸರಾಯಿತು. ಮಹತ್ತಾದ ಹಾಗೂ ವಿಖ್ಯಾತವಾದ ಕರ್ಮಗಳನ್ನು ಮಾಡಿ ಹಿಂದಿರುಗಿದ್ದ ಅರ್ಜುನನಿಂದ ಜನಿಸಿದನೆಂಬ ಕಾರಣಕ್ಕೆ ಶ್ರುತಕರ್ಮ - ಎಂಬ ಹೆಸರು ಅರ್ಜುನಪುತ್ರನಿಗಾಯಿತು. ಕುರುವಂಶದ ಮಹಾತ್ಮನೆನಿಸಿದವನು ಶತಾನೀಕ ಎಂಬ ರಾಜರ್ಷಿ. ಆತನ ಹೆಸರಿನ ಮೇಲೆ, ಇಟ್ಟದ್ದು ಕೀರ್ತಿವರ್ಧಕನಾದ ನಕುಲಪುತ್ರನಿಗೆ ಶತಾನೀಕ ಎಂದೇ ನಾಮಧೇಯ. ಶ್ರುತಸೇನ ಎಂಬುದು ಅಗ್ನಿಯದೇ ಹೆಸರು; ಅಗ್ನಿಯನ್ನೇ ದೇವತೆಯನ್ನಾಗಿ ಹೊಂದಿರುವ ನಕ್ಷತ್ರದಲ್ಲಿ - ಅರ್ಥಾತ್ ಕೃತ್ತಿಕಾನಕ್ಷತ್ರದಲ್ಲಿ - ದ್ರೌಪದಿಯು ಜನ್ಮವಿತ್ತಳಾದ್ದರಿಂದ, ಸಹದೇವಪುತ್ರನಿಗೆ ಶ್ರುತಸೇನ ಎಂದೇ ಹೆಸರಾಯಿತು.
ಇವರುಗಳೆಲ್ಲರೂ ಒಂದೊಂದು ವರ್ಷದ ಅಂತರದಲ್ಲಿ ಜನಿಸಿದವರು. ದ್ರೌಪದಿಯಿಂದ ಜನಿಸಿದವರಾದ್ದರಿಂದ ಇವರೆಲ್ಲರೂ - ಎಂದರೆ ಪ್ರತಿವಿಂಧ್ಯ-ಸುತಸೋಮ-ಶ್ರುತಕರ್ಮ-ಶತಾನೀಕ ಹಾಗೂ ಶ್ರುತಸೇನ - ಎಂಬೀ ಐವರೂ - ದ್ರೌಪದೇಯರೆನಿಸಿದರು. ಎಲ್ಲರೂ ಯಶಸ್ವಿಗಳು. ಎಲ್ಲರೂ ಪರಸ್ಪರ-ಹಿತೈಷಿಗಳು.
ಪಾಂಡವರ ಪುರೋಹಿತರಾದ ಧೌಮ್ಯರು ಇವರೆಲ್ಲರಿಗೂ ಜಾತಕರ್ಮ, ಚೂಡಾಕರ್ಮ ಹಾಗೂ ಉಪನಯನ - ಇವುಗಳನ್ನು ವಿಧಿವತ್ತಾಗಿ ನೆರವೇರಿಸಿದರು. ತಮ್ಮ ಬ್ರಹ್ಮಚರ್ಯ-ವ್ರತವನ್ನು ಚೆನ್ನಾಗಿ ಪಾಲಿಸಿಕೊಂಡು ಬಂದಿದ್ದ ಈ ಐವರು ವೇದಾಧ್ಯಯನವನ್ನು ಮಾಡಿದವರಾಗಿ, ದಿವ್ಯವಾದ ಹಾಗೂ ಮಾನುಷವಾದ ಧರ್ನುರ್ವೇದವನ್ನು ಅರ್ಜುನನಿಂದ ಪಡೆದುಕೊಂಡರು. ಈ ಐವರೂ ದೇವಪುತ್ರರೆಂಬಂತೆ ಕಾಣುತ್ತಿದ್ದರು.
ಸೂಚನೆ : 08/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.